ಲಾಕ್ ಡೌನ್ ವೇಳೆ ಸೈಲೆಂಟಾಗಿದ್ದ ಬೆಂಗಳೂರಿನ ಕ್ರೈಂ ಜಗತ್ತು ಅನ್ ಲಾಕ್ ಆಗುತ್ತಿದ್ದಂಗೆ ವೈಲೆಂಟ್ ಆಗೋಕೆ ಶುರುವಾಗಿದೆ. ಯಾಕೆ ಈ ಮಾತನ್ನ ಹೇಳ್ತಾ ಇದ್ದೀವಿ ಅನ್ನೋದಕ್ಕೆ ಒಂದು ಪ್ರಮುಖವಾದ ಕಾರಣವಿದೆ. ಅನ್ಲಾಕ್ ಆಗಿ ಇನ್ನು ಎರಡು ವಾರ ಕಳೆದಿಲ್ಲ, ಆಗಲೇ ಕ್ರೈಂಗಳು ಹೆಚ್ಚಾಗೋದಕ್ಕೆ ಶುರು ಆಗಿದೆ. ಇದೊಂದು ರೀತಿಯಲ್ಲಿ ಪೊಲೀಸರಿಗೆ ತಲೆ ನೋವಾಗಿದೆ.

ಅನ್ಲಾಕ್​ನಿಂದ ಆರ್ಥಿಕ ಚಟುವಟಿಕಗೆಳು ಗರಿಗೆದರುತ್ತಿದ್ದಂತೆ ಅಂಡರ್ ವರ್ಲ್ಡ್ನಲ್ಲಿ ಗೂಡು ಸೇರಿಕೊಂಡಿದ್ದವರು ಮತ್ತೆ ಚಿಗುರಿಕೊಂಡಿದ್ದಾರೆ. ಲಾಕ್​​ಡೌನ್ ವೇಳೆ ಮಕಾಡೆ ಮಲಗಿದ್ದ ಬೆಂಗಳೂರಿನ ಭೂಗತ ಲೋಕ ಮತ್ತೆ ಎದ್ದು ನಿಂತಿದೆ. ಮೂಲೆ ಸೇರಿದ್ದ ಲಾಂಗು ಮಚ್ಚುಗಳು ಮತ್ತೆ ಆರ್ಭಟಿಸಲು ಶುರುವಾಗಿದೆ. ಪಾಪಿಗಳು ಮತ್ತೆ ಮಸೆದ ಮಚ್ಚನ್ನ ಹಿಡ್ಕೊಂಡು ಬೀದಿಗೆ ಇಳಿದು ಬಿಟ್ಟಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಕೇವಲ 15 ದಿನಗಳ ಅಂತದಲ್ಲಿ ಬೆಂಗಳೂರಿನಲ್ಲಿ ನಡೆದಿರುವ ಬರೋಬ್ಬರಿ 8 ಮರ್ಡರ್​​ಗಳೇ ಸಾಕ್ಷಿ.

ಪ್ರಕರಣ-1
ಸಮಯ: ಸಂಜೆ 7 ಗಂಟೆ
ದಿನಾಂಕ -ಜೂನ್ 16, 2021
ಕಾರಣ: ಫ್ಲಾಟ್ ವಿಚಾರಕ್ಕೆ ಹರಿಯಿತು ನೆತ್ತರು

ಅವತ್ತು ಏಳು ಗಂಟೆಯ ಸಮಯ. ಸೂರ್ಯನ ನಿರ್ಗಮನವಾಗಿ ಚಂದ್ರನ ಆಗಮನವಾಗಿತ್ತು. ಇಂತಹ ಹೊತ್ತಲ್ಲಿ ಜೂನ್ 22ರಂದು ಜಿಕೆಡಬ್ಲೂ ಲೇಔಟ್ ಬಳಿ ಹಂತಕರು ರಕ್ತದ ಕೋಡಿಯನ್ನೇ ಹರಿಸಿದ್ರು. ಫ್ಲಾಟ್ ಖರೀದಿಸಿ ಹಣ ಕೊಡದೆ ಸತಾಯಿಸಿದ ಎಂಬ ಕಾರಣಕ್ಕೆ 42 ವರ್ಷದ ಕಾರ್ತಿಕ್ ಮೇಲೆ ಹಂತಕ ಪಡೆ ಭೀಕರವಾಗಿ ದಾಳಿ ಮಾಡಿತ್ತು. 7 ಗಂಟೆ ಸುಮಾರಿಗೆ ಕಾರ್ತಿಕ್ ತಾನು ವಾಸವಿದ್ದ ಅಪಾರ್ಟ್ಮೆಂಟ್ ರಸ್ತೆಯಲ್ಲಿ ಬೈಕ್ನಲ್ಲಿ ಬರುತ್ತಿದ್ದ ವೇಳೆ ಅಡ್ಡಗಟ್ಟಿದ ದುಷ್ಕರ್ಮಿಗಳ ತಂಡ ಸಿಮೆಂಟ್ ಇಟ್ಟಿಗೆಯನ್ನ ತಲೆ ಮೇಲೆ ಎತ್ತಿ ಹಾಕಿ ಹತ್ಯೆ ಮಾಡಿದ್ರು.

ಅಪಾರ್ಟ್ಮೆಂಟ್​​ನಲ್ಲಿ ಎರಡು ಫ್ಲಾಟ್​​ಗಳನ್ನ ಕಾರ್ತಿಕ್ ಖರೀದಿ ಮಾಡಿದ್ದ. ಆದರೆ, ಒಂದು ಫ್ಲಾಟ್​​ಗೆ ಹಣ ನೀಡಿ ಮತ್ತೊಂದು ಫ್ಲಾಟ್​​ಗೆ ಹಣ ನೀಡದೇ ಸತಾಯಿಸುತ್ತಿದ್ದ ಎನ್ನಲಾಗಿದೆ. ಹೀಗಾಗಿ ಕಾರ್ತಿಕ್ ಜೊತೆ ರಿಯಲ್ ಎಸ್ಟೇಟ್ ಏಜೆನ್ಸಿ ಮೋಹನ್ ಮತ್ತು ನಾಗರಾಜ್ ಜಗಳವಾಡಿದ್ರು. ಇದೇ ವಿಚಾರವಾಗಿ ಕಾರ್ತಿಕ್ರನ್ನು ಹತ್ಯೆ ಹಂತಕರು ಹತ್ಯೆ ಮಾಡಿದ್ರು. ಘಟನೆಯ ಸಂಬಂಧ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಜೈಲಿಗಟ್ಟಿದ್ದಾರೆ.

ಪ್ರಕರಣ-2
ದಿನಾಂಕ : ಜೂನ್ 22
ದೇವಸ್ಥಾನದ ಎದುರೇ ನಡೆಯಿತು ರಕ್ತದೋಕುಳಿ
ಬೆಂಗಳೂರಿನಲ್ಲಿ ಬೀದಿ ಹೆಣವಾದ ರೌಡಿಶೀಟರ್
ರಶೀದ್ ಮಲಬಾರಿಯ ಬಲಗೈ ಬಂಟ ಮರ್ಡರ್

ಆತ ನಟೋರಿಯಸ್ ಪಾತಕಿ ರಶೀದ್ ಮಲಬಾರಿಯ ಬಲಗೈ ಬಂಟ ಕರೀಂ ಅಲಿ. ಭೂಗತ ಲೋಕದ ಬಂಟರ ಜೊತೆ ನೆಂಟಸ್ಥಿಕೆ ಹೊಂದಿದ್ದ. ಕೊಲೆ, ಕೊಲೆ ಯತ್ನ, ದರೋಡೆ, ರಾಬರಿ ಸೇರಿದಂತೆ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಪೊಲೀಸರಿಂದ ಗುಂಡೇಟು ತಿಂದು ಜೈಲು ಕೂಡ ಸೇರಿದ್ದ. ಆದ್ರೆ ಜೈಲಿನಿಂದ ಹೊರಬಂದ ಕರೀಂ ಅಲಿ ಜೂನ್ 22 ರಂದು ಹೆಣವಾಗಿದ್ದ.

ಕರಿಂ ಅಲಿ  ಡಿ.ಜೆ. ಹಳ್ಳಿ ಠಾಣಾ ವ್ಯಾಪ್ತಿಯ ರೌಡಿಶೀಟರ್ ಅನೀಸ್‌ ಅಹಮ್ಮದ್ ಪತ್ನಿಯ ಮೇಲೆ ಕಣ್ಣಾಕಿದ್ದನಂತೆ. ಈ ವಿಚಾರ ಅನಿಸ್ಗೆ ಗೊತ್ತಾಗಿ ಜೈಲಿನಲ್ಲಿದ್ದುಕೊಂಡೇ ಸ್ಕೆಚ್ ತಯಾರಿಸಿದ್ದ. ಅದರಂತೆ ಜೂನ್ 22 ರಂದು ಪಕ್ಕಾ ಪ್ಲಾನ್ ಮಾಡಿ ಶಿಷ್ಯರನ್ನ ಬಿಟ್ಟು ಕರೀಂ ಕಥೆ ಮುಗಿಸಿದ್ದಾನೆ ಎನ್ನಲಾಗಿದೆ. ಜೂನ್ 22 ರಂದು ಗೋವಿಂದಪುರ ಠಾಣಾ ವ್ಯಾಪ್ತಿಯ ಆಂಜಿನೇಯ ದೇವಸ್ಥಾನದ ಬಳಿ ಈ ಭೀಕರ ಹತ್ಯೆ ನಡೆದಿತ್ತು. ಘಟನೆಯ ಸಂಬಂಧ ಪೊಲೀಸರು ಅನೀಸ್ ಸಹಚರರಾದ ಮೊಹ್ಮದ್ ಸಲೀಂನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಪ್ರಕರಣ-3
ದಿನಾಂಕ : ಜೂನ್ 23
ಅಕ್ರಮ ಸಂಬಂಧದ ಶಂಕೆ ಬಿತ್ತು ಹೆಣ
ಕತ್ತು ಕೊಯ್ದು ಹತ್ಯೆ ಮಾಡಿದ ಪತಿರಾಯ

ಹೀಗೆ ಮಲ್ಲನ ತರ ಕಣ್ಣು ಬಿಡ್ತಿರುವ ಇವ್ನೇ ನೋಡಿ ಈ ಹತ್ಯೆ ಮಾಡಿದ ಪತಿರಾಯ. ಹೆಸರು ಮಣಿ. ಈ ಮಣಿಗೆ ಮೊಸರಲ್ಲಿ ಕಲ್ಲು ಹುಡುಕುವ ಕೆಲ್ಸ. ದಿನನಿತ್ಯ ಕಂಠ ಪೂರ್ತಿ ಕುಡಿದು ಬರೋದು, ಹೆಂಡ್ತಿ ಜೊತೆ ಜಗಳ ಮಾಡುವುದೇ ಈ ಮಣಿಯ ಕಾಯಕವಾಗಿತ್ತು. ಅದ್ರಂತೆ ಜೂನ್ 23 ರಂದು ಕೂಡ ಕುಡಿದು ಬಂದ ಮಣಿ, ಹೆಂಡ್ತಿ ಜೊತೆ ಜಗಳಕ್ಕೆ ನಿಂತಿದ್ದ. ನಂತರ ಆಕೆಯ ಶೀಲವನ್ನು ಶಂಕಿಸಿ ಚಾಕುವಿನಿಂದ ಭೀಕರವಾಗಿ ಕತ್ತು ಕುಯ್ದು ಹತ್ಯೆ ಮಾಡಿದ್ದಾನೆ. ಘಟನೆಯ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಪ್ರಕರಣ-4
ದಿನಾಂಕ : ಜೂನ್ 23
ಅಕ್ರಮ ಸಂಬಂಧ ಶಂಕಿಸಿ ಕಾಮತ್ ಮರ್ಡರ್

ಅಕ್ರಮ ಸಂಬಂಧದ ಶಂಕೆ ಹಿನ್ನೆಲೆ ನಗರದ ಕಾಮತ್ ಎಂಬಾತನನ್ನು ದುಷ್ಕರ್ಮಿಗಳ ಗ್ಯಾಂಗ್ ವೊಂದು ಜೂನ್ 23 ರಂದು ಚಾಕುವಿನಿಂದ ಇರಿದು ಬಳಿ ಭೀಕರವಾಗಿ ಹತ್ಯೆ ಮಾಡಿತ್ತು. ಐಟಿಸಿ ಕಾಲೋನಿ ಬಳಿ ನೆತ್ತರು ಹರಿಸಿದ ಹಂತಕರು ಕೃತ್ಯ ಎಸಗಿ ಕ್ಷಣಾರ್ಧದಲ್ಲೇ ಎಸ್ಕೇಪ್ ಆಗಿದ್ರು. ಘಟನೆಯ ಸಂಬಂಧ ಪುಲಕೇಶಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಪ್ರಕರಣ-5
ದಿನಾಂಕ : ಜೂನ್ 24
ಹಾಡ ಹಗಲೇ ಮಾಜಿ ಕಾರ್ಪೋರೇಟರ್ ರೇಖಾ ಮರ್ಡರ್
ಬೆಂಗಳೂರಿಗೆ ಬೆಂಗಳೂರೇ ಬೆಚ್ಚಿ ಬೀಳುವಂತೆ ನಡೆದಿತ್ತು ಹತ್ಯೆ

ಅದು ಸಿಲಿಕಾನ್ ಸಿಟಿ ಬೆಂಗಳೂರನ್ನೆ ಬೆಚ್ಚಿ ಬೀಳಿಸಿದ ಮರ್ಡರ್. ಅಂದು ಇಡೀ ನಗರವೇ ಸ್ಟನ್ ಆಗುವಂತೆ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ರನ್ನು ಹತ್ಯೆ ಮಾಡಲಾಗಿತ್ತು. ಪೀಟರ್, ಸೂರ್ಯ, ಸ್ಟೀಫನ್ ಗ್ಯಾಂಗ್ ಜೂನ್ 24 ರಂದು ರೇಖಾ ಕದಿರೇಶ್ ರನ್ನು ಭೀಕರವಾಗಿ ಹತ್ಯೆ ಮಾಡಿದ್ರು. ಘಟನೆಯ ಸಂಬಂಧ ಪೊಲೀಸರು ಈಗಾಗಲೇ 8 ಮಂದಿಯನ್ನು ಬಂಧಿಸಿದ್ದು, ಕದಿರೇಶ್ ಸಹೋದರಿ ಮಾಲಾ, ಆಕೆಯ ಪುತ್ರ ಅರುಳ್, ಪೀಟರ್, ಸೂರ್ಯ,ಸ್ಫೀಫನ್ ಸೇರಿದಂತೆ ಹಲವರನ್ನು ಜೈಲಿಗೆ ಅಟ್ಟಿದ್ದಾರೆ. ಇಡೀ ಘಟನೆಯಲ್ಲಿ ಕದಿರೇಶ್ ಸಹೋದರಿ ಮಾಲಾ ಪಾತ್ರ ಎದ್ದು ಕಾಣ್ತಿದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಪ್ರಕರಣ-6
ದಿನಾಂಕ : ಜೂನ್ 30
ನಡು ರಸ್ತೆಯಲ್ಲಿ ಫಿನಿಶ್ ಆದ ರೌಡಿ ಶೀಟರ್ ಉದಯ್

ಮಚ್ಚು ಹಿಡಿದು ಮೆರೆದವನಿಗೆ ಅದೇ ಮಚ್ಚಿನಲ್ಲಿ ಸಾವು ಎನ್ನುವುದು ಭೂಗತ ಲೋಕದ ಅಲಿಖಿತ ನಿಯಮ. ರೌಡಿಗಳ ಬದುಕೇ ಹಾಗೆ, ಇದ್ದಷ್ಟು ದಿನ ಹವಾ.. ಕಡೆಗೆ ಬೀದಿ ಶವ. ಲಾಂಗು ಮಚ್ಚು ಹಿಡಿದು ನಾನೇ ಡಾನ್ ನಾನೇ ಕಿಂಗ್ ಎಂದು ಮೆರೆದಾಡಿದವರೆಲ್ಲ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ. ಅದ್ರ ಲಿಸ್ಟ್ಗೆ ಜೂನ್ 30 ರಂದು ಮತ್ತೊಬ್ಬ ಸೇರ್ಕೊಂಡಿದ್ದ. ಅವನ ಹೆಸರು ಉದಯ್. ಹೌದು, ರೌಡಿಶೀಟರ್ ಉದಯ್ನನ್ನು ಹಂತಕ ಪಡೆಯೊಂದು ಜೂನ್ 30 ರಂದು ಮಾರಕಾಸ್ತ್ರಗಳಿಂದ ಇರಿದು ಹತ್ಯೆ ಮಾಡಿತ್ತು. ಕುಡಿದು ಊರ ಹುಡುಗರೊಂದಿಗೆ ಗಲಾಟೆ ಮಾಡಿಕೊಂಡಿದ್ದ ಕಾರಣ ಅಂದು ವಿರೋಧಿ ತಂಡ ಉದಯ್ ಹೆಣ ಬೀಳಿಸಿದ್ರು. ಘಟನೆಯ ಸಂಬಂಧ ಆನೆಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಪ್ರಕರಣ-7
ದಿನಾಂಕ : ಜುಲೈ 2
ಮಟ ಮಟ ಮಧ್ಯಾಹ್ನವೇ ಹರಿಯಿತು ಮದನ್ ನೆತ್ತರು

ಕಳೆದ ವರ್ಷವಷ್ಟೇ ಹಾಸನದಲ್ಲಿ ಹತ್ಯೆಯಾಗಿದ್ದ ರೌಡಿಶೀಟಡರ್ ಶಾಂತಿನಗರ ಲಿಂಗನ ಸಹಚರರು ಮತ್ತೆ ಅಬ್ಬರಿಸಿದ್ದಾರೆ. ಹಾಡಹಗಲೇ ನಟ್ಟ ನಡುವೆ ವ್ಯಕ್ತಿಯೊಬ್ಬನ ನೆತ್ತರು ಹರಿಸಿದ್ದಾರೆ. ಬನಶಂಕರಿ ದೇವಾಲಯದ ಮೆಟ್ರೋ‌ ಪಿಲ್ಲರ್ ಬಳಿ ಮಧ್ಯಾಹ್ನ ಸುಮಾರು 12 ಗಂಟೆಯ ಸುಮಾರಿಗೆ ಸೊಪ್ಪು ಖರೀದಿಸಿ ಮದನ್ ಬೈಕ್‌ನಲ್ಲಿ ತೆರಳುತ್ತಿದ್ದ. ಈ ವೇಳೆ ಬೈಕ್‌ನಲ್ಲಿ ಹಿಂಬಾಲಿಸಿದ ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರಗಳಿಂದ ಮದನ್‌ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಹತ್ಯೆಗೈದು ಪರಾರಿಯಾಗಿದ್ದಾರೆ. ಹತ್ಯೆಗೆ ಹಳೇ ದ್ಚೇಷವೇ ಕಾರಣ ಎನ್ನಲಾಗಿದ್ದು, ಪೊಲೀಸರು ಹಂತಕರಿಗಾಗಿ ಬಲೆ ಬೀಸಿದ್ದಾರೆ.

ಪ್ರಕರಣ-8
ದಿನಾಂಕ : ಜುಲೈ 3

ಹಂತಕರು ನಿನ್ನೆ ಕೂಡ ನಗರದಲ್ಲಿ ಅಟ್ಟಹಾಸ ಮೆರೆದಿದ್ದಾರೆ. ನಗರದಲ್ಲಿ ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕಾವಲ್ ಭೈರಸಂದ್ರದ ಅಂಬೇಡ್ಕರ್ ಕಾಲೇಜು ಮುಂಭಾಗದಲ್ಲಿ ಘಟನೆ ನಡೆದಿದ್ದು, ಕೊಲೆಯಾದ ವ್ಯಕ್ತಿಯನ್ನು ಕೃಷ್ಣಮೂರ್ತಿ ಎಂದು ಗುರುತಿಸಲಾಗಿದೆ. 2-3 ದುಷ್ಕರ್ಮಿಗಳಿಂದ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಕೃಷ್ಣಮೂರ್ತಿ ಇತ್ತೀಚೆಗೆ ತನ್ನ ಮೊದಲ ಪತ್ನಿಯನ್ನು ತೊರೆದು ಎರಡನೇ ಮದುವೆಯಾಗಿದ್ದ. ಎರಡು ತಿಂಗಳಿನಿಂದ ಎರಡನೇ ಪತ್ನಿ ಜೊತೆ ಪ್ರತಿನಿತ್ಯ ಗಲಾಟೆ ನಡೆಯುತ್ತಿತ್ತು. ಈ ವಿವಾದ ಪೊಲೀಸ್ ಠಾಣೆ ಮೆಟ್ಟಿಲೂ ಏರಿತ್ತು. ಈ ವೇಳೆ ಪೊಲೀಸರು ಎರಡು ಮೂರು ಬಾರಿ ಗಂಡ ಹೆಂಡತಿಗೆ ಎಚ್ಚರಿಕೆ ನೀಡಿ ಕಳಿಸಿದ್ದರು. ಹೀಗಾಗಿ ಗಂಡನ ಕಿರುಕುಳ ತಾಳದೆ ಹೆಂಡತಿಯೇ ಸುಪಾರಿ ನೀಡಿ ಕೊಲೆ ಮಾಡಿಸಿರುವ ಶಂಕೆಯೂ ಇದೆ. ಈ ಎಲ್ಲಾ ಆಮಾಯದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅನ್ಲಾಕ್ ಆದ ಮೇಲೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿರೋ ಅಷ್ಟು ಕೊಲೆಗಳ ಡಿಟೈಲ್ ಇದು. ಇಷ್ಟು ದಿನ ಸೈಲೆಂಟಾಗಿದ್ದು ಯಾವುದೇ ಕ್ರೈಂಗಳು ಆಗದೇ ಇದ್ದ ಬೆಂಗಳೂರಲ್ಲಿ, ಲಾಕ್ಡೌನ್ ತೆರವಾಗುತ್ತಿದ್ದಂತೆ ಕ್ರೈಂಗಳು ಹೆಚ್ಚಾಗೋದಕ್ಕೆ ಶುರು ಆಗಿದೆ. ಕೇವಲ ಕೊಲೆ ಅಷ್ಟೇ ಅಲ್ಲಾ, ಕೊಲೆ ಯತ್ನ ಸರಗಳ್ಳತನ, ಮನೆ ಗಳ್ಳತನ, ರಾಬರಿ ಹೀಗೆ ಎಲ್ಲಾ ರೀತಿಯ ಕ್ರೈಂಗಳು ಆಗುತ್ತಿವೆ. ಹೀಗೆ ಒಂದಾದ ಮೇಲೊಂದರಂತೆ ಅಪರಾಧ ಚಟುವಟಿಕೆಗಳು ನಡೆಯುತ್ತಿರೋದ್ರಿಂದ ಒಂದು ಕಡೆ ಪೊಲೀಸರಿಗೆ ತಲೆನೋವು ತಂದಿಟ್ಟಿದೆ.

ರೇಖಾ ಕದಿರೇಶ್ ಹತ್ಯೆಯಾದ ಮೇಲೆ ಪೊಲೀಸರು ನಗರದ ರೌಡಿಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಈಗಾಗಲೇ ತಕ್ಕ ವಾರ್ನಿಂಗ್ ಕೂಡ ಕೊಟ್ಟಿದ್ದಾರೆ. ರೌಡಿಗಳು ಮತ್ತೆ ನಾಗರಿಕ ಸಮಾಜಕ್ಕೆ ಸವಾಲೊಡ್ಡಿದ್ರೆ ಪೊಲೀಸರ ರಿವಾಲ್ವರ್​ಗಳು ಆರ್ಭಟಿಸೋದು ಪಕ್ಕಾ.

The post ಲಾಕ್​ಡೌನ್ ಬೆನ್ನಲ್ಲೇ ಬೆಂಗಳೂರಲ್ಲಿ ಹೆಚ್ಚಾದ ಕ್ರೈಂ.. 15 ದಿನಗಳಲ್ಲಿ 8 ಕೊಲೆ​ appeared first on News First Kannada.

Source: newsfirstlive.com

Source link