ಬೆಳಗಾವಿ:  ದೇಶದಲ್ಲಿ ಕೊರೊನಾ ಸುನಾಮಿ ದಿನೇ ದಿನೇ ವ್ಯಪಿಸುತ್ತಿದೆ. ಈ ಹಿನ್ನೆಲೆ ಜಿಲ್ಲೆಯಲ್ಲಿ ರೆಮ್ಡೆಸಿವಿರ್ ಔಷಧಕ್ಕೆ ಬೇಡಿಕೆ ಹೆಚ್ಚಾಗಿದೆ. ವೈದ್ಯರು, ರೋಗಿಗಳು ರೆಮ್ಡೆಸಿವಿರ್ ಪಡೆಯಲು ಪರದಾಡುವಂತಾಗಿದೆ. ವಾರಗಳ ಕಾಲ ಅಲೆದರೂ ಔಷಧಿ ಸಿಗುತ್ತಿಲ್ಲ ಅಂತ ರೋಗಿಗಳ ಸಂಬಂಧಿಕರು ನ್ಯೂಸ್​ಫಸ್ಟ್ ಎದುರು ತಮ್ಮ ಸಂಕಷ್ಟ ತೋಡಿಕೊಂಡಿದ್ದಾರೆ.

ಸಂಕೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗೆ ತುರ್ತು ರೆಮ್ಡೆಸಿವಿರ್ ಔಷಧಿ ಅಗತ್ಯವಿದೆ ಎಂದು ವೈದ್ಯರು ನೀಡಿದ ಚೀಟಿ ಹಿಡಿದು ರೋಗಿಯ ಸಂಬಂಧಿಕರು ಅಲೆದಾಡಿದ್ದಾರೆ. ರೆಮ್ಡೆಸಿವಿರ್ ಸಿಗದಿದ್ದರೆ ರೋಗಿ ಬದುಕಿಳಿಯುವುದು ಕಷ್ಟ ಅಂತ ವೈದ್ಯರು ಹೇಳಿದ್ದರು ಎನ್ನಲಾಗಿದೆ. ಆದ್ರೆ ಎಲ್ಲ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿಕೊಂಡರೂ ರೆಮ್ಡಿಸಿವಿರ್ ಸಿಕ್ಕಿಲ್ಲ. ಹೀಗಾಗಿ ಮಾಧ್ಯಮಗಳ ಮೂಲಕ ಜಿಲ್ಲಾ ಔಷಧಿ ನಿಯಂತ್ರಣಾಧಿಕಾರಿ ರಘುರಾಮ ಅವರನ್ನ ರೋಗಿಗಳ ಸಂಬಂಧಿಕರು ಭೇಟಿ ಮಾಡಿದ್ರು. ಅವರಿಗೆ ರೆಮ್ಡೆಸಿವಿರ್ ಬಗ್ಗೆ ಮನವರಿಕೆ ಮಾಡಿದ ರಘುರಾಮ್, ನಂತರ ಔಷಧಿ ಒದಗಿಸಿಕೊಡುವ ಭರವಸೆ‌ ನೀಡಿದರು.

ರೆಮ್ಡೆಸಿವಿರ್ ಬೇಕಂದ್ರೆ ಬಿಮ್ಸ್​ಗೆ ದಾಖಲಾಗಬೇಕು. ಮೆಡಿಕಲ್ ಅಂಗಡಿಯವರು ರೆಮ್ಡೆಸಿವಿರ್​​ಗಾಗಿ ಡಿಸ್ಟುಬ್ಯೂಟರ್​​ಗಳಿಗೆ ಹಣ ಹಾಕುತ್ತಾರೆ. ಅದರ ಪ್ರಕಾರ ಮೆಡಿಕಲ್ಸ್​ಗೆ ಔಷಧಿ ಬರುತ್ತೆ. ಕೋವಿಡ್ ಆಸ್ಪತ್ರೆಗೆ ಔಷಧಿ ಹೋದ ಮೇಲೆ ವೈದ್ಯರು ನಿರ್ಧಾರ ಮಾಡ್ತಾರೆ. ನಾವು ಅದರ ಮಧ್ಯೆ ಹೋಗಲ್ಲ ಎಂದು ರಘುರಾಮ್ ಹೇಳಿದ್ರು.

ನಾನು ಮ್ಯಾನ್ಯುಫ್ಯಾಕ್ಚರ್ ಮಾಡಲ್ಲ
ಡ್ರಗ್ ಕಂಟ್ರೋಲರ್ ರೆಮ್ಡೆಸಿವಿರ್ ನೀಡುತ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರೆಮ್ಡೆಸಿವಿರ್ ನೀಡಲು ನಾನು ಮ್ಯಾನ್ಯುಫ್ಯಾಕ್ಚರ್ ಮಾಡಲ್ಲ. ತಾತ್ಕಾಲಿಕ ಅಭಾವ ಸೃಷ್ಟಿಯಾದ ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲಾಧಿಕಾರಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಅವರ ನೇತೃತ್ವದಲ್ಲಿ ಸರಬರಾಜು ಮಾಡಲಾಗುತ್ತದೆ. ಅವರ ಗಮನಕ್ಕೆ ತಂದು ಸಪ್ಲೈ ಮಾಡುತ್ತೇವೆ. ರೆಮ್ಡೆಸಿವಿರ್ ಸಪ್ಲೈ ಕೊರತೆ ಆದಾಗ, ಮಧ್ಯಪ್ರವೇಶ ಮಾಡಿ ಕಂಪನಿಯಿಂದ ಬರುವ ಔಷಧಿ ಕೋವಿಡ್ ಆಸ್ಪತ್ರೆಗೆ ತಲುಪಿಸುವ ಜವಾಬ್ದಾರಿ ನಮ್ಮದು.

ಬೆಳಗಾವಿಗೆ 800 ರೆಮ್ಡೆಸಿವಿರ್​​ಗೆ ಬೇಡಿಕೆ ಇದೆ. ಆದ್ರೆ ನಮಗೆ ಬಂದಿರೋದು ಕೇವಲ 200 ಮಾತ್ರ. ಅದನ್ನು ಜಿಲ್ಲೆಗೆ ಹಂಚಬೇಕು. ಔಷಧದ ಕೊರತೆ ಹಿನ್ನೆಲೆಯಲ್ಲಿ ದಿನಾ 200 ರಿಂದ 300 ಫೋನ್​​ ಕಾಲ್​​ಗಳು ಬರುತ್ತಿವೆ. ಪೋನ್​ ರಿಸೀವ್ ಮಾಡ್ಲಾ ಅಥವಾ ಔಷಧ ಕೊಡಿಸೋ ವ್ಯವಸ್ಥೆ ಮಾಡ್ಲಾ ನೀವೇ ಹೇಳಿ? ಎಂದು ಪ್ರಶ್ನಿಸಿದ್ರು. ವೈದ್ಯರು, ಕೊರೊನಾ ಸೋಂಕಿತರಿಗೆ ಔಷಧ ಬೇಕು ಅಂತಾ ಬರೆದುಕೊಟ್ಟಾಗ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

The post ರೆಮ್ಡೆಸಿವಿರ್​ಗಾಗಿ ಹಾಹಾಕಾರ; ಕಣ್ ಬಿಟ್ರಾ ಬೆಳಗಾವಿ ಔಷಧ ನಿಯಂತ್ರಕ? appeared first on News First Kannada.

Source: newsfirstlive.com

Source link