ನವದೆಹಲಿ: ದೇಶದಲ್ಲಿ ಕೊರೊನಾ ಎರಡನೇ ಅಲೆ ವ್ಯಾಪಕವಾಗ್ತಿರೋ ಹಿನ್ನೆಲೆ ಸುಪ್ರೀಂಕೋರ್ಟ್​ ನಿನ್ನೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಹಲವು ನಿರ್ದೇಶನಗಳನ್ನ ನೀಡಿದೆ. ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ಸ್ಥಳೀಯ ವಸತಿ ಅಥವಾ ಐಡೆಂಟಿಟಿ ಪ್ರೂಫ್ ಇಲ್ಲವೆಂಬ ಕಾರಣಕ್ಕೆ ಯಾವುದೇ ರೋಗಿಯನ್ನು ಆಸ್ಪತ್ರೆಗೆ ಸೇರಿಸಿಕೊಳ್ಳದಿರುವುದು ಅಥವಾ ಅಗತ್ಯ ಔಷಧಿಗಳನ್ನು ನಿರಾಕರಿಸುವುದನ್ನ ಮಾಡಬಾರದು ಎಂದು ಸರ್ವೋಚ್ಛ ನ್ಯಾಯಾಲಯ ಸೂಚಿಸಿದೆ. ಹಾಗೇ ಲಾಕ್​ಡೌನ್ ಹೇರುವಿಕೆ ಕ್ರಮವನ್ನ ಪರಿಗಣಿಸುವಂತೆ ಸಲಹೆ ನೀಡಿದೆ.

ಸುಪ್ರೀಂಕೋರ್ಟ್​ನ ನಿರ್ದೇಶನಗಳು

  1. ಎರಡು ವಾರಗಳ ಒಳಗೆ ಆಸ್ಪತ್ರೆಗಳ ಪ್ರವೇಶಾತಿ ಬಗ್ಗೆ ರಾಷ್ಟ್ರೀಯ ನೀತಿಯೊಂದನ್ನ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ನಿರ್ದೇಶನ ನೀಡಿದೆ.
  2. ನೀತಿ ರಚಿಸಿದ ನಂತರ, ಎಲ್ಲಾ ರಾಜ್ಯ ಸರ್ಕಾರಗಳು ಅದನ್ನ ಅನುಸರಿಸಬೇಕು. ಅಲ್ಲಿಯವರೆಗೆ ಸ್ಥಳೀಯ ವಾಸ ಅಥವಾ ಗುರುತಿನ  ಪ್ರೂಫ್​​ ಇಲ್ಲವೆಂದು ಯಾವುದೇ ರೋಗಿಗಳಿಗೆ ಆಸ್ಪತ್ರೆ ಪ್ರವೇಶ ಅಥವಾ ಔಷಧಿಗಳನ್ನು ನಿರಾಕರಿಸುವಂತಿಲ್ಲ ಎಂದು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಹೇಳಿದೆ.
  3. ಈ ಕೊರೊನಾ ಎರಡನೇ ಅಲೆಯಲ್ಲಿ, ಆಸ್ಪತ್ರೆಗೆ ಪ್ರವೇಶ ಪಡೆಯಲು ಹಾಗೂ ಬೆಡ್​​ಗಳನ್ನ ಪಡೆಯಲು ಜನರು ಹೆಚ್ಚಿನ ತೊಂದರೆ ಎದುರಿಸುತ್ತಿದ್ದಾರೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
  4. ವಿವಿಧ ರಾಜ್ಯಗಳು ಮತ್ತು ಸ್ಥಳೀಯ ಅಧಿಕಾರಿಗಳು ತಮ್ಮದೇ ಆದ ಪ್ರೋಟೋಕಾಲ್‌ಗಳನ್ನು ಅನುಸರಿಸುತ್ತಾರೆ. ರಾಷ್ಟ್ರದಾದ್ಯಂತದ ವಿವಿಧ ಆಸ್ಪತ್ರೆಗಳಲ್ಲಿ ಪ್ರವೇಶಕ್ಕೆ ವಿಭಿನ್ನ ಮಾನದಂಡಗಳಿರೋದ್ರಿಂದ ಅವ್ಯವಸ್ಥೆ ಮತ್ತು ಅನಿಶ್ಚಿತತೆಗೆ ಕಾರಣವಾಗುತ್ತವೆ. ಈ ಪರಿಸ್ಥಿತಿಯಲ್ಲಿ ಯಾವುದೇ ವಿಳಂಬ ಮಾಡುವಂತಿಲ್ಲ. ಹೀಗಾಗಿ ವಿಪತ್ತು ನಿರ್ವಹಣಾ ಕಾಯ್ದೆಯಡಿ ತನ್ನ ಅಧಿಕಾರವನ್ನ ಬಳಸಿಕೊಂಡು ಈ ಸಂಬಂಧ ಒಂದು ನೀತಿಯನ್ನ ರಚಿಸುವಂತೆ ನಾವು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುತ್ತಿದ್ದೇವೆ ಎಂದಿದೆ.
  5. ಅನಿರೀಕ್ಷಿತ ಸಂದರ್ಭಗಳಲ್ಲಿಯೂ ಸಹ ಆಕ್ಸಿಜನ್​​​ ಸರಬರಾಜು ಮಾರ್ಗಗಳು ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಲು ಆಮ್ಲಜನಕದ ಬಫರ್ ಸ್ಟಾಕ್  ರಚಿಸುಚವಂತೆ ಕೋರ್ಟ್​ ಸಲಹೆ ನೀಡಿದೆ.
  6. ಯಾವುದೇ ಪ್ಲಾಟ್​​ಫಾರ್ಮ್​​ನಲ್ಲಿ ಕೊರೊನಾ ಸಂಬಂಧ ಸಹಾಯ ಪಡೆಯುವ ಅಥವಾ ತಲುಪಿಸುವ ವ್ಯಕ್ತಿಗಳಿಗೆ ಕಿರುಕುಳ ಉಂಟಾಗದಂತೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನಿಗ್ರಹಿಸದಂತೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಎಲ್ಲಾ ಮುಖ್ಯ ಕಾರ್ಯದರ್ಶಿಗಳು, ಪೊಲೀಸ್ ಮಹಾನಿರ್ದೇಶಕರು ಹಾಗೂ ಪೊಲೀಸ್ ಆಯುಕ್ತರಿಗೆ ತಿಳಿಸಬೇಕು ಎಂದು ನಿರ್ದೇಶಿಸಿದೆ.
  7. ಜನರ ಗುಂಪುಗೂಡುವಿಕೆ ಮತ್ತು ಸೂಪರ್ ಸ್ಪ್ರೆಡರ್  ಕಾರ್ಯಕ್ರಮಗಳಿಗೆ ನಿಷೇಧ ಹೇರುವುದನ್ನು ಪರಿಗಣಿಸಲು ನಾವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒತ್ತಾಯಿಸುತ್ತೇವೆ. ಹಾಗೇ ಸಾರ್ವಜನಿಕರ  ಹಿತದೃಷ್ಟಿಯಿಂದ ಎರಡನೇ ಕೊರೊನಾ ಅಲೆಯನ್ನ ನಿಗ್ರಹಿಸಲು ಲಾಕ್​ಡೌನ್ ಹೇರುವುದನ್ನು ಪರಿಗಣಿಸಬಹುದು ಎಂದು ಉನ್ನತ ನ್ಯಾಯಾಲಯ ಹೇಳಿದೆ.

 

The post ಲಾಕ್​ಡೌನ್ ಕ್ರಮ ಪರಿಗಣಿಸಿ: ಕೇಂದ್ರ -ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್​ ನಿರ್ದೇಶನ appeared first on News First Kannada.

Source: newsfirstlive.com

Source link