ಲತಾ ಮಂಗೇಶ್ಕರ್​ ಆರೋಗ್ಯದ ಬಗ್ಗೆ ಹಬ್ಬಿದೆ ಸುಳ್ಳು ಸುದ್ದಿ; ಐಸಿಯುನಲ್ಲಿರುವ ಅವರ ಸ್ಥಿತಿ ನಿಜಕ್ಕೂ ಹೇಗಿದೆ? | Lata Mangeshkar Health Update: Do not spread false news about legendary singer says spokesperson


ಲತಾ ಮಂಗೇಶ್ಕರ್​ ಆರೋಗ್ಯದ ಬಗ್ಗೆ ಹಬ್ಬಿದೆ ಸುಳ್ಳು ಸುದ್ದಿ; ಐಸಿಯುನಲ್ಲಿರುವ ಅವರ ಸ್ಥಿತಿ ನಿಜಕ್ಕೂ ಹೇಗಿದೆ?

ಲತಾ ಮಂಗೇಶ್ಕರ್

ಖ್ಯಾತ ಗಾಯಕಿ ಲತಾ ಮಂಗೇಶ್ಕರ್​ (Lata Mangeshkar) ಅವರು ಕೊವಿಡ್​ ಸೋಂಕಿಗೆ  (Coronavirus) ಒಳಗಾಗಿರುವುದು ಅವರ ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿದೆ. ಸದ್ಯ ಲತಾ ಮಂಗೇಶ್ಕರ್​ ಅವರಿಗೆ 92 ವರ್ಷ ವಯಸ್ಸು. ಹಾಗಾಗಿ ಸಹಜವಾಗಿಯೇ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಮುಂಬೈನ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ. ಹಲವು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಲತಾ ಮಂಗೇಶ್ಕರ್​ ಹೆಲ್​ ಅಪ್​ಡೇಟ್​ (Lata Mangeshkar Health Update) ಕುರಿತು ಕುಟುಂಬದವರು ಮತ್ತು ವೈದ್ಯರು ಆಗಾಗ ಮಾಹಿತಿ ನೀಡುತ್ತಲೇ ಇದ್ದಾರೆ. ಅದರ ನಡುವೆಯೂ ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇದು ಕುಟುಂಬದವರಿಗೆ ತಲೆಬಿಸಿ ತಂದೊಡ್ಡಿದೆ. ಸೆಲೆಬ್ರಿಟಿಗಳ ಕುರಿತಂತೆ ಸುಳ್ಳು ಸುದ್ದಿ ಹರಡಿಸುವ ಕೆಟ್ಟ ಛಾಳಿ ಇತ್ತೀಚೆಗೆ ಜಾಸ್ತಿ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಇಂಥ ಕೆಲಸ ಮಾಡುತ್ತಾರೆ. ದಯವಿಟ್ಟು ಯಾರೂ ಕೂಡ ಲತಾ ಮಂಗೇಶ್ಕರ್​ ಆರೋಗ್ಯದ ಬಗ್ಗೆ ತಪ್ಪು ಮಾಹಿತಿ ಹರಡಬೇಡಿ ಎಂದು ಅವರ ಪರ ವಕ್ತಾರರು ತಿಳಿಸಿದ್ದಾರೆಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಒಂದು ವಾರದ ಹಿಂದೆ ಲತಾ ಮಂಗೇಶ್ಕರ್​ ಅವರಿಗೆ ಕೊವಿಡ್​ ಲಕ್ಷಣಗಳು ಕಾಣಿಸಿಕೊಂಡವು. ಕೊರೊನಾ ಜೊತೆಗೆ ನ್ಯುಮೋನಿಯಾ ಕೂಡ ಆಗಿರುವುದರಿಂದ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೊವಿಡ್​ ಇರುವ ಕಾರಣ ಅವರನ್ನು ಭೇಟಿ ಮಾಡಲು ಕುಟುಂಬವರಿಗೂ ಅನುಮತಿ ನೀಡಿರಲಿಲ್ಲ. ವೈದ್ಯರ ತಂಡ ನಿರಂತರವಾಗಿ ಲತಾ ಮಂಗೇಶ್ಕರ್​ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ಆದರೆ ಅವರ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಿದೆ ಎಂದು ಯಾರೋ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಆ ಕುರಿತು ಲತಾ ಮಂಗೇಶ್ಕರ್​ ಪರ ವಕ್ತಾರರು ಅಸಮಾಧನ ವ್ಯಕ್ತಪಡಿಸಿದ್ದಾರೆ.

‘ಲತಾ ಅವರ ಆರೋಗ್ಯ ಹದಗೆಡುತ್ತಿದೆ ಎಂಬ ಸುದ್ದಿ ನಿಜಕ್ಕೂ ಬೇಸರ ತರಿಸುವಂಥದ್ದು. ಯಾಕೆಂದರೆ ಅದು ನಿಜವಲ್ಲ. ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ. ಆದಷ್ಟು ಬೇಗ ಅವರು ಗುಣಮುಖರಾಗಿ ಮನೆಗೆ ಮರಳಲಿ ಅಂತ ಎಲ್ಲರೂ ಪ್ರಾರ್ಥಿಸಿ’ ಎಂದು ವಕ್ತಾರರು ಹೇಳಿದ್ದಾರೆ. ಲತಾ ಬೇಗ ಚೇತರಿಸಿಕೊಳ್ಳಲಿ ಎಂದು ಅನೇಕ ಅಭಿಮಾನಿಗಳು ಹಾರೈಸುತ್ತಿದ್ದಾರೆ. ಕುಟುಂಬದವರು ಕೂಡ ವಿಶೇಷ ಪೂಜೆ ನಡೆಸುತ್ತಿದ್ದಾರೆ.

ಲತಾ ಮಂಗೇಶ್ಕರ್​ ಆರೋಗ್ಯದ ಕುರಿತಂತೆ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್​ ಟೋಪೆ ಅವರು ಭಾನುವಾರ (ಜ.16) ಹೇಳಿಕೆ ನೀಡಿದ್ದಾರೆ. ‘ಲತಾ ಅವರ ಆರೋಗ್ಯ ಸುಧಾರಿಸುತ್ತಿದೆ. ಆಸ್ಪತ್ರೆಯ ಆಡಳಿತ ವರ್ಗದವರ ಜೊತೆ ನಾನು ಮಾತನಾಡಿದ್ದೇನೆ. ಜನರು ಹೆಲ್ತ್​ ಅಪ್​ಡೇಟ್​ ತಿಳಿಯಲು ಕಾಯುತ್ತ ಇರುತ್ತಾರೆ. ಹಾಗಾಗಿ ಆಸ್ಪತ್ರೆಯ ವಕ್ತಾರರು ಅಪ್​ಡೇಟ್​ ನೀಡುತ್ತಾ ಇರಬೇಕು ಅಂತ ಸೂಚಿಸಿದ್ದೇನೆ’ ಎಂದು ರಾಜೇಶ್​ ಟೋಪೆ ಹೇಳಿದ್ದಾರೆ.

TV9 Kannada


Leave a Reply

Your email address will not be published. Required fields are marked *