ರೋಹಿತ್​ಗೆ ಪಟ್ಟ, ಕೊಹ್ಲಿ ಅಸ್ಥಿತ್ವಕ್ಕೆ ಗಂಡಾಂತರ.. ಟಿ-20 ಕ್ರಿಕೆಟ್​ನಿಂದ ಮಾಯ ಆಗ್ತಾರಾ ಕಿಂಗ್​..?


ವಿಶ್ವ ಕ್ರಿಕೆಟ್​ನ ಸಾಮ್ರಾಟನಾಗಿ ಮೆರೆದ ವಿರಾಟ್​ ಕೊಹ್ಲಿಗೆ, ನಾಯಕತ್ವ ಪಟ್ಟದಿಂದ ಕೆಳಗಿಳಿದ ಬಳಿಕ ತಂಡದಲ್ಲಿ ಅಭದ್ರತೆ ಕಾಡಲಿದೆಯಾ.? ಇಂಥದ್ದೊಂದು ಪ್ರಶ್ನೆ ಈಗ ಕ್ರಿಕೆಟ್​​​ ಅಂಗಳದಲ್ಲಿ ಹುಟ್ಟುಕೊಂಡಿದೆ.

ಕ್ರಿಕೆಟ್​​ನಲ್ಲಿ ಪ್ರತಿಭೆ ಬಳಸಿಕೊಳ್ಳುವ ಆಟಗಾರ, ಸೂಪರ್ ಸ್ಟಾರ್​ ಆಗಿ ಮಿಂಚುತ್ತಾರೆ. ಹೀಗೆ ಮಿಂಚೋ ಸೂಪರ್ ಸ್ಟಾರ್​ ಆಟಗಾರರು ತೆರೆಯಿಂದ ಹಿಂದೆ ಸರಿ ಬೇಕಾಗುತ್ತದೆ. ಆದ್ರೀಗ ವಿಶ್ವ ಕ್ರಿಕೆಟ್ ಸಾಮ್ರಾಟ ವಿರಾಟ್ ಕೊಹ್ಲಿ​ಗೂ ಇಂಥ ಗಂಡಾತರ ಎದುರಾಗಿದ್ಯಾ ಎಂಬ ಅನುಮಾನ ಹುಟ್ಟಿಕೊಂಡಿದೆ. ಇದಕ್ಕೆಲ್ಲಾ ಕಾರಣವಾಗ್ತಿರೋದು ಟಿ20 ಫಾರ್ಮೆಟ್​ ಕ್ಯಾಪ್ಟೆನ್ಸಿಯಿಂದ ಕೊಹ್ಲಿ ಕೆಳಗಿಳಿತಿರೋದೇ ಆಗಿದೆ.

ಟಿ-20 ಮಾದರಿ ನಾಯಕತ್ವ ತೊರೆಯೋದಾಗಿ ಕೊಹ್ಲಿ ಘೋಷಿಸಿದ್ದಾಗಿದೆ. ಈ ಬಳಿಕ ರೋಹಿತ್ ಶರ್ಮಾ ಟಿ20 ನಾಯಕರಾಗೋದು ಬಹುತೇಕ ಪಕ್ಕಾ. ಆದ್ರೆ, ಪ್ರತಿಯೊಬ್ಬ ನಾಯಕನ ಆಗಮನದ ಬಳಿಕ ತಂಡದಲ್ಲಿ ದೊಡ್ಡ ಬದಲಾವಣೆಗಳೇ ಸಂಭವಿಸುತ್ತೆ. ತಮ್ಮ ನೆಚ್ಚಿನ ಆಟಗಾರರಿಗೆ ಸ್ಥಾನ ನೀಡುವುದು ಸೇರಿದಂತೆ ಕೆಲವರನ್ನ ಸೈಡ್​​ಲೈನ್ ಮಾಡುವುದು ಸಹಜವಾಗೇ ನಡೆಯುತ್ತಲೇ ಇದೆ. ಆದ್ರೆ, ಇಂಥಹ ನಡೆಯೇ ಟಿ20 ಫಾರ್ಮೆಟ್​ನಲ್ಲಿ ಕೊಹ್ಲಿ ಅಸ್ಥಿತ್ವಕ್ಕೆ ಗಂಡಾಂತರವಾಗುತ್ತಾ ಎಂಬ ಪ್ರಶ್ನೆಯ ಹುಟ್ಟಿಗೆ ಕಾರಣ.

ಮುಸಿಕಿನ ಗುದ್ದಾಟವೇ ವಿರಾಟ್​​ ಕೊಹ್ಲಿಗೆ ಆಗುತ್ತಾ ಮುಳುವು..?
ಕೆಲ ವರ್ಷಗಳಿಂದ ರೋಹಿತ್, ಕೊಹ್ಲಿ ನಡುವಿನ ಮುಸುಕಿನ ಗುದ್ದಾಟ ನಡೀತಿದೆ. ಇದು ಸದ್ಯ ಟಿ20 ವಿಶ್ವಕಪ್ ಟೂರ್ನಿಯಲ್ಲೂ ಹೊಗೆಯಾಡುತ್ತಿದೆ. ಅಷ್ಟೇ ಅಲ್ಲ.. ಇದೇ ವೇಳೆ ಏಕದಿನ ನಾಯಕತ್ವದಿಂದಲೂ ಕೊಹ್ಲಿಯನ್ನ ಕೆಳಗಿಳಿಸುವ ಕಸರತ್ತುಗಳು ನಡೀತಿವೆ. ಇದರ ಜೊತೆಗೆ ಯುವಕರ ತಂಡ ಕಟ್ಟುವ ಚಿಂತನೆಯಲ್ಲಿರುವ ಬಿಸಿಸಿಐ, ಟಿ20 ಫಾರ್ಮೆಟ್​ಗೆ ತಕ್ಕ ಆಟಗಾರರಿಗೆ ಮಣೆ ಹಾಕುವ ಬಗ್ಗೆ ಲೆಕ್ಕಾಚಾರ ಹಾಕ್ತಿದೆ. ಸದ್ಯ ಟಿ20 ಫಾರ್ಮೆಟ್​ಗೆ ತಕ್ಕ ಆಟವಾಡದ ಕೊಹ್ಲಿಗೆ ರೋಹಿತ್ ಜೊತೆಗಿನ ಮನಸ್ತಾಪವೂ ತನ್ನ ಸ್ಥಾನವನ್ನ ಅತಂತ್ರಕ್ಕೆ ಸಿಲುಕಿಸಬಹುದು ಅಂತಾನೇ ಹೇಳಲಾಗ್ತಿದೆ.

ಯುವಕರ ಪೈಪೋಟಿಯೂ ಕೊಹ್ಲಿಗೆ ಆಗಬಹುದು ಕುತ್ತು
ರೋಹಿತ್ ಜೊತೆಗಿನ ಭಿನ್ನಾಭಿಪ್ರಾಯವೇ ಕೊಹ್ಲಿಯ ಟಿ20 ಸ್ಥಾನಕ್ಕೆ ಕುತ್ತು ಆಗಲ್ಲ. ಯುವ ಆಟಗಾರರ ಪೈಪೋಟಿಯೂ ಕೊಹ್ಲಿಗೆ ಮಾರಕವಾಗಬಹುದು. ಏಕಂದ್ರೆ, ಈಗ ಟೀಮ್ ಇಂಡಿಯಾದ ಪ್ರತಿಸ್ಲಾಟ್​ಗೂ ಕಾಂಪಿಟೇಷನ್​ ನಡೀತಿದೆ. ಅದ್ರಲ್ಲೂ ತಂಡದಲ್ಲಿ ಪ್ರತಿಭಾನ್ವಿತರ ದಂಡೇ ಇದೆ. ಯಾವುದೇ ಹಂತದಲ್ಲೂ ತೀರುಗೇಟು ನೀಡುವ ಸಾಮರ್ಥ್ಯ, ಪಂದ್ಯದ ಗತಿಯನ್ನೇ ಬದಲಾಯಿಸಬಲ್ಲ ತಾಕತ್ತು, ಆಕ್ರಮಣಕಾರಿ ಪ್ರವೃತ್ತಿ, ಹೋರಾಟದ ಮನೋಭಾವ, ಹಾಗೇ ಗೆಲ್ಲಬೇಕೆಂಬ ಹಠದ ಪ್ರತಿಭಾನ್ವಿತರಲ್ಲಿ ಅಡಗಿದೆ. ಇದು ಟಿ20 ಫಾರ್ಮೆಟ್​ಗೆ ಬೇಕಾದ ಬೆಸ್ಟ್ ಕ್ವಾಲಿಟಿ ಕೂಡ ಹೌದು. ಈ ಗುಣ ಕೊಹ್ಲಿಯಲ್ಲಿದ್ದರೂ, ಬ್ಯಾಟಿಂಗ್ ಖದರ್, ಆನ್​ಫೀಲ್ಡ್​ನ ಉತ್ಸಾಹ ಮೊದಲಿನಷ್ಟಿಲ್ಲ. ಇದು ಮುಂದಿನ ದಿನಗಳಲ್ಲಿ ಕೊಹ್ಲಿಗೆ ಕಂಟಕವೇ ಆಗಲಿದೆ.

ಒಟ್ಟಿನಲ್ಲಿ ಟೀಮ್ ಇಂಡಿಯಾದಲ್ಲಿ ಯಾರ ಸ್ಥಾನವೂ ಭದ್ರವಾಗಿಲ್ಲ. ಸಿಕ್ಕ ಅವಕಾಶವನ್ನ ಸರಿಯಾಗಿ ಬಳಸಿಕೊಂಡ್ರೆ ಮಾತ್ರ ತಂಡದಲ್ಲಿ ಉಳಿಗಾಲ. ಇಲ್ಲ ಅಂದ್ರೆ ತೆರೆಮರೆಗೆ ಸರಿಯೋದು ಗ್ಯಾರಂಟಿ.

News First Live Kannada


Leave a Reply

Your email address will not be published. Required fields are marked *