ರಾಜಧಾನಿಯಲ್ಲಿ ದಿನೆ ದಿನೇ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗ್ತಿದೆ. ಈಗ ಕೊರೊನಾ ಪ್ರಕರಣ ಮಾತ್ರವಲ್ಲದೇ ಸಾವಿನ ಸಂಖ್ಯೆಯೂ ಅಧಿಕವಾಗ್ತಿದ್ದು ಕೊಂಚ ಭೀತಿ ಮೂಡಿಸಿದೆ. ಕೆಲವು ವಾರ್ಡ್ಗಳಲ್ಲೇ ಈ ಸಂಖ್ಯೆ ಸಾವಿರದ ಗಡಿ ಸಮೀಪಿಸಿದೆ.
ಸಿಲಿಕಾನ್ ಸಿಟಿಯಲ್ಲಿ ದಿನೆ ದಿನೇ ಕೊರೊನಾ ಕೇಸ್ಗಳು ಆಕಾಶಕ್ಕೆ ಏಣಿ ಹಾಕ್ತಿವೆ. ಮೂರನೇ ಅಲೆ ಆರಂಭವಾಗಿದ್ದು ಕೋವಿಡ್ ಸೋಂಕಿತರ ಸಂಖ್ಯೆ 20 ಸಾವಿರದಿಂದ 30 ಸಾವಿರಕ್ಕೆ ಜಿಗಿದಿದೆ. ಮಾತ್ರವಲ್ಲದೇ ದಿನಕ್ಕೆ 5 ರಿಂದ 10 ಜನರು ಕೊರೊನಾ ಮಾರಿಗೆ ಕೊನೆಯುಸಿರೆಳೆಯುತ್ತಿದ್ದಾರೆ. 7 ದಿನಗಳಲ್ಲಿ 33 ಜನ ಕೊರೊನಾ ಬಲಿಯಾಗಿದ್ದು ಮೃತಪಟ್ಟವರಿಗೆ ಕೋರ್ಮಾರ್ಬಿಡಿಟಿ ಇತ್ತಾ? ಅಂತ ಆರೋಗ್ಯ ಇಲಾಖೆ ತನಿಖೆ ನಡೆಸುತ್ತಿದೆ.
ಸಾವಿನ ಅಂಕಿ-ಅಂಶ
7 ದಿನಗಳಲ್ಲಿ ಸಾವನ್ನಪ್ಪಿದ 33 ಜನರಲ್ಲಿ 11 ಜನರು ಕೊರೊನಾಗೆ ಬಲಿಯಾಗಿದ್ರೆ 22 ಮಂದಿ ಬೇರೆ ಬೇರೆ ರೋಗಗಳಿಂದ ಬಳಲುತ್ತಿದ್ದರು. ಇದರಲ್ಲಿ 21 ರಿಂದ 40 ವರ್ಷದ 5 ಮಂದಿ, 41 ರಿಂದ 60 ವಯಸ್ಸಿನ 9 ಜನರು ಹಾಗೂ 60 ವರ್ಷಕ್ಕಿಂತ ಮೇಲ್ಪಟ್ಟ 19 ಜನರು ಸಾವನ್ನಪ್ಪಿದ್ದಾರೆ. ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದ 12 ವರ್ಷದ ಮಗು ಸಾವನ್ನಪ್ಪಿದೆ.
ಸಾವನ್ನಪ್ಪಿದವರಲ್ಲಿ 21-40 ವಯಸ್ಸಿನ ಐವರ ಪೈಕಿ 4 ಜನ ಸಿಂಗಲ್ ಡೋಸ್ ವ್ಯಾಕ್ಸಿನ್ ಕೂಡ ಪಡೆದಿರಲಿಲ್ಲ. ಆದ್ರೆ ಯಾವುದೇ ಖಾಯಿಲೆ ಇಲ್ಲದ, ಡಬಲ್ ಡೋಸ್ ಪಡೆದಿದ್ದ 7 ಮಂದಿ ಕೊರೊನಾಗೆ ಬಲಿಯಾಗಿದ್ದು ಇವರ ಸಾವಿನ ಕಾರಣ ಪತ್ತೆ ಹಚ್ಚಲು ತನಿಖೆ ನಡೆಸಲಾಗ್ತಿದೆ. ಎರಡು ಡೋಸ್ ಲಸಿಕೆ ಪಡೆದಿದ್ರೂ ಅಂಗಾಂಗ ವೈಫಲ್ಯ, ಬಿಪಿ, ಶುಗರ್, ಲಿವರ್ ಫೇಲ್ಯೂರ್ನಿಂದ ಬಳಲುತ್ತಿದ್ದ 22 ಮಂದಿ ಕಳೆದ 7 ದಿನದಲ್ಲಿ ಸಾವನ್ನಪ್ಪಿದ್ದಾರೆ.
ಇನ್ನು ಬೆಂಗಳೂರಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಕೇಸ್ ಏರಿಕೆಯಾಗ್ತಿದ್ದು ನಗರದ ಗಲ್ಲಿ ಗಲ್ಲಿಗಳಲ್ಲೂ ಸೋಂಕಿತರು ಪತ್ತೆಯಾಗ್ತಿದ್ದಾರೆ. 198 ವಾರ್ಡ್ಗಳ ಪೈಕಿ 101 ವಾರ್ಡ್ ಡೇಂಜರ್ ಝೋನ್ ಆಗಿದ್ರೆ 33 ವಾರ್ಡ್ಗಳಲ್ಲಿ ಸೋಂಕಿತರ ಸಂಖ್ಯೆ ಸಾವಿರ ದಾಟಿದೆ.
ವಾರ್ಡ್ವಾರು ಸೋಂಕಿತರು
ವಾರ್ಡ್ವಾರು ಸೋಂಕಿತರು
33 ವಾರ್ಡ್ಗಳಲ್ಲಿ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದೆ. 68 ವಾರ್ಡ್ಗಳಲ್ಲಿ 500 ರಿಂದ 1000 ಕೇಸ್ ದಾಖಲಾಗ್ತಿವೆ. 64 ವಾರ್ಡ್ಗಳಲ್ಲಿ 250 ರಿಂದ 500 ಮಂದಿಗೆ ಪಾಸಿಟಿವ್ ಬಂದಿದ್ರೆ 26 ವಾರ್ಡ್ಗಳಲ್ಲಿ 100 ರಿಂದ 250 ಮಂದಿಗೆ ಸೋಂಕು ದೃಡಪಟ್ಟಿದೆ. 7 ವಾರ್ಡ್ಗಳಲ್ಲಿ 1 ರಿಂದ 100 ಕೇಸ್ಗಳಷ್ಟೇ ದಾಖಲಾಗಿವೆ.
ಒಟ್ಟಿನಲ್ಲಿ ಸಿಲಿಕಾನ್ ಸಿಟಿಯಲ್ಲಿ ದಿನೇ ದಿನೇ ಕೊರೊನಾ ಸಂಖ್ಯೆ ಹೆಚ್ಚಾಗೋದ್ರ ಜೊತೆಗೆ ಸಾವಿನ ಸಂಖ್ಯೆಯೂ ಅಧಿಕವಾಗ್ತಿದೆ. ಜನ ಆದಷ್ಟು ಕೊರೊನಾ ನಿಯಮ ಪಾಲಿಸುವ ಮೂಲಕ ಕೊರೊನಾ ಚೈನ್ಗೆ ಬ್ರೇಕ್ ಹಾಕಬೇಕಿದೆ.