ಲಖಿಂಪುರ ಖೇರಿ ಹಿಂಸಾಚಾರ ವಿರೋಧಿಸಿ ಸರಣಿ ಆಂದೋಲನಕ್ಕೆ ಮುಂದಾದ ರೈತರು; ಅ.18ರಂದು ರೈಲು ತಡೆ ಚಳವಳಿ | Farm unions announce train block protests on October 18 against Lakhimpur Kheri Violence

ಲಖಿಂಪುರ ಖೇರಿ ಹಿಂಸಾಚಾರ ವಿರೋಧಿಸಿ ಸರಣಿ ಆಂದೋಲನಕ್ಕೆ ಮುಂದಾದ ರೈತರು; ಅ.18ರಂದು ರೈಲು ತಡೆ ಚಳವಳಿ

ಈ ಹಿಂದೊಮ್ಮೆ ನಡೆದಿದ್ದ ರೈಲು ತಡೆ ಚಳವಳಿಯ ಚಿತ್ರ

ಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರ(Lakhimpur Kheri Violence)ದ ವಿರುದ್ಧ ಪ್ರಮುಖ ರೈತ ಸಂಘಟನೆ (Farmers Unions)ಗಳು ಹೊಸ ಸರಣಿ ಆಂದೋಲನ ನಡೆಸಲು ಮುಂದಾಗಿವೆ. ಈ ಹಿಂಸಾಚಾರದಲ್ಲಿ ಒಟ್ಟು 8 ಮಂದಿ ಮೃತಪಟ್ಟಿದ್ದು, ಅದರಲ್ಲಿ ನಾಲ್ವರು ರೈತರು, ಒಬ್ಬ ಪತ್ರಕರ್ತ ಮತ್ತು ಮೂವರು ಬಿಜೆಪಿ ಕಾರ್ಯಕರ್ತರು ಎಂದು ಹೇಳಲಾಗಿದೆ.  ಇನ್ನು ಲಖಿಂಪುರ ಖೇರಿಯಲ್ಲಿ ರೈತರಿಗೆ ಡಿಕ್ಕಿ ಹೊಡೆದಿದ್ದು ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಅಜಯ್​ ಮಿಶ್ರಾರ ಪುತ್ರ ಆಶಿಶ್​ ಮಿಶ್ರಾ ಅವರ ಬೆಂಗಾವಲು ವಾಹನ ಎಂದು ಹೇಳಲಾಗಿದ್ದು, ಇಂದು ಆಶಿಶ್​ ಮಿಶ್ರಾ ಬಂಧನ ಕೂಡ ಆಗಿದೆ. ಇದೀಗ ರೈತ ಸಂಘಟನೆಗಳೆಲ್ಲ ಆಶಿಶ್​ ಮಿಶ್ರಾ ವಿರುದ್ಧ ತಿರುಗಿಬಿದ್ದಿವೆ.

ಲಖಿಂಪುರ ಖೇರಿ ಹಿಂಸಾಚಾರವನ್ನು ನಾವು ಬಲವಾಗಿ ಖಂಡಿಸುತ್ತೇವೆ. ರೈತರ ಮೇಲಿನ ಹಿಂಸಾಚಾರವನ್ನು ಖಂಡಿಸಿ ನಾವು ಹೊಸ ಸರಣಿಯ ಆಂದೋಲನ ನಡೆಸಲಿದ್ದೇವೆ. ತನ್ನಿಮಿತ್ತ ಅಕ್ಟೋಬರ್​ 12ರಂದು, ದೇಶದ ವಿವಿಧ ರಾಜ್ಯಗಳ ರೈತರು ಲಖಿಂಪುರ ಖೇರಿಗೆ ಬರಲಿದ್ದಾರೆ. ಇಲ್ಲಿ ಮೃತಪಟ್ಟ ರೈತರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಲಿದೆ ಎಂದು ವಿವಿಧ ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್​ ಮೋರ್ಚಾ ತಿಳಿಸಿದೆ.  ಹಾಗೇ, ಅಕ್ಟೋಬರ್​ 18ರಂದು ರೈತ ಒಕ್ಕೂಟಗಳು ಮತ್ತೊಮ್ಮೆ ರೈಲು ತಡೆ ಚಳವಳಿ ನಡೆಸಲಿವೆ. ಹಾಗೇ, ಅಕ್ಟೋಬರ್​​ 28ರಂದು ಲಖನೌನಲ್ಲಿ ಮಹಾಪಂಚಾಯತ್​ ನಡೆಸುತ್ತೇವೆ.  ಅಜಯ್​ ಮಿಶ್ರಾರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಈಗಾಗಲೇ ಆಗ್ರಹ ವ್ಯಕ್ತಪಡಿಸಿದ್ದೇವೆ ಎಂದು ಸಂಯುಕ್ತ ಕಿಸಾನ್​ ಮೋರ್ಚಾ ತಿಳಿಸಿದೆ.

ಲಖಿಂಪುರ ಖೇರಿ ಹಿಂಸಾಚಾರದಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವುದು ಆಶಿಶ್​ ಮಿಶ್ರಾ ಹೆಸರು. ಅವರು ಇಂದು ಉತ್ತರ ಪ್ರದೇಶ ಕ್ರೈಂ ಬ್ರ್ಯಾಂಚ್​​ಗೆ ವಿಚಾರಣೆ ಹಾಜರಾಗಿದ್ದರು. ಬಳಿಕ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರತಿಭಟನಾ ನಿರತ ರೈತರ ಮೇಲೆ ಎರಡು ವಾಹನಗಳು ಹರಿದಾಗ, ಅದರಲ್ಲಿ ಎಸ್​ಯುವಿ ಓಡಿಸುತ್ತಿದ್ದುದು ಆಶಿಶ್​ ಮಿಶ್ರಾ ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನು ಅರೆಸ್ಟ್ ಮಾಡಲಾಗಿದೆ. ಇನ್ನು ಲಖಿಂಪುರ ಖೇರಿಯಲ್ಲಿ ಸೆಕ್ಷನ್​ 144 ಜಾರಿಯಾಗಿದ್ದು, ಅಲ್ಲಿಗೆ ಯಾವುದೇ ರಾಜಕೀಯ ನಾಯಕರಿಗೂ ಪ್ರವೇಶ ನೀಡಲಿಲ್ಲ. ಆದರೆ ರೈತ ಸಂಘಟನೆಗಳು, ರೈತ ನಾಯಕರು ಭೇಟಿ ಕೊಡಬಹುದು ಎಂದು ಹೇಳಲಾಗಿದೆ.  ಒಟ್ಟಾರೆ ಮೂರು ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆ ಪದೇಪದೆ ಬೇರೆಬೇರೆ ರೀತಿಯ ಆಯಾಮಗಳನ್ನು ಪಡೆದುಕೊಳ್ಳುತ್ತಿದೆ. ಈ ಹಿಂದೊಮ್ಮೆ ರೈಲು ಹಳಿಗಳ ಮೇಲೆ ಪ್ರತಿಭಟನೆ ನಡೆಸಿದ ರೈತರ ವಿರುದ್ಧ ದಾಖಲಾಗಿದ್ದ ಕೇಸ್​ಗಳನ್ನು ಇತ್ತೀಚೆಗಷ್ಟೇ ಪಂಜಾಬ್​ ಮುಖ್ಯಮಂತ್ರಿ ಚರಣಜಿತ್​ ಸಿಂಗ್​ ಛನ್ನಿ ಹಿಂಪಡೆದಿದ್ದರು. ಇದೀಗ ಮತ್ತೊಮ್ಮೆ ರೈತರು ರೈಲು ತಡೆ ಚಳವಳಿಗೆ ಮುಂದಾಗಿದ್ದಾರೆ.

ಇದನ್ನೂ ಓದಿ: ಕಲ್ಲಿದ್ದಲು, ಕೊರೊನಾ ಲಸಿಕೆ ಪೂರೈಸಲು ಮನವಿ; ದೆಹಲಿ ಪ್ರವಾಸ ಯಶಸ್ವಿಯಾಗಿದೆ ಎಂದ ಬಸವರಾಜ ಬೊಮ್ಮಾಯಿ

Mangaluru: ಬಲಪಂಥೀಯ ವೇದಿಕೆಗಳಿಂದ ವಿರೋಧ; ಕಾಲೇಜು ಪಾರ್ಕ್​ಗೆ ಸ್ಟಾನ್ ಸ್ವಾಮಿ ಹೆಸರಿಡುವ ನಿರ್ಧಾರ ಮುಂದೂಡಿಕೆ

TV9 Kannada

Leave a comment

Your email address will not be published. Required fields are marked *