ಕೊರೊನಾ ಎರಡನೆ ಅಲೆ ತಂದ ಭೀಕರತೆಯನ್ನು ಜನ ಮರೆತೇ ಬಿಟ್ಟವರಂತೆ ಕಾಣ್ತಾ ಇದೆ. ಜೂನ್ 14ರಿಂದ ಅನ್ವಯವಾಗುವಂತೆ ಸರ್ಕಾರ ಲಾಕ್ ಡೌನ್ ಸಡಿಲಿಕೆ ಮಾಡ್ತಾ ಇದ್ರೆ ಜನ ನಿನ್ನೆಯಿಂದಲೇ ಅತ್ತಿಂದ ಇತ್ತ, ಇತ್ತಿಂದ ಅತ್ತ ಸಿಕ್ಕಾಪಟ್ಟೆ ಓಡಾಡಲು ಶುರು ಮಾಡಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಂತೂ ಟ್ರಾಫಿಕ್ ಜಾಮ್ ಆಗುವಷ್ಟರ ಮಟ್ಟಿಗೆ ಜನ ಹೊರಗಡೆ ಬಂದಿದ್ದಾರೆ. ಹೀಗಾದ್ರೆ ಮುಂದೆ ಪರಿಸ್ಥಿತಿ ಏನಾಗುತ್ತೆ.?

ಬೆಂಗಳೂರಿಗೆ ಬಂದು ಸೇರುವ ಕೆಲವು ಪ್ರಮುಖ ರಸ್ತೆಗಳಲ್ಲಿ ನಿನ್ನೆ ಕಿಲೋಮೀಟರ್ ಗಟ್ಟಲೇ ವಾಹನಗಳು ಸಾಲು ಗಟ್ಟಿ ನಿಂತಿದ್ದವು. ಇನ್ನು ನಗರದೊಳಗೂ ಹಲವೆಡೆ ಟ್ರಾಫಿಕ್ ಜಾಮ್ ಆಗುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಳೆದ ಒಂದು ತಿಂಗಳಿನಿಂದ ಖಾಲಿ ಖಾಲಿ ಆಗಿರ್ತಾ ಇದ್ದ ರಸ್ತೆಗಳಲ್ಲೆಲ್ಲ ವಾಹನಗಳು ತುಂಬಿಕೊಂಡಿದ್ವು. ಪೊಲೀಸರು ವಾಹನಗಳನ್ನ ನಿಯಂತ್ರಿಸೋದೇ ಸವಲಾಗಿ ಹೋಯ್ತು. ಅದ್ಯಾಕೆ ಇಷ್ಟೊಂದು ಆತುರಕ್ಕೆ ಬಿದ್ದರೊ ಗೊತ್ತಿಲ್ಲ. ಆದ್ರೆ ಇದು ಕೊರೊನಾ ನಿಯಂತ್ರಣದ ವಿಚಾರದಲ್ಲಿ ಒಳ್ಳೆಯ ಬೆಳವಣಿಗೆಯಂತೂ ಅಲ್ಲವೇ ಅಲ್ಲ.

ಲಾಕ್ ಡೌನ್ ಸಡಿಲಿಕೆ ಅಂತ ಹೇಳಿದ ತಕ್ಷಣ ಸಂಚಾರ ದಟ್ಟಣೆ
ಜೂನ್ 14ರವರೆಗೆ ಲಾಕ್ಡೌನ್ ಇರುವುದು ಮರೆತೇ ಹೋಯ್ತಾ?
ಎಲ್ಲಿ ನೋಡಿದ್ರು ವಾಹನಗಳ ಸಾಲು, ಎಲ್ಲಿಗೋ ಹೋಗುವ ಆತುರ

 

ಜೂನ್ 14 ರವರೆಗೆ ಲಾಕ್ ಡೌನ್ ಜಾರಿಯಲ್ಲಿರಲಿದೆ. ಆದ್ರೆ ಯಾವಾಗ ಮುಖ್ಯಮಂತ್ರಿಗಳು ಸಭೆ ನಡೆಸಿ ಜೂನ್ 14ರ ನಂತರ 20 ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡುವುದಾಗಿ ಅನೌನ್ಸ್ ಮಾಡಿದ್ರೋ ಆ ಕ್ಷಣದಿಂದದಲೇ ಜನರ ಓಡಾಟ ಶುರುವಾಗಿ ಹೋಗಿದೆ. ಇಷ್ಟು ದಿನ ಮನೆಯಲ್ಲಿದ್ದವರು ಏಕಾಏಕಿ ಓಡಾಡಲು ಶುರು ಮಾಡಿದ್ದಾರೆ. ಲಾಕ್ ಡೌನ್ ಮುಗಿಯಲು ಇನ್ನೂ ಮೂರು ದಿನ ಇದೆ ಅನ್ನೋದನ್ನೇ ಮರೆತಂತೆ ಕಾಣ್ತಾ ಇದೆ. ಬೆಳಗಿನಿಂದ ಮಧ್ಯಾಹ್ನದವರೆಗೂ ಬೆಂಗಳೂರಿನ ಎಲ್ಲಾ ಕಡೆ ಹೆಚ್ಚು ವಾಹನಗಳು ಸಂಚಾರ ಮಾಡ್ತಾ ಇದ್ದಿದ್ದು ಕಂಡು ಬಂತು. ಎಲ್ಲಾ ಸರ್ಕಲ್ ಗಳಲ್ಲೂ ಉದ್ದನೆಯ ಸಾಲು ಸಾಮಾನ್ಯವಾಗಿತ್ತು. ಲಾಕ್ ಡೌನ್ ಮುಗಿದೇ ಹೋಯ್ತಾ ಅಂದುಕೊಳ್ಳುವಷ್ಟರ ಮಟ್ಟಿಗೆ ವಾಹನಗಳು ಸರಿದು ನಿಂತಿದ್ವು. ಜೂನ್ 14ರ ಬಳಿಕ ಒಂದಿಷ್ಟು ನಿರ್ಬಂಧ ಸಡಿಲಿಕೆ ಮಾಡ್ತೇವೆ ಅಂದ ತಕ್ಷಣ ಜನ ಹೊರಗೆ ಓಡಾಡಲು ಶುರು ಮಾಡಿದ್ದಾರೆ. ಎಲ್ಲಿಗೋ ಹೋಗುವ ಆತುರದಿಂದ ಜನ ತಮ್ಮ ತಮ್ಮ ವಾಹನಗಳಲ್ಲಿ ಧಾವಿಸ್ತಾ ಇದ್ದಿದ್ದು ಕಂಡು ಬಂತು. ಪೊಲೀಸರು ಏನೇ ಕೇಳಿದ್ರೂ ಅದಕ್ಕೊಂದು ಕಾರಣ ಹೇಳಿಕೊಂಡು ಜನ ಹೋಗ್ತಾನೇ ಇದ್ರು.

ಎಂಟಿಸಿ ಬಸ್, ಮೆಟ್ರೋ ಬಿಟ್ಟು ಬಿಟ್ರೇ ಜನ ದಟ್ಟಣೆ ಗ್ಯಾರಂಟಿ
ಕೊರೊನಾ ಕಂಟ್ರೋಲ್ ಆಗದಿದ್ರೂ ಯಾಕೆ ಅಪಾಯಕ್ಕೆ ಆಹ್ವಾನ?

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಗಳು ಓಡಾಡಲು ಅನುಮತಿ ಕೊಟ್ಟಿಲ್ಲ. ಈ ತಿಂಗಳಾಂತ್ಯದವರೆಗೂ ಬಹುಶಃ ಹೆಚ್ಚಿನ ಬಸ್​ಗಳು ಓಡಾಡಲ್ಲ. ಇನ್ನು ಬೇರೆ ಬೇರೆ ಜಿಲ್ಲೆಗಳಿಗೆ, ರಾಜ್ಯಗಳಿಗೆ ಹೋಗುವ ಬಸ್​ಗಳನ್ನು ಬಿಟ್ಟಿಲ್ಲ. ಮೆಟ್ರೋ ಸಂಚಾರ ಕೂಡ ಬಂದ್ ಆಗಿದೆ. ಇಷ್ಟಾದರೂ ಜನ ತಮ್ಮ ತಮ್ಮ ಖಾಸಗಿ ವಾಹನಗಳಲ್ಲೇ ಇಷ್ಟು ದೊಡ್ಡ ಪ್ರಮಾಣದಲ್ಲಿ ಹೊರಗಡೆ ಬಂದು ಬಿಟ್ಟಿದ್ದಾರೆ. ಇನ್ನೇನಾದ್ರೂ ಬಿಎಂಟಿಸಿ, ಕೆಎಸ್​​ಆರ್​​ಟಿಸಿ, ಮೆಟ್ರೋ ಸಂಚಾರ ಆರಂಭವಾಗಿ ಬಿಟ್ರೆ ಜನರನ್ನು ಕಂಟ್ರೋಲ್ ಮಾಡೋಕೆ ಸಾಧ್ಯಾನಾ? ಸಾಧ್ಯವೇ ಇಲ್ಲ. ಹೀಗಾದರೆ ಕಂಟ್ರೋಲ್ ಆಗ್ತಾ ಇರುವ ಕೊರೊನಾ ಮತ್ತೆ ಹೆಚ್ಚಾಗತೊಡಗಿದರೆ ಏನಾಗಬುಹುದು ಊಹಿಸಿಕೊಳ್ಳಿ. ಸ್ವಲ್ಪ ಮಟ್ಟಿಗೆ ಕೊರೊನಾ ಕಂಟ್ರೋಲ್ ಆಗಿದೆಯಾದ್ರೂ ಅದಿನ್ನು ಹೋಗಿಲ್ಲ, ಹೋಗುವ ಮೊದಲೇ ಜನದಟ್ಟಣೆ ಶುರುವಾಗಿ ಬಿಟ್ರೆ ಮುಂದೆ ದೇವ್ರೇ ಗತಿ.

ಲಾಕ್ ಡೌನ್ ಆದಾಗ ಬೆಂಗಳೂರಿನಿಂದ ಜಿಲ್ಲೆಗಳಿಗೆ ಪ್ರಯಾಣ
ಅನ್ ಲಾಕ್ ಅನೌನ್ಸ್ ಆದ ತಕ್ಷಣ ಜಿಲ್ಲೆಗಳಿಂದ ಬೆಂಗಳೂರಿಗೆ
ಆಗ ನಗರದಿಂದ ಹಳ್ಳಿಗೆ ಕೊರೊನಾ, ಈಗ ಹಳ್ಳಿಗಳಿಂದ ನಗರಕ್ಕೆ

ಕೊರೊನಾ ಎರಡನೇ ಅಲೆಯ ಅಬ್ಬರ ಹೆಚ್ಚಾಗತೊಡಗಿದಾಗ ಲಾಕ್ ಡೌನ್ ಘೋಷಣೆ ಮಾಡಲಾಗಿತ್ತು. ಇದು ಬೆಂಗಳೂರು ಮಾತ್ರವಲ್ಲ. ಮುಂಬೈ, ದೆಹಲಿ ಸೇರಿದಂತೆ ಬಹುತೇಕ ಕಡೆ ಲಾಕ್ ಡೌನ್ ಘೋಷಣೆ ಆಗಿತ್ತು. ಆಗ ಲಕ್ಷಾಂತರ ಜನ ತಮ್ಮ ತಮ್ಮ ಊರುಗಳಿಗೆ ಹೊರಟು ಬಿಟ್ರು. ಒಂದೆರಡು ದಿನಗಳಲ್ಲೇ ಲಕ್ಷಾಂತರ ಜನ ತಮ್ಮ ತಮ್ಮ ಹಳ್ಳಿಗಳಿಗೆ ಹೋದ್ರು. ಇದರಿಂದ ಮಹಾನಗರಗಳಿಂದ ಹೋದವರು ಹಳ್ಳಿ ಹಳ್ಳಿಗಳಿಗೆ ಕೊರೊನಾ ಪಾರ್ಸಲ್ ತೆಗೆದುಕೊಂಡು ಹೋದ ಹಾಗೆ ಆಗಿಬಿಡ್ತು. ಈಗಲೂ ಹಲವು ಜಿಲ್ಲೆಗಳಲ್ಲಿ ಅದರ ಪರಿಣಾಮ ನಿಂತಿಲ್ಲ.

ಬೆಂಗಳೂರಿನಿಂದ ಟೆಸ್ಟ್ ಮಾಡಿಸಿಕೊಳ್ಳದೇ ಸಿಕ್ಕ ಸಿಕ್ಕ ವಾಹನ ಏರಿ ಹೊರಟ ಜನ ತಮ್ಮ ತಮ್ಮ ಊರಿಗೆ ಕೊರೊನಾ ಹಂಚಿ ಬಿಟ್ಟರು. ಸೇಫ್ ಆಗಿದ್ದ ಹಳ್ಳಿಗಳೇ ಕೊರೊನಾ ಹಾಟ್ ಸ್ಪಾಟ್ ಆಗುವಂತಾಗಿತ್ತು. ಈಗೇನೋ ಸ್ವಲ್ಪ ಮಟ್ಟಿಗೆ ಹಳ್ಳಿಗಳ ಪರಿಸ್ಥಿತಿ ಸುಧಾರಿಸುತ್ತಿದೆ. ಆದ್ರೆ ಇದೀಗ ಬಂದಿರೋ ಆತಂಕ ನಗರಗಳಿಗೆ. ಬೆಂಗಳೂರು ಅನ್ ಲಾಕ್ ಆಗ್ತಾ ಇದ್ದಂತೆ ಸಾವಿರಾರು ಹಳ್ಳಿಗಳಿಂದ ಲಕ್ಷಾಂತರ ಜನ ಬೆಂಗಳೂರಿನತ್ತ ಧಾವಿಸಿ ಬರುತ್ತಾರೆ. ಈಗಲೇ ಇಂತಹ ಮರು ಪ್ರಯಾಣ ಶುರುವಾಗ್ತಾ ಇದೆ. ಇದರಿಂದ ಮತ್ತೆ ಬೆಂಗಳೂರಿಗೆ ಅದೆಲ್ಲಿಂದಲೋ ಬಂದವರು ಕೊರೊನಾ ಹರಡಲು ಶುರು ಮಾಡಿಬಿಟ್ರೆ ಬೆಂಗಳೂರಿನಲ್ಲಿ ಮತ್ತೆ ಟೆನ್ಷನ್ ಶುರುವಾಗುತ್ತೆ. ಲಕ್ಷಾಂತರ ಜನ ಒಂದೇ ಬಾರಿಗೆ ನಗರದಲ್ಲಿ ಓಡಾಡಲು ಶುರು ಮಾಡಿದ್ರೆ ಸಹಜವಾಗಿ ಜನ ದಟ್ಟಣೆ ಆಗುತ್ತೆ. ಇದರಿಂದ ಕಡಿಮೆಯಾಗಿದ್ದು ಕೊರೊನಾ ಮತ್ತೆ ಹೆಚ್ಚಾಗಬಹುದು. ಹೀಗಾಗಿ ಜನ ಅದೆಷ್ಟು ಮುನ್ನೆಚ್ಚರಿಕೆ ತೆೆಗೆದುಕೊಂಡರೂ ಕಡಿಮೆನೇ.

ಒಂದು ಕಡೆ ಮಹಾನಗರ ಬೆಂಗಳೂರಿಗೆ ಬರುವ ಲಕ್ಷಾಂತರ ಜನ
ಇನ್ನೊಂದೆಡೆ ಜಿಲ್ಲೆ ಜಿಲ್ಲೆಗಳ ನಡುವೆ ಹೆಚ್ಚಲಿರುವ ಜನರ ಓಡಾಟ
ಇದರಿಂದ ಮತ್ತೆ ಕೊರೊನಾ ಹೆಚ್ಚಾಗತೊಡಗಿದ್ರೆ ಯಾರು ಹೊಣೆ?

ಕಳೆದ ಒಂದೂವರೆ ತಿಂಗಳಿನಿಂದ ಆರ್ಥಿಕ ಚಟುವಟಿಕೆಗಳು ಬಹುತೇಕ ಸ್ತಬ್ಧಗೊಂಡಿತ್ತು. ಲಕ್ಷಾಂತರ ಜನ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಸಾವಿರಾರು ಜನ ಉದ್ಯೋಗ ಇಲ್ಲದೆ ನಿತ್ಯದ ಊಟಕ್ಕೂ ಪರದಾಡಬೇಕಾಗಿತ್ತು. ದಿನಗೂಲಿ ಮಾಡಿಕೊಂಡು ಜೀವನ ಮಾಡ್ತಾ ಇದ್ದವರಂತೂ ಲಾಕ್ ಡೌನ್ ಮುಗಿದ್ರೆ ಸಾಕಪ್ಪಾ ಅಂತ ಹೇಳ್ತಾ ಇದ್ರು. ಇನ್ನು ಜನ ಸಾಮಾನ್ಯರು ಕೂಡ ಬಹಳ ದಿನಗಳಿಂದ ದುಡಿಮೆ ಇಲ್ಲದೆ, ತಮ್ಮ ತಮ್ಮ ಉದ್ಯೋಗ ಮಾಡಲಾಗದೇ ಆರ್ಥಿಕವಾಗಿ ಕಷ್ಟದ ದಿನಗಳು ಎದುರಾಗಿದ್ದು ನಿಜ. ಆದ್ರೆ ಕೊರೊನಾ ವಿಕೋಪಕ್ಕೆ ಹೋದಾಗ ಲಾಕ್ ಡೌನ್ ಮಾಡುವುದು ಕೂಡ ಅನಿವಾರ್ಯವಾಗಿತ್ತು. ಇನ್ನಷ್ಟು ದಿನ ಕಠಿಣ ನಿರ್ಬಂಧಗಳು ಕಂಟಿನ್ಯೂ ಮಾಡಿದ್ರೆ ಜನ ಸಾಮಾನ್ಯರಿಗೆ ಸಮಸ್ಯೆ ಎದುರಿಸುವುದು ಕಷ್ಟವಾಗುತ್ತೆ ಅಂತಾನೇ ಸರ್ಕಾರ ಲಾಕ್ ಡೌನ್ ಸಡಿಲಿಕೆ ಮಾಡ್ತಾ ಇದೆ. ಆದ್ರೆ ಇದೇ ಅಪಾಯಕ್ಕೆ ಆಹ್ವಾನ ತರುವಂತಾಗಿ ಬಿಟ್ಟರೆ ಮುಂದೆ ಹೊಣೆ ಯಾರು ಎಂಬ ಪ್ರಶ್ನೆ ಎದುರಾಗುತ್ತೆ. ಒಂದು ಕಡೆ ಬೆಂಗಳೂರು ಮಹಾನಗರಕ್ಕೆ ವಾಪಸ್ ಬರಲಿರುವ ಲಕ್ಷಾಂತರ ಜನ, ಇನ್ನೊಂದು ಕಡೆ ಜಿಲ್ಲೆ, ಜಿಲ್ಲೆಗಳ ಮಧ್ಯೆ ಓಡಾಟ. ಇದರಿಂದ ಮತ್ತೆ ಕೊರೊನಾ ಕಂಟ್ರೋಲ್ ತಪ್ಪಿದ್ರೆ ಏನು ಗತಿ ಅನ್ನುವ ಆತಂಕ ಈಗಲೇ ಎದುರಾಗ್ತಾ ಇದೆ.

ಮುನ್ನೆಚ್ಚರಿಕೆ ವಹಿಸದೇ ಇದ್ರೆ ಮತ್ತೆ ಹೆಚ್ಚಾಗಬಹುದು ಕೊರೊನಾ
ಮತ್ತೆ ಲಾಕ್ ಡೌನ್ ಮಾಡುವ ಪರಿಸ್ಥಿತಿ ಎದುರಾದ್ರೆ ಮತ್ತೆ ಸಂಕಷ್ಟ
ಕೊರೊನಾ ಏರುಗತಿ ಶುರುವಾದ್ರೆ ಮತ್ತದೇ ಹಿಂದೆ ಕಂಡ ಪರಿಸ್ಥಿತಿ

ಮುನ್ನೆಚ್ಚರಿಕೆ ವಹಿಸದೇ ಇದ್ದರೆ ಕೊರೊನಾ ಹೆಚ್ಚಾಗೋದ್ರಲ್ಲಿ ಯಾವುದೇ ಅನುಮಾನವೂ ಇಲ್ಲ. ಈಗಾಗಲೇ ತಜ್ಞರು ಈ ಬಗ್ಗೆ ಸ್ಪಷ್ಟ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಲಾಕ್ ಡೌನ್ ಸಡಿಲಿಕೆ ಆದ ತಕ್ಷಣ ಜನ ಒಮ್ಮೆಲೆ ಅಗತ್ಯ ಇದ್ದರೂ ಇಲ್ಲದಿದ್ದರೂ ಎಚ್ಚರ ಮರೆತು ಓಡಾಡಲು ಶುರು ಮಾಡಿದ್ರೆ ಮತ್ತೆ ಮಾರ್ಕೆಟ್, ಬಸ್ ಸ್ಟ್ಯಾಂಡ್ ತುಂಬಿ ತುಳುಕಿದ್ರೆ ದೇವ್ರೇ ಗತಿ. ಹೀಗೆಲ್ಲ ಆದಾಗ ಸಹಜವಾಗಿ ಏರುಮುಖವಾಗುತ್ತೆ. ಹಿಂದಿನ ವರ್ಷ ಕೊರೊನಾ ಹರಡುವಿಕೆ ಪ್ರಮಾಣವೇ ಕಡಿಮೆ ಇತ್ತು. ಆದ್ರೆ ಎರಡನೇ ಅಲೆಯಲ್ಲಿ ಅದೆಷ್ಟು ವೇಗವಾಗಿ ಕೊರೊನಾ ಹರಡಿತ್ತು ಎಂಬುದು ಎಲ್ಲರಿಗೂ ಗೊತ್ತು. ಅಷ್ಟೇ ಅಲ್ಲ ಎರಡನೇ ಅಲೆಯಲ್ಲಿ ಸೋಂಕಿತರು ಅನುಭವಿಸಿದ ಕಷ್ಟ, ಆಕ್ಸಿಜನ್ ಗಾಗಿ ,ಬೆಡ್ ಗಾಗಿ ಪರದಾಡಿದ ದೃಶ್ಯಗಳು ಇನ್ನೂ ಕಣ್ಣ ಮುಂದೆಯೇ ಇದೆ. ಇನ್ನು ಆಕ್ಸಿಜನ್ ಕೊರತೆಯಿಂದಾದ ದುರಂತವೂ ನೆನಪಿದೆ. ಮತ್ತೆ ಎಚ್ಚರ ಮರೆತು ನಡೆದುಕೊಂಡರೆ ಮತ್ತದೇ ಪರಿಸ್ಥಿತಿ ಬರಲ್ಲ ಅನ್ನೋ ಗ್ಯಾರೆಂಟಿ ಏನಿದೆ. ಹೀಗಾಗಿ ಇದನ್ನೆಲ್ಲ ಮರೆಯದೇ ಮುನ್ನೆಚ್ಚರಿಕೆಯಿಂದಲೇ ನಡೆದುಕೊಂಡರೆ ವೈಯಕ್ತಿಯವಾಗಿಯೂ ಒಳ್ಳೆಯದು,ಎಲ್ಲರಿಗೂ ಒಳ್ಳೆಯದು. ಇಲ್ಲವಾದರೆ ನಮಗೂ ಅಪಾಯ, ಬೇರೆಯವರಿಗೂ ಅಪಾಯ.

ವಲಸೆ, ಜನದಟ್ಟಣೆಯೇ ಮೂರನೆ ಅಲೆಗೆ ನಾಂದಿಯಾಗಬಾರದು
ಯಾವಾಗ ಬೇಕಾದರೂ ಅಪ್ಪಳಿಸಬಹುದು ಅಂತಿದಾರೆ 3ನೇ ಅಲೆ
2ನೇ ಅಲೆಗಿಂತಲೂ 3ನೇ ಅಲೆ ಇನ್ನಷ್ಟು ಅಪಾಯ ಅನ್ನುವ ಆತಂಕ

ಮುಂಬೈ,ದೆಹಲಿ,ಬೆಂಗಳೂರು ಎಲ್ಲಾ ನಗರಗಳು ಬಂದ್ ಆಗಿ ಬಿಟ್ಟಿದ್ದವು. ಬಂದ್ ಆದಾಗ ಜನ ಹಳ್ಳಿಗೆ ಹೋಗಿ ಅಲ್ಲಿ ಕೊರೊನಾ ಹೆಚ್ಚಲು ಕಾರಣವಾಗಿ ಹೋಯ್ತು. ಈಗ ಮತ್ತೆ ನಗರಗಳಿಗೆ ಜನ ವಾಪಸ್ ಬರೋದ್ರಿಂದ ಅದೇ ಕೊರೊನಾ ಹೆಚ್ಚಲು ಕಾರಣವಾಗಿ ಬಿಡಬಾರದು. ಹೀಗಾಗಿ ಎಷ್ಟೇ ಜನ ಬಂದರೂ ಎಲ್ಲರೂ ಸಾಮಾಜಿಕ ಅಂತರ, ಮಾಸ್ಕ್ ಹಾಕಿಕೊಳ್ಳೋದನ್ನ ಮರೆಯಬಾರದು. ಯಾವಾಗ ಬೇಕಾದರೂ ಮೂರನೇ ಅಲೆ ಅಪ್ಪಳಿಸಬಹುದು ಅಂತ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈ ಮರು ವಲಸೆ ಮತ್ತು ಅದರಿಂದಾಗುವ ಜನದಟ್ಟಣೆಯೇ ಮೂರನೇ ಅಲೆಗೆ ನಾಂದಿಯಾಗಿ ಬಿಡಬಾರದು. ಕಾರಣ, ಎರಡನೇ ಅಲೆಗಿಂತ ಮೂರನೇ ಅಲೆ ಇನ್ನಷ್ಟು ಡೇಂಜರಸ್ ಆಗಬಹುದು ಅನ್ನೋ ಆತಂಕ ಇದ್ದೇ ಇದೆ. ಹೀಗಾಗಿ ಎಲ್ಲಾ ಕಡೆ ಅನ್ ಲಾಕ್ ಆದ ನಂತರವೂ ಕೊರೊನಾದ ಎಷ್ಟು ಮುನ್ನೆಚ್ಚೆರಿಕೆಯಿಂದ ಇದ್ದರೂ ಕಡಿಮೇನೆ.

ಜನರನ್ನು ಕಂಟ್ರೋಲ್ ಮಾಡೋದಕ್ಕೆ ಮುಂದೇನು ಮಾಡಬೇಕು?
ಪ್ರತಿ ಜಿಲ್ಲೆಗಳಲ್ಲೂ ಮುಂದೆ ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು?
ಬೆಂಗಳೂರಿನಲ್ಲಿ ಕೊರೊನಾ ಮತ್ತೆ ಹರಡದಂತೆ ಮಾಡೋದು ಹೇಗೆ?

ಲಾಕ್ ಡೌನ್ ಮಾಡಿದಾಗ ಜನರೆಲ್ಲ ಮನೆಯಲ್ಲೇ ಇದ್ದರು. ಲಕ್ಷಾಂತರ ಜನ ಊರು ಸೇರಿಕೊಂಡು ಬಿಟ್ಟಿದ್ರು. ಹೀಗಾಗಿ ಹತ್ತಿಪ್ಪತ್ತು ದಿನಗಳಲ್ಲಿ ಕೊರೊನಾ ಹರಡುವಿಕೆ ಪ್ರಮಾಣ ಗಣನೀಯವಾಗಿ ಇಳಿಯಲು ಕಡಿಮೆ ಆಯ್ತು. ಸರ್ಕಾರ ಕೂಡ ಈ ಹರಡುವಿಕೆ ಪ್ರಮಾಣವನ್ನು ಆಧರಿಸಿಯೇ ಹಂತ ಹಂತವಾಗಿ ಅನ್ ಲಾಕ್ ಮಾಡಲು ತೀರ್ಮಾನ ಮಾಡ್ತಾ ಇದೆ. ಆದ್ರೆ ಅನ್ ಲಾಕ್ ಬಳಿಕ ಮತ್ತೆ ಉದ್ಭವಿಸುವ ಸಮಸ್ಯೆಗಳನ್ನು ನಿವಾರಿಸೋದೇ ಸವಾಲಾಗ್ತಾ ಇದೆ. ಜನರನ್ನು ಕಂಟ್ರೋಲ್ ಮಾಡೋದು ಹೇಗೆ ಅನ್ನೋದು ಬಹಳ ದೊಡ್ಡ ಪ್ರಶ್ನೆಯಾಗಿದೆ. ಪ್ರತಿ ಜಿಲ್ಲೆಗಳ ಗಡಿಗಳಲ್ಲೂ ಚೆಕ್ ಮಾಡಿಯೇ ಜನರನ್ನು ಬಿಡೋದು ಸೂಕ್ತಾನಾ ಅನ್ನೋ ಚರ್ಚೆ ಶುರುವಾಗಿದೆ. ಜಿಲ್ಲೆಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿಯಂತ್ರಿಸೋದು ಕೂಡ ಸವಾಲಾಗುತ್ತೆ. ಇನ್ನು ಬೆಂಗಳೂರಿನಲ್ಲಂತೂ ಕೊರೊನಾ ಮತ್ತೆ ಹರಡದಂತೆ ,ಏರುಗತಿ ಕಾಣದಂತೆ ನೋಡಿಕೊಳ್ಳೋದು ದೊಡ್ಡ ಚಾಲೆಂಜ್ ಆಗಿದೆ. ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿದರೆ ಮಾತ್ರವೇ ಕೊರೊನಾದಿಂದ ದೂರ ಆಗಬಹುದು. ಇಲ್ಲವಾದರೆ ಅಪಾಯಕ್ಕೆ ನಾವೇ ಆಹ್ವಾನ ಕೊಟ್ಟಂತಾಗುತ್ತೆ.

ನಿತ್ಯವೂ ಸಾವಿರ ಸಾವಿರ ಹೊಸ ಕೇಸ್ ಗಳು ಬರ್ತಾನೇ ಇದ್ದಾವೆ. ಜನರಿಗೆ ಸಮಸ್ಯೆ ಆಗುತ್ತೆ ಅಂತ ಸರ್ಕಾರ ಅನ್ ಲಾಕ್ ಅಂದ ತಕ್ಷಣ ಕೊರೊನಾನೇ ಹೋಗಿಬಿಡ್ತು ಅನ್ನುವ ಭಾವನೆ ಬೇಡ. ಕೊರೊನಾ ನಮ್ಮ ಮಧ್ಯೆನೇ ಇದೆ. ಅದು ಅಟ್ಟಹಾಸ ಮೆರೆಯದಂತೆ ನೋಡಿಕೊಳ್ಳಬೇಕಾಗಿದ್ದು ಎಲ್ಲರ ಜವಾಬ್ದಾರಿ

The post ಲಾಕ್​ಡೌನ್ ಮಧ್ಯೆಯೂ ಟ್ರಾಫಿಕ್: 3ನೇ ಅಲೆಗೆ ಕಾರಣವಾಗ್ತಿದೆಯಾ ಜನರ ಓಡಾಟ..? appeared first on News First Kannada.

Source: newsfirstlive.com

Source link