ಮಂಗಳೂರು: ರಾಜ್ಯದಲ್ಲಿ ಲಾಕ್​​ಡೌನ್ ಮಧ್ಯೆಯೂ ಗಾಂಜಾ ಸಾಗಾಟ ಮಾಡುತ್ತಿದ್ದ ಖದೀಮರನ್ನು ಮಂಗಳೂರು ಪೊಲೀಸರು ಬಂಧಿಸಿ, ಸುಮಾರು 200 ಕೆ.ಜಿ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ.

ಕೇರಳ ಕಾಸರಗೋಡು ನಿವಾಸಿಗಳಾದ ಮಹಮ್ಮದ್ ಫಾರುಕ್, ಮೊಯಿದ್ದಿನ್ ನವಾಸ್, ಕುಶಾಲನಗರ ನಿವಾಸಿ ಸೈಯದ್ ಮಹಮ್ಮದ್ ಹಾಗೂ ಮಂಗಳೂರಿನ ಮುಡಿಪು ನಿವಾಸಿ ಮಹಮ್ಮದ್ ಅನ್ಸಾರ್ ಬಂಧಿತ ಆರೋಪಿಗಳಾಗಿದ್ದಾರೆ. ವ್ಯವಸ್ಥಿತವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಬೃಹತ್​ ಜಾಲವನ್ನು ಮಂಗಳೂರು ಪೊಲೀಸರು ಭೇದಿಸಿದ್ದು, ಬಂಧಿತರು ಆಂಧ್ರ ಪ್ರದೇಶದಿಂದ ಕೇರಳದ ಕಾಸರಗೋಡಿ​​​​​​ಗೆ ಗಾಂಜಾ ಸಾಗಾಣೆ ಮಾಡುತ್ತಿದ್ದರು ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ. ಅಲ್ಲದೇ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಪೊಲೀಸ್​​ ತಂಡಕ್ಕೆ 25 ಸಾವಿರ ರೂಪಾಯಿ ಬಹುಮಾನ ಘೋಷಣೆ ಮಾಡಿದ್ದಾರೆ.

ಆರೋಪಿಗಳು ಲಾಕ್​​​ಡೌನ್ ಸಂದರ್ಭವನ್ನೇ ಬಳಸಿಕೊಂಡು ಭಾರೀ ಪ್ರಮಾಣದಲ್ಲಿ ಗಾಂಜಾ ಸಾಗಾಟ ಮಾಡಲು ಯತ್ನಿಸಿದ್ದರು. ಇದಕ್ಕೆ ಮೀನು ಸಾಗಾಟದ ಕಂಟೇನರ್ ಲಾರಿ ಹಾಗೂ ಕಾರನ್ನು ಬಳಕೆ ಮಾಡಿಕೊಂಡಿದ್ದರು. ಕಾರ್ಯಾಚರಣೆ ಸಂದರ್ಭದಲ್ಲಿ ಕಾರಿನಲ್ಲಿ ಪರಿಶೀಲನೆ ನಡೆಸಿದ ವೇಳೆ ದರೋಡೆ ಮಾಡಲು ಬಳಕೆ ಮಾಡುತ್ತಿದ್ದ, ತಲ್ವಾರ್​ ಸೇರಿದಂತೆ ಮಾರಣಾಂತಿಕ ಆಯುಧಗಳು ಪತ್ತೆಯಾಗಿವೆ. ಬಂಧಿತ ಆರೋಫಿಗಳಲ್ಲಿ ಇಬ್ಬರ ವಿರುದ್ಧ ಈಗಾಗಲೇ ಪೊಲೀಸ್​ ಠಾಣೆಯಲ್ಲಿ ಎರಡು ದೂರು ದಾಖಲಾಗಿವೆ ಎಂದು ಪೊಲೀಸ್​​ ಕಮಿಷನರ್​​ ಮಾಹಿತಿ ನೀಡಿದ್ದಾರೆ. ಆರೋಪಿಗಳಿಂದ 200 ಕೆ.ಜಿ ಗಾಂಜಾ, ಮಾರಕಾಸ್ತ್ರ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರು, ಕಂಟೇನರ್ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

The post ಲಾಕ್​​ಡೌನ್​​ ಮಧ್ಯೆಯೂ ಬೃಹತ್ ಮೊತ್ತದ ಗಾಂಜಾ ಸಾಗಾಟ.. ಖದೀಮರು ಅಂದರ್​ appeared first on News First Kannada.

Source: newsfirstlive.com

Source link