ವಿಂಡೀಸ್ ಸರಣಿಯಲ್ಲಿ ನಿರೀಕ್ಷೆ ಹುಟ್ಟು ಹಾಕಿ ಹುಸಿಗೊಳಿಸಿದ ಇಶಾನ್ ಕಿಶನ್ರನ್ನ ಲಂಕಾ ಸರಣಿಗೂ ಆಯ್ಕೆ ಮಾಡಿದ್ದಕ್ಕೆ ಇದೀಗ ಆಕ್ರೋಶ ವ್ಯಕ್ತವಾಗಿದೆ. ದೇಶಿ ಕ್ರಿಕೆಟ್ನಲ್ಲಿ ರನ್ ಹೊಳೆ ಹರಿಸಿದ್ದ ಋತುರಾಜ್ ಇದ್ದರೂ ಇಶಾನ್ಗೆ ಪ್ರಾಮುಖ್ಯತೆ ನೀಡಿದ್ದು ಕ್ರಿಕೆಟ್ ತಜ್ಞರ ಅಸಮಾಧಾನಕ್ಕೆ ಕಾರಣವಾಗಿದೆ. ಹಾಗಿದ್ರೂ, ಮ್ಯಾನೇಜ್ಮೆಂಟ್ ಬೆಂಬಲಕ್ಕೆ ನಿಂತಿದೆ.
ವೆಸ್ಟ್ ಇಂಡೀಸ್ ಸರಣಿ ಮುಗಿದ ಬೆನ್ನಲ್ಲೇ ಟೀಮ್ ಇಂಡಿಯಾ, ಶ್ರೀಲಂಕಾ ಎದುರಿನ ಚುಟುಕು ಕದನಕ್ಕೆ ಸಜ್ಜಾಗ್ತಿದೆ. ಸಿಂಹಳೀಯರ ವಿರುದ್ಧ ಘರ್ಜಿಸಿ, ಮತ್ತೊಂದು ಸರಣಿಗೆ ಗೆಲುವಿಗೆ ಮುತ್ತಿಕ್ಕಲು ಭಾರೀ ಸಿದ್ಧತೆ ನಡೆಸಿದೆ. ಇದರ ನಡುವೆಯೇ ವಿಂಡೀಸ್ ಸರಣಿಯಲ್ಲಿ ಅತ್ಯಂತ ಕೆಟ್ಟ ಪ್ರದರ್ಶನ ನೀಡಿದ್ದ ಇಶಾನ್ ಕಿಶನ್ಗೆ ಮಣೆ ಹಾಕಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಇಶಾನ್ ಆಯ್ಕೆಯ ಹಿಂದಿರೋ ಶಕ್ತಿ ಯಾವುದು?
ಫೆಲ್ಯೂರ್ ಆದಾಗ ವಿಶ್ರಾಂತಿ ನೀಡದೆ ಆಯ್ಕೆ ಮಾಡಿದ್ದು ಯಾಕೆ..? ವೈಫಲ್ಯ ಅನುಭವಿಸಿದರೂ ಇಷ್ಟರ ಮಟ್ಟಿಗೆ ಪ್ರಾಶಸ್ತ್ಯ ನೀಡ್ತಿರೋದು ಸರಿಯೇ? ಎಂಬ ಪ್ರಶ್ನೆಗಳನ್ನ ಮಾಜಿ ಕ್ರಿಕೆಟರ್ಸ್ ಕೇಳ್ತಿದ್ದಾರೆ. ಇಷ್ಟೆಲ್ಲಾ, ಟೀಕೆಗಳು ಕೇಳಿ ಬರೋದು ತಿಳಿದಿದ್ರೂ, ದ್ವೀಪ ರಾಷ್ಟ್ರದ ಸರಣಿಗೆ ಇಶಾನ್ ಕಿಶನ್ರನ್ನ ಆಯ್ಕೆ ಮಾಡಲಾಗಿದೆ. ಇದಕ್ಕೆ ಕಾರಣವಾಗಿದ್ದು, ಹೆಡ್ ಕೋಚ್ ರಾಹುಲ್ ದ್ರಾವಿಡ್ ಕೃಪಾಕಟಾಕ್ಷ.
ಟಿ20 ವಿಶ್ವಕಪ್ ಸಂಯೋಜನೆಗೆ ದ್ರಾವಿಡ್ ಪ್ಲಾನ್..!
ಹೌದು..! ಅಕ್ಟೋಬರ್ನಲ್ಲಿ ನಡೆಯುವ ಟಿ20 ವಿಶ್ವಕಪ್ಗೆ ಸಿದ್ಧತೆಯ ಭಾಗವಾಗಿ ಇಶಾನ್ ಆಯ್ಕೆಗೆ ದ್ರಾವಿಡ್ ಒಲವು ತೋರುತ್ತಿದ್ದಾರಂತೆ. T20 ವಿಶ್ವಕಪ್ ಶೋಪೀಸ್ ಈವೆಂಟ್ಗಾಗಿ ತಂಡವನ್ನ ಸಂಯೋಜಿಸಲು ಮ್ಯಾನೇಜ್ಮೆಂಟ್ ಸಿದ್ಧತೆ ನಡೆಸ್ತಿದೆ. ಅದರ ಸಲುವಾಗಿಯೇ ಹೋಮ್ ಅಸೈನ್ಮೆಂಟ್ನಲ್ಲಿ ಚಾನ್ಸ್ ನೀಡಲಾಗ್ತಿದೆ. ಇದು ಮ್ಯಾನೇಜ್ಮೆಂಟ್ ಸ್ಪಷ್ಟವಾದ ಪ್ಲಾನ್ ಅಂತೆ.
ಇಶಾನ್ ಕಿಶನ್ ಟೀಕೆಗೆ ಗುರಿಯಾಗಿರುವ ಬಗ್ಗೆ ಮತ್ತು ಲಂಕಾ ಸರಣಿಗೆ ಆಯ್ಕೆ ಮಾಡಲಾದ ಕುರಿತು ಸ್ವತಃ ದ್ರಾವಿಡ್ ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ಆಯ್ಕೆಯನ್ನೂ ಸಮರ್ಥನೆ ಮಾಡಿಕೊಂಡಿದ್ದಾರೆ. ವಿಂಡೀಸ್ ವಿರುದ್ಧ ಇಶಾನ್ ತಮ್ಮ ಮೇಲಿರುವ ನಿರೀಕ್ಷೆಗಳನ್ನು ಹುಸಿಗೊಳಿಸಿದ್ರೂ, ಯುವ ಆಟಗಾರನ ಬೆನ್ನಿಗೆ ದ್ರಾವಿಡ್ ನಿಂತಿದ್ದಾರೆ.
‘ಸಾಮರ್ಥ್ಯದ ಮೇಲೆ ಇಶಾನ್ ಆಯ್ಕೆ’
‘ಸಾಮರ್ಥ್ಯ ಮತ್ತು ಪ್ರದರ್ಶನದ ಮೇಲೆ ಇಶಾನ್ರನ್ನ ಆಯ್ಕೆ ಮಾಡಲಾಗಿದೆ. ಒಂದು ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ಬರಲಿಲ್ಲ ಎಂದ ಮಾತ್ರಕ್ಕೆ ಅವರ ಆಟವನ್ನ ನಿರ್ಣಯಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ಆಟದಲ್ಲಿ ಏರಿಳಿತ ಕಾಣುವುದು ಸಹಜ. ವಿಶ್ವಕಪ್ ದೃಷ್ಟಿಯಿಂದ ಸಾಧ್ಯವಾದಷ್ಟು ಅವಕಾಶ ನೀಡಲು ಪ್ರಯತ್ನಿಸುತ್ತೇವೆ’
ರಾಹುಲ್ ದ್ರಾವಿಡ್, ಹೆಡ್ಕೋಚ್
ರಾಹುಲ್ ದ್ರಾವಿಡ್ರ ಈ ಮಾತುಗಳು ಇಶಾನ್ರನ್ನ ಕೈ ಬಿಡಲ್ಲ ಎಂಬುದನ್ನ ಸ್ಪಷ್ಟವಾಗಿ ತಿಳಿಸುತ್ತೆ. ಆದರೆ ಇಶಾನ್ ಮೇಲೆ ಮಾಡುವ ಪ್ರಯೋಗವನ್ನ ಮತ್ತೊಬ್ಬ ಆಟಗಾರನ ಮೇಲೆ ಯಾಕೆ ಮಾಡಲ್ಲ ಎಂಬುದು ಕ್ರಿಕೆಟ್ ತಜ್ಞರ ಪ್ರಶ್ನೆ. ಇಶಾನ್ ಕಿಶನ್ಗೆ ಅವಕಾಶದ ಮೇಲೆ ಅವಕಾಶ ನೀಡ್ತಿರೋ ನೀವು , ಋತುರಾಜ್ ಗಾಯಕ್ವಾಡ್ರನ್ನ ಕಡೆಗಣಿಸ್ತಾ ಇರೋದು ಎಷ್ಟು ಸರಿ ಎಂಬ ಮಾತುಗಳು ಕೇಳಿ ಬರ್ತಿವೆ.
ತಂಡಕ್ಕೆ ಸಮರ್ಥ ಆಟಗಾರರು ಬೇಕು ನಿಜ. ಹಾಗಂತ ವೈಫಲ್ಯ ಕಂಡರೂ ಮತ್ತೆ ಮತ್ತೆ ಅವಕಾಶ ನೀಡೋದು, ಸಾಮರ್ಥ್ಯ ಪ್ರೂವ್ ಮಾಡಿದ್ರೂ ಬೆಂಚ್ನಲ್ಲಿ ಕಾಯಿಸೋದು ಸರಿ ಅಲ್ಲ. ಇರುವ ಆಟಗಾರರಿಗೆ ಸರಿಸಮನಾದ ಅವಕಾಶ ಕೊಟ್ಟು, ಅವರ ಪ್ರದರ್ಶನವನ್ನ ತಾಳೆ ಹಾಕಿ, ಉತ್ತಮ ಪ್ರದರ್ಶನ ನೀಡಿದವರಿಗೆ ಅವಕಾಶ ನೀಡಬೇಕು ಅಂತಿದ್ದಾರೆ ಕ್ರಿಕೆಟ್ ಸ್ಪೆಷಲಿಸ್ಟ್ಸ್. ಮುಂದಾದ್ರೂ ಬೆಂಚ್ ಕಾದ ಆಟಗಾರರಿಗೆ ಅವಕಾಶ ಸಿಗುತ್ತಾ ಕಾದು ನೋಡಬೇಕಿದೆ.