ನಟ ರೆಬೆಲ್​ ಸ್ಟಾರ್​ ಅಂಬರೀಶ್​ಗೆ ಇಂದು 69ನೇ ಹುಟ್ಟುಹಬ್ಬದ ಸಂಭ್ರಮ. ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್​​ ಸಮಾಧಿಗೆ ಪತ್ನಿ ಸುಮಲತಾ ಅಂಬರೀಶ್​ ಹಾಗೂ ಪುತ್ರ ಅಭಿಷೇಕ್​​ ಅಂಬರೀಶ್​​ ಪೂಜೆ ಸಲ್ಲಿಸಿದ್ದಾರೆ. ಕೊರೊನಾ ಕಾರಣ ರಾಜ್ಯದಲ್ಲಿ ಲಾಕ್​ಡೌನ್​ ಹೇರಲಾಗಿದ್ದು, ಈ ಬಾರಿ ಅಭಿಮಾನಿಗಳಿಗೆ ಅಂಬಿ ಹುಟ್ಟುಹಬ್ಬ ಆಚರಿಸುವ ಅವಕಾಶ ನೀಡಲಾಗುವುದಿಲ್ಲ.

ನಟಿ, ಸಂಸದೆ ಸುಮಲತಾ ಅಂಬರೀಶ್​​ ಹಾಗೂ ಅಭಿಷೇಕ್​ ಜೊತೆಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ್ಣ ಕೂಡ ಅಂಬರೀಶ್​ ಸಮಾಧಿಗೆ ನಮನ ಸಲ್ಲಿಸಿದ್ದಾರೆ. ಮಂಡ್ಯದ ಗಂಡು ನಮ್ಮನ್ನಗಲಿ ಎರಡೂವರೆ ವರ್ಷಗಳಾಗಿವೆ. ಅಂಬರೀಶ್​ ಹುಟ್ಟುಹಬ್ಬವನ್ನ ‘ಅಂಬಿ ಡೇ’ ಅಂತ ಆಚರಿಸಲು ಸುಮಲತಾ ಮನವಿ ಮಾಡಿದ್ದಾರೆ. ಪೂಜೆಯ ಬಳಿಕ ಸುಮಲತಾ ಅಂಬರೀಶ್  ಮಂಡ್ಯಗೆ ತೆರಳಲಿದ್ದಾರೆ.

ಅಂಬಿ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ಬಳಿಕ ಸಂಸದೆ ಸುಮಲತಾ ಅಂಬರೀಶ್ ಮಾತಾಡಿದ್ದು, ‘ಅಂಬರೀಶ್ ಅವರಿದ್ದಾಗ ಪ್ರತಿ ವರ್ಷ ಅಭಿಮಾನಿಗಳು ರಾಜ್ಯದ ಮೂಲೆ ಮೂಲೆಗಳಿಂದ ಬಂದು ಹುಟ್ಟುಹಬ್ಬವನ್ನ ಸಂಭ್ರಮದಿಂದ ಆಚರಿಸುತ್ತಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ನಾವೇ ಮಂಡ್ಯಕ್ಕೆ ತೆರಳಿ ಅಲ್ಲಿ ಆಚರಿಸುತ್ತಿದ್ದೇವೆ. ಇನ್ನು ಈ ವರ್ಷ ಕೊರೊನಾ ಕಾರಣದಿಂದ ಸಂಭ್ರಮದ ಆಚರಣೆ ಇಲ್ಲ. ಎಲ್ಲಾ ಅಭಿಮಾನಿಗಳು ಮನೆಯಲ್ಲೇ ಇದ್ದು ಆಚರಿಸಿ. ಅವರ ಜೀವನದಿಂದ ಸ್ಫೂರ್ತಿ ಪಡೆದು ಈಗ ಕೆಲಸ ಮಾಡುತ್ತಿದ್ದೇನೆ. ಇಲ್ಲಿಂದ ಈಗ ಮಂಡ್ಯಕ್ಕೆ ತೆರಳಲಿದ್ದೇನೆ. ಅಲ್ಲಿ ಐಸಿಯು ಆನ್ ವೀಲ್ಸ್ ಉದ್ಘಾಟನೆ ಹಾಗೂ ಇತರೆ ಸಮಾಜಮುಖಿ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ. ಚಿತ್ರರಂಗಕ್ಕೆ ನೆರವು ಸಂಬಂಧ ಸಿಎಂ ಯಡಿಯೂರಪ್ಪರನ್ನ ಭೇಟಿ ಮಾಡಿ ಬಂದಿದ್ದಾರೆ. ಪ್ರಯತ್ನಗಳು ಕೂಡ ನಡೆಯುತ್ತಿವೆ. ರಾಜ್ಯ ಸರ್ಕಾರ ಚಿತ್ರರಂಗದ ಸಮಸ್ಯೆಗೆ ಸ್ಪಂದಿಸಬೇಕು ಅನ್ನೋದೇ ನನ್ನ ಮನವಿ ಕೂಡ’ ಅಂತ ತಿಳಿಸಿದ್ದಾರೆ.

The post ರೆಬೆಲ್​ ಸ್ಟಾರ್​ 69ನೇ ಹುಟ್ಟುಹಬ್ಬ; ಸುಮಲತಾ, ಅಭಿಷೇಕ್​ರಿಂದ ಅಂಬರೀಶ್​ ಸಮಾಧಿಗೆ ಪೂಜೆ appeared first on News First Kannada.

Source: newsfirstlive.com

Source link