ಟೆಸ್ಟ್​ ಕ್ರಿಕೆಟ್​ಗೆ ರೋಹಿತ್​ ಶರ್ಮಾರನ್ನ ಅನ್​ಫಿಟ್ ಎಂದೇ ಟೀಕಿಸಿದ್ದರು. ಮಧ್ಯಮ ಕ್ರಮಾಂಕದಲ್ಲಿ ನೀಡಿದ ಅಸ್ಥಿರ ಪ್ರದರ್ಶನ ತಂಡದಿಂದಲೇ ಹೊರ ಬೀಳುವಂತೆ ಮಾಡಿತ್ತು. ಆದ್ರೆ, ಮತ್ತೆ ಟೆಸ್ಟ್​ ತಂಡಕ್ಕೆ ಕಮ್​​ಬ್ಯಾಕ್ ಮಾಡಿರುವ ಹಿಟ್​​ಮ್ಯಾನ್​​​​​​​​​​​, ಆರಂಭಿಕನಾಗಿ ಕಮಾಲ್ ಮಾಡ್ತಿದ್ದಾರೆ. ಇದಕ್ಕೆಲ್ಲಾ ಕಾರಣ ಈ ಇಬ್ಬರು.

ರೋಹಿತ್ ಶರ್ಮಾ, ಪ್ರಸಕ್ತ ಟೀಮ್ ಇಂಡಿಯಾದ ಗ್ರೇಟೆಸ್ಟ್ ಕ್ರಿಕೆಟರ್. ವಿಶ್ವ ಕ್ರಿಕೆಟ್​ನಲ್ಲಿ ಹಿಟ್​ಮ್ಯಾನ್ ಅಂತಾನೇ ಕರೆಸಿಕೊಳ್ಳುವ ರೋಹಿತ್, ಏಕದಿನ, ಟಿ20 ಫಾರ್ಮೆಟ್​ನ ಬೆಸ್ಟ್ ಪ್ಲೇಯರ್​. ಶಾರ್ಟ್​​ ಫಾರ್ಮೆಟ್​ ಕ್ರಿಕೆಟ್​​​​​ಗೆ ಹೇಳಿ ಮಾಡಿಸಿದ ಆಟಗಾರನಾಗಿರುವ ರೋಹಿತ್, ಏಕದಿನ ಹಾಗೂ ಟಿ20 ಕ್ರಿಕೆಟ್​ನಲ್ಲಿ ಯಾರು ಮಾಡದಂತಹ ಸಾಧನೆಯನ್ನೇ ಮಾಡಿದ್ದಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್, ಒಡಿಐನಲ್ಲಿ ಸಿಡಿಸಿರುವ ಮೂರು ದ್ವಿಶತಕಗಳು.

ಇದೇ ರೀತಿ ಟಿ20 ಕ್ರಿಕೆಟ್​​ನಲ್ಲೂ 4 ಶತಕ ಸಿಡಿಸಿರುವ ರೋಹಿತ್, ವೈಟ್​ಬಾಲ್ ಕ್ರಿಕೆಟ್​ನಲ್ಲಿ ಸ್ಪೆಷಲಿಸ್ಟ್ ಬ್ಯಾಟ್ಸ್​ಮನ್​ ಆಗಿ ವಿಶ್ವ ಕ್ರಿಕೆಟ್​ನಲ್ಲಿ ಮಿಂಚುತ್ತಿದ್ದಾರೆ. ಹೀಗೆ ಆರಂಭದಲ್ಲಿ ಏಕದಿನ, ಟಿ20 ಕ್ರಿಕೆಟ್​​ನಲ್ಲಿ ಮಿಂಚುತ್ತಿದ್ದ ರೋಹಿತ್​ನ ಟೆಸ್ಟ್​​ ಕ್ರಿಕೆಟ್ ಕರಿಯರ್ ಮಾತ್ರ ಮಸುಕಾಗಿತ್ತು. ಮಧ್ಯಮ ಕ್ರಮಾಂಕದಲ್ಲಿ ವೈಫಲ್ಯ ಅನುಭವಿಸಿದ್ದ ರೋಹಿತ್​ ರನ್ನ, 2018ರ ಮೆಲ್ಬೋರ್ನ್ ಟೆಸ್ಟ್​ ಬಳಿಕ ತಂಡದಿಂದಲೇ ಕೈ ಬಿಡಲಾಗಿತ್ತು.

ಸುಲಭವಾಗಿರಲಿಲ್ಲ ರೋಹಿತ್ ಟೆಸ್ಟ್ ಕಮ್​ಬ್ಯಾಕ್
ರೋಹಿತ್ ಕಮ್​ಬ್ಯಾಕ್​ಗೆ ಕಾರಣ ಕೊಹ್ಲಿ, ಶಾಸ್ತ್ರಿ

ರೋಹಿತ್ ಶರ್ಮಾರನ್ನ ಟೆಸ್ಟ್​ ತಂಡದಿಂದ ಕೈ ಬಿಟ್ಟಾಗ ಮತ್ತೆ ತಂಡಕ್ಕೆ ಕಮ್​​ಬ್ಯಾಕ್ ಮಾಡೋದು ಕಷ್ಟ ಸಾಧ್ಯವೇ ಎಂದೇ ಹೇಳಲಾಗಿತ್ತು. ಮಧ್ಯಮ ಕ್ರಮಾಂಕದ ಅಸ್ಥಿರ ಪ್ರದರ್ಶನದ ಕಾರಣ ಒಂದಾದರೆ, ಆ ವೇಳೆ ತಂಡಲ್ಲಿದ್ದ ರಾಹುಲ್ ಕನ್ಸಿಸ್ಟಿನ್ಸಿ ಪ್ರದರ್ಶನ ಇನ್ನೊಂದು ಅಡ್ಡಲಾಗಿತ್ತು.

ವಿಂಡೀಸ್ ಸರಣಿಯಲ್ಲಿ ವೈಫಲ್ಯ ಅನುಭವಿಸಿದ ರಾಹುಲ್​ಗೆ ಬಳಿಕ ಗೇಟ್​ ಪಾಸ್​ ನೀಡಲಾಯ್ತು. ಈ ವೇಳೆ ಆರಂಭಿಕರಾಗಿ ಮ್ಯಾನೇಜ್​​ಮೆಂಟ್​ನ ಮೊದಲ ಆಯ್ಕೆ ಪೃಥ್ವಿ ಶಾ ಹಾಗೂ ಮಯಾಂಕ್ ಆಗಿದ್ದರು. ಆದ್ರೆ, ವೆಸ್ಟ್ ಇಂಡೀಸ್ ಸರಣಿ ಬಳಿಕ ನಿಷೇಧಿತ ಔಷಧಿ ಸೇವಿಸಿ 6 ತಿಂಗಳ ಅಮಾನತುಗೆ ಒಳಗಾಗಿದ್ದ ಪೃಥ್ವಿ ಸ್ಥಾನಕ್ಕೆ ಓರ್ವ ಆರಂಭಿಕನ ಅವಶ್ಯಕತೆ ಇತ್ತು. ಇದೇ ವೇಳೆ ಮತ್ತೆ ಫಾರ್ಮ್​ಗೆ ಮರಳಿದಿದ್ದ ಕೆ.ಎಲ್.ರಾಹುಲ್ ತಂಡಕ್ಕೆ ಕಮ್​​ಬ್ಯಾಕ್ ಮಾಡ್ತಾರೆ ಅಂತಾನೇ ಹೇಳಲಾಗ್ತಿತ್ತು. ಈ ವೇಳೆ ಅಚ್ಚರಿಯಂತೆ ತಂಡಕ್ಕೆ ಆಗಮಿಸಿದ್ದು ಹಿಟ್​ಮ್ಯಾನ್​ ರೋಹಿತ್ ಶರ್ಮಾ. ಇದಕ್ಕೆ ಕಾರಣ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್​ ಕೊಹ್ಲಿ ಹಾಗೂ ಕೋಚ್ ರವಿಶಾಸ್ತ್ರಿ.. ಇದನ್ನ ಸ್ವತಃ ಮಾಜಿ ಸೆಲೆಕ್ಟರ್ ಎಮ್​.ಎಸ್​.ಕೆ. ಪ್ರಸಾದ್ ಬಿಚ್ಚಿಟ್ಟಿದ್ದಾರೆ.

ಹೌದು, ಭಾರತದಲ್ಲಿ ನಡೆಯ ಬೇಕಿದ್ದ ಸೌತ್​ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ತಂಡದ ಆಯ್ಕೆ ಮಾಡಬೇಕಿತ್ತು. ಈ ವೇಳೆ ದೇಶಿ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಯುವ ಆಟಗಾರರಾದ ಪ್ರಿಯಾಂಕ್ ಪಂಚಾಲ್, ಅಭಿಮನ್ಯು ಈಶ್ವರನ್ ಹೆಸರು ಚರ್ಚೆಗೆ ಬಂದಿತ್ತಂತೆ. ಆದ್ರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುವ ಆತ್ಮವಿಶ್ವಾಸ ಅವರಲ್ಲಿರದ ಕಾರಣ, ಕೋಚ್ ರವಿಶಾಸ್ತ್ರಿ, ಕ್ಯಾಪ್ಟನ್ ವಿರಾಟ್ ಕೊಹ್ಲಿ, ರೋಹಿತ್​​ ಶರ್ಮಾರನ್ನೇ ಟೆಸ್ಟ್​ ತಂಡಕ್ಕೆ ಕರೆತಂದರಂತೆ. ಇದು ನಾವಲ್ಲ.. ಅಂದಿನ ಸೆಲೆಕ್ಷನ್​ ಕಮಿಟಿ ಚೇರ್​ಮನ್​ ಎಮ್​ಎಸ್​ಕೆ ಪ್ರಸಾದ್ ಹೇಳಿದ ಮಾತು.

ರೋಹಿತ್​​ ಮಣೆಹಾಕುವ ಹಿಂದಿತ್ತು ಬಲವಾದ ಕಾರಣ
ಸೌತ್​ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಗೆ ವಿರಾಟ್​ ಕೊಹ್ಲಿ ಹಾಗೂ ಶಾಸ್ತ್ರಿ ಮಣೆಹಾಕಲು ಬಲವಾದ ಕಾರಣವಿತ್ತು. 2019ರ ಏಕದಿನ ವಿಶ್ವ ಕಪ್​ನಲ್ಲಿ ಓಪನರ್ ಆಗಿ ರೋಹಿತ್​​ ಕಂಡಿದ್ದ ಸಕ್ಸಸ್​ ಕೋಚ್​-ಕ್ಯಾಪ್ಟನ್​ ಆತ್ಮ ವಿಶ್ವಾಸಕ್ಕೆ ಕಾರಣವಾಗಿತ್ತು. ಅತ್ತ ಹಿಟ್​ಮ್ಯಾನ್​ ಕೂಡ ಹೊಸ ಸವಾಲು ಸ್ವೀಕರಿಸಲು ಸಜ್ಜಾಗಿ ನಿಂತಿದ್ದರು. ಆದ್ರೆ, ಈ ವೇಳೆ ಪರ-ವಿರೋಧದ ಚರ್ಚೆಯೂ ಎದುರಾಗಿತ್ತು. ಆದ್ರೆ, ತಮ್ಮ ಆಯ್ಕೆಯನ್ನ ಮೊದಲ ಸರಣಿಯಲ್ಲೇ ಹಿಟ್​​ಮ್ಯಾನ್​ ಫ್ರೂವ್​ ಮಾಡಿದ್ರು.

ಆರಂಭಿಕನಾಗಿ ಮೊದಲ ಸರಣಿಯಲ್ಲೇ ಅಬ್ಬರ
ಪರ-ವಿರೋದದ ಚರ್ಚೆಯ ನಡುವೆ ಟೆಸ್ಟ್ ಓಪನಿಂಗ್ ಚಾಲೆಂಜ್ ಸ್ವೀಕರಿಸಿದ್ದ ರೋಹಿತ್, ಆರಂಭಿಕನಾಗಿ ಆಡಿದ ಮೊದಲ ಪಂದ್ಯದ ಎರಡೂ ಇನ್ನಿಂಗ್ಸ್​ನಲ್ಲೂ ಶತಕ ಸಿಡಿಸಿ ಅಬ್ಬರಿಸಿದ್ರು. ಅಷ್ಟೇ ಅಲ್ಲ, ಮೂರನೇ ಟೆಸ್ಟ್​ನಲ್ಲಿ ದ್ವಿಶತಕ ಸಿಡಿಸಿದ ಹಿಟ್​​ಮ್ಯಾನ್​, ಟೆಸ್ಟ್ ಓಪನರ್ ಸ್ಲಾಟ್​ನಲ್ಲಿ ತಾನೇನು ಅನ್ನೋದನ್ನ ಫ್ರೂವ್​ ಮಾಡಿ ತೋರಿಸಿದ್ರು. ಜೊತೆಗೆ ನಾಯಕ ವಿರಾಟ್ ಹಾಗೂ ಕೋಚ್​ ಶಾಸ್ತ್ರಿ ಇಟ್ಟ ನಂಬಿಕೆಯನ್ನೂ ಉಳಿಸಿಕೊಂಡರು.

ಟೆಸ್ಟ್ ಆರಂಭಿಕನಾಗಿ ರೋಹಿತ್
ಟೆಸ್ಟ್ ಮಾದರಿಯಲ್ಲಿ ಆರಂಭಿಕನಾಗಿ 17 ಇನ್ನಿಂಗ್ಸ್​ನಲ್ಲಿ ಬ್ಯಾಟ್ ಬೀಸಿರುವ ರೋಹಿತ್, 64.37ರ ಸರಾಸರಿಯಲ್ಲಿ 1030 ರನ್ ಗಳಿಸಿದ್ದಾರೆ. ಇದರಲ್ಲಿ 4 ಶತಕ, 2 ಅರ್ಧಶತಕಗಳ ಇನ್ನಿಂಗ್ಸ್​ಗಳೂ ಒಳಗೊಂಡಿವೆ.

ಕಳೆದೆರಡು ವರ್ಷಗಳಿಂದ ಟೆಸ್ಟ್​ ಆರಂಭಿಕನಾಗಿ ಕಮಾಲ್ ಮಾಡ್ತಿರುವ ರೋಹಿತ್, ಟೀಮ್ ಇಂಡಿಯಾದ ಟೆಸ್ಟ್ ತಂಡದ ಪ್ರಮುಖ ಶಕ್ತಿಯಾಗಿದ್ದಾರೆ. ಇನ್ನು ಸ್ವದೇಶದಲ್ಲಿ ಅಬ್ಬರಿಸಿದ್ದ ರೋಹಿತ್, ಇಂಗ್ಲೆಂಡ್​ನಲ್ಲಿ ಅಬ್ಬರಿಸುತ್ತಾರಾ ಎಂಬ ಪ್ರಶ್ನೆ ಮೂಡಿತ್ತು. ಆದ್ರೀಗ. ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​​ ಫೈನಲ್​​ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲೇ ಮಿಂಚುವ ಭರವಸೆ ಮೂಡಿಸಿದ್ದಾರೆ. ಕೇವಲ 34 ರನ್​ಗಳಿಸಿ ಔಟಾದ್ರೂ, ಕಠಿಣ ಪಿಚ್​ನಲ್ಲಿ ಬ್ಯಾಟಿಂಗ್​ ನಡೆಸಿದ ರೀತಿ ಅಮೋಘವಾಗಿತ್ತು.

ಒಟ್ಟಿನಲ್ಲಿ ಅಂದು ಮಧ್ಯಮ ಕ್ರಮಾಂಕದಲ್ಲಿ ಆಡಿ ತಂಡದಿಂದ ಹೊರಗುಳಿದಿದ್ದ ರೋಹಿತ್, ಇಂದು ಅರಂಭಿಕನಾಗಿ ಮಿಂಚುತ್ತಿದ್ದಾರೆ. ಟೆಸ್ಟ್​ ತಂಡದಲ್ಲಿ ಉಳಿದಿದ್ದಾರೆ ಎಂದ್ರೆ, ಅದಕ್ಕೆ ಕಾರಣ ವಿರಾಟ್ ಕೊಹ್ಲಿ ಆ್ಯಂಡ್ ಶಾಸ್ತ್ರಿಯೇ ಆಗಿದ್ದಾರೆ. ಇದರ ಜೊತೆ ರೋಹಿತ್ ಶರ್ಮಾರ ಕಠಿಣ ಪರಿಶ್ರಮವನ್ನೂ ಮರೆಯುವಂತಿಲ್ಲ.

The post ರೋಹಿತ್ ಕಮ್​ಬ್ಯಾಕ್​ಗೆ ಕಾರಣ ಕೊಹ್ಲಿ, ಶಾಸ್ತ್ರಿ! ಇದರ ಹಿಂದಿತ್ತು ಬಲವಾದ ಕಾರಣ appeared first on News First Kannada.

Source: newsfirstlive.com

Source link