ಲವ್ ಶುರುವಾದ ಆರಂಭದ ದಿನಗಳಲ್ಲಿ ಗೆಳೆಯನ ಬಳಿ ಇವುಗಳ ಬಗ್ಗೆ ಮಾತನಾಡಲೇಬೇಡಿ | Dont ask these thing with yourbofriend in early stage for leading good love life


ಲವ್ ಶುರುವಾದ ಆರಂಭದ ದಿನಗಳಲ್ಲಿ ಗೆಳೆಯನ ಬಳಿ ಇವುಗಳ ಬಗ್ಗೆ ಮಾತನಾಡಲೇಬೇಡಿ

ಪ್ರಾತಿನಿಧಿಕ ಚಿತ್ರ

ಪ್ರೀತಿ ಆರಂಭ ಯಾವಾಗಲೂ ಹೊಸತನದಲ್ಲಿಯೇ ಇರುತ್ತದೆ. ಹೊಸ ಅನುಭವ, ಹೊಸ ಪರಿಚಯ, ಪರಿಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಹಂಬಲ ಎಲ್ಲವೂ ಸಹಜ. ಆದರೆ ಪ್ರೀತಿಯ ಆರಂಭದ ದಿನಗಳಲ್ಲಿ ಎಲ್ಲಾ ವಿಚಾರಗಳಲ್ಲೂ ಕೊಂಚ ಎಚ್ಚರಿಕೆ ವಹಿಸುವುದು ಅಗತ್ಯ. ಏಕೆಂದರೆ ನಿಮಗೆ ಅವರ ಬಗ್ಗೆ ಸಂಪೂರ್ಣವಾಗಿ ತಿಳಿದಿರುವುದಿಲ್ಲ. ಅಂತಹ ಸಂದರ್ಭಗಳಲ್ಲಿ ದುಡುಕಿ ಪ್ರಶ್ನೆಗಳನ್ನು ಕೇಳಿ ಸಂಬಂಧವನ್ನು ಆರಂಭದಲ್ಲಿಯೇ ಹಾಳುಮಾಡಿಕೊಳ್ಳಬೇಡಿ. ಪ್ರೀತಿಯ ಹಾದಿಯಲ್ಲಿ ಎಲ್ಲವೂ ನಿಧಾನವಾಗಿರಲಿ. ಯಾವುದಕ್ಕೂ ಗಡಿಬಿಡಿ ಬೇಡ. ಸಮಯ ಸಾಗಿದಂತೆ ಸಂದರ್ಭಗಳು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ದಾರಿ ಕಲ್ಪಿಸುತ್ತದೆ. ಆದ್ದರಿಂದ ಪ್ರೀತಿಯ ಆರಂಭದಲ್ಲಿ ನಿಮ್ಮ ಗೆಳೆಯನ ಬಳಿ ಒಂದಷ್ಟು ವಿಚಾರಗಳನ್ನು ಚರ್ಚಿಸದಿರುವುದೇ ಒಳಿತು. ಹಾಗಾದರೆ ಅಂತಹ ವಿಚಾರಗಳು ಯಾವೆಲ್ಲಾ ಅಂತೀರಾ, ಇಲ್ಲಿದೆ ನೋಡಿ.

ಸಂಪಾದನೆ
ಪ್ರೀತಿಯ ಆರಂಭ ಎಂದಿಗೂ ಹಿತವಾಗಿರಲಿ. ಒಂದು ಹಂತಕ್ಕೆ ಆತ ನಿಮ್ಮನ್ನು ಒಳ್ಳೆಯ ರೀತಿಯಲ್ಲಿ ನೋಡಿಕೊಳ್ಳಬಲ್ಲ ಎನ್ನುವ ನಂಬಿಕೆ ಬಂದ ಮೇಲೆ ಮುಂದುವರೆಯಿರಿ. ಆದರೆ ಆರಂಭದಲ್ಲಿಯೇ ಸಂಪಾದನೆ ಬಗ್ಗೆ ಮಾತು ಬೇಡ. ಇದು ನೀವು ಹಣಕ್ಕೆ ಹೆಚ್ಚು ಮಹತ್ವ ನೀಡುವವರು ಎಂದುಕೊಳ್ಳುವ ಮನಸ್ಥಿತಿಗೆ ಕಾರಣವಾಗುತ್ತದೆ. ನೀವು ಕುತೂಹಲದಿಂದಲೋ ಅಥವಾ ಕ್ಯಾಶುವಲ್​ ಅಗಿಯೋ ಕೇಳಿದರೂ ಭಾವನೆಗಳು ಬದಲಾಗುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಆರಂಭದ ಒಂದಷ್ಟು ದಿನಗಳ ಕಾಲ ಸಂಪಾದನೆಯ ಬಗ್ಗೆ ಮಾತು ಬೇಡ. ಸಮಯ ಸಂದರ್ಭ ನೋಡಿ, ದುಡಿಮೆ, ಭವಿಷ್ಯದ ಯೋಜನೆಯ ಮಾತು ಬಂದಾಗ ನಿಧಾನವಾಗಿ ಕೇಳಿ ತಿಳಿದುಕೊಳ್ಳಿ. ಇದು ಸಂಬಂಧವನ್ನು ಹಸಿರಾಗಿಡುವಂತೆ ನೋಡಿಕೊಳ್ಳುತ್ತದೆ.

ಉಡುಗೊರೆ
ನೆನಪಿಡಿ ಪ್ರೀತಿಯ ಆರಂಭದಲ್ಲಿ ಎಂದಿಗೂ  ಉಡುಗೊರೆಗಳನ್ನು ಕೇಳಬೇಡಿ. ತಾವು ಪ್ರೀತಿಸಿದ ಹುಡುಗ ಗಿಫ್ಟ್​ ನೀಡಬೇಕು, ಎಲ್ಲಾದರೂ ಸುತ್ತಾಡಲು ಕರೆದುಕೊಂಡು ಹೋಗಬೇಕು ಎನ್ನುವ ಮನಸ್ಥತಿ ಸಹಜ. ಆದರೆ ನೀವಾಗಿಯೇ ಕೇಳಬೇಡಿ. ಅದರಲ್ಲೂ ದುಬಾರಿ ಉಡುಗೊರೆಗಳ ಬೇಡಕೆ ಬೇಡವೇ ಬೇಡ. ನಿಮಗೆ ನಿಮ್ಮ ಗೆಳೆಯನಿಂದಲೇ ಉಡುಗೊರೆಗಳನ್ನು ತರಿಸಿಕೊಳ್ಳಬೇಕು ಎಂದಿದ್ದರೆ ಏಕಾಂತದಲ್ಲಿದ್ದಾಗ ಮಾತು ಆರಂಭಿಸಿ, ಕೇಳಿಕೊಳ್ಳಿ. ಎಂದಿಗೂ ಡಿಮಾಂಡ್​ ಮಾಡಬೇಡಿ. ಅದು ನಿಮ್ಮ ಗೆಳೆಯನ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಆದ್ದರಿಂದ ಉಡುಗೊರೆಗಳ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ. ಮುಂದೊಂದು ದಿನ ಉಡುಗೊರೆಗಳು ಲೆಕ್ಕಾಚಾರಕ್ಕೆ ಕಾರಣವಾಗಬಾರದು.

ಮಾಜಿ ಪ್ರೀತಿ/ಗೆಳತಿಯ ಬಗ್ಗೆ
ಪ್ರೀತಿಯ ಆರಂಭದಲ್ಲಿ ಒಂದಷ್ಟು ಅನುಮಾನಗಳು ಸಹಜ. ತಮ್ಮ ಗೆಳೆಯ ಈ ಹಿಂದೆ ಯಾವುದಾದರೂ ಹುಡುಗಿಯನ್ನು ಪ್ರೀತಿಸಿದ್ದಾನೆಯೇ ಅಥವಾ ಗೆಳತಿ ಇರಬಹುದೇ ಎನ್ನುವ ಗೊಂದಲ ಅಥವಾ ಅನುಮಾನ ಕಾಡುತ್ತದೆ. ಆದರೆ ಅದನ್ನು ಬಾಯಿಬಿಟ್ಟು ಆರಂಭದಲ್ಲಿ ಕೇಳಬೇಡಿ. ಅದು ಅವರಿಗೆ ನೋವುಂಟು ಮಾಡಬಹುದು. ಅಥವಾ ನೀವು ಅವರ ಮೇಲೆ ಅನುಮಾನ ಪಡುತ್ತಿದ್ದೀರಾ ಎನ್ನುವ ಭಾವನೆ ಮೂಡಿಸಬಹುದು. ಕಾಲಕ್ರಮೇಣ ಹತ್ತಿರವಾಗಿ ಅಂತಹ ವಿಷಯಗಳ ಬಗ್ಗೆ ಮಾತು ಎತ್ತಿ. ನಿಮ್ಮ ಮೇಲೆ ಒಂದಷ್ಟು ನಂಬಿಕೆ ಬರುವವರೆಗೆ ಸುಮ್ಮನಿರುವುದೇ ಒಳಿತು.

ಆತನ ಗೆಳೆಯರ ಪರಿಚಯ
ಗೆಳೆಯನ ಸ್ನೇಹಿತರ ಪರಿಚಯ ಆರಂಭದಲ್ಲಿ ಬೇಡ. ಹುಡುಗರ ಮನಸ್ಥಿತಿ ಅಥವಾ ಅವನ ಗೆಳೆಯರ ಬಗ್ಗೆ ಚೆನ್ನಾಗಿ ತಿಳಿದಿರುತ್ತಾನೆ. ಹೀಗಾಗಿ ಸಮಯ ಬಂದಾಗ ಆತನೇ ನಿಮಗೆ ಪರಿಚಯ ಮಾಡಿಕೊಡುತ್ತಾನೆ. ಅಲ್ಲಿಯವರೆಗೆ ತಾಳ್ಮೆ ವಹಿಸಿ. ಅಲ್ಲದೆ ನಿಮಗೆ ಆರಂಭದಲ್ಲಿ ಪ್ರೈವಸಿಯ ಅವಶ್ಯಕತೆ ಇರುತ್ತದೆ. ಹೀಗಾಗಿ ಆರಂಭದ ದಿನಗಳಲ್ಲಿ ಆದಷ್ಟು ಇಬ್ಬರೇ ಸಮಯ ಕಳೆಯಿರಿ. ಪರಸ್ಪರ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಇದು ನಿಮ್ಮ ಭವಿಷ್ಯದ ಜೀವನಕ್ಕೆ ಭದ್ರ ಬುನಾದಿಯನ್ನು ಹಾಕಿಕೊಡುತ್ತದೆ. ದಿನಕಳೆದಂತೆ ಸ್ನೇಹಿತರೊಂದಿಗೆ ಬೆಸುಗೆ ಆಗಿಯೇ ಆಗುತ್ತದೆ. ಆದ್ದರಿಂದ ಪ್ರೀತಿಯ ಆರಂಭದ ದಿನಗಳಲ್ಲಿ ಆತನ ಗೆಳೆಯರ ಪರಿಚಯ ಬೇಡ.

TV9 Kannada


Leave a Reply

Your email address will not be published. Required fields are marked *