ಬೆಂಗಳೂರು: ಕೊರೊನಾ ಸೋಂಕಿತರ ಸಂಖ್ಯೆ ಗ್ರಾಮೀಣ ಪ್ರದೇಶಗಳಲ್ಲಿ ಏರಿಕೆ ಕಾಣುತ್ತಿರುವ ಹಿನ್ನೆಲೆ ಇಂದು ಜಿಲ್ಲೆಗಳ ಡಿಸಿಎಂಗಳ ಜೊತೆಗೆ ಸಿಎಂ ಬಿ.ಎಸ್. ಯಡಿಯೂರಪ್ಪ ವಿಡಿಯೋ ಕಾನ್ಫರೆನ್ಸ್​ ಮೂಲಕ ಸಭೆ ನಡೆಸಿದ್ರು. ಸಭೆಯ ನಂತರ ಮಾತನಾಡಿದ ಅವರು.. ಲಾಕ್​ಡೌನ್​, ಆರ್ಥಿಕ ಪ್ಯಾಕೇಜ್​ ಬಗ್ಗೆ ಚರ್ಚೆಯಾಗ್ತಾ ಇದೆ. 2-3 ದಿನಗಳಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಸಿಎಂ ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು..? 

1. ಜಿಲ್ಲೆಗಳಲ್ಲಿ ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಳ್ಳಿಗಳಲ್ಲಿ ಕೋವಿಡ್ ನಿಯಂತ್ರಣಕ್ಕೆ ಆದ್ಯತೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಯಿತು.
2. ಪರೀಕ್ಷಾ ವರದಿಗಳನ್ನು 24 ಗಂಟೆಯೊಳಗೆ ನೀಡಲು ಕ್ರಮ ವಹಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಹೋಮ್ ಐಸೋಲೇಷನ್ ಪ್ರಕ್ರಿಯೆಯನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು.
3. ಮನೆ ಮನೆ ಭೇಟಿ ಹಾಗೂ ಫೋನ್ ಟ್ರಯಾಜಿಂಗ್ ಮೂಲಕ ಸೋಂಕಿತ ವರ್ಗೀಕರಣವನ್ನು ತ್ವರಿತವಾಗಿ ನಡೆಸಬೇಕು ಎಂದು ಸೂಚನೆ ನೀಡಲಾಯಿತು.
4. ಹೋಮ್ ಐಸೊಲೇಷನ್‍ನಲ್ಲಿ ಇರುವವರಿಗೆ ಮೆಡಿಕಲ್ ಕಿಟ್ ಒದಗಿಸಲು ಔಷಧಿ ಕೊರತೆಯಾದಲ್ಲಿ ಸ್ಥಳೀಯವಾಗಿ ಖರೀದಿಸಿ, ಒದಗಿಸಲು ಸೂಚನೆ ನೀಡಲಾಯಿತು.
5. ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿ ಕೋವಿಡ್ ನಿರ್ವಹಣೆಗೆ ಭಾರತ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಯಿತು.


6. ಹೆಚ್ಚುತ್ತಿರುವ ಸೋಂಕಿತರನ್ನು ರೋಗಲಕ್ಷಣದ ತೀವ್ರತೆಗೆ ಅನುಗುಣವಾಗಿ ಚಿಕಿತ್ಸಾ ವಿಧಾನವನ್ನು ನಿರ್ಧರಿಸುವ ಮೂಲಕ ಸಂಪನ್ಮೂಲಗಳ ಸದ್ಬಳಕೆ ಮಾಡಿಕೊಳ್ಳಬೇಕಾಗಿದೆ. ತುರ್ತು ಚಿಕಿತ್ಸೆ ಅಗತ್ಯವಿರುವವರಿಗೆ ಸಕಾಲದಲ್ಲಿ ಚಿಕಿತ್ಸೆಯನ್ನು ಖಾತರಿ ಪಡಿಸುವಂತೆ ಸೂಚಿಸಲಾಯಿತು.
7. ಇದಕ್ಕೆ ಪೂರಕ ವ್ಯವಸ್ಥೆಗಳನ್ನು ನೀವು ಮಾಡಿಕೊಳ್ಳಬೇಕು. ಅಗತ್ಯಕ್ಕೆ ತಕ್ಕಂತೆ ಕೋವಿಡ್ ಕೇರ್ ಸೆಂಟರುಗಳು, ತಾತ್ಕಾಲಿಕ ಆಸ್ಪತ್ರೆಗಳನ್ನು ಸ್ಥಾಪಿಸಲು ಸಹ ಸ್ಥಳ ಗುರುತಿಸಿ, ಅಗತ್ಯ ಸೌಲಭ್ಯ ಒದಗಿಸಲು ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಲಾಯಿತು.
8. ಎಲ್ಲ ಜಿಲ್ಲೆಗಳಿಗೆ ಅಗತ್ಯವಿರುವಷ್ಟು ಆಕ್ಸಿಜನ್ ಕಾನ್ಸಂಟ್ರೇಟರ್​ಗಳನ್ನು ಆರೋಗ್ಯ ಇಲಾಖೆಯಿಂದ ಒದಗಿಸಲಾಗುತ್ತಿದೆ.
9. ಆಮ್ಲಜನಕ ಪೂರೈಕೆಯನ್ನು ಮುಂಚಿತವಾಗಿಯೇ ಅಂದಾಜಿಸಿ, ಸಕಾಲದಲ್ಲಿ ಪೂರೈಕೆಯಾಗುವುದನ್ನು ಖಾತರಿ ಪಡಿಸಬೇಕು. ತುರ್ತು ಸಂದರ್ಭಗಳಲ್ಲಿ ನೆರೆಯ ಜಿಲ್ಲೆಗಳೊಂದಿಗೆ ಸಮನ್ವಯ ವಹಿಸಿ, ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಬೇಕು.
10. ಚಿಕಿತ್ಸಾ ಸೌಲಭ್ಯ, ಔಷಧ, ಆಮ್ಲಜನಕ ಮತ್ತಿತರ ಸಂಪನ್ಮೂಲಗಳನ್ನು ವಿವೇಚನೆಯಿಂದ ಬಳಕೆ ಮಾಡಿಕೊಂಡು, ಹೆಚ್ಚು ಜನರಿಗೆ ಅನುಕೂಲ ಕಲ್ಪಿಸಬೇಕು. ಹೋಮ್-ಐಸೋಲೇಷನ್ ನಲ್ಲಿರುವವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ, ಅವರಿಗೆ ಮೆಡಿಸಿನ್‍ಗಳನ್ನು ಸರಿಯಾದ ರೀತಿಯಲ್ಲಿ ಒದಗಿಸಿಬೇಕು ಹಾಗೂ ಅವರ ಆರೋಗ್ಯ ಸ್ಥಿತಿಗಳ ಕುರಿತು ಪ್ರತಿದಿನ ಮಾಹಿತಿ ಪಡೆದುಕೊಳ್ಳಬೇಕು.
11. ಪರಿಸ್ಥಿತಿಯ ತೀವ್ರತೆಗೆ ಅನುಗುಣವಾಗಿ ನಿರ್ಬಂಧಗಳನ್ನು ಇನ್ನಷ್ಟು ಕಠಿಣಗೊಳಿಸುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಮಾಲೋಚಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಯಿತು.
12. ವಿವಿಧ ಜಿಲ್ಲೆಗಳಲ್ಲಿ ಪತ್ತೆಯಾಗುತ್ತಿರುವ ಬ್ಲಾಕ್ ಫಂಗಸ್ ಪ್ರಕರಣಗಳ ಕುರಿತು ಮಾಹಿತಿ ಪಡೆದ ಮುಖ್ಯಮಂತ್ರಿಗಳು, ಪ್ರಸ್ತುತ ಬೌರಿಂಗ್ ಆಸ್ಪತ್ರೆಯಲ್ಲಿ ಇದಕ್ಕೆ ಚಿಕಿತ್ಸಾ ಸೌಲಭ್ಯ ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ವಿಭಾಗ ಮಟ್ಟದಲ್ಲಿ ಈ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.


13. ಚಿಕ್ಕಮಗಳೂರು ಜಿಲ್ಲೆಗೆ ಆದ್ಯತೆಯ ಮೇರೆಗೆ ಪಿಎಸ್‍ಎ ಜನರೇಟರ್ ಒದಗಿಸಲಾಗುವುದು.
14. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಪರೀಕ್ಷಾ ಕೇಂದ್ರ ಶೀಘ್ರವೇ ಕಾರ್ಯಾರಂಭ ಮಾಡಲಿದೆ.
15. ಭದ್ರಾವತಿಯ ವಿಐಎಸ್‍ಎಲ್ ನಲ್ಲಿ ಆಮ್ಲಜನಕ ಉತ್ಪಾದನೆ ಹಾಗೂ ಬಾಟ್ಲಿಂಗ್ ಸಾಮಥ್ರ್ಯ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಯಿತು.
16. ಗ್ರಾಮೀಣ ಪ್ರದೇಶದಲ್ಲಿ ಹೋಮ್ ಐಸೋಲೇಷನ್ ಗೆ ಸೂಕ್ತ ಸೌಲಭ್ಯ ಇಲ್ಲದ ಕಾರಣ, ಪಿಎಚ್ ಸಿ ಮಟ್ಟದಲ್ಲಿ, ಹೋಬಳಿಗಳಲ್ಲಿ ವಸತಿ ಶಾಲೆ, ಸಮುದಾಯ ಭವನಗಳನ್ನು ಕೋವಿಡ್ ಕೇರ್ ಸೆಂಟರುಗಳನ್ನು ತೆರೆಯಬೇಕು.
17. ಕೇಂದ್ರ ಮತ್ತು ರಾಜ್ಯ ಸರ್ಕಾರ ಆಕ್ಸಿಜನ್ ಪ್ಲಾಂಟ್ ಮತ್ತು ಜನರೇಟರುಗಳನ್ನು ಅಗತ್ಯವಿರುವ ಕಡೆ ನೀಡಲಾಗುತ್ತಿದೆ.
18. ಮೂರು ತಿಂಗಳಿಗಾಗುವಷ್ಟು ಔಷಧಿ ಖರೀದಿಸಲಾಗುತ್ತಿದೆ. ಆದ್ದರಿಂದ ಮೆಡಿಕಲ್ ಕಿಟ್ ಗೆ ಔಷಧಿ ಕೊರತೆಯಾಗದು.
19. ಬ್ಲಾಕ್ ಫಂಗಸ್ ಹೊಸ ಕಾಯಿಲೆ ಅಲ್ಲ. ಐಸಿಯು, ವೆಂಟಿಲೇಟರುಗಳು, ಹ್ಯುಮಿಡಿಫೈಯರ್ ಬಳಕೆಯಿಂದ ಹೆಚ್ಚಾಗುತ್ತಿದೆ. ಐದು ವಿಭಾಗೀಯ ವೈದ್ಯಕೀಯ ಕಾಲೇಜುಗಳಲ್ಲಿ ಚಿಕಿತ್ಸಾ ವ್ಯವಸ್ಥೆ- ಶಿವಮೊಗ್ಗ, ಕಲಬುರಗಿ, ಮೈಸೂರು, ಹುಬ್ಬಳ್ಳಿ, ಮಂಗಳೂರಿನಲ್ಲಿ ಪ್ರಾರಂಭವಾಗಲಿದೆ.


20. ಟ್ರಯಾಜಿಂಗ್ ಎರಡು ಹಂತದಲ್ಲಿ ಆಗಲೇ ಬೇಕು. ಪರೀಕ್ಷಾ ವರದಿ ಬಂದು ಎರಡು ಗಂಟೆಯೊಳಗೆ ಹಾಗೂ ಆಸ್ಪತ್ರೆಗೆ ದಾಖಲಾಗುವ ಸಂದರ್ಭದಲ್ಲಿ ಆಗಲೇ ಬೇಕು ಎಂದು ಸೂಚಿಸಲಾಯಿತು.
21. ಎಲ್ಲ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ವಾರಕ್ಕೆ ಎರಡು ಬಾರಿ ಜಿಲ್ಲಾಧಿಕಾರಿಗಳೊಂದಿಗೆ ಕೋವಿಡ್ ನಿರ್ವಹಣೆ ಕುರಿತು ಚರ್ಚಿಸಿ, ಸಮಸ್ಯೆಗಳನ್ನು ಬಗೆಹರಿಸಬೇಕು.
22. ಲಸಿಕೆ ನೀಡುವ ಕುರಿತಂತೆ ಚರ್ಚೆ ನಡೆದ ಸಂದರ್ಭದಲ್ಲಿ, ಲಭ್ಯವಿರುವ ಲಸಿಕೆಯನ್ನು 45 ವರ್ಷ ಮೇಲ್ಪಟ್ಟ ಎರಡನೇ ಡೋಸ್ ಗೆ ಅರ್ಹ ವ್ಯಕ್ತಿಗಳಿಗೆ ಆದ್ಯತೆಯ ಮೇರೆಗೆ ನೀಡಬೇಕು. ನಂತರ 45 ವರ್ಷ ಮೇಲ್ಪಟ್ಟ ವ್ಯಕ್ತಿಗಳಿಗೆ ಮೊದಲ ಡೋಸ್ ನೀಡಬೇಕು ಎಂದು ಸೂಚಿಸಲಾಯಿತು.

ಇನ್ನು ಈ ಸಭೆಯಲ್ಲಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ: ಸಿ.ಎನ್ ಅಶ್ವತ್ಥ್‍ನಾರಾಯಣ್, ಸಚಿವರಾದ ಡಾ: ಕೆ.ಸುಧಾಕರ, ಅರವಿಂದ ಲಿಂಬಾವಳಿ, ಕೆ ಗೋಪಾಲಯ್ಯ, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮಾ, ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಉಪಸ್ಥಿತರಿದ್ದರು.

The post ಲಾಕ್​ಡೌನ್, ಆರ್ಥಿಕ ಪ್ಯಾಕೇಜ್​​ ಬಗ್ಗೆ 2-3 ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ತೇವೆ- ಸಿಎಂ appeared first on News First Kannada.

Source: newsfirstlive.com

Source link