ಬೆಂಗಳೂರು: ರಾಜ್ಯದಲ್ಲಿ ಲಾಕ್​ಡೌನ್ ಜಾರಿಯಾಗಿ ಇಂದಿಗೆ ಒಂದು ವಾರ ಪೂರೈಸಿದೆ. ಈ ಹಿನ್ನೆಲೆ ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಪರಿಸ್ಥಿತಿ ಹೇಗಿದೆ ಎಂದು ಚರ್ಚಿಸಲು ಇಂದು ಸಿಎಂ ಬಿ.ಎಸ್​​ ಯಡಿಯೂರಪ್ಪ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಸಚಿವರ ಮಹತ್ವದ ಸಭೆ ನಡೆಯಲಿದೆ.

ಸಂಜೆ 4:30ಕ್ಕೆ ಸಿಎಂ ಗೃಹ ಕಚೇರಿ ಕೃಷ್ಣಾದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಯಡಿಯೂರಪ್ಪ ಸಮಾಲೋಚನೆ ನಡೆಸಲಿದ್ದಾರೆ. ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಪಂಚಾಯತ್‌ನ ಸಿಇಓಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ರಾಜ್ಯದಲ್ಲಿ ಕೊರೊನಾ ಸೋಂಕಿನ ವಿಚಾರವಾಗಿ ಜಿಲ್ಲೆಗಳ ಪರಿಸ್ಥಿತಿ ಹೇಗಿದೆ ಎಂದು ಸಿಎಂ ಅವಲೋಕಿಸಲಿದ್ದಾರೆ. ಪ್ರತಿಯೊಂದು ಜಿಲ್ಲೆಯಲ್ಲೂ ಕೊರೊನಾ ಸೋಂಕಿನ ಪ್ರಮಾಣ, ತಡೆಯುವಿಕೆ, ಕೇರ್ ಸೆಂಟರ್ ನಿರ್ಮಾಣ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾಹಿತಿ ಕಲೆ ಹಾಕಲಿದ್ದಾರೆ. ಡಿಸಿಎಂ ಡಾ‌.ಸಿ.ಎನ್.ಅಶ್ವತ್ಥ್‌ನಾರಾಯಣ್, ಸಚಿವರಾದ ಆರ್.ಅಶೋಕ್, ಬಸವರಾಜ ಬೊಮ್ಮಾಯಿ ಹಾಗೂ ಡಾ.ಕೆ.ಸುಧಾಕರ್ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಂಜೆ 6ಕ್ಕೆ ಸಚಿವರೊಂದಿಗೆ ಸಭೆ
ಬಳಿಕ ಸಂಜೆ 6ಕ್ಕೆ ಕೊರೊನಾ ಜವಾಬ್ದಾರಿ ಹೊತ್ತಿರುವ ಸಚಿವರ ಜೊತೆಗೆ ಸಿಎಂ ಯಡಿಯೂರಪ್ಪ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಡಾ.ಸಿ.ಎನ್.ಅಶ್ವತ್ಥ್‌ ನಾರಾಯಣ್, ಜಗದೀಶ್ ಶೆಟ್ಟರ್, ಆರ್.ಅಶೋಕ್, ಬಸವರಾಜ ಬೊಮ್ಮಾಯಿ, ಅರವಿಂದ ಲಿಂಬಾವಳಿ, ಡಾ.ಕೆ. ಸುಧಾಕರ್‌ ಭಾಗಿಯಾಗಲಿದ್ದಾರೆ. ಕಳೆದೊಂದು ವಾರದಲ್ಲಿ ಕೊರೊನಾ ನಿಯಂತ್ರಣಕ್ಕೆ ಸಚಿವರ ಕಾರ್ಯವೈಖರಿ ಹೇಗಿತ್ತು, ಮುಂದೆ ಕೊರೊನಾ ಕಂಟ್ರೋಲ್‌ಗೆ ಸಚಿವರು ನಡೆಸಲಿರುವ ಸಿದ್ಧತೆಗಳೇನು ಎಂಬ ಬಗ್ಗೆ ಸಿಎಂ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

 

The post ಲಾಕ್​ಡೌನ್​​ಗೆ 1 ವಾರ: ಇಂದು ಎಲ್ಲಾ ಡಿ.ಸಿ, ಉಸ್ತುವಾರಿ ಸಚಿವರೊಂದಿಗೆ ಸಿಎಂ ಸಭೆ appeared first on News First Kannada.

Source: newsfirstlive.com

Source link