ಮೈಸೂರಿನಲ್ಲಿ ನಿತ್ಯ ಬರೇ ರಂಪಾಟವೇ ಆಗಿ ಹೋಗಿದೆ. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಈ ಹಿಂದೆ ಜನ ಪ್ರತಿನಿಧಿಗಳು ತಿರುಗಿ ಬಿದ್ದಿದ್ದರು. ಈಗ ಮತ್ತೊಬ್ಬ ಐಎಎಸ್ ಅಧಿಕಾರಿಯೇ ಡಿಸಿ ವಿರುದ್ಧ ಆರೋಪ ಮಾಡಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಬಿಟ್ಟಿದ್ದಾರೆ. ಮೈಸೂರಿನಲ್ಲಿ ನಿಜಕ್ಕೂ ಆಗ್ತಿರೋದೇನು, ಡಿಸಿ ರೋಹಿಣಿ ಸಿಂಧೂರಿ ಮಾಡ್ತಿರೋದೇನು?

ಮೈಸೂರಿನಲ್ಲಿ ನಿಜಕ್ಕೂ ಏನಾಗ್ತಿದೆ? ಸರ್ಕಾರಕ್ಕೆ ಗೊತ್ತಿಲ್ವಾ?
ಮೈಸೂರು ಡಿಸಿ ವಿರುದ್ಧ ಪದೇ ಪದೇ ಆರೋಪದ ಮಾತು

ಇದೀಗ ಮೈಸೂರು ಮಹಾನಗರ ಪಾಲಿಕೆ ಕಮಿಷನರ್ ರಾಜೀನಾಮೆಯಿಂದಾಗಿ ಮೈಸೂರಿನ ಸಾರ್ವಜನಿಕ ವಲಯದಲ್ಲಿ ಸಂಚಲನ ಸೃಷ್ಟಿಯಾಗಿದೆ. ಇವರು ನೇರಾ ನೇರಾ ಆರೋಪ ಮಾಡಿದ್ದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ. ಇಂತಹ ಜಿಲ್ಲಾಧಿಕಾರಿ ಯಾವುದೇ ಜಿಲ್ಲೆಗೂ ಸಿಗಬಾರದು ಅಂತ ಶಿಲ್ಪಾ ನಾಗ್ ಅತಿಯಾದ ಬೇಸರದಿಂದ ಹೇಳಿಬಿಟ್ಟಿದ್ದಾರೆ. ಒಬ್ಬ ಐಎಎಸ್ ಅಧಿಕಾರಿ ಇನ್ನೊಬ್ಬ ಐಎಎಸ್ ಅಧಿಕಾರಿ ವಿರುದ್ಧ ಇಷ್ಟೊಂದು ನೋವಿನಿಂದ ಮಾತನಾಡಿದ್ದು ಬಹಳ ಅಪರೂಪದಲ್ಲಿ ಅಪರೂಪ. ಆದ್ರೆ ಮೈಸೂರು ಮಹಾನಗರ ಪಾಲಿಕೆ ಕಮಿಷನರ್ ಶಿಲ್ಪಾ ನಾಗ್ ತಮ್ಮ ಮನಸ್ಸಿನಲ್ಲಿದ್ದ ನೋವನ್ನೆಲ್ಲ ಬಹಿರಂಗವಾಗಿ ತೋಡಿಕೊಂಡಿದ್ದಾರೆ. ಈ ಮೂಲಕ ಬಹಳ ದಿನಗಳಿಂದ ಪದೇ ಪದೇ ಗಮನ ಕೇಂದ್ರಿಕರಿಸಿಕೊಂಡಿದ್ದ ರೋಹಿಣಿ ಸಿಂಧೂರಿ ಅವರಿಗೆ ತೀವ್ರ ಹಿನ್ನಡೆ ಮತ್ತು ಮುಜುಗರ ಎರಡೂ ಆಗುವಂತಾಗಿ ಬಿಟ್ಟಿದೆ.

ಶಾಸಕರು, ಸಂಸದರಂತೂ ಗುಡುಗು ಹಾಕ್ತಾನೇ ಇದಾರೆ
ಈಗ ಸಾರ್ವಜನಿಕ ವಲಯದಲ್ಲಿ ಮತ್ತೊಂದು ಸಂಚಲನ

ಕರ್ನಾಟಕದಲ್ಲಿ ಮೈಸೂರಿಗೆ ತನ್ನದೇ ಆದ ವಿಶಿಷ್ಠ ಸ್ಥಾನಮಾನ ಇದೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಬೇಕು, ಇಲ್ಲಿನ ಜಿಲ್ಲಾಧಿಕಾರಿಯಾಗಬೇಕು, ಮೈಸೂರಿನಲ್ಲಿ ಏನಾದರೂ ಉನ್ನತ ಹುದ್ದೆ ಅಲಂಕರಿಸಬೇಕು ಅನ್ನುವ ಹಂಬಲ ಹಲವರಲ್ಲಿ ಇದ್ದೇ ಇರುತ್ತೆ. ಮೈಸೂರಿನ ಆಕರ್ಷಣೆಯೇ ಹಾಗಿದೆ. ಅರಮನೆಗಳ ನಗರಿಯಲ್ಲಿ ಒಂದಿಷ್ಟು ದಿನ ಕೆಲಸ ಮಾಡಬೇಕೆಂಬ ಅಭಿಲಾಷೆ ಹಲವು ರಾಜಕಾರಣಿಗಳಲ್ಲಿ, ಅಧಿಕಾರಿಗಳಲ್ಲಿ ಇರೋದು ಸಹಜ. ವಿಶ್ವ ಪ್ರಸಿದ್ಧ ಮೈಸೂರಿನಲ್ಲಿ ಕೆಲಸ ಮಾಡಿರುವ ಹೆಗ್ಗಳಿಕೆಯನ್ನು ಹೆಗಲಿಗೇರಿಸಿಕೊಳ್ಳುವ ತವಕ ಇದ್ದೇ ಇರುತ್ತೆ. ಹೀಗೆಯೇ ಅಂದುಕೊಂಡು ಮೈಸೂರು ಜಿಲ್ಲಾಧಾರಿಯಾಗಿ ರೋಹಿಣಿ ಸಿಂಧೂರಿ ಬಂದಾಗಿನಿಂದ ಅವರ ವಿರುದ್ಧ ಒಂದಲ್ಲಾ ಒಂದು ಮಾತುಗಳು ಕೇಳಿಬರ್ತಾನೇ ಇದ್ದಾವೆ. ಡಿಸಿ ಆಗಿ ಬಂದಿದ್ದೇ ಒಂದು ವಿವಾದ ಆಗಿತ್ತು. ಬಳಿಕ ಹೇಗೋ ಅದನ್ನು ನಿಭಾಯಿಸಿಕೊಂಡಿದ್ದರು ರೋಹಿಣಿ ಸಿಂಧೂರಿ.

 

 

ಮೈಸೂರು ಮಹಾನಗರ ಪಾಲಿಕೆಯ ಕಮಿಷನರ್ ರಿಸೈನ್
ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಸಿಡಿದೆದ್ದ ಶಿಲ್ಪಾ ನಾಗ್

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮೊದಲು ಗುಡುಗಿದ್ದೇ ಸಾ.ರಾ.ಮಹೇಶ್. ರೋಹಿಣಿ ಸಿಂಧೂರಿ ವಿರುದ್ಧ ಬಹಿರಂಗವಾಗಿ ಮಾತನಾಡಿದ್ದರು ಅವತ್ತು ಸಾ.ರಾ.ಮಹೇಶ್. ಆದ್ರೆ ಸಾ.ರಾ.ಮಹೇಶ್ ರಾಜಕೀಯ ಉದ್ದೇಶದಿಂದ ಹೀಗೆ ಮಾತನಾಡ್ತಾ ಇರಬಹುದು ಅಂದುಕೊಂಡವರೇ ಜಾಸ್ತಿ. ಈಗಲೂ ಸಾ.ರಾ.ಮಹೇಶ್ ರೋಹಿಣಿ ವಿರುದ್ಧ ಅಸಮಾಧಾನ ಹೊರಹಾಕುತ್ತಲೇ ಇರುತ್ತಾರೆ. ಆದ್ರೆ ರೋಹಿಣಿ ಸಿಂಧೂರಿ ತಲೆ ಕೆಡಿಸಿಕೊಂಡಿರಲಿಲ್ಲ.

ಸಾ.ರಾ.ಮಹೇಶ್ ನಂತರ ರೋಹಿಣಿ ಸಿಂಧೂರಿ ವಿರುದ್ಧ ಗುಡುಗಿದವರು ಮೈಸೂರಿನ ಸಂಸದ ಪ್ರತಾಪ್ ಸಿಂಹ. ತಮ್ಮದೇ ಸರ್ಕಾರ ನೇಮಿಸಿದ್ದ ಡಿಸಿ ವಿರುದ್ಧ ಪ್ರತಾಪ್ ಸಿಂಹ ಗರಂ ಆಗಿದ್ದರು. ಮೊದಲು ರೋಹಿಣಿ ಸಿಂಧೂರಿಯವರನ್ನು ಸಮರ್ಥಿಸಿಕೊಳ್ತಾ ಇದ್ದ ಪ್ರತಾಪ್ ಸಿಂಹ, ಇದೀಗ ಸಿಟ್ಟಾಗಿದ್ದು ರೋಹಿಣಿ ಸಿಂಧೂರಿಯವರನ್ನು ಖಡಕ್ ಆಗಿ ಪ್ರಶ್ನಿಸಿದ್ದು ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಕೊರೊನಾ ಕಾಲದ ನಿರ್ವಹಣೆ ಲೆಕ್ಕ ಕೊಡಿ, ಈಜುಕೊಳ ಕಟ್ಟಿಸಿಕೊಳ್ಳೋಕೆ ಆಗುತ್ತೆ ಅಂತೆಲ್ಲ ಮಾತನಾಡಿದ್ದರು.

ಹೆದರಿಲ್ಲ, ದುರಹಂಕಾರದ ವಿರುದ್ಧ ಹೋರಾಟ ಅಂತ ಗರಂ
ರೋಹಿಣಿ ಸಿಂಧೂರಿ ದುರಹಂಕಾರಿನಾ? ದರ್ಪ ಜಾಸ್ತಿನಾ?

ಸಾಮಾನ್ಯವಾಗಿ ಜನ ಪ್ರತಿನಿಧಿಗಳು ಮಾತನಾಡಿದಾಗ ರಾಜಕೀಯ ಉದ್ದೇಶ ಇರಬಹುದು ಅಂತಾನೇ ಅಂದುಕೊಳ್ಳಲಾಗುತ್ತೆ. ಆದರೆ ಇವತ್ತು ಆದ ವಿದ್ಯಮಾನದಿಂದ ಈಗ ರೋಹಿಣಿ ಸಿಂಧೂರಿಯವರನ್ನೇ ಪ್ರಶ್ನಿಸುವಂತಹ ಕಾಲ ಬಂದು ಬಿಟ್ಟಿದೆ. ಮೈಸೂರು ಮಹಾನಗರ ಪಾಲಿಕೆಯ ಕಮಿಷನರ್ ಆಗಿ ಕಾರ್ಯ ನಿರ್ವಹಿಸ್ತಾ ಇದ್ದ ಶಿಲ್ಪಾ ನಾಗ್ ಕೂಡ ಐಎಎಸ್ ಅಧಿಕಾರಿ. ರೋಹಿಣಿ ಸಿಂಧೂರಿಯವರಿಗಿಂತ ಹಿರಿಯರಾಗಿರುವ ಶಿಲ್ಪಾ ಹೀಗೆ ಕಣ್ಣಂಚಿನಲ್ಲಿ ನೀರು ತಂದುಕೊಳ್ತಾರೆ ಅಂದ್ರೆ ಯೋಚನೆ ಮಾಡಬೇಕಾದ್ದೇ. ಇವತ್ತು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ತಮಗೆ ಕಿರುಕುಳ ಆಗ್ತಿದೆ ಅಂತ ಶಿಲ್ಪಾ ನಾಗ್ ಆರೋಪ ಮಾಡಿದ್ದು ನಿಜಕ್ಕೂ ಗಂಭೀರವಾದ ಆರೋಪ.

ರೋಹಿಣಿ ಸಿಂಧೂರಿ ಅಧಿಕಾರಿಗಳನ್ನು ಅವಮಾನಿಸ್ತಾರಾ?
ಪಾಲಿಕೆ ಕಮಿಷನರ್ ಬೇಸರದಿಂದ ಎದ್ದು ಹೋಗಿದ್ದು ಏಕೆ?

ಮೈಸೂರು ನಗರದಲ್ಲಿ ಕೊರೊನಾ ನಿರ್ವಹಣೆ ಮಾಡ್ತಾ ಇದ್ದ ಕಮಿಷನರ್ ಶಿಲ್ಪಾ ನಾಗ್ ಚೆನ್ನಾಗಿಯೇ ಕಾರ್ಯ ನಿರ್ವಹಿಸಿದ್ರು ಅಂತ ಹೇಳಲಾಗ್ತಾ ಇತ್ತು. ಮೈಸೂರಿನಲ್ಲಿ ಕೋವಿಡ್ ಕಂಟ್ರೋಲ್ ಮಾಡುವಲ್ಲಿ ಶಿಲ್ಪಾ ಅದ್ಭುತವಾಗಿ ಕೆಲಸ ಮಾಡಿದ್ರು ಅನ್ನೋ ಮೆಚ್ಚುಗೆಯೂ ವ್ಯಕ್ತವಾಗಿತ್ತು. ಆದ್ರೆ ಅದೇನಾಯ್ತೋ ಗೊತ್ತಿಲ್ಲ. ರೋಹಿಣಿ ಸಿಂಧೂರಿ ಮೊದಲು ಮೈಸೂರು ಸಿಟಿ ಕೊರೊನಾ ನಿರ್ವಹಣೆ ಬಗ್ಗೆ ಖುದ್ದು ಸರ್ಟಿಫಿಕೇಟ್ ಕೊಟ್ಟಿದ್ರು. ಮೈಸೂರು ನಗರದ ಒಂದೆರಡು ಕಡೆ ಬಿಟ್ರೆ ಉಳಿದೆಡೆ ಕೊರೊನಾ ಕಂಟ್ರೋಲ್ ಮಾಡುವಲ್ಲಿ ಪಾಲಿಕೆ ಯಶಸ್ವಿಯಾಗಿದೆ ಅಂತಾನು ಮಾಹಿತಿ ಕೊಟ್ಟಿದ್ರು.

ಇಷ್ಟೆಲ್ಲಾ ಆದ ಮೇಲೆ ಮತ್ತೆ ಡಿಸಿ ರೋಹಿಣಿ ಸಿಂಧೂರಿ ಹೊಸ ಮಾಹಿತಿ ಕೊಟ್ಟಿದ್ದಾರಂತೆ. ಮೊದಲು ಬೆಸ್ಟ್ ಅಂದವರು ಆಮೇಲೆ ನಿರ್ವಹಣೆಯೇ ಸರಿ ಇಲ್ಲ, ಪಾಲಿಕೆ ವಿಫಲವಾಗಿದೆ ಅಂತೆಲ್ಲ ಮೈಸೂರು ಮಹಾನಗರ ಪಾಲಿಕೆ ಕಮಿಷನರ ಮೇಲೆ ಗೂಬೆ ಕೂರಿಸ್ತಾ ಇದಾರಂತೆ. ಇದರಿಂದ ಶಿಲ್ಪಾ ನಾಗ್ ನೊಂದುಕೊಂಡಿದ್ದಾರೆ. ಮೊದಲು ಚೆನ್ನಾಗಿದೆ ಅಂದಿದ್ದ ರೋಹಿಣಿ ಸಿಂಧೂರಿ ಈಗ್ಯಾಕೆ ಮತ್ತೆ ಚೆನ್ನಾಗಿಲ್ಲ ಅಂತಿದಾರೆ ಅಂತ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ನಾನು ಕರ್ನಾಟಕದವರೇ ಆಗಿದ್ರು ಇಂತಲ್ಲೇ ಪೋಸ್ಟಿಂಗ್ ಬೇಕು ಅಂತ ಕೇಳಿಲ್ಲ. ಆದ್ರೆ ರೋಹಿಣಿ ಸಿಂಧೂರಿಯವರು ನಾನು ಸೌಮ್ಯವಾಗಿಯೇ ಇದ್ರೂ ತೇಜೋವಧೆ ಮಾಡೋದು ಎಷ್ಟು ಸರಿ ಎಂದು ಶಿಲ್ಪಾ ಪ್ರಶ್ನಿಸಿದ್ದಾರೆ. ಎಲ್ಲರೂ ಡಿಸಿಗೆ ದುರಹಂಕಾರ ಅಂತಾ ಹೇಳ್ತಾ ಇದ್ರೂ ನಾನು ಅದನ್ನೆಲ್ಲ ಮನಸ್ಸಿಗೆ ತೆಗೆದುಕೊಂಡಿರಲಿಲ್ಲ. ಆದ್ರೆ ಈಗ ಹೇಳ್ತಾ ಇದ್ದೇನೆ, ಇಂತಹ ದುರಂಹಕಾರಿ ಅಧಿಕಾರಿ ವಿರುದ್ಧ ಪ್ರತಿಭಟಿಸುವ ಸಲುವಾಗಿ ರಾಜೀನಾಮೆ ಕೊಡ್ತಾ ಇದ್ದೇನೆ ಅಂತ ಶಿಲ್ಪಾ ನಾಗ್ ತಮ್ಮ ಹುದ್ದೆಯಿಂದ ಎದ್ದು ನಡೆದಿದ್ದಾರೆ.

ಇದೇನಿದು ಒಬ್ಬರಲ್ಲಾ ಇಬ್ಬರಲ್ಲಾ, ಮೈಸೂರಿನಲ್ಲಿ ಸಂಸದರು, ಮಾಜಿ ಸಚಿವರು, ಶಾಸಕರು, ಇದೀಗ ಸಹೋದ್ಯೋಗಿಯೇ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತಿರುಗಿಬಿದ್ದು ಹೊರ ನಡೆಯಲು ಮುಂದಾಗಿದ್ದಾರೆ. ಮೈಸೂರಿನ ಜಿಲ್ಲಾಧಿಕಾರಿಗಳು ಅದೇನು ಮಾಡ್ತಿದಾರೋ, ಶಿಲ್ಪಾ ನಾಗ್ ಹೇಳ್ತಿರೋದು ಸತ್ಯಾನಾ, ಪ್ರತಾಪ್ ಸಿಂಹ ಹೇಳಿದ್ದು ಸತ್ಯಾನಾ, ಸಾ.ರಾ.ಮಹೇಶ್ ಹೇಳ್ತಾ ಇದ್ದಿದ್ದು ಸತ್ಯಾನಾ, ಅಥವಾ ರೋಹಿಣಿ ಸಿಂಧೂರಿ ಅವರೇ ಸರಿನಾ ಗೊತ್ತಿಲ್ಲ. ಏನೇ ಇದ್ದರೂ ಮುಖ್ಯ ಕಾರ್ಯದರ್ಶಿಗಳು, ಮುಖ್ಯಮಂತ್ರಿಗಳು ಗಮನ ಹರಿಸಬೇಕಾದ ಕಾಲ ಬಂದಿದೆ.

The post ರೋಹಿಣಿ V/S ಶಿಲ್ಪಾ ನಾಗ್: ಸಾಂಸ್ಕೃತಿಕ ನಗರಿಯಲ್ಲಿ ಅಸಲಿಗೆ ನಡೀತಿರೋದೇನು..?​ appeared first on News First Kannada.

Source: newsfirstlive.com

Source link