ಹಾಸನ: ರೋಮಾಂಚನಕಾರಿ ಕಾರ್ಯಾಚರಣೆ ನಡೆಸಿ ಹಾಸನದಲ್ಲಿ  ಎರಡು ಪುಂಡಾನೆ ಸೆರೆ ಹಿಡಿಯುಲಾಗಿದೆ.

ಸಕಲೇಶಪುರ, ಆಲೂರು ಭಾಗದಲ್ಲಿ ಜನರನ್ನು ಬಲಿ ಪಡೆದು, ಬೆಳೆ ನಾಶ ಮಾಡುತ್ತಿದ್ದ ಎರಡು ಪುಂಡಾನೆಗಳನ್ನು ಸೆರೆಹಿಡಿಯಲಾಗಿದೆ. ನಿನ್ನೆ ಬೆಳಗ್ಗೆಯಿಂದಲೇ ಹಾಸನ ಅರಣ್ಯ ಇಲಾಖೆ ಅಧಿಕಾರಿಗಳ ನೇತೃತ್ವದ ತಂಡ ಕಾರ್ಯಾಚರಣೆಗಿಳಿದಿತ್ತು. ಅದರಂತೆ ನಿನ್ನೆ ಸಂಜೆ ವೇಳೆಗೆ ಎರಡು ಪುಂಡಾನೆಗಳನ್ನು ಸೆರೆ ಹಿಡಿಯಲಾಗಿದೆ. ಇದನ್ನೂ ಓದಿ: ಮಲೆನಾಡು ಭಾಗಕ್ಕೆ ಒಂದೊಳ್ಳೆ ಸುದ್ದಿ – ಒಂದೇ ದಿನ ಎರಡು ಪುಂಡಾನೆ ಸೆರೆ

ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ ಬೇರೆಡೆ ಸ್ಥಳಾಂತರಿಸಲಾಗಿತ್ತು. ಕಾರ್ಯಾಚರಣೆಯಲ್ಲಿ ಅಭಿಮನ್ಯು, ವಿಕ್ರಮ್, ಮಹಾರಾಷ್ಟ್ರದ ಭೀಮ, ಗಣೇಶ ಆನೆಗಳು ಪಾಲ್ಗೊಂಡಿದ್ದವು. ಸಾಕಾನೆಗಳು, ಕಾಡಾನೆಗಳನ್ನು ನಿಯಂತ್ರಿಸುವಾಗ ಅವು ಪ್ರತಿರೋಧ ತೋರುವ ರಣರೋಚಕ ವೀಡಿಯೋ ಮೈ ನವಿರೇಳಿಸುವಂತಿದೆ.

ಕೋವಿಡ್ ಕಾಲದಲ್ಲಿ ನಡೆದ ಆನೆಗಳ ಸರೆ ಕಾರ್ಯಾಚರಣೆ ಸವಾಲಿನದ್ದಾಗಿತ್ತು. ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲಾ ಅಧಿಕಾರಿ ಸಿಬ್ಬಂದಿ, ಆನೆಗಳ ಮಾವುತರು, ಆರೈಕೆಗಾರರೆಲ್ಲರಿಗೂ ಒಂದು ದಿನ ಮೊದಲೇ ಕೋವಿಡ್ ಪರೀಕ್ಷೆ ನಡೆಸಿ ಸೋಂಕು ಇಲ್ಲದೆ ಇರುವುದನ್ನು ಖಾತರಿಪಡಿಸಿಕೊಂಡು ಕಾರ್ಯಾಚರಣೆ ಮಾಡಲಾಯಿತು. ಮೂರು ದಿನಗಳ ಕಾರ್ಯಾಚರಣೆ ಯೋಜನೆ ರೂಪಿಸಿಕೊಳ್ಳಲಾಗಿತ್ತು. ಆದರೆ ಸಮರ್ಥ ಹಾಗೂ ನುರಿತ ಅಧಿಕಾರಿಗಳು, ಸಿಬ್ಬಂದಿ, ಅಭಿಮನ್ಯು ಸೇರಿಂದಂತೆ ಅನುಭವಿ ಆನೆಗಳ ಪ್ರಯತ್ನದಿಂದ ಒಂದೇ ದಿನದಲ್ಲಿ ಎರಡೂ ಆನೆಗಳು ಸೆರೆ ಸಿಕ್ಕಿದೆ. ಎರಡೂ ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿದ್ದು, ದೂರದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಬಸವರಾಜ್, ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲಾ ಅಧಿಕಾರಿ, ಸಿಬ್ಬಂದಿ ಹಾಗೂ ಎಲ್ಲಾ ರೀತಿಯ ಸಹಕಾರ ನೀಡಿದ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

The post ರೋಮಾಂಚನಕಾರಿ ಕಾರ್ಯಾಚರಣೆ ನಡೆಸಿ ಹಾಸನದಲ್ಲಿ ಪುಂಡಾನೆಗಳ ಸೆರೆ appeared first on Public TV.

Source: publictv.in

Source link

Leave a comment