ಮೈಸೂರು: ಜಿಲ್ಲೆಯ ನಂಜನಗೂಡಿನ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಖಾಕಿ ವಶದಲ್ಲಿದ್ದ ವ್ಯಕ್ತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಬ್ಯಾಳಾರುಹುಂಡಿ ಗ್ರಾಮದ ಸಿದ್ದರಾಜು (32) ಮೃತ ವ್ಯಕ್ತಿ. 3 ದಿನಗಳ ಹಿಂದೆ ಬ್ಯಾಳಾರು ಹುಂಡಿ ಗ್ರಾಮದ ಮಣಿ ಎಂಬಾಕೆಯ ಜೊತೆ ಮೃತ ವ್ಯಕ್ತಿಯ ತಾಯಿ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ್ದರು. ಮಣಿ ಎಂಬಾಕೆ ಬೇರೆ ಗ್ರಾಮದಲ್ಲಿದ್ದ ಸಂಬಂಧಿಕರನ್ನು ಕರೆಯಿಸಿ ಮೃತ ವ್ಯಕ್ತಿ ಸಿದ್ದರಾಜು ಎಂಬಾತನ ಮೇಲೆ ಹಲ್ಲೆ ಮಾಡಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ವೇಳೆ ಗ್ರಾಮಸ್ಥರು ಪೊಲೀಸರಿಗೆ ವಿಚಾರ ತಿಳಿಸಿದಾಗ ಸ್ಥಳಕ್ಕಾಮಿಸಿದ ಅವರು ಮೃತ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದರು.
ಈ ವೇಳೆ ಮೃತ ಸಿದ್ದರಾಜುವಿಗೆ ರಾತ್ರಿ ವೇಳೆ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಇನ್ನು ವಿಷಯ ತಿಳಿದು ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಒಂದು ರಾತ್ರಿ ಠಾಣೆಯಲ್ಲಿದ್ದು ಮಾರನೇ ದಿನ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಪೊಲೀಸ ಅಧಿಕಾರಗಳ ಈ ಎರಡು ವಿಭಿನ್ನ ಹೇಳಿಕೆಗಳೂ ಲಾಕಪ್ ಡೆತ್ ಆಗಿರುವ ಅನುಮಾನಗಳನ್ನು ಹುಟ್ಟು ಹಾಕುವಂತಿದೆ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ.