ನವದೆಹಲಿ: ಕೊರೊನಾ ವಿಚಾರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಕಟುವಾಗಿ ಟೀಕಿಸುತ್ತಿದ್ದು, ಈ ಹಿಂದೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ಕಿಡಿಕಾರಿದ್ದರು. ಇದೀಗ ಕೊರೊನಾ ಲಸಿಕೆಗೂ ಜಿಎಸ್‍ಟಿ ವಿಧಿಸುವ ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ, ಆದರೆ ಪ್ರಧಾನಿಯ ತೆರಿಗೆ ವಸೂಲಿ ಮಾತ್ರ ನಿಂತಿಲ್ಲ ಎಂದು ಕಿಡಿಕಾರಿದ್ದು, ಜಿಎಸ್‍ಟಿ ಹ್ಯಾಷ್ ಟ್ಯಾಗ್ ಬಳಸಿದ್ದಾರೆ. ಕೊರೊನಾ ಲಸಿಕೆ ಮೇಲೆ ಶೇ.5ರಷ್ಟು ತೆರಿಗೆ ವಿಧಿಸಿರುವ ಕೇಂದ್ರ ಸರ್ಕಾರದ ನಿರ್ಧಾರದ ಕುರಿತು ಈಗಾಗಲೇ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳು ಪ್ರಶ್ನಿಸಿವೆ. ಇದೀಗ ರಾಹುಲ್ ಗಾಂಧಿ ಸಹ ಟ್ವೀಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊರೊನಾ ವ್ಯಾಕ್ಸಿನ್ ಮೇಲೆ ಶೇ.5 ರಷ್ಟು ಜಿಎಸ್‍ಟಿ ವಿಧಿಸಿದ್ದಕ್ಕೆ ರಾಜ್ಯ ಸರ್ಕಾರಗಳು ಪ್ರತಿ ಡೋಸ್‍ಗೆ 15-20 ರೂ.ತೆರಿಗೆಯನ್ನು ಕೇಂದ್ರ ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ. ಭಾರತದಲ್ಲಿ ತಯಾರಾದ ಕೊರೊನಾ ವ್ಯಾಕ್ಸಿನ್‍ಗೆ ಜಿಎಸ್‍ಟಿ ವಿಧಿಸುತ್ತಿರುವುದಕ್ಕೆ ರಾಜಸ್ಥಾನ, ಛತ್ತಿಸ್‍ಗಡ ಸೇರಿದಂತೆ ಹಲವು ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ. ಅಲ್ಲದೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸಹ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದು ವ್ಯಾಕ್ಸಿನ್ ಮೇಲಿನ ಜಿಎಸ್‍ಟಿ ತೆರವುಗೊಳಿಸುವಂತೆ ಮನವಿ ಮಾಡಿದ್ದಾರೆ.

The post ಲಸಿಕೆಗೂ ಜಿಎಸ್‍ಟಿ, ಜನ ಸಾಯುತ್ತಿದ್ದಾರೆ, ಟ್ಯಾಕ್ಸ್ ವಸೂಲಿ ಮಾತ್ರ ನಿಂತಿಲ್ಲ- ರಾಹುಲ್ ತರಾಟೆ appeared first on Public TV.

Source: publictv.in

Source link