‘ದಿಯಾ’ ಸಿನಿಮಾದ ನಟನೆಯ ಮೂಲಕ ಕನ್ನಡಿಗರ ಮನಸ್ಸಲ್ಲಿ ನೆಲೆಯೂರಿರುವ ನಟ ಪೃಥ್ವಿ ಅಂಬಾರ್​. ತಮ್ಮ ಪ್ರಬುದ್ಧ ನಟನೆಗೆ ಬ್ಯಾಕ್​ ಟು ಬ್ಯಾಕ್​ ಸಿನಿಮಾ ಆಫರ್ಸ್​​ ಪಡೆದುಕೊಂಡ ಪೃಥ್ವಿ ಇದೀಗ ಮತ್ತೆ ಪೆನ್ನು ಹಿಡಿದಿದ್ದಾರೆ ಅನ್ನೋ ಸುದ್ದಿ ಓಡಾಡ್ತಿದೆ. ಹೌದು.. ಕಳೆದ ವರ್ಷ ಲಾಕ್​ಡೌನ್​ ಆದಾಗ, ಪೃಥ್ವಿ ಅಂಬಾರ್​​ ತಮ್ಮ ಹುಟ್ಟೂರು ಕಾಸರಗೋಡು ಸಮೀಪದ ಅಂಬಾರ್​ನಲ್ಲಿ ಕಾಲ ಕಳೆದಿದ್ದರು. ಲಾಕ್​​ಡೌನ್​ ಉದ್ದಕ್ಕೂ ಕೈಯಲ್ಲಿ ಪೆನ್ನು ಹಿಡಿದು ಕಥೆ ರೆಡಿ ಮಾಡಿಕೊಂಡಿದ್ದರು. ಇದೀಗ ಮತ್ತೆ ಗೂಡು ಸೇರಿರುವ ಪೃಥ್ವಿ ಮತ್ತೊಂದು ಕಥೆ ತಯಾರಿಸುತ್ತಿದ್ದಾರೆ.

ಈ ಸಲವೂ ಲಾಕ್​ಡೌನ್​ ಆಗುತ್ತಿದ್ದಂತೆಯೇ ಅಂಬಾರ್​ಗೆ ತೆರಳಿರುವ ಪೃಥ್ವಿ, ಈ ಬಾರಿ ಒಂದು ಸೈಕಾಲಾಜಿಕಲ್​ ಥ್ರಿಲ್ಲರ್​ ಕಥೆ ರೆಡಿ ಮಾಡ್ತಿದ್ದಾರೆ. ಅಂದ್ಹಾಗೇ ನಟ ಪೃಥ್ವಿಗೆ ನಟನೆಗಿಂತಲೂ ನಿರ್ದೇಶನದ ಮೇಲೆ ಒಲವು ಹೆಚ್ಚು. ನಿರ್ದೇಶಕರಾಗಬೇಕು ಅಂತಾನೇ ಸಿನಿಮಾ ಕನಸು ಕಂಡವರು. ಇದಕ್ಕಾಗಿಯೇ ಸಿಕ್ಕ ಸಮಯವನ್ನ ಬಳಸಿಕೊಂಡು ಒಂದರ ಮೇಲೊಂದರಂತೆ ಕಥೆಗಳನ್ನ ಬರೆಯುತ್ತಿದ್ದಾರೆ. ಸದ್ಯ ಪೃಥ್ವಿ ಕಮಿಟ್​ ಆಗಿರುವ ಸಿನಿಮಾಗಳನ್ನ ಮುಗಿಸಿಕೊಟ್ಟು ನಿರ್ದೇಶಕನ ಟೋಪಿ ಹಾಕಿಕೊಂಡ್ರು ಅಚ್ಚರಿಯಿಲ್ಲ.

ಡಾ.ಶಿವರಾಜ್​ಕುಮಾರ್​ ಅಭಿನಯಿಸಿ, ತಮಿಳು ನಿರ್ದೇಶಕ ವಿಜಯ್​ ಮಿಲ್ಟನ್​ ಆ್ಯಕ್ಷನ್ ಕಟ್​​ ಹೇಳ್ತಿರುವ ಸಿನಿಮಾದಲ್ಲಿ ಪೃಥ್ವಿ ನಟಿಸುತ್ತಿದ್ದಾರೆ. ಸದ್ಯದ ಮಟ್ಟಿಗೆ ಈ ಸಿನಿಮಾಗೆ ‘ಶಿವಪ್ಪ’ ಅಂತ ಹೆಸರಿಡಲಾಗಿದೆ. ಈ ಸಿನಿಮಾದ ಜೊತೆಯಲ್ಲೇ ಲೋಹಿತ್​ ನಿರ್ದೇಶನದ ಹಾರರ್​ ಸಿನಿಮಾದ ಕೆಲಸವೂ ಜಾರಿಯಲ್ಲಿದೆ. ನಿರ್ದೇಶಕ ಲೋಹಿತ್​ ಮೊದಲ ಪ್ರೊಡಕ್ಷನ್​​ ‘ಲೈಫ್​ ಈಸ್​ ಬ್ಯೂಟಿಫುಲ್’​ ಸಿನಿಮಾದಲ್ಲಿ ಪೃಥ್ವಿ ನಟಿಸಿದ್ದು, ಈಗಾಗಲೇ ಕಂಪ್ಲೀಟ್​ ಆಗಿದೆ. ಇದರ ಜೊತೆಗೆ ಶಶಿಧರ್​ ನಿರ್ದೇಶನದ ‘ಶುಗರ್​ಲೆಸ್’​ ಸಿನಿಮಾ ಕೂಡ ಪೋಸ್ಟ್​ ಪ್ರೊಡಕ್ಷನ್​ ಹಂತದಲ್ಲಿದೆ.

ಇದೆಲ್ಲದರ ನಡುವೆ ಪೃಥ್ವಿ ಅಂಬಾರ್​​ ಬಾಲಿವುಡ್​​ ಡೆಬ್ಯೂ ಕೂಡ ಮಾಡಿದ್ದಾರೆ. ತಮ್ಮ ನಟನೆಯ ‘ದಿಯಾ’ ಸಿನಿಮಾ ಹಿಂದಿಯಲ್ಲಿ ರೀಮೇಕ್​ ಮಾಡಲಾಗಿದ್ದು, ಪೃಥ್ವಿ ಅಂಬಾರ್​ ತಮ್ಮ ಪಾತ್ರಕ್ಕಾಗಿ ತಾವೇ ಬಣ್ಣ ಹಚ್ಚಿದ್ದಾರೆ.

ವಿಶೇಷ ಬರಹ: ರಕ್ಷಿತಾ.ರೈ- ಫಿಲ್ಮ್​ ಬ್ಯೂರೋ

The post ಲಾಕ್​ಡೌನ್​ನಿಂದ ನಿರ್ದೇಶನದ ಹಾದಿ; ಮತ್ತೆ ಪೆನ್ನು ಹಿಡಿದ ದಿಯಾ ನಟ ಪೃಥ್ವಿ ಅಂಬಾರ್​ appeared first on News First Kannada.

Source: newsfirstlive.com

Source link