Rachana Inder | Love 360 Movie: ನಟಿಯರಿಗೆ ಚಾಲೆಂಜಿಂಗ್ ಪಾತ್ರ ಸಿಕ್ಕಾಗ ಹೆಚ್ಚು ಖುಷಿ ಆಗುತ್ತದೆ. ‘ಲವ್ 360’ ಸಿನಿಮಾದಲ್ಲಿ ರಚನಾ ಇಂದರ್ ಅವರಿಗೆ ಅಂಥ ಪಾತ್ರ ಸಿಕ್ಕಿದೆ.

ರಚನಾ ಇಂದರ್
‘ಲವ್ ಮಾಕ್ಟೇಲ್’ ಸಿನಿಮಾದಿಂದ ರಾಜ್ಯಾದ್ಯಂತ ಜನಪ್ರಿಯತೆ ಪಡೆದ ನಟಿ ರಚನಾ ಇಂದರ್ (Rachana Inder) ಅವರಿಗೆ ಅನೇಕ ಅವಕಾಶಗಳು ಹರಿದುಬರುತ್ತಿವೆ. ‘ಲವ್ ಮಾಕ್ಟೇಲ್ 2’ (Love Mocktail 2) ಚಿತ್ರದಲ್ಲೂ ಅವರ ಪಾತ್ರ ಗಮನ ಸೆಳೆಯಿತು. ನಂತರ ‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರದಲ್ಲಿ ಕೂಡ ಅವರು ಪ್ರೇಕ್ಷಕರನ್ನು ರಂಜಿಸಿದರು. ಈಗ ರಚನಾ ಇಂದರ್ ಅವರು ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಬ್ಯಾಕ್ ಟು ಬ್ಯಾಕ್ ಯಶಸ್ಸು ಪಡೆಯುತ್ತಿರುವ ಅವರು ‘ಹೆಂಗೆ ನಾವು’ ಎನ್ನುತ್ತ ನಗು ಬೀರುತ್ತಿದ್ದಾರೆ. ರಚನಾ ನಟಿಸಿರುವ ಹೊಸ ಸಿನಿಮಾ ‘ಲವ್ 360’ (Love 360 Movie) ಈಗ ಬಿಡುಗಡೆಗೆ ಸಜ್ಜಾಗಿದೆ. ಆಗಸ್ಟ್ 19ರಂದು ಈ ಸಿನಿಮಾ ರಿಲೀಸ್ ಆಗಲಿದೆ. ಅನೇಕ ಕಾರಣಗಳಿಂದ ಈ ಚಿತ್ರ ಗಮನ ಸೆಳೆಯುತ್ತಿದೆ. ಹೊಸ ನಟ ಪ್ರವೀಣ್ ಈ ಚಿತ್ರಕ್ಕೆ ಹೀರೋ.
ನಟಿಯರಿಗೆ ಚಾಲೆಂಜಿಂಗ್ ಪಾತ್ರ ಸಿಕ್ಕಾಗ ಹೆಚ್ಚು ಖುಷಿ ಆಗುತ್ತದೆ. ‘ಲವ್ 360’ ಸಿನಿಮಾದಲ್ಲಿ ರಚನಾ ಇಂದರ್ ಅವರಿಗೆ ಅಂಥ ಪಾತ್ರ ಸಿಕ್ಕಿದೆ. ‘ಮೊಗ್ಗಿನ ಮನಸು’, ‘ಕೃಷ್ಣ ಲೀಲಾ’ ರೀತಿಯ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ನಿರ್ದೇಶಕ ಶಶಾಂಕ್ ಅವರು ‘ಲವ್ 360’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಅವರ ಸಿನಿಮಾದಲ್ಲಿ ನಾಯಕಿಯರ ಪಾತ್ರಗಳು ತುಂಬ ಚೆನ್ನಾಗಿ ಚಿತ್ರಿತವಾಗಿರುತ್ತವೆ. ಅದ್ದರಿಂದ ಈ ಬಾರಿ ರಚನಾ ಇಂದರ್ ಅವರು ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರ ಆಗುವ ನಿರೀಕ್ಷೆ ಇದೆ.
ಬಿಡುಗಡೆಗೂ ಮುನ್ನವೇ ‘ಲವ್ 360’ ಸಿನಿಮಾ ಸದ್ದು ಮಾಡುತ್ತಿದೆ. ಈ ಚಿತ್ರದ ಹಾಡುಗಳು ಮಿಲಿಯನ್ಗಟ್ಟಲೆ ವೀವ್ಸ್ ಪಡೆದು ಬೀಗುತ್ತಿವೆ. ಸಿದ್ ಶ್ರೀರಾಮ್ ಧ್ವನಿ ನೀಡಿರುವ ‘ಜಗವೇ ನೀನು ಗೆಳತಿಯೇ..’ ಹಾಡು ಸೂಪರ್ ಹಿಟ್ ಆಗಿದೆ. ಯೂಟ್ಯೂಬ್ನಲ್ಲಿ 10 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಇತ್ತೀಚೆಗೆ ಬಿಡುಗಡೆಯಾದ ‘ಭೋರ್ಗರೆದು ಕೇಳಿದೆ ಕಡಲು..’ ಹಾಡು ಕೂಡ 10 ಲಕ್ಷ ವೀವ್ಸ್ ಪಡೆಯುವತ್ತ ಮುನ್ನುಗ್ಗುತ್ತಿದೆ. ಈ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.