ಬೆಂಗಳೂರು: ಇಬ್ಬರು ಮಹಿಳಾ ಐಎಎಸ್ ಅಧಿಕಾರಿಗಳ ಕಿತ್ತಾಟ ಪ್ರಕರಣ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಸರ್ಕಾರ ಸಹ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿತ್ತು. ಇದಾದ ಬೆನ್ನಲ್ಲೇ ಇದೀಗ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಇಬ್ಬರನ್ನೂ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ರೋಹಿಣಿ ಸಿಂಧೂರಿ ಅವರನ್ನು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದ್ದು, ಶಿಲ್ಪಾ ನಾಗ್ ಅವರನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಇ-ಗವರ್ನೆನ್ಸ್ ನಿರ್ದೇಶಕರನ್ನಾಗಿ ವರ್ಗಾವಣೆಗೊಳಿಸಲಾಗಿದೆ. ಇದನ್ನೂ ಓದಿ:  ಮೈಸೂರು ಡಿಸಿ ವರ್ಸಸ್ ಪಾಲಿಕೆ ಆಯುಕ್ತೆ – ಸುತ್ತೂರು ಶ್ರೀಗಳ ಮನವೊಲಿಕೆ ಯಶಸ್ವಿ!?

ವಾಣಿಜ್ಯ ತೆರಿಗೆಗಳ ಹೆಚ್ಚುವರಿ ಆಯುಕ್ತರಾಗಿದ್ದ ಬಗಾಡಿ ಗೌತಮ್ ಅವರನ್ನು ಮೈಸೂರು ಜಿಲ್ಲಾಧಿಕಾರಿಯನ್ನಾಗಿ ವರ್ಗಾವಣೆಗೊಳಿಸಲಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಮಂಡಳಿಯ ಎಂಡಿ ಲಕ್ಷ್ಮಿಕಾಂತ್ ರೆಡ್ಡಿ ಅವರನ್ನು ಮೈಸೂರು ಮಹಾನಗರ ಪಾಲಿಕೆ ಆಯುಕ್ತರನ್ನಾಗಿ ತಕ್ಷಣಕ್ಕೆ ಜಾರಿಗೆ ಬರುವಂತೆ ಆದೇಶಿಸಲಾಗಿದೆ.

ಬಿಬಿಎಂಪಿ ವಿಶೇಷ ಆಯುಕ್ತರಾಗಿದ್ದ ಪಿ.ರಾಜೇಂದ್ರ ಚೋಳನ್ ಅವರಿಗೆ ಹೆಚ್ಚುವರಿಯಾಗಿ ಬೆಸ್ಕಾಂ ಎಂಡಿಯಾಗಿ ಜವಾಬ್ದಾರಿಯನ್ನು ನೀಡಲಾಗಿದೆ. ಬೆಸ್ಕಾಂ ಎಂಡಿ ಆಗಿದ್ದ ರಾಜೇಶ್ ಗೌಡ ಅವರನ್ನು ಬಿಡುಗಡೆಗೊಳಿಸಲಾಗಿದೆ. ಇದನ್ನೂ ಓದಿ: ಶಿಲ್ಪಾ ನಾಗ್ ರಾಜೀನಾಮೆ ಬೆನ್ನಲ್ಲೇ ಹೊಸ ಟೆನ್ಶನ್ -ಕಠಿಣ ನಿರ್ಧಾರಕ್ಕೆ ಬಂದ್ರಾ ಜಿಲ್ಲಾ ಉಸ್ತುವಾರಿ ಸಚಿವ?

ನಡೆದಿದ್ದೇನು..?
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಮುಖ್ಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಅವರ ರಾಜೀನಾಮೆ ಅಂಗೀಕಾರವಾಗಿರಲಿಲ್ಲ.

ಈ ಹಿಂದೆ ತುರ್ತು ಸುದ್ದಿಗೋಷ್ಠಿ ನಡೆಸಿದ್ದ ಶಿಲ್ಪಾನಾಗ್, ಜಿಲ್ಲಾಧಿಕಾರಿಗಳು ಸಿಟಿಗೆ ಒಂದು ಮಾನದಂಡ, ಗ್ರಾಮಾಂತರಕ್ಕೆ ಒಂದು ಮಾನದಂಡ ಮಾಡಿದ್ದಾರೆ. ಸಿಟಿಯಲ್ಲಿ ಕಮಿಷನರ್ ವಿಫಲವಾಗಿದ್ದಾರೆ ಎಂದು ಬಣ್ಣ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾಡಳಿತದಿಂದ ನಮಗೆ ಯಾವುದೇ ಸಹಕಾರ ದೊರೆತಿಲ್ಲ. ಸಿಎಸ್‍ಆರ್ ಫಂಡ್‍ನಿಂದ ನಾವು ಕೆಲಸ ಮಾಡುತ್ತಿದ್ದೇವೆ. ಎಲ್ಲರಿಗೂ ಒಂದು ಸಹನೆ ಇರುತ್ತೆ, ಸಹನೆ ಒಡೆದಾಗ ಏನು ಮಾಡಬೇಕು. ಒಬ್ಬರು ಐಎಎಸ್ ಅಧಿಕಾರಿಯಾಗಿ ಮತ್ತೊಬ್ಬ ಅಧಿಕಾರಿ ಮೇಲೆ ದಬ್ಬಾಳಿಕೆ ಮಾಡೋದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದರು. ಇದನ್ನೂ ಓದಿ: CSR ಫಂಡ್ ಲೆಕ್ಕ ನೀಡಿಲ್ಲ, ಕೋವಿಡ್ ಕೇರ್ ಸೆಂಟರ್ ತೆರೆದಿಲ್ಲ- ಶಿಲ್ಪಾ ನಾಗ್ ವಿರುದ್ಧ ಡಿಸಿ ರೋಹಿಣಿ ಸಿಂಧೂರಿ ಪ್ರತ್ಯಾರೋಪ

ಮಾಧ್ಯಮಗಳಲ್ಲಿ ಪಾಲಿಕೆ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂಬ ವರದಿ ಬಂದ ಹಿನ್ನೆಲೆಯಲ್ಲಿ ನನ್ನನ್ನ ಟಾರ್ಗೆಟ್ ಮಾಡಲಾಗಿದೆ. ನನ್ನನ್ನ ತುಳಿಯುವ ವ್ಯವಸ್ಥಿತ ಪಿತೂರಿ ನಡೆದಿದ್ದು, ಅವರ ಇಗೋಯಿಂದ ನಮ್ಮ ಕೆಲಸಕ್ಕೆ ಮನ್ನಣೆ ಸಿಗುತ್ತಿಲ್ಲ ಎಂದು ರೋಹಿಣಿ ಸಿಂಧೂರಿ ವಿರುದ್ಧ ಗಂಭೀರ ಆರೋಪಗಳನ್ನ ಮಾಡಿದ್ದರು. ನನಗೆ ಕೆಲಸ ಮಾಡುವ ಆಸಕ್ತಿಯೇ ಇಲ್ಲದಂತಾಗಿದ್ದು, ಚೀಫ್ ಸೆಕ್ರಟರಿ ಸ್ಥಾನ ರಾಜೀನಾಮೆ ನೀಡುತ್ತಿರುವ ವಿಷಯವನ್ನ ತಿಳಿಸಿ ಭಾವುಕರಾಗಿದ್ದರು.

ಶಿಲ್ಪಾ ನಾಗ್ ಆರೋಪದ ಬೆನ್ನಲ್ಲೇ ರೋಹಿಣಿ ಸಿಂಧೂರಿ ಕೂಡ ಸುದ್ದಿಗೋಷ್ಠಿ ನಡೆಸಿದ್ದು, ನಾನು ಕಿರುಕುಳ ನೀಡಿದ್ದೇನೆ ಎಂದು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರು ಸುಳ್ಳು ಹೇಳಿದ್ದಾರೆ. ಅಲ್ಲದೆ ಯಾವ ರೀತಿಯ ಕಿರುಕುಳ ಎಂಬುದನ್ನು ಸಹ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿಲ್ಲ ಎಂದಿದ್ದಾರೆ. ಜಿಲ್ಲಾಧಿಕಾರಿಯಾಗಿ ಕೊರೊನಾ ಸಾಂಕ್ರಾಮಿಕ ರೋಗವನ್ನು ನಿರ್ವಹಿಸುವ ಕೆಲಸದಲ್ಲಿ ಹಾಗೂ ನಿಯಂತ್ರಿಸುವ ಸಂದರ್ಭದಲ್ಲಿ ನನ್ನ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ. ನನ್ನ ಗುರಿ ಹಾಗೂ ಕ್ರಮಗಳು ಕೊರೊನಾ ನಿರ್ವಹಣೆಗಾಗಿ ಮಾತ್ರ ಎಂದು ಸ್ಪಷ್ಟಪಡಿಸಿದ್ದರು. ಇದನ್ನೂ ಓದಿ: 12 ಕೋಟಿ ಸಿಎಸ್‍ಆರ್ ಫಂಡ್ ಖರ್ಚಿನ ಮಾಹಿತಿ ಕೇಳಿದ್ದೆ ಅಷ್ಟೇ – ರೋಹಿಣಿ ಸಿಂಧೂರಿ

ಶಿಲ್ಪಾ ನಾಗ್ ಕುರಿತು ಪ್ರತ್ಯಾರೋವನ್ನೂ ಮಾಡಿರುವ ಡಿಸಿ ರೋಹಿಣಿ ಸಿಂಧೂರಿ, ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರು ಕೊರೊನಾ ನಿರ್ವಹಣೆ ಕುರಿತು ಸಭೆಯಲ್ಲಿ ಭಾಗವಹಿಸಿಲ್ಲ. ವಾರ್ಡ್‍ವಾರು ಕೊರೊನಾ ಹೊಸ ಪ್ರಕರಣಗಳು, ಸಾವು ಹಾಗೂ ಸಕ್ರಿಯ ಪ್ರಕರಣಗಳ ಅಂಕಿ ಸಂಶಗಳನ್ನು ತಪ್ಪಾಗಿ ಹಾಗೂ ಸಹಿ ಮಾಡದೆ ನೀಡಿದ್ದಾರೆ. ಹೀಗಾಗಿ ಈ ಅಂಕಿ ಅಂಶಗಳನ್ನು ಸರಿ ಪಡಿಸುವಂತೆ ನಾನು ಆದೇಶಿಸಿದ್ದೆ ಎಂದು ತಿಳಿಸಿದ್ದರು. ಇದಾದ ಬಳಿಕ ಇಬ್ಬರನ್ನು ಸಂಧಾನ ಮಾಡುವ ಪ್ರಯತ್ನ ನಡೆಸಿದರೂ ಅದು ವಿಫಲವಾಗಿತ್ತು.

The post ರೋಹಿಣಿ ಸಿಂಧೂರಿ, ಶಿಲ್ಪಾ ನಾಗ್ ಇಬ್ಬರೂ ವರ್ಗಾವಣೆ- ಸರ್ಕಾರದಿಂದ ಆದೇಶ appeared first on Public TV.

Source: publictv.in

Source link