ರೋಚಕತೆ ಹೆಚ್ಚಿಸಿದ ಅಂತಿಮ ಟೆಸ್ಟ್​: ಕೈಕೊಟ್ಟ ಆರಂಭಿಕರು, ಕೊಹ್ಲಿ-ಪೂಜಾರ ಆಸರೆ


ಎರಡನೇ ದಿನದಾಟದಲ್ಲಿ ಟೀಮ್​ ಇಂಡಿಯಾ ಬೌಲರ್​​ಗಳು, ದಕ್ಷಿಣ ಆಫ್ರಿಕಾ ಬ್ಯಾಟರ್​​ಗಳು ದರ್ಬಾರ್​ ನಡೆಸಿದ್ರು. ಆದರೆ 2ನೇ ಇನ್ನಿಂಗ್ಸ್​​​​ನಲ್ಲಿ ತಿರುಗೇಟು ನೀಡಿದ ಸೌತ್​ ಆಫ್ರಿಕಾ ಬೌಲರ್​​​​ಗಳು, ಆರಂಭಿಕರನ್ನ ಬೇಗನೆ ಔಟ್​​ ಮಾಡುವ ಮೂಲಕ ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಆದರೆ ಸಂಕಷ್ಟಕ್ಕೆ ಸಿಲುಕಿದ ಪೂಜಾರ-ಕೊಹ್ಲಿ ಆಸರೆಯಾಗಿದ್ದಾರೆ.

ಭಾರತ-ದಕ್ಷಿಣ ಆಫ್ರಿಕಾ ನಡುವಿನ ನಿರ್ಣಾಯಕ ಹಾಗೂ ಅಂತಿಮ ಟೆಸ್ಟ್​​​​ ಪಂದ್ಯ ತೀವ್ರ ಕುತೂಹಲದತ್ತ ಸಾಗಿದೆ. ಸರಣಿ ಗೆಲುವಿಗಾಗಿ ಎರಡು ತಂಡಗಳ ಹೋರಾಟ ರೋಚಕತೆಯತ್ತ ತಿರುಗಿದೆ. ಸದ್ಯ 2ನೇ ದಿನದಾಟದ ಅಂತ್ಯಕ್ಕೆ ಭಾರತ 2 ವಿಕೆಟ್​ ನಷ್ಟಕ್ಕೆ 57 ರನ್​​​ ಗಳಿಸಿದೆ. 70 ರನ್​​​ಗಳ ಮುನ್ನಡೆ ಪಡೆದಿರುವ ಭಾರತ, ದಕ್ಷಿಣ ಆಫ್ರಿಕಾಗೆ ಬೃಹತ್​ ಟಾರ್ಗೆಟ್​​ ನೀಡುವ ಯೋಜನೆ ಹಾಕಿಕೊಂಡಿದೆ.

2ನೇ ದಿನದಾಟದ ಆರಂಭದಲ್ಲೇ ದಕ್ಷಿಣ ಆಫ್ರಿಕಾಗೆ ಆಘಾತ 
ಬೂಮ್ರಾಗೆ ಮಾರ್ಕರಮ್​, ಉಮೇಶ್​​​ಗೆ ಕೇಶವ್​​​​​​​ ಕ್ಲೀನ್​​ಬೌಲ್ಡ್ 
ಒಂದು ವಿಕೆಟ್​ ನಷ್ಟಕ್ಕೆ 17 ರನ್​​​ಗಳೊಂದಿಗೆ 2ನೇ ದಿನದಾಟ ಆರಂಭಿಸಿದ ದಕ್ಷಿಣ ಆಫ್ರಿಕಾ ಆರಂಭದಲ್ಲೇ ಎಡವಿತು. ಮೊದಲ ದಿನದಾಟದಲ್ಲೇ ಆರಂಭಿಕ ಆಘಾತ ನೀಡಿದ್ದ ಜಸ್​​​ಪ್ರಿತ್​​ ಬೂಮ್ರಾ, 2ನೇ ದಿನದಾಟದ ಆರಂಭದಲ್ಲೇ ಮತ್ತೆ ಕಾಡಿದರು. ದಿನದಾಟದ 2ನೇ ಎಸೆತದಲ್ಲೇ ಬೂಮ್ರಾ ಬ್ಯೂಟಿಗೆ ಆ್ಯಡಂ ಮಾರ್ಕರಮ್​, ಬೌಲ್ಡ್​ ಆದರು. ಇನ್ನು ಭರವಸೆಯ ಇನ್ನಿಂಗ್ಸ್​​ ಕಟ್ಟುತ್ತಿದ್ದ ಕೇಶವ್​​​ ಮಹಾರಾಜ್​​​​ಗೆ 25 ರನ್​​ ಗಳಿಸಿದ್ದಾಗ ಉಮೇಶ್​​​​ ಯಾದವ್​​, ಕ್ಲೀನ್​ ​ಬೌಲ್ಡ್​ ಮಾಡುವ ಮೂಲಕ ಗೇಟ್​​​ಪಾಸ್​​​​ ನೀಡಿದರು.

ವಾನ್​ ಡರ್​ ಡುಸೆನ್​​ಗೆ ಶಾಕ್​ ಕೊಟ್ಟ ಉಮೇಶ್​​ ಯಾದವ್ 
ಬಿಗಿ ಬೌಲಿಂಗ್​ ದಾಳಿ ನಡುವೆಯೂ ಪೀಟರ್​​ಸನ್​​ ಅರ್ಧಶತಕ 
ಮಹಾರಾಜ್​ ಬಳಿಕ ವಾನ್​​ ಡರ್​ ಡುಸೆನ್​​​ ಮತ್ತು ಕೀಗನ್​ ಪೀಟರ್​​ಸನ್​​, ಮೊದಲ ಸೆಷನ್​ ಅಂತ್ಯಕ್ಕೂ ಮುನ್ನ 4ನೇ ವಿಕೆಟ್​​​​​​ಗೆ 50 ರನ್​​ಗಳ ಜೊತೆಯಾಟವಾಡಿದರು. ಆದ್ರೆ ಭೋಜನ ವಿರಾಮದ ಬಳಿಕ ದಾಳಿ ನಡೆಸಿದ ಉಮೇಶ್​​​, ಅಪಾಯಕಾರಿ ಜೊತೆಯಾಟವನ್ನು ಕೊನೆಗೂ ಮುರಿದರು. ಅದಾಗಲೇ ತಂಡ ಚೇತರಿಸಿಕೊಂಡಿತ್ತು. ಇದರ ಬೆನ್ನಲ್ಲೇ ತಾಳ್ಮೆಯುತ ಬ್ಯಾಟಿಂಗ್​ ನಡೆಸಿದ ಪೀಟರ್ಸನ್​​​, ಸತತ 2ನೇ ಅರ್ಧಶತಕ ಸಿಡಿಸಿ ತಂಡಕ್ಕೆ ಆಧಾರವಾದರು.

ಕೊಹ್ಲಿ ಪಡೆಗೆ ಬಿಟ್ಟೂ ಬಿಡದೆ ಕಾಡಿದ ಪೀಟರ್​​ಸನ್ 
ಡಬಲ್​ ಶಾಕ್​ ಕೊಟ್ಟ ಶಮಿ, ಜಾನ್ಸನ್​​​ ಬೂಮ್ರಾ ವಿಲನ್ 
ಒಂದೆಡೆ ವಿಕೆಟ್​ ಉರುಳುತ್ತಿದ್ದರೂ, ಪೀಟರ್​​ಸನ್​ ಮಾತ್ರ ಭಾರತದ ಬೌಲರ್​​​​​ಗಳಿಗೆ ಬಿಟ್ಟೂಬಿಡದೆ ಕಾಡಿದರು. 2ನೇ ಸೆಷನ್​ ಅಂತ್ಯಕ್ಕೂ ಮುನ್ನ ಹರಿಣಗಳ ಪಾಲಿಗೆ ಡಬಲ್​ ಶಾಕ್​ ನೀಡಿದ ಮೊಹಮ್ಮದ್​ ಶಮಿ ವಿಲನ್​​ ಆದ್ರು. ಒಂದೇ ಓವರ್​​​​ನಲ್ಲಿ ಟೆಂಬಾ ಬವುಮಾ, ಕೈಲ್ ವೆರಿನ್​ರನ್ನ ಶಮಿ ಔಟ್​ ಮಾಡಿದರೆ, ಟೀ ಬ್ರೇಕ್​​​​​ ಮುನ್ನ ಮಾರ್ಕೋ ಜಾನ್ಸನ್​​​​​​​​​​ಗೆ ಬೂಮ್ರಾ ಗೇಟ್​​​​ಪಾಸ್​ ನೀಡಿದರು. ಪೀಟರ್ಸನ್​ ಮಾತ್ರ​​, ರನ್​ವೇಗ ಹೆಚ್ಚಿಸುತ್ತಲೇ ಇದ್ರು.

ಕೀಗನ್​ ಪೀಟರ್​​​​ಸನ್​​​​​​ರ ಸುದೀರ್ಘ ಹೋರಾಟ ಅಂತ್ಯ 
ಸೌತ್​ ಆಫ್ರಿಕಾ 209ಕ್ಕೆ ಪತನ, ಭಾರತಕ್ಕೆ ಅಲ್ಪ ಮುನ್ನಡೆ 
ಇನ್ನು ಭಾರತದ ಬೌಲರ್​​ಗಳು ಕೊನೆ ಸೆಷನ್​​​​ನಲ್ಲಿ ದರ್ಬಾರ್​​​ ನಡೆಸಿದ್ರು. ಕ್ರೀಸ್​​​ಗೆ​​​ ಬಂದಾಗಿನಿಂದ ಭಾರತಕ್ಕೆ ತಲೆನೋವಾಗಿದ್ದ ಪೀಟರ್ಸನ್ ಅವರ​ ಸುದೀರ್ಘ ಹೋರಾಟ, 3ನೇ ಸೆಷನ್​ ಆರಂಭದಲ್ಲೇ ಕೊನೆಗೊಂಡಿತು. 72 ರನ್​​​​​​ಗಳಿಸಿದ್ದ ಪೀಟರ್ಸನ್​​​​ ಆಫ್ರಿಕಾ ಅದ್ಭುತ ಕೊಡುಗೆ ನೀಡಿದ್ರು. ಇದರ ಬೆನ್ನಲ್ಲೇ ರಬಾಡ, ಲುಂಗಿ ಎನ್​ಗಿಡಿ ಕೂಡ ಔಟಾದ್ರು. ಪರಿಣಾಮ 209ಕ್ಕೆ ಸರ್ವಪತನ ಕಂಡಿತು. ಆದ್ರೆ ಭಾರತ 13 ರನ್​​ಗಳ ಅಲ್ಪ ಮುನ್ನಡೆ ಪಡೆದುಕೊಳ್ತು. ಬೂಮ್ರಾ 5, ಶಮಿ, ಉಮೇಶ್​​​ ತಲಾ 2 ವಿಕೆಟ್​​ ಪಡೆದು ಮಿಂಚಿದ್ರು.

ಮತ್ತೆ ಕೈ ಕೊಟ್ಟ ಆರಂಭಿಕರು, ಸಂಕಷ್ಟದಲ್ಲಿ ಭಾರತ 
13 ರನ್​​​ಗಳ ಅಲ್ಪ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್​ ಶುರು ಮಾಡಿದ ಭಾರತದ ಆರಂಭಿಕರು ಎರಡನೇ ಇನ್ನಿಂಗ್ಸ್​​​ನಲ್ಲೂ ಕೈಕೊಟ್ಟರು. ಮಯಾಂಕ್​ ಅಗರ್ವಾಲ್​​ 7 ರನ್​​​​​​ ಗಳಿಸಿದ್ರೆ, ಕೆ.ಎಲ್​​.ರಾಹುಲ್​ 10 ರನ್​ ಗಳಿಸಿ ವಿಕೆಟ್​​ ಒಪ್ಪಿಸೋ ಮೂಲಕ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದ್ರು. ಆದರೆ ಇಕ್ಕಟ್ಟಿಗೆ ಸಿಲುಕಿದ ತಂಡಕ್ಕೆ ಕೊಹ್ಲಿ ಮತ್ತು ಪೂಜಾರ ನೆರವಾಗಿದ್ದು, ಉತ್ತಮ ಮೊತ್ತದತ್ತ ಸಾಗುವ ನಿರೀಕ್ಷೆ ಮೂಡಿಸಿದ್ದಾರೆ. ಆಫ್ರಿಕಾ ಬೌಲರ್​ಗಳ ದಾಳಿಯನ್ನು ಈ ಇಬ್ಬರು ಮೆಟ್ಟಿನಿಲ್ತಾರಾ ಅನ್ನೋದನ್ನ ಕಾದುನೋಡಬೇಕು.

News First Live Kannada


Leave a Reply

Your email address will not be published. Required fields are marked *