ನಿನ್ನೆ ಮಾಜಿ ಕಾರ್ಪೊರೇಟರ್​ ರೇಖಾ ಅವರನ್ನ ಹಾಡಹಗಲೇ ನಡುರಸ್ತೆಯಲ್ಲಿ ಕೊಲೆ ಮಾಡಿರೋದು ನಗರವನ್ನ ಬೆಚ್ಚಿಬೀಳಿಸಿದೆ. ಇದೊಂದು ಪಕ್ಕಾ ಪ್ಲಾನ್ಡ್​​ ಮರ್ಡರ್‌. ಯಾವಾಗ ಹತ್ಯೆ ಮಾಡಬೇಕು, ಎಲ್ಲಿ ಹತ್ಯೆ ಮಾಡಬೇಕು ಅನ್ನೋದ್ರಿಂದ ಹಿಡಿದು ಒಂದು ಕೊಲೆಗೆ ಯಾವ ರೀತಿಯ ಪೂರ್ವಸಿದ್ಧತೆಗಳು ಬೇಕಿತ್ತೋ ಆ ಎಲ್ಲಾ ಸಿದ್ಧತೆಗಳು ಭರ್ಜರಿಯಾಗೇ ನಡೆದಿತ್ತು. ಕೊಲೆಗೂ ಮುನ್ನ ಆರೋಪಿಗಳಾದ ಪೀಟರ್‌, ಸೂರ್ಯ, ಸ್ಟೀಫನ್‌ ಮಾಡಿಕೊಂಡಿದ್ದ ತಯಾರಿ ಹೇಗಿತ್ತು ಅನ್ನೋದು ಕೂಡ ಎಂತಹವರೂ ಬೆಚ್ಚಿ ಬೀಳುವಂತೆ ಮಾಡುತ್ತೆ.

ರೇಖಾ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದ ಹಂತಕರು
ಆಫೀಸ್​ಗೆ ಹೋಗುವ, ವಾಪಸ್‌ ಆಗುವ ಮೇಲೆ ಪಕ್ಕಾ ನಿಗಾ

ಛಲವಾದಿಪಾಳ್ಯದ ಮಾಜಿ ಕಾರ್ಪೊರೇಟರ್​ ರೇಖಾ ಕದಿರೇಶ್‌ ಇವತ್ತು ಹೆಣವಾಗಿ ಹೋಗಿದ್ದಾರೆ. ಇವರ ಮನೆ ಇರುವುದು ಫ್ಲವರ್‌ ಗಾರ್ಡನ್‌ನಲ್ಲಿಯಾದರೂ. ಆಫೀಸ್‌ ಇರುವುದು ಛಲವಾದಿ ಪಾಳ್ಯದಲ್ಲಿ. ಸದಾ ರೇಖಾ ಸುತ್ತಮುತ್ತ ಬಾಡಿಗಾರ್ಡ್​ಗಳಂತೆ ಇದ್ದ ಆರೋಪಿಗಳಾದ ಪೀಟರ್‌, ಸೂರ್ಯ, ಸ್ಟೀಫನ್‌ ರೇಖಾರನ್ನ ಮುಗಿಸಲು ವ್ಯವಸ್ಥಿತ ಮೂಹೂರ್ತ ಇಟ್ಟಿದ್ರು. ಮೊದಲು ರೇಖಾ ಮನೆಯಿಂದ ಆಫೀಸ್‌ಗೆ ಎಷ್ಟು ಗಂಟೆಗೆ ಹೊರಡುತ್ತಾರೆ, ಆಫೀಸ್‌ನಿಂದ ಮನೆಗೆ ಎಷ್ಟು ಗಂಟೆಗೆ ವಾಪಸ್‌ ಆಗುತ್ತಾರೆ ಅನ್ನೋದನ್ನು ತಿಳಿದುಕೊಂಡಿದ್ರು. ಅದಕ್ಕಾಗಿಯೇ ಎರಡು ದಿನ ರೇಖಾ ಅವರನ್ನು ಆಫೀಸ್‌ಗೆ ಡ್ರಾಪ್​ ಮಾಡಿದ್ದಾರೆ. ರೇಖಾ ಎಷ್ಟು ಗಂಟೆಗೆ ಏಳ್ತಾರೆ, ತಿಂಡಿ ತಿಂತಾರೆ, ಎಷ್ಟು ಗಂಟೆಗೆ ಊಟ ನಿದ್ರೆ ಮಾಡ್ತಾರೆ ಅನ್ನೋದರ ಆಧಾರದ ಮೇಲೆ ಗಮನ ಇಟ್ಟಿದ್ರು. ಪ್ರಮುಖವಾಗಿ ರೇಖಾರ ಚಲನವಲನಗಳ ಬಗ್ಗೆ ವಿಶೇಷ ನಿಗಾ ಇಟ್ಟಿದ್ದು ಆರೋಪಿ ಸೂರ್ಯ ಅನ್ನೋದು ಈಗ ತಿಳಿದುಬಂದಿರೊ ವಿಷ್ಯ.

ರಸ್ತೆಯಲ್ಲಿರೋ ಸಿಸಿಟಿವಿಗಳ ಬಗ್ಗೆಯೂ ತಿಳಿದುಕೊಂಡಿದ್ರು
ಆರೋಪಿಗಳು ರೇಖಾ ಆಫೀಸ್‌ ಮತ್ತು ಮನೆಗೆ ಓಡಾಡುವ ರಸ್ತೆಯಲ್ಲಿ ಎಷ್ಟು ಸಿಸಿಟಿವಿಗಳು ಇವೆ ಅನ್ನೋದನ್ನೂ ಜಾಲಾಡಿದ್ರು. ಎಲ್ಲೆಲ್ಲಿ ಸಿಸಿಟಿವಿಗಳು ಇವೆ, ಅವು ಕೆಲಸ ಮಾಡುತ್ತವೋ ಇಲ್ಲವೋ ಅನ್ನೋದನ್ನ ತಿಳಿದುಕೊಂಡಿದ್ರು. ಎಲ್ಲಿ ಕೊಲೆ ಮಾಡಿದರೆ ಸಿಸಿಟಿವಿಯಿಂದ ತಪ್ಪಿಸಿಕೊಳ್ಳಬಹುದು ಅನ್ನೋದರ ಬಗ್ಗೆಯೂ ಪಕ್ಕಾ ಪ್ಲಾನ್‌ ರೂಪಿಸಿದ್ದರು. ಇದಕ್ಕಾಗಿಯೇ ವಾರಗಟ್ಟಲೇ ರಸ್ತೆಯಲ್ಲಿ ಅಲೆದಾಡಿದ್ರು.


ಸಿಸಿಟಿವಿಗಳ ಕಣ್ಣು ತಪ್ಪಿಸಿ ರೇಖಾ ಕದಿರೇಶ್​ ಮರ್ಡರ್​
ಇದು ನಿಜಕ್ಕೂ ಹಂತಕರು ಎಷ್ಟು ಚಾಣಕ್ಷರಾಗಿದ್ರು ಅನ್ನೋದರ ಕಥೆ ಹೇಳುತ್ತೆ. ಕೊಲೆ ಮಾಡಲು ಯಾವ ಸ್ಥಳ ಅನುಕೂಲ ಅನ್ನೋದನ್ನೂ ಗುರುತಿಸಿಕೊಂಡಿದ್ದ ಆರೋಪಿಗಳು, ಅಂತಿಮವಾಗಿ ರೇಖಾ ಆಫೀಸ್‌ ಮುಂದೆಯೇ ಹತ್ಯೆಯ ವ್ಯೂಹ ಹೆಣೆದಿದ್ರು. ಆದ್ರೆ ಅಲ್ಲಿ ಸಿಸಿಟಿವಿಗಳಿದ್ದ ಕಾರಣ ಅವುಗಳ ಕಣ್ಣು ತಪ್ಪಿಸಿ ಡ್ಯಾಗರ್ ಇರಿಯಲು ಸಿದ್ಧತೆ ನಡೆಸಿದ್ರು. ಸಿಸಿಟಿವಿಯಲ್ಲಿ ತಮ್ಮ ಪರಿಚಯ ಸಿಗಬಾರದೆಂಬ ಉದ್ದೇಶದಿಂದಲೇ ಅವುಗಳ ದಿಕ್ಕನ್ನೇ ತಿರುಗಿಸಿಬಿಟಿದ್ರು ಹಂತಕರು.

ಪೀಟರ್​​​ನಿಂದ ಮಾಲಾಗೆ ಹೋಗ್ತಿತ್ತ ಮಾಹಿತಿ?
ಈ ಪ್ರಕರಣದಲ್ಲಿ ಇನ್ನೊಂದು ಇಂಟರೆಸ್ಟಿಂಗ್​ ಕ್ಯಾರೆಕ್ಟರ್ ಎಂಟ್ರಿ ಆಗಿದೆ. ರೇಖಾ ಪತಿ ಕದಿರೇಶ್​ನ ಸಹೋದರಿ ಮಾಲಾ ಹೆಸರು ಕೂಡ ಈ ಕೊಲೆ ಪ್ರಕರಣದಲ್ಲಿ ತಳುಕು ಹಾಕಿಕೊಂಡಿದ್ದಾರೆ. ಕದಿರೇಶ್‌ ಹತ್ಯೆಯ ಬಳಿಕ ಎಲ್ಲಾ ಆಸ್ತಿ ರೇಖಾಗೆ ಹೋಗಿತ್ತು. ಇದೇ ಕಾರಣಕ್ಕೆ ಮಾಲಾ ರೇಖಾ ವಿರುದ್ಧ ಕತ್ತಿ ಮಸೆಯುತ್ತಿದ್ದಳು ಎನ್ನಲಾಗಿದೆ. ಏನಾದ್ರೂ ಮಾಡಿ ರೇಖಾ ಕಥೆ ಮುಗಿಸಬೇಕು ಅಂತಾ ಆಕೆಯೂ ಸ್ಕೆಚ್​ ಹಾಕಿದ್ದಳು ಅನ್ನೋ ಮಾತುಗಳು ಛಲವಾದಿಪಾಳ್ಯದಲ್ಲಿ ಗಲ್ಲಿಗಲ್ಲಿಯಲ್ಲಿ ಗಿರಗಿಟ್ಲೆ ಹೊಡೀತಿವೆ. ಹೀಗಾಗಿ, ಮಾಲಾ ಹೇಳಿದ್ದಂತೆ ಪೀಟರ್‌ ಕೇಳುತ್ತಿದ್ದ. ಆಕೆಯ ಒಂದೇ ಒಂದು ಮಾತನ್ನು ಆತ ತೆಗೆದುಹಾಕುತ್ತಿರಲಿಲ್ಲ. ರೇಖಾ ಚಲನವಲನದ ಬಗ್ಗೆ ಗಮನಿಸುವಂತೆ ಪೀಟರ್‌ಗೆ ಸೂಚಿಸಿದ್ದೇ ಮಾಲಾ ಎನ್ನಲಾಗಿದೆ. ಇದೇ ಉದ್ದೇಶಕ್ಕೆ ರೇಖಾ ಚಲನವಲನದ ಬಗ್ಗೆ ಮಾಲಾಗೆ ಪ್ರತಿ ದಿನ ಪೀಟರ್‌ ಪಿನ್ ಟು ಪಿನ್ ಡೀಟೇಲ್ಸ್​​ ನೀಡ್ತಿದ್ದ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.

ಎರಡು ದಿನದ ಹಿಂದೆಯೇ ಸಿದ್ಧವಾಗಿತ್ತು ಕೊಲೆಗೆ ಸ್ಕೆಚ್​​ 
ಹೌದು, ಇದು ಏಕಾಏಕಿ ನಡೆದ ಹತ್ಯೆ ಅಲ್ಲವೇ ಅಲ್ಲ. ಆರೋಪಿಗಳು ರೇಖಾ ಅವರನ್ನು ಎಲ್ಲಿ ಹತ್ಯೆ ಮಾಡಬೇಕು? ಹೇಗೆ ಹತ್ಯೆ ಮಾಡಬೇಕು ಅನ್ನೋದರ ಬ್ಲೂಪ್ರಿಂಟ್​ ಎರಡು ದಿನಗಳ ಹಿಂದೆಯೇ ಸಿದ್ಧಪಡಿಸಿದ್ರು. ಎಲ್ಲಿಯೂ ಸುಳಿವು ನೀಡದಂತೆ ಹತ್ಯೆ ಮಾಡಬೇಕು ಅನ್ನೋದೇ ಆರೋಪಿಗಳ ಉದ್ದೇಶವಾಗಿತ್ತು. ಎಲ್ಲಾ ಸ್ಕೆಚ್​ ರೆಡಿಯಾದಮೇಲಷ್ಟೇ ಗುರುವಾರ ಬೆಳಗ್ಗೆ ರೇಖಾ ಉಸಿರು ನಿಲ್ಲಿಸಲು ಸ್ಕೆಚ್​ ರೆಡಿಮಾಡಿಬಿಟ್ಟಿದ್ರು.

ನಾಲ್ಕು ಆಯಾಮಗಳಲ್ಲಿ ತನಿಖೆಗೆ ಮುಂದಾದ ಪೊಲೀಸರು
ಪ್ರತಿಯೊಂದು ಕೊಲೆಗೂ ಕಾರಣ ಇದ್ದೇ ಇರುತ್ತೆ. ಅದೇ ರೀತಿ ರೇಖಾ ಕೊಲೆಗೂ ಕಾರಣ ಇದೆ. ಆದ್ರೆ, ಅದು ಏನು ಅನ್ನೋದು ಪೊಲೀಸರ ತನಿಖೆಯ ನಂತರವೇ ಬಯಲಾಗಲಿದೆ. ಯಾಕಾಗಿ ಕೊಲೆ ಆಗಿರಬಹುದು ಅನ್ನೋದನ್ನು ತಿಳಿದುಕೊಳ್ಳಲು ಪೊಲೀಸರು ನಾಲ್ಕು ಆಯಾಮದಲ್ಲಿ ತಿನಿಖೆ ಮಾಡಲು ಮುಂದಾಗಿದ್ದಾರೆ. ಹಾಗಾದರೆ ಆ ಆಯಾಮಗಳು ಯಾವವು ಅನ್ನೋದನ್ನು ನೋಡೋದಾದ್ರೆ,

ಆಯಾಮ 1-ಪೀಟರ್‌ ಜೊತೆಗೆ ಮನಸ್ತಾಪ ಇತ್ತಾ?
ರೇಖಾ ಅವರನ್ನ ಕೊಲೆ ಮಾಡಿದ ಮುಖ್ಯ ಆರೋಪಿ ಪೀಟರ್‌. ಈತನಿಗೂ ರೇಖಾಗೂ ಏನಾದ್ರೂ ಹಣಕಾಸಿನ ವ್ಯವಹಾರ ಇತ್ತಾ. ಅದೇ ಉದ್ದೇಶಕ್ಕೆ ಕೊಲೆ ನಡೆಯಿತಾ ಎಂಬ ಶಂಕೆ ಇದೆ. ಅದೇ ರೀತಿ ಪೀಟರ್‌ ಏರಿಯಾದಲ್ಲಿ ಕೆಲವು ಕೆಲಸಗಳನ್ನು ಮಾಡಿದ್ದನಂತೆ. ಆದ್ರೆ, ಅದರ ಬಿಲ್‌ಗಳು ಮಾತ್ರ ಪಾಸಾಗಿರಲಿಲ್ಲವಂತೆ. ಹೀಗಾಗಿ ಬಿಲ್‌ ಪಾಸ್‌ ಮಾಡುವಂತೆ ರೇಖಾಗೆ ಪೀಟರ್‌ ದುಂಬಾಲು ಬಿದ್ದಿದ್ದ ಎನ್ನಲಾಗಿದೆ. ಇದನ್ನು ಹೊರತುಪಡಿಸಿ ವೈಯಕ್ತಿಕ ವಿಚಾರದಲ್ಲಿ ಏನಾದ್ರೂ ಇಬ್ಬರ ನಡುವೆ ಜಗಳ ಆಗಿತ್ತಾ ಅನ್ನೋದರ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಆಯಾಮ 2-ಕೌಟುಂಬಿಕ ಕಲಹವೇ ಕಾರಣ ಆಯ್ತಾ?
ರೇಖಾ ಕೊಲೆಯ ಹಿಂದೆ ಕೌಟುಂಬಿ ಕಲಹದ ವಿಷಯವೂ ಜೋರಾಗಿ ಕೇಳಿ ಬರ್ತಾ ಇದೆ. ಸ್ಟೀಫನ್‌ ಅನ್ನೋ ವ್ಯಕ್ತಿ ಕದಿರೇಶ್‌ ತಂಗಿಯ ಮಗನಾಗಿದ್ದಾನೆ. ಕದಿರೇಶ್‌ ಹತ್ಯೆಯ ನಂತರ ಆಸ್ತಿಯೆಲ್ಲಾ ರೇಖಾಗೆ ಸೇರಿತ್ತು. ಸಂಕಷ್ಟದ ಸಮಯದಲ್ಲೂ ರೇಖಾ ಸಂಬಂಧಿಗಳಿಗೆ ಹಣಕಾಸಿನ ಸಹಾಯ ನೀಡ್ತಾ ಇರಲಿಲ್ಲವಂತೆ. ಇದೇ ಕಾರಣಕ್ಕೆ ಏನಾದ್ರೂ ಹತ್ಯೆ ನಡೆಯಿತಾ ಅನ್ನೋದು ತನಿಖೆಯ ಮತ್ತೊಂದು ಆಯಾಮ.

ಆಯಾಮ 3-ರಾಜಕೀಯ ಕಾರಣಕ್ಕೆ ಹತ್ಯೆ ಆಯ್ತಾ?
ರೇಖಾ ಮಾಜಿ ಕಾರ್ಪೋರೇಟರ್‌ ಆಗಿರುವುದರಿಂದ ರಾಜಕೀಯ ಕಾರಣಕ್ಕೆ ಏನಾದ್ರೂ ಹತ್ಯೆ ಆಯ್ತಾ ಅನ್ನೋ ಶಂಕೆಯೂ ಇದೆ. ಪಾಲಿಕೆಯ ಮುಂದಿನ ಚುನಾವಣೆಗೆ ರೇಖಾ ಸಜ್ಜಾಗಿದ್ದರು. ಅದಕ್ಕಾಗಿಯೇ ಸಾರ್ವಜನಿಕರಿಗೆ ಅನೇಕ ಸಹಾಯ ಸಹಕಾರಕ್ಕೆ ಮುಂದಾಗಿದ್ರು. ಆದರೆ ಕದಿರೇಶ್‌ ಸಹೋದರಿಯೊಬ್ಬಳು ತಮ್ಮ ಮಗಳನ್ನು ಆ ಕ್ಷೇತಕ್ಕೆ ನಿಲ್ಲಿಸಲು ಪ್ಲಾನ್‌ ಮಾಡಿದ್ರು ಎನ್ನಲಾಗಿದೆ. ಇದೇ ಕಾರಣಕ್ಕೆ ಹತ್ಯೆ ನಡೆದಿರಬಹುದಾ ಅನ್ನೋ ಅಂಶದ ಮೇಲೂ ಪೊಲೀಸರು ತನಿಖೆ ಕೈಕೊಂಡಿದ್ದಾರೆ.

ಆಯಾಮ 4- ಹವಾ ಮೆಂಟೇನ್‌ ಮಾಡಲು ಹತ್ಯೆ ನಡೆಯಿತಾ?
ಕೊಲೆ ಆರೋಪಿಗಳಲ್ಲಿ ಒಬ್ಬನಾಗಿರುವ ಸೂರ್ಯ ಕಾಟನ್‌ಪೇಟೆಯಲ್ಲಿ ರೌಡಿಶೀಟರ್‌ ಆಗಿದ್ದಾನೆ. ಆತನಿಗೆ ಏರಿಯಾದಲ್ಲಿ ಹವಾ ಮೆಂಟೇನ್‌ ಮಾಡುವ ಹುಚ್ಚು ಇತ್ತು. ಇದೇ ಕಾರಣಕ್ಕೆ ಸೂರ್ಯ ಉಳಿದ ಆರೋಪಿಗಳ ಜೊತೆ ಸೇರಿ ಹತ್ಯೆ ಮಾಡಿರುವ ಸಾಧ್ಯತೆಯೂ ಇದೆ ಎಂಬ ಶಂಕೆ ಪೊಲೀಸರದ್ದು. ಹೀಗಾಗಿ ಈ ಆಯಾಮದಲ್ಲೂ ತನಿಖೆ ನಡೆಯುತ್ತಿದೆ.

ಕೊಲೆಗೆ ಕಾರಣ ಏನೇ ಇರಬಹುದು. ಆದ್ರೆ, ನಟ್ಟ ನಡುರಸ್ತೆಯಲ್ಲಿ ದುಷ್ಟರು ಓರ್ವ ಮಹಿಳೆಯನ್ನ ಈ ರೀತಿ ಇರಿದು  ಹಿಂಸಿಸಿ ಕೊಂದಿರೋದು ಕ್ರೌರ್ಯದ ಸೀಮಾರೇಖೆ ದಾಟಿದೆ. ಆದಷ್ಟು ಬೇಗ ಹಂತಕರ ಕೈಗೆ ಕೋಳ ತೊಡಿಸಲು ಪೊಲೀಸರು ವಿವಿಧ ವ್ಯೂಹಗಳನ್ನೇ ರಚಿಸಿದ್ದು ರೇಖಾ ಹತ್ಯೆಗೆ ನಿಜವಾದ ಕಾರಣ ಏನೇಂಬುದು ಅವರು ಬಾಯಿಬಿಟ್ಟ ಮೇಲಷ್ಟೇ ಗೊತ್ತಾಗಲಿದೆ.

The post ರೇಖಾ ಕೊಲೆಗೆ ಕಾರಣವೇನು?​​ ಪ್ರಕರಣದಲ್ಲಿ ಮತ್ತೋರ್ವ ಮಹಿಳೆ ಹೆಸರು ತಳುಕು appeared first on News First Kannada.

Source: newsfirstlive.com

Source link