ಲಂಕಾ ಪ್ರವಾಸದಲ್ಲಿ ಪಾರ್ಟ್​​ ಟೈಮ್​ ಕೋಚ್​​ ಆಗಿ ಕಾಣಿಸಿಕೊಂಡಿರುವ ದ್ರಾವಿಡ್,​​​ ಶೀಘ್ರದಲ್ಲೇ ಫುಲ್​ ಟೈಮ್​ ಜವಾಬ್ಧಾರಿ ಹೊರಲಿದ್ದಾರೆ. ಹಾಗಾದ್ರೆ ಹಾಲಿ ಕೋಚ್​​ ರವಿ ಶಾಸ್ತ್ರಿ ತಲೆದಂಡವಾಗುತ್ತಾ? ಮಾರ್ಗದರ್ಶಕನ ಜವಾಬ್ದಾರಿ ಹೊರಲು ದ್ರಾವಿಡ್​​ ರೆಡಿನಾ..? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಸೀಮಿತ ಓವರ್​​ಗಳ ಸರಣಿಗಾಗಿ ಶಿಖರ್​ ಧವನ್​ ನೇತೃತ್ವದ ಟೀಮ್​ ಇಂಡಿಯಾ, ಲಂಕನ್ನರ ನಾಡಿದೆ ಕಾಲಿಟ್ಟಿದೆ. ಮುಂಬೈನಲ್ಲಿ ಇಷ್ಟು ದಿನ ಕ್ವಾರಂಟೀನ್​ಗೆ ಒಳಗಾಗಿದ್ದ ಆಟಗಾರರು ನಿನ್ನೆ ಶ್ರೀಲಂಕಾಗೆ ತೆರಳಿದ್ದಾರೆ. ಶಿಖರ್​ ಧವನ್​ ನೇತೃತ್ವದ ಯುವ ಪಡೆಯೊಂದಿಗೆ ನಿರೀಕ್ಷೆಯಂತೆ ಕೋಚ್​ ಆಗಿ ಕನ್ನಡಿಗ, ಮಾಜಿ ಕ್ರಿಕೆಟಿಗ ರಾಹುಲ್​ ದ್ರಾವಿಡ್​​ ಕೂಡ ಪ್ರಯಾಣ ಬೆಳೆಸಿದ್ದಾರೆ. ಇದರೊಂದಿಗೆ ದ್ರಾವಿಡ್​ ವೃತ್ತಿ ಬದುಕಿನ ಹೊಸ ಅಧ್ಯಾಯವೂ ಆರಂಭವಾಗಿದೆ.

ದ್ರಾವಿಡ್​​ ಇನ್ಮುಂದೆ ಟೀಮ್​ ಇಂಡಿಯಾದ ಖಾಯಂ ಮಾಸ್ಟರ್​​?
ಪಾರ್ಟ್​​ ಟೈಮ್​ ಕೋಚ್​ ಆಗಿ ರಾಹುಲ್​ ದ್ರಾವಿಡ್​​ ಶ್ರೀಲಂಕಾ ಫ್ಲೈಟ್​​ ಹತ್ತಿದ್ದೇ ತಡ, ಭವಿಷ್ಯದ ಕೋಚ್​​ ಬಗೆಗಿನ ಚರ್ಚೆಗಳು ಗರಿಗೆದರಿವೆ. ಸದ್ಯ ಶ್ರೀಲಂಕಾ ಪ್ರವಾಸಕ್ಕೆ ಸೀಮಿತವಾಗಿ ಕೋಚ್​ ಹುದ್ದೆ ಅಲಂಕರಿಸಿರುವ ಕನ್ನಡಿಗ ಮುಂದೆ ಭಾರತದ ಖಾಯಂ ಹೆಡ್​ ಕೋಚ್​ ಆಗಲಿದ್ದಾರೆ ಅನ್ನೋ ಸುದ್ದಿಗಳು ಕೇಳಿ ಬರ್ತಿವೆ.

ಹೆಡ್​​​ ಕೋಚ್​ ಹುದ್ದೆಯಿಂದ ರವಿ ಶಾಸ್ತ್ರಿ ತಲೆದಂಡ?
ಸದ್ಯ 2ನೇ ಅವಧಿಗೆ ಹೆಡ್​​ ಕೋಚ್​ ಆಗಿ ಕಾರ್ಯ ನಿರ್ವಹಿಸ್ತಾ ಇರೋ ರವಿ ಶಾಸ್ತ್ರಿಯ ಅವಧಿ ಮುಂಬರುವ ವಿಶ್ವಕಪ್​ ಟೂರ್ನಿಯ ಬಳಿಕ ಅಂತ್ಯವಾಗಲಿದೆ. ರವಿ ಶಾಸ್ತ್ರಿ ಮಾರ್ಗದರ್ಶನದಲ್ಲಿ ಟೀಮ್​ ಇಂಡಿಯಾ ಪ್ರಮುಖ ಸರಣಿಗಳನ್ನ ಜಯಿಸಿದ್ರೂ, ಐಸಿಸಿ ಟ್ರೋಫಿ ಗೆಲ್ಲುವಲ್ಲಿ ಎಡವಿದೆ. ಏಕದಿನ ವಿಶ್ವಕಪ್​ ಬಳಿಕ ಇದೀಗ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲೂ ಚಾಂಪಿಯನ್​ ಪಟ್ಟಕ್ಕೇರುವಲ್ಲಿ ಟೀಮ್​ ಇಂಡಿಯಾ ವಿಫಲವಾಗಿದೆ. ಹೀಗಾಗಿ ರವಿ ಶಾಸ್ತ್ರಿಯ ತಲೆದಂಡ ಬಹುತೇಕ ಖಚಿತ ಎನ್ನಲಾಗ್ತಿದೆ.

ಈ ಲೆಕ್ಕಾಚಾರಗಳೊಂದಿಗೆ ರಾಹುಲ್​ ದ್ರಾವಿಡ್​​ ನಡೆ ಕೂಡ, ಈ ವಾದಗಳಿಗೆ ಪುಷ್ಠಿ ನೀಡಿವೆ. ಈ ಹಿಂದೆ ಕುಟುಂಬಕ್ಕೆ ಸಮಯ ನೀಡಬೇಕೆಂಬ ಕಾರಣದಿಂದ ಕೋಚ್​ ಆಗಿ ಕಾರ್ಯ ನಿರ್ವಹಿಸಲ್ಲ ಎಂದಿದ್ದ ದ್ರಾವಿಡ್​​, ಇದೀಗ ಲಂಕಾ ಪ್ರವಾಸಕ್ಕೆ ತೆರಳಿದ್ದಾರೆ. ಇದರೊಂದಿಗೆ ವಿದೇಶಗಳಿಗೂ ತಂಡದೊಂದಿಗೆ ಪ್ರಯಾಣಿಸಲು ಸಿದ್ಧವಿರೋದನ್ನ ಪರೋಕ್ಷವಾಗಿ ತಿಳಿಸಿದ್ದಾರೆ. ಇದೆಲ್ಲದರೊಂದಿಗೆ ಆಟಗಾರನಾಗಿ, ಮಾರ್ಗದರ್ಶಕನಾಗಿ ದ್ರಾವಿಡ್​ಗಿರುವ ಅನುಭವ ಹಾಗೂ ಯಶಸ್ಸು ಕೂಡ, ದಿ ವಾಲ್​ಗೆ ಬೆಂಬಲವಾಗಿಯೇ ಇವೆ.

ಕಳೆದ ವರ್ಷ ಅನುಭವಿಗಳ ಅಲಭ್ಯತೆಯಲ್ಲಿ, ಇಂಜುರಿ ಕಾಟದ ನಡುವೆ ಟೀಮ್​ ಇಂಡಿಯಾ ಕಾಂಗರೂ ನಾಡಲ್ಲಿ ಐತಿಹಾಸಿಕ ಸಾಧನೆ ಮಾಡಿತ್ತು. ಅಂದು ಗೆಲುವಿಗೆ ಕಾರಣಕರ್ತರಾದ ಆಟಗಾರರು ಪಳಗಿದ್ದು ದ್ರಾವಿಡ್​​ ಗರಡಿಯಲ್ಲಿ. ನಿವೃತ್ತಿ ಬಳಿಕ ಕ್ರಿಕೆಟರ್​​ಗಳು ಬೇರೆ ವೃತ್ತಿಯನ್ನೋ, ವಿಶ್ರಾಂತಿಯನ್ನೂ ಬಯಸಿದ್ರೆ, ದ್ರಾವಿಡ್​​ ಆಯ್ದುಕೊಂಡಿದ್ದು ಭವಿಷ್ಯದ ಭಾರತ ಕಟ್ಟುವ ದಾರಿಯನ್ನ. ಅಂಡರ್​-19 ತಂಡದ ಕೋಚ್​​ ಆಗಿ ಎನ್​​.ಸಿ.ಎ ನಿರ್ದೇಶಕನಾಗಿ ದ್ರಾವಿಡ್​​ ಮಾಡಿರುವ ಕೆಲಸಗಳು ಭವಿಷ್ಯದ ಟೀಮ್​ ಇಂಡಿಯಾಗೆ ಭದ್ರ ಅಡಿಪಾಯ ಹಾಕಿದೆ.

ನಿವೃತ್ತಿ ಬಳಿಕ ರಾಹುಲ್​ ದ್ರಾವಿಡ್​​
2014-15 ಮೆಂಟರ್​, ರಾಜಸ್ಥಾನ್​ ರಾಯಲ್ಸ್​
2016-17 ಮೆಂಟರ್​, ಡೆಲ್ಲಿ ಡೇರ್​​ಡೆವಿಲ್ಸ್​​
2016-18 ಕೋಚ್​​, ಭಾರತ U-19
2019 ನಿರ್ದೇಶಕ, NCA

2014-15ರ ಐಪಿಎಲ್​ ಟೂರ್ನಿಯಲ್ಲಿ ರಾಜಸ್ಥಾನ್​ ರಾಯಲ್ಸ್​​ ತಂಡದ ಮೆಂಟರ್​​ ಆಗಿ ಕಾರ್ಯನಿರ್ವಹಿಸಿದ್ದ ದ್ರಾವಿಡ್​​, 2016-17ರಲ್ಲಿ ಡೆಲ್ಲಿ ಡೇರ್​​ ಡೆವಿಲ್ಸ್​ ತಂಡದ ಮಾರ್ಗದರ್ಶಕರಾಗಿದ್ರು. 2016ರಲ್ಲಿ ಟೀಮ್​ ಇಂಡಿಯಾ ಅಂಡರ್​​ 19 ಕೋಚ್​​ ಆಗಿ ವಿಶ್ವಕಪ್​ ಟೂರ್ನಿಯಲ್ಲಿ ತಂಡವನ್ನ ರನ್ನರ್​ ಅಪ್​ ​ಪಟ್ಟಕ್ಕೇರಿಸಿದ್ದ ದ್ರಾವಿಡ್​​, 2018ರಲ್ಲಿ ಚಾಂಪಿಯನ್​ ಕಿರೀಟದ ಗಿಫ್ಟ್​ ನೀಡಿದ್ರು. ಸದ್ಯ ನ್ಯಾಷನಲ್​ ಕ್ರಿಕೆಟ್​ ಅಕಾಡೆಮಿಯ ನಿರ್ದೇಶಕನಾಗಿರುವ ಅವರು ಇದೀಗ ಲಂಕಾ ಸರಣಿಯಲ್ಲಿ ಧವನ್​ ಪಡೆಗೆ ಮಾರ್ಗದರ್ಶಕರು.

ರವಿಶಾಸ್ತ್ರಿ ನಿರ್ಗಮನದ ಬಳಿಕ ದ್ರಾವಿಡ್​ ಮಾರ್ಗದರ್ಶನ..?
ಇದೆಲ್ಲದರೊಂದಿಗೆ ಬಹು ಕಾಲದ ಗೆಳೆಯ ಸೌರವ್​ ಗಂಗೂಲಿ ಇದೀಗ ಬಿಸಿಸಿಐ ಅಧ್ಯಕ್ಷ ಹುದ್ದೆಯಲ್ಲಿರೋದು ಕೂಡ ದ್ರಾವಿಡ್​​ಗೆ ಬೆಂಬಲವಾಗಿಯೇ ಇದೆ. ಎಲ್ಲದಕ್ಕಿಂತ ಹೆಚ್ಚಾಗಿ ಈಗಾಗಲೇ ಎರಡು ಅವಧಿಗೆ ಕೋಚ್​​ ಆಗಿರುವ ಶಾಸ್ತ್ರಿಯೇ, ಕೋಚ್​ ರೇಸ್​​ನಿಂದ ಹಿಂದೆ ಸರಿಯೋ ಸಾಧ್ಯತೆಯಿದೆ ಎಂದು ಹೇಳಲಾಗ್ತಿದೆ.

ಒಟ್ಟಿನಲ್ಲಿ ಈವರೆಗೆ ಭವಿಷ್ಯದ ಟೀಮ್​ ಇಂಡಿಯಾ ಕಟ್ಟುವಲ್ಲಿ ಶ್ರಮಿಸಿದ್ದ ದ್ರಾವಿಡ್​​, ಕೊನೆಗೂ ಕೋಚ್​​ ಹುದ್ದೆ ಅಲಂಕರಿಸಿದ್ದಾರೆ. ಸದ್ಯ ಪಾರ್ಟ್​ ಟೈಮ್​ ಕೋಚ್​​ ಆಗಿರೋ ದ್ರಾವಿಡ್​​, ಟೀಮ್​ ಇಂಡಿಯಾದ ಫುಲ್​ ಟೈಮ್​ ಕೋಚ್​ ಆಗಲಿ ಅನ್ನೋದು ಅದೆಷ್ಟೋ ಅಭಿಮಾನಿಗಳ ಕನಸಾಗಿದೆ. ಆದ್ರೆ ಮಾರ್ಗದರ್ಶಕನ ಜವಾಬ್ಧಾರಿ ಹೊರಲು ವಾಲ್​ ಸಿದ್ಧರಿದ್ದಾರಾ..? ಅನ್ನೋದೇ ಈಗ ಕುತೂಹಲ ಮೂಡಿಸಿರುವ ಪ್ರಶ್ನೆಯಾಗಿದೆ.

The post ಲಂಕಾ ನಾಡಲ್ಲಿ ಯುವ ತಂಡಕ್ಕೆ ದ್ರಾವಿಡ್​​ ಮಾಸ್ಟರ್ -ಭಾರತದ ಖಾಯಂ ಹೆಡ್​​ ಕೋಚ್​ ಆಗ್ತಾರಾ ದಿ ವಾಲ್​? appeared first on News First Kannada.

Source: newsfirstlive.com

Source link