– ಸಂಜೀವಿನಿ ಬೇಡ ಎಂದ ಗ್ರಾಮೀಣ ಭಾಗದ ಜನ

ಕೋಲಾರ: ಕೊರೊನಾ ಬ್ರೇಕ್ ಹಾಕಲು ಸರ್ಕಾರ ಇನ್ನಿಲ್ಲದ ಕಸರತ್ತು ಮಾಡ್ತಿದೆ. ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಲಸಿಕೆ ಪಡೆಯಲು ಜಾಗೃತಿ ಕೂಡ ಮೂಡಿಸಲಾಗ್ತಿದೆ. ಆದರೆ ಕೆಲವರು ವ್ಯಾಕ್ಸಿನ್ ಬಗ್ಗೆ ಸುಳ್ಳು ವದಂತಿ ಹಬ್ಬಿಸುವ ಮೂಲಕ ಗೊಂದಲ ಸೃಷ್ಟಿಸ್ತಿದ್ದಾರೆ. ವ್ಯಾಕ್ಸಿನ್ ಪಡೆದ್ರೆ ಸಾಯ್ತಾರೆ ಅನ್ನೋ ಆತಂಕ ಕೂಡ ಜನರಲ್ಲಿ ಮನೆ ಮಾಡಿದೆ.

ಹೌದು, ಕೋಲಾರ ಜಿಲ್ಲೆಯ ಬಹುತೇಕ ನಗರ ಹಾಗೂ ಗ್ರಾಮಗಳಲ್ಲಿ ವ್ಯಾಕ್ಸಿನ್ ಹಾಕಿಸಿಕೊಳ್ಳದಂತೆ ಒಂದಷ್ಟು ಜನರು ಸುಳ್ಳು ವದಂತಿಗಳನ್ನ ಹಬ್ಬಿಸ್ತಿದ್ದಾರೆ. ಪರಿಣಾಮ ಬಹುತೇಕ ಗ್ರಾಮಗಳಲ್ಲಿ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಜನರು ಹಿಂಜರಿಯುತ್ತಿದ್ದು, ಲಸಿಕೆ ಕುರಿತು ಗೊಂದಲದಲ್ಲಿದ್ದಾರೆ. 2ನೇ ಅಲೆ ಆರಂಭವಾಗುವ ಮುನ್ನ ನಿರ್ಲಕ್ಷ್ಯ ವಹಿಸುತ್ತಿದ್ದ ಜನರು ಸುಳ್ಳು ವದಂತಿಗಳಿಂದಾಗಿ ಸಾಕಷ್ಟು ಮಂದಿ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಲಸಿಕೆ ಪಡೆದ್ರೆ ಸಾವು ಬರುತ್ತೆ ಅನ್ನೋ ಆತಂಕದಲ್ಲಿ ವ್ಯಾಕ್ಸಿನ್ ಪಡೆಯಲು ಹೆದರುತ್ತಿದ್ದಾರೆ. ಕೋಲಾರದ ಬಂಗಾರಪೇಟೆಯ ಪಾಕರಹಳ್ಳಿಯಲ್ಲಿ 10 ಮಂದಿ ಕೊರೋನಾಗೆ ಮೃತಪಟ್ಟಿರೋದು ಜನರ ಆತಂಕಕ್ಕೆ ಮತ್ತಷ್ಟು ಪುಷ್ಟಿ ಕೊಟ್ಟಿದೆ.

ಜಿಲ್ಲೆಯಲ್ಲಿ ಲಸಿಕೆ ಹಾಕಿಸಿಕೊಳ್ಳುವಂತೆ ಅಧಿಕಾರಿಗಳು ಜಾಗೃತಿ ಮೂಡಿಸ್ತಿದ್ದಾರೆ. ಆದರೂ ಸಾಕಷ್ಟು ಮಂದಿ ಲಸಿಕೆಗೆ ಹಿಂದೇಟು ಹಾಕ್ತಿದ್ದಾರೆ. ಇದನ್ನು ತಿಳಿಯಲು ನಿಮ್ಮ ಪಬ್ಲಿಕ್ ಟಿವಿ ಹಲವು ಗ್ರಾಮಗಳಿಗೆ ಭೇಟಿ ನೀಡಿದಾಗ ‘ರಿಯಾಲಿಟಿ’ ಬಯಲಾಯ್ತು. ಕೆಲವರು ಜ್ವರ, ಅನಾರೋಗ್ಯ ಅಂದ್ರೆ ಮತ್ತೆ ಕೆಲವರು ಸುಳ್ಳು ವದಂತಿ ನಂಬಿ ಲಸಿಕೆ ಪಡೆಯಲು ಹಿಂದೇಟು ಹಾಕ್ತಿದ್ದಾರೆ. ಈ ಮಧ್ಯೆ ಪಾಕರಹಳ್ಳಿಯ ಶಾರದಮ್ಮ ಅನ್ನೋರು ನಾನು ಕೊರೋನಾ ಗೆದ್ದ ಮಹಿಳೆ, ಲಸಿಕೆ ಪಡೆದು ಆರೋಗ್ಯವಾಗಿದ್ದೀನಿ ಅಂತ ಉತ್ಸಾಹಭರಿತ ಮಾತನ್ನಾಡಿದ್ದಾರೆ.

ಒಟ್ಟಿನಲ್ಲಿ ಲಸಿಕೆ ಪಡೆದ ಅದೆಷ್ಟೋ ಮಂದಿ ಆರೋಗ್ಯವಾಗಿದ್ದಾರೆ. ಆದರೆ ಕೆಲವೆಡೆ ಅಪಪ್ರಚಾರದಿಂದ ವ್ಯಾಕ್ಸಿನೇಷನ್‍ಗೆ ಹಿನ್ನಡೆ ಆಗ್ತಿದೆ. ಇನ್ನಾದ್ರೂ ಜನ ಎಚ್ಚೆತ್ತುಕೊಂಡು ಲಸಿಕೆ ಪಡೆದು ಜೀವ ಉಳಿಸಿಕೊಳ್ಳಿ ಅನ್ನೋ ನಿಮ್ಮ ಪಬ್ಲಿಕ್ ಟಿವಿ ಕಳಕಳಿಯಾಗಿದೆ.

The post ಲಸಿಕೆ ಪಡೆದ್ರೆ ಪುರುಷತ್ವ, ಕೈ, ಕಾಲು ಹೋಗುತ್ತೆ- ಕೊರೊನಾ ವ್ಯಾಕ್ಸಿನ್ ಬಗ್ಗೆ ಸುಳ್ಳು ವದಂತಿ appeared first on Public TV.

Source: publictv.in

Source link