ಚಿಕ್ಕಬಳ್ಳಾಪುರ: ಕೊರೊನಾ ನಮ್ಮೆಲ್ಲರ ಬದುಕನ್ನು ಸಂಕಷ್ಟಕ್ಕೀಡು ಮಾಡಿದೆ. ಅನ್ನದಾತರ ಬದುಕು ಸಹ ಆಯೋಮಯವಾಗಿದ್ದು, ಅರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ. ಮುಂಗಾರು ಹಂಗಾಮಿನ ಆರಂಭದಲ್ಲಿ ಜಮೀನು ಉಳುಮೆ ಮಾಡಿ, ಹದ ಮಾಡಿ, ಬಿತ್ತನೆ ಕಾರ್ಯ ಮಾಡೋಕೆ ದುಡ್ಡಿಲ್ಲದೆ ಹಲವು ರೈತರು ಪರದಾಡುವಂತಾಗಿತ್ತು. ಕೆಲವು ರೈತರು ಬಿತ್ತೆನೆ ಮಾಡದೆ ಬೀಳು ಬಿಟ್ಟ ಉದಾಹರಣೆಗಳು ಸಹ ಇವೆ. ಇದನ್ನು ಮನಗಂಡ ಜಿಲ್ಲೆಯ ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಸಮಾಜಸೇವಕ, ರಾಜಕಾರಣಿ ಕೆಂಪರಾಜು ರೈತರು ಜಮೀನು ಉಳುಮೆ ಮಾಡಿಕೊಳ್ಳಲು ರೈತ ಮಿತ್ರ ನೆರವು ಯೋಜನೆ ಜಾರಿ ಮಾಡಿದ್ದಾರೆ.

ಕಳೆದ 20 ತಿಂಗಳಿಂದ ಕ್ಷೇತ್ರದಲ್ಲಿ ಸದ್ದಿಲ್ಲದೇ ಸಮಾಜಸೇವೆ ಮಾಡುವ ಮೂಲಕ ರಾಜಕಾರಣಕ್ಕಿಳಿದಿರುವ ಕೆಂಪರಾಜು, ಕೊರೊನಾ ಸಂಕಷ್ಟದ ಸಮಯದಲ್ಲಿ ಕ್ಷೇತ್ರದ ರೈತರಿಗೆ ರೈತ ಮಿತ್ರ ನೆರವು ಯೋಜನೆ ಜಾರಿ ಮಾಡಿದ್ದಾರೆ. ಎರಡು ಎಕೆರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ತಮ್ಮ ಜಮೀನು ಉಳುಮೆ ಮಾಡಿಕೊಳ್ಳಲು ಉಚಿತ ಟ್ರ್ಯಾಕ್ಟರ್ ಸೇವೆ ಆರಂಭಿಸಿದ್ದಾರೆ.

ಕೊರೊನಾ ಸಂಕಷ್ಟದ ಸಮಯದಲ್ಲಿ ಮುಂಗಾರು ಹಂಗಾಮು ಆರಂಭವಾಗಿದ್ದು, ರೈತರು ಬಿತ್ತನೆ ಕಾರ್ಯ ಶುರು ಮಾಡಬೇಕಿದೆ. ಆದರೆ ಬಹಳಷ್ಟು ರೈತರು ಆರ್ಥಿಕ ಸಂಕಷ್ಟಕ್ಕೊಳಗಾಗಿ ಬೆಳೆ ಬೆಳೆಯೋದು ಬೇಡ ಅಂತಿದ್ದಾರೆ. ಇದನ್ನು ಅರಿತು ರೈತ ಸಮುದಾಯಕ್ಕೆ ಕೈಲಾದ ಸಹಾಯಹಸ್ತ ಚಾಚಬೇಕೆಂದು ತೀರ್ಮಾನಿಸಿ, ಈ ಯೋಜನೆ ಜಾರಿ ಮಾಡಿದ್ದೇನೆ. ಒಂದು ಎಕರೆ ಉಳುಮೆ ಕಾರ್ಯ ಮಾಡಿಸೋಕೆ ಕನಿಷ್ಟ 1,000 ದಿಂದ 1,500 ರೂ. ಖರ್ಚಾಗಲಿದೆ. ಎರಡು ಎಕರೆ ಎಂದರೂ 3000 ರೂ. ಬೇಕಾಗಬಹುದು ಇದನ್ನು ಭರಿಸಲು ಸಹ ಕೆಲ ರೈತರು ಶಕ್ತರಾಗಿಲ್ಲ. ಹೀಗಾಗಿ ಕೈಲಾದ ಸೇವೆ ಮಾಡಲು ಮುಂದಾಗಿದ್ದೇನೆ ಎಂದು ಕೆಂಪರಾಜು ತಿಳಿಸಿದ್ದಾರೆ.

ಆ್ಯಪ್ ಮೂಲಕ ನೋಂದಣಿ
ರೈತ ಮಿತ್ರ ನೆರವು ಯೋಜನೆಗೆ ಹೈಟೆಕ್ ಸ್ಪರ್ಶ ನೀಡಲಾಗಿದೆ. ಕೆ.ಆರ್.ನೆರವುಗಳಿಗೆ ಸ್ವಾಗತ ಎಂಬ ವಿಶೇಷ ಆ್ಯಪ್ ರೂಪಿಸಿದ್ದು, ಈ ಆ್ಯಪ್ ಮೂಲಕವೇ ಕ್ಷೇತ್ರದ ರೈತರು ತಮ್ಮ ಹೆಸರು, ಊರು, ಮೊಬೈಲ್ ನಂಬರ್, ನೋಂದಾಯಿಸಿ ಉಚಿತ ಯೋಜನೆಯ ಸೌಲಭ್ಯ ಪಡೆಯಬಹುದು. ಗೌರಿಬಿದನೂರು ಕ್ಷೇತ್ರದಲ್ಲಿ 31 ಗ್ರಾಮಪಂಚಾಯತಿಗಳಿದ್ದು, ಪ್ರತಿ ಗ್ರಾಮಪಂಚಾಯಿತಿಗೆ ಎರಡು ಟ್ರ್ಯಾಕ್ಟರ್ ಎಂಬಂತೆ 62 ಟ್ರ್ಯಾಕ್ಟರ್ ಗಳನ್ನು ನಿಯೋಜನೆ ಮಾಡಲಾಗಿದೆ. ನೋಂದಾಯಿತ ರೈತರ ಜಮೀನು ಉಳುಮೆ ಕಾರ್ಯವನ್ನು ನಡೆಯುವಂತೆ ನೋಡಿಕೊಳ್ಳಲು ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬರನ್ನು ಕೆಲಸಕ್ಕೆ ನೇಮಿಸಲಾಗಿದೆ.

ಈ ಯೋಜನೆಗೆ ನಿಯೋಜಿಸಲಾಗಿರುವ 62 ಟ್ರ್ಯಾಕ್ಟರ್ ಗಳನ್ನು ಸಹ ಕ್ಷೇತ್ರದ ರೈತರಿಂದಲೇ 3 ತಿಂಗಳವರೆಗೆ ಬಾಡಿಗೆಗೆ ಪಡೆಯಲಾಗಿದ್ದು, ಟ್ರ್ಯಾಕ್ಟರ್ ಗಳಿಗೆ ಬಾಡಿಗೆ ಹಣ, ಚಾಲಕನಿಗೆ ಸಂಬಳ, ಡೀಸೆಲ್ ಸೌಲಭ್ಯವನ್ನು ಕೆಂಪರಾಜು ಅವರೇ ವಹಿಸಿಕೊಂಡಿದ್ದಾರೆ.

The post ರೈತರಿಗೆ ಉಚಿತ ಟ್ರ್ಯಾಕ್ಟರ್ ಸೌಲಭ್ಯ ಕಲ್ಪಿಸಿದ ಕೆಂಪರಾಜು appeared first on Public TV.

Source: publictv.in

Source link