ರೇಷ್ಮೆ ಬೆಳೆಗಾರರಲ್ಲಿ ಮಂದಹಾಸ; ರೇಷ್ಮೆ ಗೂಡಿನ ಧಾರಣೆ ಹೆಚ್ಚಳ, ಪ್ರತಿ ಕೆಜಿ ರೇಷ್ಮೆಗೂಡಿಗೆ 300ರಿಂದ 400ರೂ ವರೆಗೂ ಏರಿಕೆ | Silk price rising from 15 days brings smile to silkworm rearers in Ramanagara


ರೇಷ್ಮೆ ಬೆಳೆಗಾರರಲ್ಲಿ ಮಂದಹಾಸ; ರೇಷ್ಮೆ ಗೂಡಿನ ಧಾರಣೆ ಹೆಚ್ಚಳ, ಪ್ರತಿ ಕೆಜಿ ರೇಷ್ಮೆಗೂಡಿಗೆ 300ರಿಂದ 400ರೂ ವರೆಗೂ ಏರಿಕೆ

ರೇಷ್ಮೆ ಬೆಳೆಗಾರರಲ್ಲಿ ಮಂದಹಾಸ

ರಾಮನಗರ: ಕಳೆದ ಹಲವು ದಿನಗಳಿಂದ ರಾಜ್ಯಾದ್ಯಂತ ಅಕಾಲಿಕ ಮಳೆಗೆ ಅನ್ನದಾತ ಹೈರಾಣಾಗಿದ್ದಾನೆ. ನಿರಂತರ ಮಳೆಗೆ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಅಕಾಲಿಕ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆಗಳು ನಾಶವಾಗಿದೆ. ಹೂ-ಹಣ್ಣುಗಳು ನೆಲಕಚ್ಚಿವೆ. ಬೆಳೆಗಳನ್ನ ಉಳಿಸಿಕೊಳ್ಳಲು ಸಾಧ್ಯವಾಗದೇ ರೈತ ಸಮುದಾಯ ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ರೇಷ್ಮೆಗೂಡಿಗೆ ಉತ್ತಮ ಧಾರಣೆ ಬಂದಿದ್ದು, ರೇಷ್ಮೆಬೆಳೆಗಾರರಲ್ಲಿ ಮಂದಹಾಸ ಮೂಡಿದೆ.

ರಾಮನಗರ ಜಿಲ್ಲೆ ರೇಷ್ಮೆಬೆಳೆಗೆ ಪ್ರಖ್ಯಾತಿ ಪಡೆದಿದೆ. ಹೀಗಾಗಿ ರಾಮನಗರವನ್ನ ರೇಷ್ಮೆನಗರಿ ಎಂತಲೇ ಕರೆಯುತ್ತಾರೆ. ಅಂತಹ ರಾಮನಗರ ಜಿಲ್ಲೆಯಲ್ಲಿ ರೇಷ್ಮೆಗೂಡಿಗೆ ಉತ್ತಮ ಬೆಲೆ ಸಿಗದೇ ರೇಷ್ಮೆಬೆಳೆಗಾರರು ಕಂಗಾಲಾಗಿದ್ದರು. ಆದರೇ ಇದೀಗ ರೇಷ್ಮೆಗೂಡಿನ ಬೆಲೆ ಉತ್ತಂಗಕ್ಕೆ ಏರಿದ್ದು, ರೈತರ ಸಂತಸಕ್ಕೆ ಕಾರಣವಾಗಿದೆ. ರಾಮನಗರದ ಸರ್ಕಾರಿ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ಕಳೆದ ಹದಿನೈದು ದಿನಗಳಿಂದ ರೇಷ್ಮೆಗೂಡಿನ ಬೆಲೆ ದಿನದಿಂದ ದಿನಕ್ಕೆ ಏರುತ್ತಲೆ ಇದೆ. ಪ್ರತಿ ಕೆಜಿ ರೇಷ್ಮೆಗೂಡಿಗೆ 300ರಿಂದ 400ರೂ ವರೆಗೂ ಹೆಚ್ಚಳವಾಗಿದೆ. ಪ್ರತಿ ಕೆಜಿ ಬಿಳಿ ರೇಷ್ಮೆಗೂಡಿಗೆ(ಸಿಎಸ್ ಆರ್) ಇದೀಗ 600ರಿಂದ 750 ರೂ ಬೆಲೆ ಇದೆ. ಇದೇ ಬಿಳಿ ರೇಷ್ಮೆಗೂಡಿಗೆ ಈ ಹಿಂದೆ 300ರಿಂದ 400 ರೂ ದರವಿತ್ತು. ಇನ್ನು ಮಿಶ್ರತಳಿ (ಸಿಬಿ) ಹಳದಿ ಗೂಡಿಗೆ 450ರಿಂದ 550 ರೂ ಬೆಲೆ ಇದೆ. ಈ ಹಿಂದೆ ಇದೇ ಹಳದಿ ಗೂಡಿಗೆ ಪ್ರತಿ ಕೆಜಿಗೆ 150 ರಿಂದ 250 ರೂ ದರವಿತ್ತು.

ರೈತರು ನಡೆಸಿದ್ದ ಪ್ರತಿಭಟನೆಗೆ ಕೊನೆಗೂ ಸಿಕ್ತು ಫಲ
ಅಂದಹಾಗೆ ಕಷ್ಟಪಟ್ಟು ಬೆಳೆದ ರೇಷ್ಮೆಬೆಳೆಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಬೇಕಾಬಿಟ್ಟಿ ದರ ನಿಗದಿ ಮಾಡುತ್ತಾರೆ ಎಂದು ರೈತರು ಆಕ್ರೋಶ ಸಹಾ ವ್ಯಕ್ತಪಡಿಸಿದ್ರು. ರಾಮನಗರದ ಸರ್ಕಾರಿ ರೇಷ್ಮೆಗೂಡಿನ ಮಾರುಕಟ್ಟೆಯನ್ನ ಬಂದ್ ಮಾಡಿ, ರಸ್ತೆಗೆ ರೇಷ್ಮೆಗೂಡನ್ನ ಚೆಲ್ಲಿ ಪ್ರತಿಭಟನೆ ಸಹಾ ನಡೆಸಿದ್ರು. ನೂರಾರು ಕಿಲೋ ಮೀಟರ್ ನಿಂದ ಬಂದು ಮಾರಾಟ ಮಾಡಿದ್ರು, ಮಾಡಿದ ಖರ್ಚು ಸಹಾ ಸಿಗುತ್ತಿಲ್ಲವೆಂದು ಅಸಹಾಯಕತೆ ಕೂಡ ವ್ಯಕ್ತಪಡಿಸಿದ್ರು. ಆದರೆ ಇದೀಗ ರೇಷ್ಮೆಗೂಡಿಗೆ ಬೆಲೆ ಏರಿಕೆ ಆಗುತ್ತಿರುವುದು ರೈತರಲ್ಲಿ ಸಂತಸ ಮನೆ ಮಾಡಿದೆ. ಕಳೆದ ಎರಡೂವರೆ ವರ್ಷದಿಂದ ರೇಷ್ಮೆಬೆಳೆಗಾರರಲ್ಲಿ ಆತಂಕ ಉಂಟಾಗಿತ್ತು. ರೇಷ್ಮೆಗೂಡಿನ ಧಾರಣೆ ಇಳಿಮುಖ ಕಂಡಿತ್ತು, ಇದೀಗ ಕಳೆದ ಹದಿನೈದು ದಿನದಿಂದ ಉತ್ತಮ ಬೆಲೆ ಸಿಗುತ್ತಿದೆ. ಹೀಗಾಗಿ ನಮಗೆ ಖುಷಿ ಇದೆ. ಉತ್ತಮ ಬೆಲೆ ಸಿಕ್ಕರೇ ರೇಷ್ಮೆ ಬೆಳೆಯುವುದಕ್ಕು ಕೂಡ ಅನುಕೂಲವಾಗಲಿದೆ ಎಂದು ರೇಷ್ಮೆಬೆಳೆಗಾರ ರವಿ ಸಂತಸ ಹಂಚಿಕೊಂಡಿದ್ದಾರೆ.

Ramanagara silk price rising 2

ರೇಷ್ಮೆ ಗೂಡಿನ ಧಾರಣೆ ಹೆಚ್ಚಳ, ಪ್ರತಿ ಕೆಜಿ ರೇಷ್ಮೆಗೂಡಿಗೆ 300ರಿಂದ 400ರೂ ವರೆಗೂ ಏರಿಕೆ

ಮತ್ತೆ ದರ ಹೆಚ್ಚಳವಾಗುವ ಸಾಧ್ಯತೆ
ಕಳೆದ ಹದಿನೈದು ದಿನಗಳಿಂದ ನಿರಂತರವಾಗಿ ಪ್ರತಿ ಕೆಜಿಗೆ ರೇಷ್ಮೆಗೂಡಿನ ಬೆಲೆ ಏರಿಕೆ ಖಂಡಿದೆ. ಪ್ರತಿ ಕೆಜಿಗೆ 300 ರಿಂದ 400 ರೂ ಹೆಚ್ಚಳವಾಗಿದೆ. ಈ ಮಧ್ಯೆ ಮತ್ತೆ ರೇಷ್ಮೆಗೂಡಿನ ದರ ಹೆಚ್ಚಳವಾಗುವ ಸಾಧ್ಯತೆ ಕೂಡ ಇದೆ. ಇದೇ ನೀರಿಕ್ಷೆಯಲ್ಲಿ ಜಿಲ್ಲೆಯ ರೇಷ್ಮೆಬೆಳೆಗಾರರ ಇದ್ದಾರೆ. ಪ್ರತಿ ಕೆಜಿಗೆ ಬಿಳಿ ಗೂಡು 800 ರೂ ದಾಟಬಹುದು ಎಂದು ಅಂದಾಜಿಸಲಾಗಿದೆ. ಕಳೆದ ಹದಿನೈದು ದಿನಗಳಿಂದ ರೇಷ್ಮೆಗೂಡಿನ ಧಾರಣೆ ಹೆಚ್ಚಳವಾಗಿದೆ. ಇದೀಗ ಮತ್ತೆ ಪ್ರತಿಕೆಜಿ ರೇಷ್ಮೆಗೂಡಿನ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ರೇಷ್ಮೆಗೂಡಿನ ಮಾರುಕಟ್ಟೆ, ಸಹಾಯಕ ನಿರ್ದೇಶಕ ಮಾರಣ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೆಲೆ ಹೆಚ್ಚಳಕ್ಕೆ ಕಾರಣವೇನು?
ಇನ್ನು ಕಳೆದ ಹಲವು ದಿನಗಳಿಂದ ರೇಷ್ಮೆಗೂಡಿನ ಬೆಲೆ ಹೆಚ್ಚಳವಾಗುತ್ತಲೇ ಇದೆ. ಹದಿನೈದು ದಿನಗಳಿಂದ ಇಳಿಕೆ ಕಂಡಿಲ್ಲ. ಬೆಲೆ ಹೆಚ್ಚಳಕ್ಕೆ ಮಾರುಕಟ್ಟೆಗೆ ಕಡಿಮೆ ರೇಷ್ಮೆಗೂಡು ಬರುತ್ತಿದ್ದು, ಮಾರುಕಟ್ಟೆಯಲ್ಲಿ ರೇಷ್ಮೆನೂಲಿಗೆ ಉತ್ತಮ ಬೆಲೆ ಬಂದಿದೆ. ಹೀಗಾಗಿ ರೇಷ್ಮೆಗೂಡಿನ ದರ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಏಷ್ಯಾದಲ್ಲಿಯೇ ದೊಡ್ದದಾದ ಮಾರುಕಟ್ಟೆ
ಅಂದಹಾಗೆ ರಾಮನಗರದ ಬೆಂಗಳೂರು-ಮೈಸೂರು ಹೆದ್ದಾರಿಯ ಪಕ್ಕದಲ್ಲಿ ಇರುವ ಸರ್ಕಾರಿ ರೇಷ್ಮೆಗೂಡಿನ ಮಾರುಕಟ್ಟೆ, ಏಷ್ಯಾದಲ್ಲಿಯೇ ಅತ್ಯಂತ ದೊಡ್ಡದಾಗ ಮಾರುಕಟ್ಟೆ ಎಂಬ ಹೆಗ್ಗಳಿಕೆ ಸಹಾ ಪಾತ್ರವಾಗಿದೆ. ಪ್ರತಿನಿತ್ಯ ಕೋಟ್ಯಾಂತರ ರೂ ಮೌಲ್ಯದ 60 ರಿಂದ 70 ಟನ್ ಗೂಡು ವಹಿವಾಟು ನಡೆಯುತ್ತದೆ. ಹೀಗಾಗಿಯೇ ರಾಮನಗರ,ಮಂಡ್ಯ, ಮೈಸೂರು, ತುಮಕೂರು ಜಿಲ್ಲೆಗಳು ಸೇರಿದಂತೆ ಹೊರ ರಾಜ್ಯಗಳಿಂದ ರೈತರು ಬಂದು ರೇಷ್ಮೆಗೂಡನ್ನ ಮಾರಾಟ ಮಾಡುತ್ತಾರೆ. ಅಲ್ಲದೆ ರಾಮನಗರ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಹಾ ಸಿಗುತ್ತದೆ ಎಂಬುದು ರೈತರ ನಂಬಿಕೆ.

ವರದಿ: ಪ್ರಶಾಂತ್ ಹುಲಿಕೆರೆ, ಟಿವಿ9 ರಾಮನಗರ

silk price rising

ರೇಷ್ಮೆ ಗೂಡಿನ ಮಾರುಕಟ್ಟೆ

TV9 Kannada


Leave a Reply

Your email address will not be published. Required fields are marked *