ರಿಲೀಸ್​ ಆದ ಕೆಲವೇ ಗಂಟೆಗಳಲ್ಲಿ ರಣವೀರ್​ ಸಿಂಗ್​ ಹೊಸ ಸಿನಿಮಾ ಲೀಕ್​; ‘ಜಯೇಶ್​ಭಾಯ್​’ಗೆ 2 ಆಘಾತ | Ranveer Singh Shalini Pandey starrer Jayeshbhai Jordaar movie leaked online


ರಿಲೀಸ್​ ಆದ ಕೆಲವೇ ಗಂಟೆಗಳಲ್ಲಿ ರಣವೀರ್​ ಸಿಂಗ್​ ಹೊಸ ಸಿನಿಮಾ ಲೀಕ್​; ‘ಜಯೇಶ್​ಭಾಯ್​’ಗೆ 2 ಆಘಾತ

ರಣವೀರ್ ಸಿಂಗ್

Jayeshbhai Jordaar Movie Leaked: ಅನೇಕ ಪೈರಸಿ ವೆಬ್​ಸೈಟ್​ಗಳು ‘ಜಯೇಶ್​ಭಾಯ್​ ಜೋರ್ದಾರ್​’ ಚಿತ್ರವನ್ನು ಲೀಕ್​ ಮಾಡಿವೆ. ಇದರಿಂದ ಸಿನಿಮಾದ ಬಾಕ್ಸ್​ ಆಫೀಸ್​ ಕಲೆಕ್ಷನ್​ ಮೇಲೆ ದೊಡ್ಡ ಹೊಡೆತ ಬೀಳುತ್ತಿದೆ.

ನಟ ರಣವೀರ್​ ಸಿಂಗ್ (Ranveer Singh) ಅವರಿಗೆ ಈಗ ಯಾಕೋ ಟೈಮ್​ ಚೆನ್ನಾಗಿಲ್ಲ ಎನಿಸುತ್ತದೆ. ಅವರು ಮಾಡಿನ ಎಲ್ಲ ಕೆಲಸಗಳು ಕೈ ಕೊಡುತ್ತಿವೆ. ಕಳೆದ ವರ್ಷ ಅವರು ನಟಿಸಿದ ‘83’ ಸಿನಿಮಾ ರಿಲೀಸ್​ ಆಗಿ ನೆಲಕಚ್ಚಿತು. ಈಗ ಅವರ ಹೊಸ ಚಿತ್ರ ‘ಜಯೇಶ್​ಭಾಯ್​ ಜೋರ್ದಾರ್​’ (Jayeshbhai Jordaar) ಸಿನಿಮಾ ತೆರೆಕಂಡಿದೆ. ಈ ಸಿನಿಮಾ ಮೇಲೆ ರಣವೀರ್​ ಸಿಂಗ್ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹೆಣ್ಣು ಭ್ರೂಣ ಹತ್ಯೆ ಕುರಿತ ಕಥಾಹಂದರ ಹೊಂದಿರುವ ಈ ಸಿನಿಮಾವನ್ನು ಅವರು ಜೋರಾಗಿಯೇ ಪ್ರಚಾರ ಮಾಡಿದ್ದರು. ಆದರೆ ಅವರಿಗೆ ನಿರೀಕ್ಷಿತ ಫಲ ಸಿಕ್ಕಿಲ್ಲ. ರಿಲೀಸ್​ ಆಗಿ ಕೆಲವೇ ಗಂಟೆಗಳಲ್ಲಿ ಈ ಚಿತ್ರಕ್ಕೆ 2 ಆಘಾತಗಳು ಎದುರಾಗಿವೆ. ವಿಮರ್ಶಕರಿಂದ ಮತ್ತು ಪ್ರೇಕ್ಷಕರಿಗೆ ನೆಗೆಟಿವ್​ ಪ್ರತಿಕ್ರಿಯೆ ಬಂದಿರುವುದು ಮೊದಲ ಆಘಾತ. ಇಂಟರ್​ನೆಟ್​ನಲ್ಲಿ ಈ ಸಿನಿಮಾ ಲೀಕ್​ ಆಗಿರುವುದು ಎರಡನೇ ಆಘಾತ! ಹೌದು, ‘ಜಯೇಶ್​ಭಾಯ್​ ಜೋರ್ದಾರ್’​ ಸಿನಿಮಾ ಪೈರಸಿ (Piracy) ಆಗಿದೆ. ಈ ಚಿತ್ರ ಲೀಕ್​ ಆಗಿದ್ದು, ಇದರಿಂದ ಚಿತ್ರತಂಡಕ್ಕೆ ಬಹುದೊಡ್ಡ ನಷ್ಟ ಆಗಿದೆ.

ಚಿತ್ರರಂಗದಲ್ಲಿ ಪೈರಸಿ ಎಂಬುದು ಬಹುದೊಡ್ಡ ಪಿಡುಗಾಗಿದೆ. ಬಹುತೇಕ ಸ್ಟಾರ್​ ನಟರು ಇದರ ಕಾಟದಿಂದ ನಷ್ಟ ಅನುಭವಿಸಿದ್ದಾರೆ. ಈಗ ರಣವೀರ್​ ಸಿಂಗ್​ ಅಭಿನಯದ ‘ಜಯೇಶ್​ಭಾಯ್​ ಜೋರ್ದಾರ್​’ ಸಿನಿಮಾವನ್ನು ಕೂಡ ಇಂಟರ್​ನೆಟ್​ನಲ್ಲಿ ಹರಿಬಿಡಲಾಗಿದೆ. ಕೆಲವು ಕುಖ್ಯಾತ ಪೈರಸಿ ವೆಬ್​ಸೈಟ್​ಗಳಲ್ಲಿ ಈ ಸಿನಿಮಾ ಲಭ್ಯವಾಗುತ್ತಿದೆ. ಇದರಿಂದ ಸಹಜವಾಗಿಯೇ ಚಿತ್ರದ ಬಾಕ್ಸ್​ ಆಫೀಸ್​ ಕಲೆಕ್ಷನ್​ ಮೇಲೆ ದೊಡ್ಡ ಹೊಡೆತ ಬೀಳಲಿದೆ.

ಸಿನಿಮಾ ತುಂಬ ಚೆನ್ನಾಗಿದ್ದರೆ ಪೈರಸಿಯಿಂದ ಅಷ್ಟೇನೂ ತೊಡಕು ಆಗುವುದಿಲ್ಲ ಎಂಬುದು ಕೂಡ ಇತ್ತೀಚೆಗೆ ಸಾಬೀತಾದ ವಿಚಾರ. ಹೌದು, ‘ಆರ್​ಆರ್​ಆರ್​’, ‘ಕೆಜಿಎಫ್​ 2’ ಮುಂತಾದ ಸಿನಿಮಾಗಳು ಕೂಡ ಆನ್​ಲೈನ್​ನಲ್ಲಿ ಲೀಕ್​ ಆಗಿದ್ದವು. ಆದರೆ ಆ ಸಿನಿಮಾಗಳ ಮೇಕಿಂಗ್​ ಗುಣಮಟ್ಟ ಮತ್ತು ಕಥೆ ಚೆನ್ನಾಗಿ ಇದ್ದಿದ್ದರಿಂದ ಜನರು ಪೈರಸಿ ಕಾಪಿ ಕಡೆಗೆ ಗಮನ ನೀಡದೇ, ನೇರವಾಗಿ ಚಿತ್ರಮಂದಿರಕ್ಕೆ ಬಂದು ಸಿನಿಮಾ ವೀಕ್ಷಿಸಿದರು. ಆದರೆ ‘ಜಯೇಶ್​ಭಾಯ್​ ಜೋರ್ದಾರ್​’ ಚಿತ್ರದ ವಿಚಾರದಲ್ಲಿ ಹೀಗೆ ಆಗುವ ಸಾಧ್ಯತೆ ಕಡಿಮೆ. ಯಾಕೆಂದರೆ ಈ ಸಿನಿಮಾ ಕೆಟ್ಟ ವಿಮರ್ಶೆಯನ್ನು ಪಡೆದುಕೊಂಡಿದೆ.

‘ಜಯೇಶ್​ಭಾಯ್​ ಜೋರ್ದಾರ್​’ ಚಿತ್ರದಲ್ಲಿ ರಣವೀರ್​ ಸಿಂಗ್​ಗೆ ಜೋಡಿಯಾಗಿ ಶಾಲಿನಿ ಪಾಂಡೆ ನಟಿಸಿದ್ದಾರೆ. ‘ಅರ್ಜುನ್​ ರೆಡ್ಡಿ’ ಸಿನಿಮಾದಿಂದ ದೊಡ್ಡ ಗೆಲುವು ಪಡೆದ ಬಳಿಕ ಭರ್ಜರಿಯಾಗಿ ಬಾಲಿವುಡ್​ಗೆ ಕಾಲಿಟ್ಟ ಅವರು ಈಗ ಸೋಲು ಅನುಭವಿಸುವಂತಾಗಿದೆ. ಈ ಚಿತ್ರಕ್ಕೆ ದಿವ್ಯಾಂಗ್​ ಟಕ್ಕರ್​ ನಿರ್ದೇಶನ ಮಾಡಿದ್ದು, ಯಶ್​ ರಾಜ್​ ಫಿಲ್ಮ್ಸ್​ ಬಂಡವಾಳ ಹೂಡಿದೆ.

ಉತ್ತಮ ವಿಮರ್ಶೆ ಪಡೆಯುವಲ್ಲಿ ಸೋತ ‘ಜಯೇಶ್​ಭಾಯ್​ ಜೋರ್ದಾರ್​’:

ವಿಮರ್ಶಕರ ವಲಯದಿಂದ ಈ ಚಿತ್ರಕ್ಕೆ ನೆಗೆಟಿವ್​ ರೆಸ್ಪಾನ್ಸ್​ ಸಿಕ್ಕಿದೆ. ಖ್ಯಾತ ಸಿನಿಮಾ ವಿಮರ್ಶಕ ಮತ್ತು ಟ್ರೇಡ್ ಅನಲಿಸ್ಟ್ ತರಣ್ ಆದರ್ಶ್ ಅವರು ‘ಜಯೇಶ್​ಭಾಯ್ ಜೋರ್ದಾರ್’ ಸಿನಿಮಾವನ್ನು ಒಂದು ವಾಕ್ಯದಲ್ಲಿ ಬಣ್ಣಿಸಿದ್ದು ‘ಕಳಪೆ’ ಎಂದು ಕರೆದಿದ್ದಾರೆ. ವಿಮರ್ಶಕ ರೋಹಿತ್ ಜೈಸ್ವಾಲ್ ಐದಕ್ಕೆ ಒಂದು ಸ್ಟಾರ್ ನೀಡಿದ್ದಾರೆ. ಜನಸಾಮಾನ್ಯರು ಕೂಡ ಈ ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಕೆಲವರು ‘ಡಿಸಾಸ್ಟರ್​’ ಎಂದು ಕರೆದಿದ್ದಾರೆ. ಇದರಿಂದ ರಣವೀರ್​ ಸಿಂಗ್​ ಸಿನಿಮಾಗೆ ತೀವ್ರ ಹಿನ್ನಡೆ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

TV9 Kannada


Leave a Reply

Your email address will not be published. Required fields are marked *