‘ಲವ್​ 360’ ವಿಮರ್ಶೆ: ಮೊದಲು ಮುಗ್ಧ​ ಪ್ರೇಮದ ಅಚ್ಚರಿ,​ ನಂತರ ಮರ್ಡರ್​ ಮಿಸ್ಟರಿ | Love 360 movie Review: Praveen and Rachana Inder starrer Love 360 film is mixture of love and suspense


Love 360 Movie Review: ಚೊಚ್ಚಲ ಸಿನಿಮಾದಲ್ಲೇ ನಟ ಪ್ರವೀಣ್​ ಗಮನ ಸೆಳೆಯುವಂತೆ ಅಭಿನಯಿಸಿದ್ದಾರೆ. ನಟಿ ರಚನಾ ಇಂದರ್​ ಪಾತ್ರ ಸ್ಪೆಷಲ್​ ಆಗಿದೆ.

‘ಲವ್​ 360’ ವಿಮರ್ಶೆ: ಮೊದಲು ಮುಗ್ಧ​ ಪ್ರೇಮದ ಅಚ್ಚರಿ,​ ನಂತರ ಮರ್ಡರ್​ ಮಿಸ್ಟರಿ

ರಚನಾ ಇಂದರ್, ಪ್ರವೀಣ್

ಚಿತ್ರ: ಲವ್​ 360

ನಿರ್ಮಾಣ: ಶಶಾಂಕ್​, ಮಂಜುಳಾ ಮೂರ್ತಿ

ನಿರ್ದೇಶನ: ಶಶಾಂಕ್​

ಪಾತ್ರವರ್ಗ: ಪ್ರವೀಣ್​, ರಚನಾ ಇಂದರ್​, ಗೋಪಾಲ ದೇಶಪಾಂಡೆ, ಮಹಂತೇಶ್​, ಸುಜಿತ್​, ಡ್ಯಾನಿ ಕುಟ್ಟಪ್ಪ, ಕಾವ್ಯಾ ಶಾಸ್ತ್ರಿ, ಸುಕನ್ಯಾ ಗಿರೀಶ್​ ಮುಂತಾದವರು.

ಸ್ಟಾರ್​: 3/5

‘ಜಗವೇ ನೀನು ಗೆಳತಿಯೇ..’ ಹಾಡಿನ ಮೂಲಕ ಭಾರಿ ನಿರೀಕ್ಷೆ ಮೂಡಿಸಿದ ಸಿನಿಮಾ ‘ಲವ್​ 360’. ಹೊಸಬರ ಸಿನಿಮಾದ ಈ ಹಾಡು ಕೋಟಿಗಟ್ಟಲೆ ವೀಕ್ಷಣೆ ಕಂಡಿರುವುದು ವಿಶೇಷ. ಆ ಕಾರಣದಿಂದ ಹೈಪ್​ ಹೆಚ್ಚಾಯಿತು. ಈಗ ಈ ಸಿನಿಮಾ ಬಿಡುಗಡೆ ಆಗಿದೆ. ‘ಮೊಗ್ಗಿನ ಮನಸು’, ‘ಕೃಷ್ಣನ್​ ಲವ್​ ಸ್ಟೋರಿ’, ‘ಕೃಷ್ಣ ಲೀಲಾ’ ರೀತಿಯ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ ನಿರ್ದೇಶಕ ಶಶಾಂಕ್​ ಅವರು ಈ ಬಾರಿ ಹೊಸ ಪ್ರತಿಭೆಗಳ ಜೊತೆ ಸೇರಿ ‘ಲವ್​ 360’ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ.

ಮಿಡಲ್​ ಕ್ಲಾಸ್​ ಬದುಕಿನ ಕಥೆಗಳನ್ನು ನಿರೂಪಿಸುವಲ್ಲಿ ನಿರ್ದೇಶಕ ಶಶಾಂಕ್​ ಫೇಮಸ್​. ಈ ಬಾರಿಯೂ ಅವರು ಅಂಥ ಒಂದು ಕಹಾನಿಯನ್ನು ತೆರೆಗೆ ತಂದಿದ್ದಾರೆ. ಇಲ್ಲಿನ ಕಥಾನಾಯಕ ರಾಮ್​ (ಪ್ರವೀಣ್​) ಹಾಗೂ ಕಥಾನಾಯಕಿ ಜಾನಕಿ (ರಚನಾ) ಅನಾಥರು. ಜಾನಕಿಗೆ ಬುದ್ಧಿ ಚುರುಕಿಲ್ಲ. ನೆನಪು ಆಗಾಗ ಕೈ ಕೊಡುತ್ತದೆ. ಅವಳನ್ನು ಹೇಗಾದರೂ ಮಾಡಿ ಗುಣಪಡಿಸಬೇಕು ಎಂದು ರಾಮ್​ ಪ್ರಯತ್ನಿಸುತ್ತಿರುವಾಗಲೇ ಖಳರ ಎಂಟ್ರಿ ಆಗುತ್ತದೆ. ಆರಂಭದಲ್ಲಿ ತುಂಬ ಸಿಂಪಲ್​ ಎನಿಸುವ ಈ ಕಥೆ ಮಧ್ಯಂತರದ ಬಳಿಕ ಬೇರೆಯದೇ ರೂಪ ಪಡೆದುಕೊಳ್ಳುತ್ತದೆ. ಒಂದು ಮರ್ಡರ್​ ಮಿಸ್ಟರಿ ಕಹಾನಿ ತೆರೆದುಕೊಳ್ಳುತ್ತದೆ.

ರಾಮ್​-ಜಾನಕಿ ಮುಗ್ಧ ಪ್ರೇಮಿಗಳು. ಅವರಿಗೆ ಎದುರಾಗುವ ವಿಲನ್​ಗಳೆಲ್ಲ ಕ್ರೂರ ಮನಸ್ಥಿತಿಯವರು. ಹೀಗೆ ಮುಗ್ಧತೆ ಮತ್ತು ಕ್ರೌರ್ಯದ ನಡುವಿನ ಸಮರದ ರೀತಿಯಲ್ಲಿ ಇಡೀ ಸಿನಿಮಾ ಮೂಡಿಬಂದಿದೆ. ಕೇವಲ ಲವ್​ ಸ್ಟೋರಿ ಹೇಳಲು ನಿರ್ದೇಶಕರು ಇಡೀ ಸಿನಿಮಾವನ್ನು ಸೀಮಿತವಾಗಿಸಿಲ್ಲ. ಸಸ್ಪೆನ್ಸ್​ ಮತ್ತು ಥ್ರಿಲ್ಲರ್​ ಅಂಶಗಳನ್ನೂ ಸೇರಿಸಿ ಇದನ್ನೊಂದು ಪತ್ತೇದಾರಿ ಸಿನಿಮಾವಾಗಿಸಿದ್ದಾರೆ. ಹಾಗಾಗಿ ಇದು ಎಲ್ಲ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ.

ಮೊದಲಾರ್ಧದಲ್ಲಿ ರಾಮ್​ ಮತ್ತು ಜಾನಕಿಯ ಕ್ಯೂಟ್​ ಪ್ರೇಮಕಥೆಯೇ ಹೆಚ್ಚು ಸ್ಪೇಸ್​ ಪಡೆದುಕೊಂಡಿದೆ. ಇದರಿಂದ ಪ್ರೇಕ್ಷಕರಿಗೆ ಸ್ವಲ್ಪ ಎಳೆದಾಡಿದಂತೆ ಅನಿಸಬಹುದು. ಆದರೆ ದ್ವಿತೀಯಾರ್ಧದಲ್ಲಿ ಚಿತ್ರಕ್ಕೆ ಹೊಸ ವೇಗ ಸಿಕ್ಕಿದೆ. ಇಲ್ಲಿ ಪ್ರತಿ ಪಾತ್ರಗಳೂ ಮಹತ್ವದ ತಿರುವುಗಳನ್ನು ನೀಡುತ್ತ ಪ್ರೇಕ್ಷಕರನ್ನು ರಂಜಿಸುತ್ತವೆ. ಮಹಾಂತೇಶ್​, ಸುಜಿತ್​, ಸುಕನ್ಯಾ ಗಿರೀಶ್​ ಮಾಡಿರುವ ಪಾತ್ರಗಳು ಸರ್ಪ್ರೈಸ್​ ನೀಡುತ್ತವೆ. ಅಷ್ಟರಮಟ್ಟಿಗೆ ಟ್ವಿಸ್ಟ್​ಗಳನ್ನು ಇಟ್ಟಿದ್ದಾರೆ ನಿರ್ದೇಶಕರು.

ನಟ ಪ್ರವೀಣ್​ ಅವರಿಗೆ ಇದು ಮೊದಲ ಸಿನಿಮಾ. ಆದರೆ ಓರ್ವ ಅನುಭವಿ ನಟನ ರೀತಿಯಲ್ಲಿ ಅವರು ಅಭಿನಯಿಸಿದ್ದಾರೆ. ಈ ಹಿಂದೆ ‘ಹೆಂಗೆ ನಾವು..​’ ಎಂದು ಫೇಮಸ್​ ಆಗಿದ್ದ ರಚನಾ ಇಂದರ್​ ಅವರು ‘ಲವ್​ 360’ ಸಿನಿಮಾದಲ್ಲಿ ಹಳೇ ಇಮೇಜ್​ ಬದಲಾಗುವ ರೀತಿಯಲ್ಲಿ ನಟಿಸಿದ್ದಾರೆ. ಗೋಪಾಲ್​ ದೇಶಪಾಂಡೆ ಅವರ ನಟನೆ ಕೂಡ ಗಮನ ಸೆಳೆಯುವಂತಿದೆ. ಡ್ಯಾನಿ ಕುಟ್ಟಪ್ಪ ಅವರು ಎಂದಿನಂತೆ ನೋಡುಗರ ಎದೆಯಲ್ಲಿ ನಡುಕ ಹುಟ್ಟಿಸುವ ಖಳನಾಗಿ ಮಿಂಚಿದ್ದಾರೆ.

ಫ್ಯಾಮಿಲಿ ಸಮೇತ ಕುಳಿತು ನೋಡಬಹುದಾದ ಚಿತ್ರದಲ್ಲಿ ಇರಬೇಕಾದ ಎಲ್ಲ ಅಂಶಗಳು ಈ ‘ಲವ್​ 360’ ಸಿನಿಮಾದಲ್ಲಿದೆ. ನಗುವಿನ ಕಚಗುಳಿ ಇರಿಸುವ ಕಾಮಿಡಿ ದೃಶ್ಯಗಳಿವೆ. ಆ್ಯಕ್ಷನ್​ ಇಷ್ಟಪಡುವವರಿಗಾಗಿ ಫೈಟಿಂಗ್​ ಸೀನ್​ಗಳಿವೆ. ಬುದ್ಧಿಗೆ ಕೆಲಸ ಕೊಡುವ ಪ್ರೇಕ್ಷಕರಿಗಾಗಿ ಮರ್ಡರ್​ ಮಿಸ್ಟರಿ ಇದೆ. ಎಲ್ಲವೂ ಸೇರಿ ಒಂದೊಳ್ಳೆಯ ಮನರಂಜನೆ ಸಿಗುತ್ತದೆ. ಯಾವುದೂ ಕೂಡ ಸಿನಿಮಾದ ಆಶಯವನ್ನು ಮೀರದ ಹಾಗೆ ನಿರ್ದೇಶಕರು ನೋಡಿಕೊಂಡಿದ್ದಾರೆ.

ತಾಂತ್ರಿಕವಾಗಿಯೂ ಈ ಚಿತ್ರ ಅಚ್ಚುಕಟ್ಟಾಗಿದೆ. ಅರ್ಜುನ್​ ಜನ್ಯ ಸಂಗೀತ ಈ ಚಿತ್ರದ ಪ್ಲಸ್​ ಪಾಯಿಂಟ್​. ಅಭಿಲಾಷ್​ ಕಲಾಥಿ ಅವರ ಛಾಯಾಗ್ರಹಣ ಸಹ ಗಮನ ಸೆಳೆಯುವಂತಿದೆ.

TV9 Kannada


Leave a Reply

Your email address will not be published.