ಗದಗ: ಮೊದಲೇ ಕೊರೊನಾದಿಂದ ಕಂಗೆಟ್ಟಿರೋ ರೈತ ಈಗ ಮತ್ತಷ್ಟೂ ಕುಸಿದಿದ್ದಾನೆ. ಬದುಕು ಬೆಳಕಾಗಬೇಕಾಗಿದ್ದ ದೀಪಾವಳಿಯಲ್ಲಿ ಕತ್ತಲು ಆವರಿಸಿಬಿಟ್ಟಿದೆ. ಅಕಾಲಿಕ ಮಳೆ, ಬೇಕಾಬಿಟ್ಟಿ ದರ ನಿಗದಿಯಿಂದಾಗಿ ನಗು ಇರಬೇಕಾದ ಗದಗದ ಹೂವು ಬೆಳೆಗಾರರು ಈಗ ಕಣ್ಣೀರಿಡ್ತಿದ್ದಾರೆ.
ನಳ ನಳಿಸೋ ಇಷ್ಟೊಂದು ಸುಂದರ ಹೂವುಗಳನ್ನ ಬೆಳೆದ ರೈತನ ಮೊಗದಲ್ಲಿ ಮಾತ್ರ ಒಂದಿಷ್ಟೂ ಕಳೆಯೇ ಇಲ್ಲ. ಮೊದಲೇ ಕೊರೊನಾದಿಂದಾಗಿ ಕಂಗೆಟ್ಟಿರೋ ರೈತ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದ. ಇನ್ನೇನು ದೀಪಾವಳಿ ಬದುಕು ಬೆಳಗುತ್ತದೆ ಅಂತ ಆಸೆಗಣ್ಣುಗಳಿಂದ ಎದುರು ನೋಡುತ್ತಿದ್ದ ಆದ್ರೆ ಆಗಿದ್ದೇ ಬೇರೆ.
ಗದಗ ತಾಲೂಕಿನ ಬೆಳಗಾಲಕ್ಕುಂಡಿ, ಇದಲಕ್ಕುಂಡಿ, ಸಂಭಾಪೂರ, ಕದಂಪೂರ, ಕಣವಿ ಹೊಸೂರ ಗ್ರಾಮಗಳ ವ್ಯಾಪ್ತಿಯಲ್ಲಿ ನೂರಾರು ಎಕರೆಯಲ್ಲಿ ರೈತರು ಕಷ್ಟಪಟ್ಟು ಸಮೃದ್ಧವಾಗಿ ಬೆಳೆದ ಹೂವಿನ ಫಸಲು ಅಕಾಲಿಕ ವರುಣಾರ್ಭಟಕ್ಕೆ ನೆಲಕಚ್ಚಿದೆ. ಅಕಾಲಿಕ ಮಳೆಯಿಂದಾಗಿ ಬೆಳೆದ ಬಹುಪಾಲು ಸೇವಂತಿಗೆ, ಚೆಂಡು ಕೊಳೆತು ಹೋಗಿದೆ. ಹೀಗಾಗಿ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ.
ಇದನ್ನೂ ಓದಿ:ಚಿತ್ರ ಮಂದಿರಗಳಿಂದ ನಾಳೆ ಪವರ್ ಸ್ಟಾರ್ಗೆ ಭಾವಪೂರ್ಣ ಶ್ರದ್ಧಾಂಜಲಿ
ಭಾರೀ ಮಳೆಯಿಂದಾಗಿ ಬೆಳೆದ ಹೂವು ಬಹುತೇಕ ನೆಲಕಚ್ಚಿದೆ. ಹಾಗೇ ಅಳಿದುಳಿದ ಸೇವಂತಿಗೆ, ಚೆಂಡು ಹೂವು ತನ್ನ ಗುಣಮಟ್ಟವನ್ನ ಕಳೆದುಕೊಂಡಿದೆ. ಹೀಗಾಗಿ ಪ್ರತಿವರ್ಷ ಗೋವಾ, ಮಹಾರಾಷ್ಟ್ರ ಮಾರುಕಟ್ಟೆಗೆ ರಫ್ತಾಗಿ ಕೆಜಿಗೆ 250-300 ಮಾರಾಟ ಆಗ್ತಿದ್ದ ಹೂವನ್ನ ಈಗ 10-20 ರೂಪಾಯಿಗೆ ಯಾರೂ ಕೇಳುತ್ತಿಲ್ಲ. ಅಂತ ರೈತರು ನೋವು ತೋಡಿಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ ಕೊರೊನಾದಿಂದ ಕಂಗೆಟ್ಟಿದ್ದ ರೈತರು ಕಷ್ಟಪಟ್ಟು ಸಂಪದ್ಭರಿತವಾಗಿ ಬೆಳೆದ ಸೇವಂತಿಗೆ, ಚೆಂಡು ದೀಪಾವಳಿಗೆ ಬದುಕು ಬೆಳಗುತ್ತದೆ ಅಂತ ಕಾಯುತ್ತಿದ್ದರೆ ಅಕಾಲಿಕ ಮಳೆ ರೈತರನ್ನ ಕತ್ತಲೆಗೆ ದೂಡಿದೆ.
ವಿಶೇಷ ವರದಿ: ಸುರೇಶ ಕಡ್ಲಿಮಟ್ಟಿ, ನ್ಯೂಸ್ಫಸ್ಟ್