ಉತ್ತರ ಕರ್ನಾಟಕದ ಭಾಗದಲ್ಲಿ ಹಿಟ್ಟಿನ ಪಲ್ಯ (ಜುಣಕದ ವಡೆ) ಬಲು ಫೇಮಸ್. ಹಬ್ಬ-ಹರಿದಿನಗಳಲ್ಲಿ ಜೋಳದ ರೊಟ್ಟಿಯ ಜತೆ ಹಿಟ್ಟಿನ ಪಲ್ಯ ಒಳ್ಳೆಯ ಕಾಂಬಿನೇಶನ್ .

ರುಚಿಕರವಾದ ಊಟದಲ್ಲಿ ಸ್ಪೈಸಿಯಾದ ಹಿಟ್ಟಿನ ಪಲ್ಯ ಇದ್ದರೆ ಅದರ ಗಮ್ಮತ್ತೇ ಬೇರೆ. ಒಮ್ಮೆ ಸವಿದರೆ ಮತ್ತೊಮ್ಮೆ ಬೇಕು ಎನ್ನುವಷ್ಟು ಸ್ವಾದಿಷ್ಟವಾಗಿರುತ್ತದೆ ಈ ತಿಂಡಿ. ನೀವು ಒಮ್ಮೆ ಮನೆಯಲ್ಲಿ ಹಿಟ್ಟಿನ ಪಲ್ಯ ಮಾಡಿ ನೋಡಿ, ಖಂಡಿತವಾಗಿಯೂ ಅದು ನಿಮಗೆ ಇಷ್ಟವಾಗುತ್ತದೆ.

ಬೇಕಾಗುವ ಸಾಮಗ್ರಿಗಳು:

ಕಡಲೆ ಹಿಟ್ಟು, ಅಡುಗೆ ಎಣ್ಣೆ, ಒಂದು ಅಥವಾ ಎರಡು ಈರುಳ್ಳಿ, ಹಸಿ ಮೆಣಸಿನಕಾಯಿ (ರುಚಿಗೆ ತಕ್ಕಷ್ಟು), ಉಪ್ಪು, ಹುಣಸೆ ಹಣ್ಣಿನ ರಸ, ಜೀರಿಗೆ, ಸಾಸಿವೆ, ಕೊತ್ತಂಬರಿ, ಕರಿಬೇವು, ಅರಿಶಿನ, ನೀರು.

ಮಾಡುವ ವಿಧಾನ:

ಒಂದು ಬಾಂಡಲೆಯಲ್ಲಿ ಎಣ್ಣೆ ಹಾಕಿ ಕಾಯಿಸಿಕೊಳ್ಳಬೇಕು. ಎಣ್ಣೆ ಬಿಸಿಯಾದ ನಂತರ ಜೀರಿಗೆ-ಸಾಸಿವೆ, ಸಣ್ಣಗೆ ಕಟ್ ಮಾಡಿದ ಈರುಳ್ಳಿ, ಹಸಿ ಮೆಣಸಿನಕಾಯಿ ಹಾಕಿ ಫ್ರೈ ಮಾಡಬೇಕು. ನಂತರ ಕರಿಬೇವು, ಕೊತ್ತಂಬರಿ, ಅರಿಶಿನ ಪುಡಿ ಹಾಕಿ ಚೆನ್ನಾಗಿ ಸ್ವಲ್ಪ ಹೊತ್ತು ಹಾಗೆ ಬಿಡಬೇಕು. ನಂತರ ಹುಣಸೆ ರಸ ಹಾಕಿ (ಹುಳಿ ಹೆಚ್ಚಾದರೆ ಪಲ್ಲೆ ಇನ್ನೂ ರುಚಿ ಬರುತ್ತದೆ) ಸ್ವಲ್ಪ ಹೊತ್ತು ಬೇಯಿಸಬೇಕು.

ಬಾಂಡಲೆಯಲ್ಲಿರುವ ಎಲ್ಲ ಪದಾರ್ಥ ಫ್ರೈ ಆದ ಮೇಲೆ ನೀರು ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನೀರು ಕುದಿಯುತ್ತಿರುವಾಗ ಕಡಲೆ ಹಿಟ್ಟು ಹಾಕಿ ಸ್ವಲ್ಪ ಮೃದುವಾಗುವ ಹಾಗೆ ತಿರುವಬೇಕು (ರಾಗಿ ಮುದ್ದೆ ತಿರುವಿದ ಹಾಗೆ). ಸ್ವಲ್ಪ ಗಟ್ಟಿ ಆದ ಮೇಲೆ ಒಂದು ಪ್ಲೇಟ್‌ಗೆ ಎಣ್ಣೆ ಹಚ್ಚಿ ಪಲ್ಯದ ಹೂರಣವನ್ನು ಹಾಕಿ ತಟ್ಟಬೇಕು. ಅದರ ಮೇಲೆ ಕೊಬ್ಬರಿ ತುರಿ ಹಾಕಿದರೇ ಇನ್ನೂ ಚೆನ್ನಾಗಿರುತ್ತದೆ.  ಸ್ವಲ್ಪ ಸಮಯದ ನಂತರ ಚಾಕುವಿನಿಂದ ನಮಗೆ ಬೇಕಾದ ಆಕಾರ ಹಾಗೂ ಅಳತೆಯಲ್ಲಿ ಕೊರೆದುಕೊಳ್ಳಬೇಕು.

ಆರೋಗ್ಯ – Udayavani – ಉದಯವಾಣಿ
Read More