ಬೆಂಗಳೂರು: ನಿನ್ನೆ ನಗರವನ್ನೇ ಬೆಚ್ಚಿ ಬೀಳಿಸಿದ್ದ ರೇಖಾ ಕದಿರೇಶ್ ಹತ್ಯೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳ ಕಾಲಿಗೆ ಶೂಟ್ ಮಾಡುವ ಮೂಲಕ ಪೊಲೀಸರು ಬಂಧಿಸಿದ್ದಾರೆ. ಈ ಹಿನ್ನೆಲೆ ಪ್ರತಿಕ್ರಿಯೆ ನೀಡಿರುವ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆರೋಪಿಗಳನ್ನ ಬಂಧಿಸಿದ್ದರ ಕುರಿತು ಹೆಚ್ಚಿನ ಮಾಹಿತಿ ನೀಡಿದ್ದಾರೆ.

ರೇಖಾ ಕದಿರೇಶ್ ಹತ್ಯೆ ಪ್ರಕರಣದಲ್ಲಿ ಅನುಮಾನಿತರನ್ನ ಪಟ್ಟಿ ಮಾಡಲಾಗಿತ್ತು. ಪ್ರಮುಖ ಇಬ್ಬರು ಆರೋಪಿಗಳನ್ನ ಈಗ ಬಂಧಿಸಲಾಗಿದೆ. ಪೀಟರ್ ಮತ್ತು ಸೂರ್ಯ ಎಂಬಾತನ ಹೆಸರು ಕೇಳಿ ಬಂದಿತ್ತು. ಬಹಳಷ್ಟು ಶ್ರಮವಹಿಸಿ ನಮ್ಮ ಪೊಲೀಸರು ಆರೋಪಿಗಳನ್ನ ಹುಡುಕಾಡಿದ್ದರು. ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ನೇತ್ರತ್ವದಲ್ಲಿ ತನಿಖೆ ಮಾಡಲಾಗುತ್ತಿತ್ತು. ಇವತ್ತು ಕಾಮಾಕ್ಷಿಪಾಳ್ಯ ವ್ಯಾಪ್ತಿಯಲ್ಲಿ ಆರೋಪಿಗಳು ಇರುವ ಸುಳಿವು ಸಿಕ್ಕಿತ್ತು. ಪೊಲೀಸರು ಬಂಧಿಸಲು ತೆರಳಿದ್ದಾಗ ಆರೋಪಿಗಳು ಹಲ್ಲೆಗೆ ಮುಂದಾಗಿದ್ದಾರೆ. ಇಬ್ಬರೂ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆಯಲಾಗಿದೆ ಎಂದು ಕಮಲ್ ಪಂತ್ ಹೇಳಿದ್ದಾರೆ.

ಆರೋಪಿಗಳ ಪತ್ತೆಗೆ 6 ಪ್ರತ್ಯೇಕ ತಂಡ ರಚಿಸಲಾಗಿತ್ತು..

ಮುಂದುವರೆದು ಆರೋಪಿಗಳನ್ನ ಪತ್ತೆಹಚ್ಚಲಿಕ್ಕಾಗಿ 6 ಪ್ರತ್ಯೇಕ ತಂಡಗಳನ್ನ ರಚಿಸಲಾಗಿತ್ತು. ಪಶ್ಚಿಮ ವಿಭಾಗದ ಎಲ್ಲಾ ಪೊಲೀಸರು ಸಾಕಷ್ಟು ನಿಗಾ ವಹಿಸಿದ್ದರು. ಆರೋಪಿಗಳು ಇಲೆಕ್ಟ್ರಾನಿಕ್ ಸಿಟಿ, ತಮಿಳುನಾಡು ಗಡಿ ಭಾಗದಲ್ಲಿ ಸುತ್ತಾಡಿರುವ ಮಾಹಿತಿ ಸಹ ಇತ್ತು. ಅಂತಿಮವಾಗಿ ಕಾಮಾಕ್ಷಿಪಾಳ್ಯ ವ್ಯಾಪ್ತಿಯಲ್ಲಿ ಆರೋಪಿಗಳನ್ನ ಬಂಧಿಸಲಾಗಿದೆ. ಕೊಲೆಗೆ ನಿಖರ ಕಾರಣವನ್ನ ತನಿಖಾ ಹಂತದಲ್ಲಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಘಟನೆ ಬಳಿಕ ಸಾಕಷ್ಟು ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ ಪಡೆಯಲಾಗಿದೆ. ದೂರುದಾರರು ಸಹ ಕೆಲವು ಹೆಸರುಗಳನ್ನ ನೀಡಿದ್ರು. ಕೆಲವರ ಮನೆಗಳಿಗೆ ತೆರಳಿ‌ ಪರಿಶೀಲನೆ ಮಾಡಲಾಗಿದೆ. ಅನುಮಾನಿತ ಆರೋಪಿಗಳ ಹೆಸರು ಪಡೆದು ಅದೇ ಆಧಾರದಲ್ಲಿ ತನಿಖೆ ಮಾಡಲಾಗುತ್ತಿದೆ ಎಂದರು.

ಸದ್ಯ ಬಂಧನವಾಗಿರುವವರು ಪ್ರಮುಖ ಆರೋಪಿಗಳು ಎನ್ನಲಾಗುತ್ತಿದೆ. ಫೈನಾನ್ಷಿಯಲ್ ಕಾರಣ, ಅಥವಾ ಕೌಟುಂಬಿಕ ಕಾರಣ ಎಂಬುದನ್ನ ಈಗಲೇ ಹೇಳಲು ಸಾಧ್ಯವಿಲ್ಲ. ನಿಖರವಾಗಿ ತಿಳಿಯಲು ಇನ್ನೂ ಸಹ ಹೆಚ್ಚಿನ ವಿಚಾರಣೆಯಾಗಬೇಕಿದೆ. ಆರೋಪಿಗಳು ಕೇವಲ ಇಬ್ಬರೇ ಅಲ್ಲ, ಇನ್ನೂ ಸಹ ಇರುವ ಬಗ್ಗೆ ಮಾಹಿತಿ‌ ಇದೆ. ಯಾರೇ ಇರಲಿ, ಯಾರ ಕೈವಾಡವೇ ಇರಲಿ ಆರೋಪಿಗಳನ್ನ ಬಂಧಿಸಲು ಸಿದ್ಧ ಎಂದು ಕಮಲ್ ಪಂತ್ ಖಡಕ್ಕಾಗಿ ಹೇಳಿದ್ದಾರೆ.

The post ರೇಖಾ ಹತ್ಯೆ ಕೇಸ್: ಆರೋಪಿಗಳನ್ನ ಶೂಟ್ ಮಾಡಿ ಬಂಧಿಸೋದಕ್ಕೂ ಮುನ್ನ ಏನೆಲ್ಲಾ ನಡೀತು..? appeared first on News First Kannada.

Source: newsfirstlive.com

Source link