ಹಾವೇರಿ: ಹಳ್ಳಿಗಳ ಕೊಳಚೆ ನೀರು ನದಿ ಹಾಗೂ ಜಲ ಮೂಲಗಳಿಗೆ ಸೇರುವ ಮುನ್ನ ಸಂಸ್ಕರಿಸಿ ಹರಿಸುವ ವಿನೂತನ ಗ್ರೇ ವಾಟರ್ ಮ್ಯಾನೇಜ್‍ಮೆಂಟ್ ವ್ಯವಸ್ಥೆ ಅನುಷ್ಟಾನದ ಜಿಲ್ಲೆಯ ಕಾಮಗಾರಿ ಸ್ಥಳಗಳಿಗೆ ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಿಲ್ಲಾ ಪಂಚಾಯತ್ ವತಿಯಿಂದ ವಿನೂತನವಾಗಿ ಸುಸ್ಥಿರ ಬೂದು ನೀರು ನಿರ್ವಹಣೆಗೆ ಮೊದಲ ಹೆಜ್ಜೆಯಾಗಿ ರಾಣೇಬೆನ್ನೂರು ತಾಲೂಕಿನ ಕುಮಾರಪಟ್ಟಣಂ ಸಮೀಪದ ಕೋಡಿಹಾಳ ಹಾಗೂ ಬ್ಯಾಡಗಿ ಮತ ಕ್ಷೇತ್ರ ವ್ಯಾಪ್ತಿಯ ಬೆನಕಕೊಂಡ ಗ್ರಾಮದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ವ್ಯವಸ್ಥೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಮಗಳಲ್ಲಿ ಪಾತ್ರೆ ತೊಳೆದ ನೀರು, ಬಟ್ಟೆ ತೊಳೆದ ನೀರು, ಸ್ನಾನ ಗೃಹದ ನೀರು ಸೇರಿದಂತೆ ಕಲುಷಿತ ನೀರು ಚರಂಡಿಗಳಲ್ಲಿ ಗ್ರಾವಿಟಿ ಆಧಾರದ ಮೇಲೆ ಸರಾಗವಾಗಿ ಹರಿದು ಹೋಗುವಂತೆ ಚರಂಡಿಗಳ ನಿರ್ಮಾಣ ಮಾಡಲಾಗಿದೆ. ಸಿಮೆಂಟ್‍ನಿಂದ ನಿರ್ಮಾಣ ಮಾಡಿದ ಕಾಲುವೆಗಳಲ್ಲಿ ನೀರು ಹರಿದು ಈ ಕಾಲುವೆಗೆ ಸಂಪರ್ಕ ಹೊಂದಿದಂತೆ ಕೆಳಹಂತದಲ್ಲಿ ಕಲ್ಲಿನಿಂದ ನಿರ್ಮಾಣಮಾಡಿದ ಚರಂಡಿ ಮೂಲಕ ಹರಿದು ಸಂಸ್ಕರಣಕ್ಕಾಗಿ ನಿರ್ಮಾಣ ಮಾಡಿರುವ ದೊಡ್ಡ ಕಲ್ಲುತೊಟ್ಟಿಗಳಲ್ಲಿ ಸೇರಿ ಸಂಸ್ಕರಣಗೊಳ್ಳುತ್ತದೆ. ನಂತರ ಈ ತೊಟ್ಟಿಯಿಂದ ನದಿಗೆ ಹರಿಸಲು ಕಲ್ಲಿನಿಂದಲೇ ಕಾಲುವೆಗಳನ್ನು ನಿರ್ಮಾಣಮಾಡಲಾಗಿದೆ. ನದಿಗೆ ಕಲುಷಿತ ನೀರು ಸೇರುವ ಮುನ್ನವೇ ತ್ಯಾಜ್ಯವನ್ನು ವೈಜ್ಞಾನಿಕ ಮತ್ತು ತಾಂತ್ರಿಕ ಮಾದರಿಯಲ್ಲಿ ಸಂಸ್ಕರಿತ ನೀರು ನದಿ ಸೇರಿದಂತೆ ಜಲಮೂಲಗಳಿಗೆ ಸೇರುವಂತೆ ಯೋಜನೆಯನ್ನು ವಿನ್ಯಾಸ ಮಾಡಲಾಗಿದೆ.

ಗ್ರೇ ವಾಟರ್(ಬೂದು ನೀರು) ಮ್ಯಾನೇಜ್ ಮೇಂಟ್ ವ್ಯವಸ್ಥೆ ರಾಜ್ಯದಲ್ಲೇ ಹಾವೇರಿ ಜಿಲ್ಲೆಯ ಕೋಡಿಹಾಳ ಗ್ರಾಮದಲ್ಲಿ ಪ್ರಥಮವಾಗಿ ಅನುಷ್ಠಾನಗೊಳ್ಳುತ್ತಿದೆ, ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. 2050 ಕುಟುಂಬಗಳು (10,252 ಜನರು) ವಾಸಿಸುವ ತುಂಗಭದ್ರಾ ನದಿ ತಟದಲ್ಲಿರುವ ಕೋಡಿಹಾಳ ಗ್ರಾಮದಲ್ಲಿ ವೈಜ್ಞಾನಿಕವಾದ ಚರಂಡಿ ವ್ಯವಸ್ಥೆ ಇಲ್ಲದೆ ಗ್ರಾಮದಿಂದ ಐದು ಕಡೆ ಕೊಳಚೆ ನೀರು ನದಿಗೆ ಸೇರುತ್ತಿತ್ತು. ಸರಾಗವಾಗಿ ಚರಂಡಿಯಲ್ಲಿ ನೀರು ಹರಿಯದೆ ಅಲ್ಲಲ್ಲಿ ನಿಂತು ಅನೈರ್ಮಲ್ಯ ವಾತಾವರಣ ಸೃಷ್ಟಿಸುವುದರ ಜೊತೆಗೆ ಅನಾರೋಗ್ಯಕರ ವಾತಾವರಣ ಹರಡುತ್ತಿತ್ತು. ಇದೀಗ ಇದರಿಂದಾಗಿ ನೀರು ಸಂಸ್ಕರಣಗೊಂಡು ನದಿ ಸೇರಲಿದೆ.

ಈ ಸಂದರ್ಭದಲ್ಲಿ ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಏಕನಾಥ ಭಾನುವಳ್ಳಿ, ಕೋಡಿಹಾಳ ಮತ್ತು ಬೆನಕನಕೊಂಡ ಗ್ರಾಮ ಪಂಚಾಯತಿ ಅಧ್ಯಕ್ಷರು, ಪದಾಧಿಕಾರಿಗಳು ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.

The post ರೂರಲ್ ಗ್ರೇ ವಾಟರ್ ಮ್ಯಾನೇಜ್‍ಮೆಂಟ್- ರಾಜ್ಯದಲ್ಲೇ ಹಾವೇರಿಯಲ್ಲಿ ಪ್ರಥಮ ಪ್ರಯೋಗ appeared first on Public TV.

Source: publictv.in

Source link