ಲಖೀಂಪುರ್​ ಹಿಂಸಾಚಾರ ಖಂಡಿಸಿ ರೈಲ್​ ರೋಕೋ -ಟಾಪ್ 10 ಸುದ್ದಿಗಳ ಕ್ವಿಕ್​ರೌಂಡಪ್

ಮೈಶುಗರ್​ ಕಾರ್ಖಾನೆ ಸಂಬಂಧ ಇಂದು ಸಿಎಂ ಸಭೆ
ಮಂಡ್ಯದ ಮೈಶುಗರ್ ಕಾರ್ಖಾನೆ ಸಂಬಂಧ ಸಿಎಂ ಬೊಮ್ಮಾಯಿ ಇಂದು ಮಹತ್ವದ ಸಭೆ ನಡೆಸಲಿದ್ದಾರೆ. ಮಂಡ್ಯ ಜಿಲ್ಲೆಯ ರೈತರು, ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ 35 ದಿನಗಳಿಂದ ಹೋರಾಟ ನಡೆಸುತ್ತಿರುವ ರೈತರ ಹಿತರಕ್ಷಣಾ ವೇದಿಕೆ ಜೊತೆ ನಿನ್ನೆ ಸಿಎಂ ಸಭೆ ನಡೆಸಿದ್ರು. ಮೈಶುಗರ್​ ಕಾರ್ಖಾನೆ ಬಂದ್​ ಆಗಿ ಮೂರ್ನಾಲ್ಕು ವರ್ಷ ಕಳೆದಿದ್ದು, ಕಾರ್ಖಾನೆಯನ್ನ ಸರ್ಕಾರಿ ಸ್ವಾಮ್ಯದಲ್ಲೇ ಆರಂಭಿಸುವಂತೆ ರೈತರು ಹೋರಾಟ ನಡೆಸುತ್ತಿದ್ದಾರೆ.

ಸಿಂದಗಿ ಸಮರದಲ್ಲಿ ಹೆಚ್​ಡಿಡಿ ಪ್ರಚಾರ
ನಾನು ಸಿಂದಗಿಯಲ್ಲಿ ಪ್ರಚಾರ ಶುರು ಮಾಡ್ತೇನೆ ಅಂತಾ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ. ಈ ಬಗ್ಗೆ ಹಾವೇರಿಯಲ್ಲಿ ಮಾತನಾಡಿದ ಅವರು ಪ್ರಚಾರದ ಬಗ್ಗೆ ಸಮಯ ನಿಗದಿ ಮಾಡ್ತೇವೆ. 10 ದಿನಗಳ ಕಾಲ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತೇನೆ. 27 ನೇ ತಾರೀಖಿನವರಗೆ ಕ್ಷೇತ್ರದಲ್ಲೇ ಉಳಿದು ಪ್ರಚಾರ ಮಾಡುತ್ತೇನೆ ಅಂತಾ ಹೇಳಿದ್ರು. ಅಲ್ದೇ ಕುಮಾರಸ್ವಾಮಿ ಅವರು ಸಹ ಪ್ರಚಾರ ಮಾಡಲಿದ್ದಾರೆ. ನಾನು ಯಾರ ವಿರುದ್ಧವೂ ಅಪಪ್ರಚಾರ ಮಾಡುವುದಿಲ್ಲ ಅಂತಾ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಹೇಳಿದ್ರು.

‘ಹೊನ್ನಾಳಿ ಶಾಸಕರ ಸುಂಟರಗಾಳಿ ಸ್ಟೆಪ್​’
ಹೊನ್ನಾಳಿ ಶಾಸಕ ರೇಣುಕಾಚಾರ್ಯ ಒಂದಲ್ಲ ಒಂದು ರೀತಿ ಸುದ್ದಿಯಾಗ್ತಾನೆ ಇರ್ತಾರೆ. ಕೊರೊನಾ ಸಮಯದಲ್ಲಿ ಜನಪರ ಕಾರ್ಯಗಳನ್ನ ಮಾಡಿದ್ದ ಶಾಸಕ ರೇಣುಕಾಚಾರ್ಯ, ನಿನ್ನೆ ಹೊನ್ನಾಳಿ ತಾಲೂಕಿನ ಕುಂದೂರಿನಲ್ಲಿ ಮಕ್ಕಳೊಂದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ . ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಶಾಸಕ ರೇಣುಕಾಚಾರ್ಯ, ಸುಂಟರಗಾಳಿ ಚಿತ್ರದ ಹಾಡಿಗೆ ಸ್ಟೆಪ್ ಹಾಕಿದ್ರು. ಗ್ರಾಮ ವಾಸ್ತವ್ಯ ಕಾರ್ಯಕ್ರಮದ ನಿಮಿತ್ತ ಕುಂದೂರಿನಲ್ಲಿ ಜನರಿಗೆ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಲಖೀಂಪುರ್​ ಹಿಂಸಾಚಾರ ಖಂಡಿಸಿ ರೈಲ್​ ರೋಕೋ
ಲಖೀಂಪುರ್​ ಖೇರಿ ಹಿಂಸಾಚಾರ ಘಟನೆಯನ್ನು ಖಂಡಿಸಿ ಇಂದು ಸಂಯುಕ್ತ ಕಿಸಾನ್ ಮೋರ್ಚಾ, ರೈಲ್​ ರೋಕೋ ಪ್ರತಿಭಟನೆ ಹಮ್ಮಿಕೊಂಡಿದೆ.. ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಎಲ್ಲಾ ರೈಲು ಸಂಚಾರವನ್ನು ತಡೆಯೋದಾಗಿ ಎಸ್‌ಕೆಎಂ ಹೇಳಿದೆ. ಲಖೀಂಪುರ್ ಖೇರಿ ಪ್ರಕರಣಕ್ಕೆ ನ್ಯಾಯ ಸಿಗುವವರೆಗೂ ಪ್ರತಿಭಟನೆ ತೀವ್ರಗೊಳಿಸಲಾಗುವುದು ಅಂತಾ ಸಂಯುಕ್ತ ಕಿಸಾನ್ ಮೋರ್ಚಾ ಎಚ್ಚರಿಕೆ ನೀಡಿದೆ.. ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾರನ್ನು ಸಂಪುಟದಿಂದ ವಜಾಗೊಳಿಸುವಂತೆ ಎಸ್​​​ಕೆಎಂ ಆಗ್ರಹಿಸಿದೆ.

ನವಜೋತ್ ಸಿಂಗ್ ಸಿಧು ಭೇಟಿಯಾದ ಸಿಎಂ ಚನ್ನಿ
ಪಂಜಾಬ್ ಸಿಎಂ ಚರಣಜಿತ್ ಸಿಂಗ್ ಚನ್ನಿ ಪಂಜಾಬ್ ಪಿಸಿಸಿ ಅಧ್ಯಕ್ಷರಾದ ನವಜೋತ್​ ಸಿಂಗ್ ಸಿಧುರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ನವಜೋತ್​ ಸಿಂಗ್​ ಸಿಧು ತಮ್ಮ 13 ಅಂಶಗಳ ಕಾರ್ಯಸೂಚಿಯಿರುವ ಪತ್ರವೊಂದನ್ನು ಸೋನಿಯಾ ಗಾಂಧಿಗೆ ಬರೆದಿದ್ದರು. ಹಾಗೆ ಕಾರ್ಯಸೂಚಿ ಬಗ್ಗೆ ಚರ್ಚಿಸಲು ಕಾಲಾವಕಾಶವನ್ನೂ ಕೋರಿದ್ದರು. ಸಿಧು ಸೋನಿಯಾಗೆ ಬರೆದಿರೋ ಪತ್ರ ಸಾರ್ವಜನಿಕವಾಗುತ್ತಿದ್ದಂತೆ ಪಂಜಾಬ್ ಸಿಎಂ ಚನ್ನಿ, ಸಿಧು ಭೇಟಿಯಾಗಲು ದೌಡಾಯಿಸಿದ್ದಾರೆ.

ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಬಂಧನ, ಬಿಡುಗಡೆ
ಪರಿಶಿಷ್ಟ ಜಾತಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣದಲ್ಲಿ ಹರಿಯಾಣ ಪೊಲೀಸರು ಕ್ರಿಕೆಟಿಗ ಯುವರಾಜ್ ಸಿಂಗ್ ರನ್ನು ಭಾನುವಾರ ಬಂಧಿಸಿದ್ರು. ಯುವರಾಜ್​ ಕಳೆದ ವರ್ಷ ರೋಹಿತ್ ಶರ್ಮಾ ಜೊತೆ ಇನ್​ಸ್ಟಾಗ್ರಾಮ್​ ಲೈವ್ ಚಾಟ್‌ನಲ್ಲಿ ಪಾಲ್ಗೊಂಡಿದ್ದ ವೇಳೆ ಯಜುವೇಂದ್ರ ಚಹಲ್ ಬಗ್ಗೆ ಮಾತನಾಡುವ ವೇಳೆ ಪರಿಶಿಷ್ಟ ಜಾತಿ ಬಗ್ಗೆ ಅವಹೇಳನ ಪದ ಬಳಸಿರೋ ಆರೋಪ ಎದುರಿಸುತ್ತಿದ್ದಾರೆ. ಈ ಆರೋಪದಲ್ಲಿ ಯುವರಾಜ್ ಸಿಂಗ್ ವಿರುದ್ಧ ಹರಿಯಾಣ ಜಿಲ್ಲೆಯ ಹಾನ್ಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಎನ್​​​ಡಿಎ ಕೂಟ ಸೇರುವಂತೆ ಜಗನ್​​​ಗೆ ಆಹ್ವಾನ
ವೈಎಸ್​ಆರ್​ ಕಾಂಗ್ರೆಸ್​ ಪಕ್ಷದ ನಾಯಕ ಜಗನ್​​​ ಮೋಹನ್​​​​ ರೆಡ್ಡಿಯನ್ನ ಎನ್​ಡಿಎ ಕೂಟಕ್ಕೆ ಆಹ್ವಾನ ಮಾಡಲಾಗಿದೆ. ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ರಾಮ್​ದಾಸ್ ಅಠಾವಾಳೆ, ಎನ್​​ಡಿಎ ಸರ್ಕಾರಕ್ಕೆ ಸೇರ್ಪಡೆಯಾಗಿ ಅಂತ ಆಹ್ವಾನ ಕೊಟ್ಟಿದ್ದಾರೆ. ಎನ್​​​ಡಿಎ ಒಕ್ಕೂಟ ಸೇರುವುದರಿಂದ ರಾಜ್ಯದ ಹಿತಕ್ಕೆ ಅನುಕೂಲವಾಗಲಿದೆ. ರಾಜ್ಯಕ್ಕೆ ಹೆಚ್ಚಿನ ಅನುದಾನವು ಸಿಗಲಿದೆ ಅಂತ ರಾಮ್​ದಾಸ್​ ಅಠಾವಾಳೆ ಭರವಸೆ ನೀಡಿದ್ದಾರೆ.

ಗೋವಾದಲ್ಲಿ ಮೊದಲ ಆಲ್ಕೋಹಾಲ್ ಮ್ಯೂಸಿಯಂ
ಗೋವಾದಲ್ಲಿ ಭಾರತದ ಮೊದಲ ಆಲ್ಕೋಹಾಲ್ ಮ್ಯೂಸಿಯಂ ಆರಂಭವಾಗಿದೆ. ಸ್ಥಳೀಯ ಉದ್ಯಮಿ ನಂದನ್ ಕುಡ್ಚಡ್ಕರ್ ಈ ವಸ್ತು ಸಂಗ್ರಹಾಲಯ ಸ್ಥಾಪಿಸಿದ್ದಾರೆ. ಈ ವಸ್ತು ಸಂಗ್ರಹಾಲಯಕ್ಕೆ ಆಲ್​ ಆಲ್ಕೋಹಾಲ್​ ಎಂದು ಹೆಸರಿಡಲಾಗಿದೆ. ಶತಮಾನಗಳ ಹಿಂದೆ ಮದ್ಯ ಸಂಗ್ರಹಿಸುತ್ತಿದ್ದ ಸಾಂಪ್ರದಾಯಿಕ ಗಾಜಿನ ವ್ಯಾಟ್​ ಸೇರಿ ನೂರಾರು ಕಲಾಕೃತಿಗಳನ್ನ ಇಲ್ಲಿ ಸಂಗ್ರಹಿಸಲಾಗಿದೆ. ಗೋವಾದ ಶ್ರೀಮಂತ ಪರಂಪರೆ ಹಾಗೂ ಫೆನಿ ಎಂಬ ಸ್ಥಳೀಯ ಮದ್ಯದ ಬಗ್ಗೆ ತಿಳಿಸಲು ಈ ಮ್ಯೂಸಿಯಂ ಸ್ಥಾಪಿಸಲಾಗಿದೆ ಅಂತ ನಂದನ್ ಕುಡ್ಚಡ್ಕರ್ ಹೇಳಿಕೊಂಡಿದ್ದಾರೆ.

ಹರಕೆ ತೀರಿಸಿದ ದುನಿಯಾ ವಿಜಿ ಫ್ಯಾನ್ಸ್
ದುನಿಯಾ ವಿಜಯ್​ ಅಭಿನಯದ ಸಲಗ ಸಿನಿಮಾ ಯಶಸ್ವಿಯಾಗಿ ಬಿಡುಗಡೆಯಾದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಕೋಲಾರದ ಅಂತರಗಂಗೆಯಲ್ಲಿ ತಮ್ಮ ಹರಕೆ ತೀರಿಸಿದ್ದಾರೆ. ನಗರದ ಅಂತರಗಂಗೆ ಬೆಟ್ಟದಲ್ಲಿ ಮಂಡಿಯ ಮೂಲಕ ಮೆಟ್ಟಿಲೇರಿ ತಮ್ಮ ಹರಕೆ ತೀರಿಸಿದ್ದಾರೆ. ದುನಿಯಾ ಬಾಯ್ಸ್​ ತಂಡ, ಸಲಗ ಚಿತ್ರ ಯಶಸ್ವಿಯಾಗಲೆಂದು ಹರಕೆ ಕಟ್ಟಿಕೊಂಡಿದ್ದರು. ಸಲಗ ಚಿತ್ರ ಅದ್ದೂರಿ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಹರಕೆ ತೀರಿಸುತ್ತಿದ್ದೇವೆ ಸಲಗ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಂಡು ಅತಿ ಹೆಚ್ಚಿನ ಕಲೆಕ್ಷನ್​ ಮಾಡಲಿ ಎಂದು ಹಾರೈಸಿದರು. ಈ ವೇಳೆ ದೇವರಿಗೆ ಪೂಜೆ ಸಲ್ಲಿಸಿ ನಂತರ ಮಂಡಿಯೂರಿ ಬೆಟ್ಟ ಹತ್ತಿ ತಮ್ಮ ಹರಕೆ ತೀರಿಸಿದರು.

ಬಾಂಗ್ಲಾದೇಶಕ್ಕೆ ಸೋಲಿನ ರುಚಿ ತೋರಿಸಿದ ಸ್ಕಾಟ್ಲೆಂಡ್
ಐಸಿಸಿ ಟಿ-ಟ್ವೆಂಟಿ ವಿಶ್ವಕಪ್​​ನ ಅರ್ಹತಾ ಪಂದ್ಯದಲ್ಲಿ ಅಚ್ಚರಿಯ ಫಲಿತಾಂಶ ಹೊರಬಿದ್ದಿದ್ದು, ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ ಸ್ಕಾಟ್ಲೆಂಡ್ ರೋಚಕ ಗೆಲುವು ದಾಖಲಿಸಿದೆ. ಬಿ ಗುಂಪಿನಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ಹಾಗೂ ಸ್ಕಾಟ್ಲೆಂಡ್​ ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟಿಂಗ್ ಮಾಡಿದ ಸ್ಕಾಟ್ಲೆಂಡ್ ನಿಗದಿತ 20 ಓವರ್​ಗಳಲ್ಲಿ 140 ರನ್ ಕಲೆಹಾಕಿತು. ಗೆಲ್ಲಲು 141 ರನ್​ಗಳ ಗುರಿ ಬೆನ್ನತ್ತಿದ್ದ ಬಾಂಗ್ಲಾದೇಶ ಏಳು ವಿಕೆಟ್ ನಷ್ಟಕ್ಕೆ 134 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಗೆಲುವು ದಾಖಲಿಸಿದ ಸ್ಕಾಟ್ಲೆಂಡ್ ಎರಡು ಅಂಕವನ್ನು ಗಳಿಸಿಕೊಂಡಿತು.

News First Live Kannada

Leave a comment

Your email address will not be published. Required fields are marked *