ರಿಜ್ವಾನ್ ಬದಲಿಗೆ ಸರ್ಫರಾಜ್​ಗೆ ಅವಕಾಶ; ಪಾಕ್ ತಂಡದ ಅರ್ಧದಷ್ಟು ಆಟಗಾರರಿಗೆ ಕೋಕ್..! | Sarfaraz Ahmed to replace Mohammad Rizwan half of Pakistans team will change


ಟಿ20 ವಿಶ್ವಕಪ್‌ಗೂ ಮುನ್ನ ಪಾಕಿಸ್ತಾನ ತವರಿನಲ್ಲಿ ಇಂಗ್ಲೆಂಡ್‌ನ ಸವಾಲನ್ನು ಎದುರಿಸಬೇಕಿದೆ. ಇಂಗ್ಲೆಂಡ್ ತಂಡ 17 ವರ್ಷಗಳ ನಂತರ ಪಾಕಿಸ್ತಾನ ಪ್ರವಾಸಕ್ಕೆ ಬರುತ್ತಿದೆ.

ಏಷ್ಯಾಕಪ್‌ (Asia Cup) ಫೈನಲ್‌ನಲ್ಲಿನ ಸೋಲಿನಿಂದಾಗಿ ಪಾಕಿಸ್ತಾನದ ಜನರಲ್ಲಿ ತಮ್ಮ ತಂಡದ ಬಗ್ಗೆ ಇನ್ನಿಲ್ಲದ ಕೋಪವಿದೆ. ಆ ಸಿಟ್ಟಿನ ಪರಿಣಾಮ ಪಾಕಿಸ್ತಾನ ತಂಡದಲ್ಲಿ ದೊಡ್ಡ ಬದಲಾವಣೆಯಾಗುವ ಎಲ್ಲಾ ಸಾಧ್ಯತೆಗಳು ಕಂಡುಬಂದಿವೆ. ಪಾಕಿಸ್ತಾನಿ ಮಾಧ್ಯಮ ಜಿಯೋ ಸೂಪರ್ ಪ್ರಕಾರ, ಇಂಗ್ಲೆಂಡ್ ವಿರುದ್ಧದ ಟಿ 20 ಸರಣಿಯಲ್ಲಿ ಪಾಕ್ ತಂಡದ ಹಲವು ಮುಖಗಳಿಗೆ ಕೋಕ್ ನೀಡುವ ಸಾಧ್ಯತೆಗಳಿವೆ. ತಂಡದಲ್ಲಿ ಹಲವು ಬದಲಾವಣೆಗಳಿದ್ದರೂ, ಇಂಗ್ಲೆಂಡ್ ವಿರುದ್ಧದ T20 ಸರಣಿಯಲ್ಲಿ ಕಂಡುಬರುವ ದೊಡ್ಡ ಬದಲಾವಣೆಯೆಂದರೆ ಅದು, ಮೊಹಮ್ಮದ್ ರಿಜ್ವಾನ್ ಬದಲಿಗೆ ಸರ್ಫರಾಜ್ ಅಹ್ಮದ್​ಗೆ ತಂಡದಲ್ಲಿ ಸ್ಥಾನ ಸಿಗುವ ಸಾಧ್ಯತೆಗಳಿವೆ.

ಪಾಕಿಸ್ತಾನ ತಂಡದಲ್ಲಿ ಬದಲಾವಣೆ

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಮತ್ತು 2022ರ ಟಿ20 ವಿಶ್ವಕಪ್‌ಗಾಗಿ ಪಾಕಿಸ್ತಾನ ತಂಡವನ್ನು ಈ ವಾರ ಪ್ರಕಟಿಸಲಾಗುವುದು. ಏಷ್ಯಾಕಪ್‌ನಲ್ಲಿ ಪಾಕಿಸ್ತಾನದ ಬ್ಯಾಟಿಂಗ್ ದೊಡ್ಡ ಸಮಸ್ಯೆಯಾಗಿತ್ತು. ಇದಲ್ಲದೇ ತಂಡದ ಹಲವು ಆಟಗಾರರು ಶೇ.100ರಷ್ಟು ಫಿಟ್ ಆಗಿರದೇ ಇರುವುದು ಕೂಡ ಸೋಲಿಗೆ ದೊಡ್ಡ ಕಾರಣವಾಗಿತ್ತು. ಈ ಎಲ್ಲಾ ವಿಷಯಗಳನ್ನು ಎದುರಿಸಲು, ಪಾಕಿಸ್ತಾನ ಕ್ರಿಕೆಟ್ ತಂಡದ ಮ್ಯಾನೇಜ್‌ಮೆಂಟ್ ತಂಡದಲ್ಲಿ ಸ್ವಲ್ಪ ಬದಲಾವಣೆಯನ್ನು ಹುಡುಕುತ್ತಿದೆ, ಅದು ಅಗ್ರ ಕ್ರಮಾಂಕದ ಬ್ಯಾಟಿಂಗ್‌ನಿಂದ ಬೌಲಿಂಗ್‌ವರೆಗೆ ಗೋಚರಿಸಲಿದೆ.

ಪಾಕ್ ತಂಡದಲ್ಲಿ ರಿಜ್ವಾನ್ ಬದಲಿಗೆ 2 ಆಯ್ಕೆಗಳಿವೆ

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಿಂದ ಮೊಹಮ್ಮದ್ ರಿಜ್ವಾನ್‌ಗೆ ವಿಶ್ರಾಂತಿ ನೀಡಬಹುದು ಎಂದು ಪಾಕಿಸ್ತಾನದ ಹಿರಿಯ ಕ್ರೀಡಾ ಪತ್ರಕರ್ತ ಅಬ್ದುಲ್ ಮಜಿದ್ ಭಟ್ಟಿ ಜಿಯೋ ಸೂಪರ್‌ಗೆ ಮಾಹಿತಿ ನೀಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ತಂಡದಲ್ಲಿ ಸ್ಥಾನ ಪಡೆಯಲು ಇಬ್ಬರು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ಗಳಾದ ಸರ್ಫರಾಜ್ ಅಹ್ಮದ್ ಮತ್ತು ಮೊಹಮ್ಮದ್ ಹ್ಯಾರಿಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಸರ್ಫರಾಜ್ ಅಹ್ಮದ್ ಅಥವಾ ಮೊಹಮ್ಮದ್ ಹ್ಯಾರಿಸ್ – ಯಾರಿಗೆ ಮೇಲುಗೈ?

ಪಾಕಿಸ್ತಾನದ ದೇಶೀಯ ಟಿ 20 ಟೂರ್ನಮೆಂಟ್ ನ್ಯಾಷನಲ್ ಟಿ 20 ಕಪ್‌ನಲ್ಲಿ ಸರ್ಫರಾಜ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಸರ್ಫರಾಜ್ 141.91 ಸ್ಟ್ರೈಕ್ ರೇಟ್‌ನೊಂದಿಗೆ 193 ರನ್ ಗಳಿಸುವ ಮೂಲಕ ಪಂದ್ಯಾವಳಿಯ 5 ನೇ ಟಾಪ್ ಸ್ಕೋರರ್ ಆಗಿದ್ದಾರೆ. ಮತ್ತೊಂದೆಡೆ ರಾಷ್ಟ್ರೀಯ ಟಿ20 ಕಪ್‌ನ 6 ಪಂದ್ಯಗಳಲ್ಲಿ 100 ರನ್ ಗಳಿಸಿರುವ ಮೊಹಮ್ಮದ್ ಹ್ಯಾರಿಸ್ ಕೂಡ ಫೈಪೋಟಿಯಲಿ ಮುಂದಿದ್ದಾರೆ. ಹ್ಯಾರಿಸ್ ಯುವಕನಾಗಿದ್ದು, ರಿಜ್ವಾನ್ ಬದಲಿಗೆ ಅಗ್ರ ಸ್ಪರ್ಧಿ ಎಂದು ಪರಿಗಣಿಸಲಾಗಿದೆ.

ಇಫ್ತಿಕರ್, ಖುಷ್ದಿಲ್, ಆಸಿಫ್ ಅಲಿಗೂ ಕೋಕ್?

ರಿಜ್ವಾನ್‌ಗೆ ವಿಶ್ರಾಂತಿ ನೀಡಿದರೆ, ಅವರ ಜಾಗದಲ್ಲಿ ಫಖರ್ ಜಮಾನ್‌ಗೆ ಓಪನಿಂಗ್‌ನಲ್ಲಿ ಆಡಲು ಅವಕಾಶ ಸಿಗುತ್ತದೆ ಎಂದು ಪಾಕ್ ಪತ್ರಕರ್ತ ಹೇಳಿದ್ದಾರೆ. ಇವರಲ್ಲದೇ ಇಫ್ತಿಕರ್ ಅಹ್ಮದ್ ಮತ್ತು ಖುಶ್ದಿಲ್ ಶಾ ಅವರನ್ನು ಪಾಕ್ ತಂಡದಿಂದ ಕೈಬಿಡುವ ಸಾಧ್ಯತೆಗಳಿವೆ.

ಶಾನ್ ಮಸೂದ್​ಗೆ ಅವಕಾಶ

ಏತನ್ಮಧ್ಯೆ, ಶಾನ್ ಮಸೂದ್ 4 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲಿದ್ದು, ಅವರ ಇತ್ತೀಚಿನ ಫಾರ್ಮ್ ಅದ್ಭುತವಾಗಿದೆ. ಅಲ್ಲದೆ ಅವರು ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್‌ನಲ್ಲಿ ಅಬ್ಬರಿಸಿದ್ದು, ಪಾಕಿಸ್ತಾನ ತಂಡದಲ್ಲಿ ಅವರ ಆಯ್ಕೆ ಖಚಿತವಾಗಿದೆ.

17 ವರ್ಷಗಳ ನಂತರ ಮೊದಲ ಬಾರಿಗೆ ಇಂಗ್ಲೆಂಡ್ ಪ್ರವಾಸ

ಟಿ20 ವಿಶ್ವಕಪ್‌ಗೂ ಮುನ್ನ ಪಾಕಿಸ್ತಾನ ತವರಿನಲ್ಲಿ ಇಂಗ್ಲೆಂಡ್‌ನ ಸವಾಲನ್ನು ಎದುರಿಸಬೇಕಿದೆ. ಇಂಗ್ಲೆಂಡ್ ತಂಡ 17 ವರ್ಷಗಳ ನಂತರ ಪಾಕಿಸ್ತಾನ ಪ್ರವಾಸಕ್ಕೆ ಬರುತ್ತಿದೆ. 7 ಟಿ20 ಪಂದ್ಯಗಳ ಸರಣಿಗಾಗಿ ಇಂಗ್ಲೆಂಡ್ ತಂಡ ಸೆಪ್ಟೆಂಬರ್ 14 ಅಥವಾ 15 ರಂದು ಪಾಕಿಸ್ತಾನ ತಲುಪಲಿದೆ. ಸೆಪ್ಟೆಂಬರ್ 16 ರಿಂದ ಅಭ್ಯಾಸವನ್ನು ಪ್ರಾರಂಭಿಸಲಿದ್ದು, ಸೆಪ್ಟೆಂಬರ್ 20 ರಿಂದ ಸರಣಿ ಆರಂಭವಾಗಲಿದೆ. ಮೊದಲ 4 ಪಂದ್ಯಗಳು ಕರಾಚಿಯಲ್ಲಿ 20, 22, 23 ಮತ್ತು 25 ರಂದು ನಡೆಯಲಿದ್ದು, ಕೊನೆಯ 3 ಪಂದ್ಯಗಳು ಲಾಹೋರ್‌ನಲ್ಲಿ 28 ಮತ್ತು 30 ಆಗಸ್ಟ್‌ನಲ್ಲದೇ ಅಕ್ಟೋಬರ್ 2 ರಂದು ನಡೆಯಲಿದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.