“ಕಬ್ಜ’ ಚಿತ್ರದ ಚಿತ್ರೀಕರಣದಲ್ಲಿ ಬಿಝಿಯಾಗಿರುವ ಉಪೇಂದ್ರ ಈಗ ಹೊಸ ಸಿನಿಮಾದ ಮೂಡ್‌ನಲ್ಲಿದ್ದಾರೆ. ಅದು “ಲಗಾಮ್‌’. ಹೀಗೊಂದು ಸಿನಿಮಾದ ಹೆಸರನ್ನು ನೀವು ತುಂಬಾ ದಿನಗಳಿಂದ ಕೇಳಿರಬಹುದು. ಈಗ ಆ ಸಿನಿಮಾ ಸೆಟ್ಟೇರಿದೆ.

ಕೊರೊನಾ ಭಯದ ನಡುವೆಯೂ “ಲಗಾಮ್‌’ ಚಿತ್ರ ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ಅದ್ಧೂರಿಯಾಗಿ ಮುಹೂರ್ತ ಆಚರಿಸಿಕೊಂಡಿದೆ. ಪುನೀತ್‌ ರಾಜ್‌ಕುಮಾರ್‌ ಕ್ಲಾಪ್‌ ಮಾಡಿ ಚಿತ್ರ ತಂಡಕ್ಕೆ ಶುಭ ಕೋರಿದರು. ಈ ಚಿತ್ರವನ್ನು ಕೆ.ಮಾದೇಶ ನಿರ್ದೇಶಿಸುತ್ತಿದ್ದಾರೆ.

ಚಿತ್ರದ ಬಗ್ಗೆ ಮಾತನಾಡುವ ಉಪೇಂದ್ರ, “ಈ ರೀತಿಯ ಅದ್ದೂರಿ ಮುಹೂರ್ತ ಮಾಡಿ ಎರಡು ವರ್ಷಗಳೇ ಆಗಿತ್ತು. ಆದರೆ ಕೊರೋನಾ ಸಮಯದಲ್ಲೂ ಇಷ್ಟೊಂದು ಗ್ರ್ಯಾಂಡ್‌ ಆಗಿ ಮುಹೂರ್ತ ಮಾಡಿರುವುದೇ ಒಂದು ಪಾಸಿಟಿವ್‌ ಎನರ್ಜಿ. ಸಿನಿಮಾನೂ ಇಷ್ಟೇ ಅದ್ಧೂರಿಯಾಗಿ ಮೂಡಿಬರಲಿದೆ ಎಂಬ ಭರವಸೆ ಇದೆ. ಜೊತೆಗೆ ಲಗಾಮ್‌ ಕನ್ನಡದ ಲಗಾನ್‌ ಆಗುತ್ತೆ ಎಂಬ ವಿಶ್ವಾಸವಿದೆ. ನನ್ನ “ಕಬ್ಜ’ ದೊಡ್ಡ ಮಟ್ಟದ ಸಿನಿಮಾ. ಸೆಟ್‌ನಲ್ಲಿಯೇ ಬಹುತೇಕ ಶೂಟಿಂಗ್‌ ಮಾಡಲಾಗುತ್ತಿದೆ. ಹೀಗಾಗಿಯೇ ಸಾಕಷ್ಟು ಸಮಯ ಬೇಕು. ಅದೇ ಸಮಯದಲ್ಲಿ ಈ ಸಿನಿಮಾ ಮಾಡುತ್ತಿದ್ದೇನೆ’ ಎಂದು ಲಗಾಮ್‌ ಚಿತ್ರದ ಬಗ್ಗೆ ಮಾಹಿತಿ ನೀಡಿದರು ಉಪ್ಪಿ.

ಇದನ್ನೂ ಓದಿ:ವಿದೇಶದಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಚಿತ್ರ ಅಣ್ಣಾವ್ರದ್ದಾಗಿತ್ತು

ನಿರ್ದೇಶಕ ಕೆ. ಮಾದೇಶ್‌ ಹೇಳುವಂತೆ, “ಲಗಾಮ್‌ ಕನ್ನಡ, ಹಿಂದಿ, ತೆಲುಗು, ತಮಿಳು ಹೀಗೆ ನಾಲ್ಕು ಭಾಷೆಗಳಲ್ಲಿ ತಯಾರಾಗಲಿದೆ. ಭ್ರಷ್ಟಾಚಾರಕ್ಕೆ, ಮೋಸಕ್ಕೆ, ವಂಚನೆಗೆ, ಅತ್ಯಾಚಾರಕ್ಕೆ, ದ್ರೋಹಕ್ಕೆ ಲಗಾಮ್‌ ಹಾಕೋದೇ ಈ ಚಿತ್ರದ ಕಥಾ ಹಂದರ’ ಎನ್ನುವುದು ಅವರ ಮಾತು.

ಚಿತ್ರದಲ್ಲಿ ಹರಿಪ್ರಿಯಾ ನಾಯಕಿ. ಸಾಧು ಕೋಕಿಲಾ ಅವರು ಈ ಚಿತ್ರಕ್ಕೆ ಸಂಗೀತ ನೀಡುವ ಜೊತೆಗೆ, ಪ್ರಮುಖ ಪಾತ್ರದಲ್ಲೂ ನಟಿಸಲಿದ್ದಾರೆ.

ಸಿನೆಮಾ – Udayavani – ಉದಯವಾಣಿ
Read More