ಬಾರಾಬಂಕಿ: ಕೊರೊನಾ ಸಾಂಕ್ರಾಮಿಕವನ್ನ ಕಟ್ಟಿಹಾಕಲು ಸಂಜೀವಿನಿಯಂತೆ ಲಸಿಕೆಗಳು ಬಂದಿವೆ. ಆದ್ರೆ ಲಸಿಕೆ ಬಗ್ಗೆ ಕೆಲವು ಜನರಲ್ಲಿ ಇರುವ ತಪ್ಪು ಕಲ್ಪನೆ, ಭಯ ಹಾಗೂ ಆತಂಕ ವ್ಯಾಕ್ಸಿನೇಷನ್​ಗೆ ಹಿನ್ನಡೆ ಉಂಟು ಮಾಡ್ತಿದೆ.

ಕೊರೊನಾ ಲಸಿಕೆ ಹಾಕಿಸಿಕೊಳ್ಳುವುದರಿಂದ ತಪ್ಪಿಸಿಕೊಳ್ಳಲು ಜನರು, ಆರೋಗ್ಯ ಸಿಬ್ಬಂದಿಯ ಕೈಗೆ ಸಿಗದಂತೆ ತಮ್ಮ ಮನೆಗಳಿಂದ ಓಡಿಹೋಗಿ ನದಿಗೆ ಹಾರಿದ ಘಟನೆಯೊಂದು ವರದಿಯಾಗಿದೆ. ಉತ್ತರ ಪ್ರದೇಶದ ಬಾರಬಂಕಿ ಜಿಲ್ಲೆಯ ಸಿಸೌಡಾ ಗ್ರಾಮದಲ್ಲಿ ಈ ವಿಚಿತ್ರ ಘಟನೆ ನಡೆದಿದೆ.

ಸಾರ್ವಜನಿಕರಿಗೆ ಲಸಿಕೆ ನೀಡಲು ಆರೋಗ್ಯ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿತ್ತು. ಈ ವೇಳೆ ಅಧಿಕಾರಿಗಳನ್ನ ಕಂಡ ಕೆಲ ಗ್ರಾಮಸ್ಥರು ಲಸಿಕೆ ತೆಗೆದುಕೊಳ್ಳಲು ನಿರಾಕರಿಸಿ ತಮ್ಮ ಮನೆಗಳಿಂದ ನದಿಯ ಕಡೆಗೆ ಓಡಿಹೋಗಿದ್ದಾರೆ. ಬಳಿಕ ಇವರನ್ನ ಆರೋಗ್ಯ ಅಧಿಕಾರಿಗಳು ಸಹ ಹಿಂಬಾಲಿಸಿದ್ದಾರೆ. 200ಕ್ಕೂ ಹೆಚ್ಚು ಜನರು ಆರೋಗ್ಯ ಸಿಬ್ಬಂದಿಗಳ ಕೈಯಿಂದ ತಪ್ಪಿಸಿಕೊಳ್ಳಲು ನದಿ ಕಡೆಗೆ ಓಟ ಕಿತ್ತರು.  ಸಿಬ್ಬಂದಿ ಹಿಂಬಾಲಿಸಿ ಬಂದಿದ್ರಿಂದ ಅವರಲ್ಲಿ ಕೆಲವರು ನದಿಯ ನೀರಿಗೆ ಹಾರಿದ್ದಾರೆ.

ಆರೋಗ್ಯ ಅಧಿಕಾರಿಗಳು ಎಷ್ಟೇ ಮನವಿ ಮಾಡಿಕೊಂಡ್ರು ಸಹ ಗ್ರಾಮಸ್ಥರು ಲಸಿಕೆಯನ್ನ  ನಿರಾಕರಿಸಿದ್ದಾರೆ. ನದಿಯಿಂದ ಹೊರಬನ್ನಿ ಎಂದು ಮನವೊಲಿಸಲು ಅಧಿಕಾರಿಗಳು ಹರಸಾಹಸಪಡುವಂತಾಯ್ತು. ತಾವು ಇನ್ನೂ ಬಲವಂತ ಮಾಡಿ ಮುಂದೆಹೋದ್ರೆ ಜನರು ನೀರಿನಲ್ಲಿ ಮುಳುಗಬಹುದೆಂಬ ಭಯದಿಂದ ಅಧಿಕಾರಿಗಳು ವಾಪಸ್ಸಾಗಿದ್ದಾರೆ. ಒಟ್ಟು 1500 ನಿವಾಸಿಗಳಿರುವ ಈ ಗ್ರಾಮದಲ್ಲಿ ಈವರೆಗೆ ಅಧಿಕಾರಿಗಳು ಕೇವಲ 14 ಜನರಿಗೆ ಮಾತ್ರ ಲಸಿಕೆ ಹಾಕುವಲ್ಲಿ ಸಫಲರಾಗಿದ್ದಾರೆ ಎಂದು ವರದಿಯಾಗಿದೆ.

ಜನರಲ್ಲಿ ಲಸಿಕೆ ಬಗ್ಗೆ ಅರಿವಿನ ಕೊರತೆ ಇದೆ. ನಾವು ಶೀಘ್ರದಲ್ಲೇ ವ್ಯಾಕ್ಸಿನ್ ಬಗ್ಗೆ ಜಾಗೃತಿ ಅಭಿಯಾನ ನಡೆಸಲಿದ್ದೇವೆ ಅಂತ ಬಾರಾಬಂಕಿ ಜಿಲ್ಲೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

The post ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿ ಮನೆಯಿಂದ ಓಡಿ, ನದಿಗೆ ಜಿಗಿದ ಗ್ರಾಮಸ್ಥರು appeared first on News First Kannada.

Source: newsfirstlive.com

Source link