ಲಾಂಗ್​​ ಡ್ರೈವ್​​ ಹೋಗಲು ದುಡ್ಡಿಲ್ಲ ಎಂದು ಕಳ್ಳತನಕ್ಕಿಳಿದ್ದ ಪ್ರೇಮಿಗಳು ಅಂದರ್​

ಬೆಂಗಳೂರು: ಲಾಂಗ್ ಡ್ರೈವ್ ಹೋಗಲಿಕ್ಕೆ ದುಡ್ಡಿಲ್ಲ ಅಂತ ಕಳ್ಳತನ ಮಾಡುತ್ತಿದ್ದ ಪ್ರೇಮಿಗಳನ್ನು ಬಂಧನ ಮಾಡಿದ ಘಟನೆ ಚಂದ್ರಾಲೇಔಟ್ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಿನಯ್​​ ಹಾಗೂ ಕೀರ್ತನಾ ಬಂಧಿತ ಆರೋಪಿಗಳಾಗಿದ್ದಾರೆ. ರಾಜಾಜಿನಗರ ರೌಡಿಶೀಟರ್ ಆಗಿರೋ ವಿನಯ್​​ನನ್ನು ಕೀರ್ತನಾ ಪ್ರೀತಿ ಮಾಡುತ್ತಿದ್ದಳಂತೆ. ವಿನಯ್ ನನ್ನ ಲಾಂಗ್ ಡ್ರೈವ್ ಕರೆದುಕೊಂಡು ಹೋಗು, ಗೋಲ್ಡ್ ಗಿಫ್ಟ್ ಕೊಡಿಸು ಅಂತ ಕೀರ್ತನಾ ಪೀಡಿಸುತ್ತಿದ್ದಳು ಎನ್ನಲಾಗಿದೆ. ಇದಕ್ಕೆ ವಿನಯ್​​ ನಾನೇ ಕಳ್ಳ ನಿನಗೇನೆ ಗಿಫ್ಟ್ ಕೊಡಿಸಲಿ, ನಾನೊಬ್ಬ ರೌಡಿಶೀಟರ್ ಅಂತ ತನ್ನ ಪ್ರೇಮಿಯನ್ನ ಕಿಚಾಯಿಸುತ್ತಿದ್ದನಂತೆ.

ನೀನು ರೌಡಿ ಆದರೂ ನಿನ್ನನ್ನೇ ಪ್ರೀತಿ ಮಾಡ್ತಿದ್ದೀನಿ.. ನಿನ್ನ ಜೊತೆ ಜೈಲಿಗೆ ಬೇಕಾದರೂ ಬರ್ತೀನಿ ಅಂತಿದ್ಲಂತೆ ಕೀರ್ತನಾ. ಅದರಂತೆ ತನ್ನ ಪ್ರೇಮಿ, ರೌಡಿಶೀಟರ್ ವಿನಯ್ ಜೊತೆ ಕಳ್ಳತನಕ್ಕೆ ಕೀರ್ತನಾ ಕೈ ಜೋಡಿಸಿದ್ದಳಂತೆ.

ಗಂಡ ಹೆಂಡತಿ ರೂಪದಲ್ಲಿ ಬಾಡಿಗೆ ಮನೆ ಕೇಳಲು ಹೋಗುವ ನೆಪದಲ್ಲಿ ಹೋಗುತ್ತಿದ್ದ ಖರ್ತನಾಕ್ ಪ್ರೇಮಿಗಳು, ಮಾಲೀಕರ ಮನೆಯಲ್ಲಿ ಸಿಕ್ಕ ಸಿಕ್ಕ ವಸ್ತುಗಳನ್ನು ಕದ್ದು ಎಸ್ಕೇಪ್​ ಆಗುತ್ತಿದ್ದರಂತೆ. ಅಕ್ಟೋಬರ್​ 04 ರಂದು ಮಾರುತಿನಗರದ ಕುಲಶೇಖರ್ ಎನ್ನುವವರ ಮನೆಗೆ ಬಾಡಿಗೆಗೆ ಕೇಳುವ ನೆಪದಲ್ಲಿ ತೆರಳಿದ್ದ ಆರೋಪಿಗಳು, ಅಲ್ಲಿಯೂ ಮನೆಯಲ್ಲಿದ್ದ ಮೊಬೈಲ್​​​, ಲ್ಯಾಪ್​​ಟಾಪ್​ ಹಾಗೂ 15 ಸಾವಿರ ಹಣವನ್ನು ಕದ್ದು ಪರಾರಿಯಾಗಿದ್ದರು ಎನ್ನಲಾಗಿದೆ.

ಘಟನೆ ಕುರಿತಂತೆ ಮಾಲೀಕ ಕುಲಶೇಖರ್​ ಪೊಲೀಸ್​ ಠಾಣೆಗೆ ದೂರು ನೀಡಿದ್ದು, ದೂರಿನ ಅನ್ವಯ ಪ್ರಕರಣ ತನಿಖೆ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಮನೆ ಮಾಲೀಕರ ಜೊತೆಯಲ್ಲಿ ಬಾಡಿಗೆ ಮಾತಾಡುವ ನೆಪದಲ್ಲಿ ವಿನಯ್​ ಮಾತಿಗಿಳಿಯುತ್ತಿದ್ದರಂತೆ, ಮನೆ ತುಂಬಾ ಚೆನ್ನಾಗಿದೆ ಅಂತ ಹೇಳಿ ಕೀರ್ತನಾ ಮನೆ ನೋಡಲು ಮುಂದಾಗುತ್ತಿದ್ದಳಂತೆ. ಇತ್ತ ಮಾಲೀಕರ ಗಮನವನ್ನು ವಿನಯ್​ ಬೇರೆಡೆ ಸೆಳೆಯುತ್ತಿದಂತೆ ಕೀರ್ತನಾ ಮನೆಯಲ್ಲಿ ಸಿಕ್ಕ ಸಿಕ್ಕ ಬೆಲೆ ಬಾಳುವ ವಸ್ತುಗಳನ್ನು ಎಗರಿಸುತ್ತಿದ್ದಳು ಎನ್ನಲಾಗಿದೆ.

News First Live Kannada

Leave a comment

Your email address will not be published. Required fields are marked *