ಅಪ್ಪು ನಮ್ಮನ್ನೆಲ್ಲ ಅಗಲಿ ತಿಂಗಳಾಗುತ್ತಾ ಬಂದ್ರು, ಅವರ ನೆನಪೂ ಮಾತ್ರ ನಮ್ಮಿಂದ ದೂರಾಗ್ತಿಲ್ಲ. ಪುನೀತ್ ಅವರ ಜೊತೆ 14 ಸಿನಿಮಾಗಳಲ್ಲಿ ಫೈಟ್ ಮಾಸ್ಟರ್ ಆಗಿ ಕೆಲಸ ಮಾಡಿದ ಸ್ಯಾಂಡಲ್ವುಡ್ ಸ್ಟಂಟ್ ಮಾಸ್ಟರ್ ರವಿವರ್ಮ ಅಪ್ಪು ನೆನಪಿನ ಬುತ್ತಿ ಬಿಚ್ಚಿಟ್ಟು ಭಾವುಕರಾಗಿದ್ದಾರೆ.
ಅಪ್ಪು ಇನ್ನಿಲ್ಲದ ಸುದ್ದಿ ಕೇಳಿದಾಗ ನನಗೆ ನಂಬಲು ಆಗಲಿಲ್ಲ. ನನ್ನ ಸ್ನೇಹಿತರೊಬ್ಬರು ವಿಕ್ರಂ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾರೆ ಅವರಿಗೆ ದಿಢೀರ್ನೆ ಕಾಲ್ ಮಾಡಿ ಕೇಳಿದೆ ಏನಿದು ಅಪ್ಪು ಸರ್ ಬಗ್ಗೆ ನ್ಯೂಸ್ ಅಂತ. ಅವರು ಕೂಡ ಅದನ್ನೇ ಹೇಳಿದಾಗ ನನಗೆ ಅರಗಿಸಿಕೊಳ್ಳಲಾಗಿಲ್ಲ ಆಗ ಅವರಿಗೆ ಬಾಯಿಗೆ ಬಂದ ಹಾಗೇ ಬೈಯ್ದಿದ್ದಿನಿ. ಆದರೆ ಅವರು ನಮ್ಮ ಜೊತೆ ಇಲ್ದೇ ಇರಬಹುದು ನಮ್ಮ ಪ್ರತಿ ಕೆಲಸದಲ್ಲಿ ಅವರಿದ್ದಾರೆ ಎಂದು ರವಿವರ್ಮಾ ಹೇಳಿದರು.
ಅಪ್ಪು ಬಹುತೇಕ ಸಿನಿಮಾಗಳಿಗೆ ನಾನೇ ಸ್ಟಂಟ್ ಕಂಪೋಸ್ ಮಾಡಿದ್ದೀನಿ ‘ಲಕ್ಕಿ ಮ್ಯಾನ್’ ಸಿನಿಮಾದಲ್ಲೂ ಅಪ್ಪು ಸ್ಟಂಟ್ಸ್ ಜೋರಾಗಿಯೇ ಇದೆ. ಲಕ್ಕಿ ಮ್ಯಾನ್ ಸಿನಿಮಾದಲ್ಲಿ ಅಪ್ಪು ದೇವರ ಪಾತ್ರ ಮಾಡಿದ್ದಾರೆ. ಆ ದೃಶ್ಯಗಳಲ್ಲಿ ದೇವರನ್ನು ಹೇಗೆ ತೋರಿಸಬಹುದು ಎಂಬ ಅವಕಾಶ ನನಗೊದಿಗಿತ್ತು. ಅವರು ಕೇವಲ ಸಿನಿಮಾ ವಿಚಾರವಾಗಿಯೇ ಯಾವತ್ತು ಮಾತನಾಡುತ್ತಿದ್ದರು. ನಾನು ಬಾಲಿವುಡ್ ಸಿನಿಮಾಗಳಲ್ಲಿ ಕೆಲಸ ಮಾಡಿರೋದ್ರಿಂದ ಅಲ್ಲಿ ಹೇಗೆ ಕೆಲಸ ನಡೀತಿತ್ತು? ಯಾವ ಹೊಸ ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತಿತ್ತು? ಹೀಗೆ ಬರೀ ಸಿನಿಮಾ ವಿಚಾರವಾಗಿಯೇ ಮಾತನಾಡುತ್ತಿದ್ದ ಅವರು ಇಂದಿಗೆ ನಮ್ಮೊಂದಿಗಿಲ್ಲ ಎನ್ನುವುದನ್ನ ಅರಗಿಸಿಕೊಳ್ಳಲಾಗುತ್ತಿಲ್ಲ ಎಂದು ರವಿವರ್ಮಾ ಭಾವುಕರಾದರು..