ವಿರಾಟ್ ಕೊಹ್ಲಿಯಿಂದ ಖಾಲಿಯಾಗಿರೋ ಭಾರತ ಟೆಸ್ಟ್ ತಂಡದ ನಾಯಕತ್ವ ಯಾರಿಗೆ ನೀಡಬೇಕು ಎಂಬ ಚರ್ಚೆ ಜೋರಾಗಿದೆ. ಇದರ ನಡುವೆ ಹಲವರು ರೋಹಿತ್ ಶರ್ಮಾಗೆ ಟೆಸ್ಟ್ ತಂಡದ ನಾಯಕತ್ವ ನೀಡಬೇಕೆಂದು ಆಗ್ರಹಿಸಿದ್ದಾರೆ. ಈ ಸಾಲಿಗೆ ಮೊಹಮ್ಮದ್ ಅಝರುದ್ದೀನ್ ಸೇರ್ಪಡೆಯಾಗಿದ್ದಾರೆ.
ಹೌದು, ಕೊಹ್ಲಿ ರಾಜೀನಾಮೆ ಬಳಿಕ ತೆರವಾಗಿರೋ ಟೀಂ ಇಂಡಿಯಾ ಟೆಸ್ಟ್ ಕ್ಯಾಪ್ಟನ್ ಸ್ಥಾನಕ್ಕೆ ರೋಹಿತ್ ಶರ್ಮಾ ಆಯ್ಕೆಯಾಗಲಿ ಎಂದು ಮಾಜಿ ನಾಯಕ ಮೊಹಮ್ಮದ್ ಅಝರುದ್ದೀನ್ ಸಲಹೆ ನೀಡಿದ್ದಾರೆ. ಈ ಸಂಬಂಧ ಮಾತಾಡಿದ ಅಝರುದ್ದೀನ್, ಎಲ್ಲಾ ಮಾದರಿ ಕ್ರಿಕೆಟ್ನಲ್ಲೂ ರೋಹಿತ್ ನಂ.1 ಆಟಗಾರ. ಯಾವುದೇ ಕಾರಣಕ್ಕೂ ಅನುಭವ ಇಲ್ಲದ ಆಟಗಾರರನ್ನು ಆಯ್ಕೆ ಮಾಡಬೇಡಿ. ಬದಲಿಗೆ 5-6 ವರ್ಷ ಅನುಭವ ಇರೋ ರೋಹಿತ್ಗೆ ಈ ಸ್ಥಾನ ಕೊಡಿ ಎಂದಿದ್ದಾರೆ.
ರೋಹಿತ್ ಶರ್ಮಾ ಅತ್ಯುತ್ತಮ ಆಟಗಾರ. ಅವರು ಅತ್ಯುತ್ತಮ ನಾಯಕ ಕೂಡ ಆಗಬಲ್ಲರು. ಮುಂದಿನ ಎರಡು ಅಥವಾ ಮೂರು ವರ್ಷಗಳ ಕಾಲ ರೋಹಿತ್ ಕ್ರಿಕೆಟ್ ಆಡಬಹುದು. ಇದಕ್ಕಿಂತಲೂ ಹೆಚ್ಚಿನ ಸಮಯ ಕ್ರಿಕೆಟ್ ಆಡೋದಾದ್ರೆ ರೋಹಿತ್ಗೆ ಫಿಟ್ನೆಸ್ ಅವಶ್ಯಕ ಎಂದರು.