ಹುಬ್ಬಳ್ಳಿ: ಲಾಕ್‍ಡೌನ್ ಹಿನ್ನೆಲೆ ಅನವಶ್ಯಕವಾಗಿ ರಸ್ತೆಗೆ ಬಂದ ವಾಹನಗಳ ತಪಾಸಣೆ ನಡೆಸುವ ವೇಳೆ ಕಾರು ಕಳ್ಳರಿಬ್ಬರು ಪೊಲೀಸ್ ಬಲೆಗೆ ಬಿದ್ದ ಘಟನೆ ನಡೆದಿದೆ.

ವೈಭವ ನಗರದಲ್ಲಿ ಕಮ್ಮಾರ ಕೆಲಸ ಮಾಡುವ ತನ್ವೀರ್ ಖಾಸೀಂ ಸಾಬ ಸಯ್ಯದ್(20) ಹಾಗೂ ಖಾನಾಪುರದ ತಂಜೀಮ್ ಇಸ್ಮಾಯಿಲ್ ಖಾನಾಪುರಿ (31) ಆರೋಪಿಗಳು. ಇಬ್ಬರೂ ಗೋಕುಲ್ ರಸ್ತೆಯಲ್ಲಿ ಕೆಂಪು ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಪೊಲೀಸರು ತಡೆದಿದ್ದಾರೆ. ಈ ವೇಳೆ ದಾಖಲೆ ಕೇಳಿದಾಗ ಇಬ್ಬರು ಯುವಕರು ಕಾರು ಅಲ್ಲಿಯೇ ಬಿಟ್ಟು ಪರಾರಿಯಾಗಲು ಯತ್ನಿಸಿದ್ದಾರೆ. ಆಗ ಪೊಲೀಸರು ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ಬಳಿಕ ಈ ಇಬ್ಬರು ಯುವಕರು ಕಾರು ಕಳ್ಳರು ಎಂದು ಗೊತ್ತಾಗಿದೆ.

ಆರೋಪಿ ತಂಜೀಮ್ ಇಸ್ಮಾಯಿಲ್ ಖಾನಾಪುರಿ ಕಾಕತಿ, ಖಾನಾಪುರ, ನಂದಗಡ, ಟಿಳಕವಾಡಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಈತ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಗೋಕುಲ್ ಠಾಣೆಯ ಪೊಲೀಸ್ ಇನ್‍ಸ್ಪೆಕ್ಟರ್ ಜೆ.ಎಂ.ಕಾಲಿಮಿರ್ಚಿ ತನಿಖೆ ಮುಂದುವರಿಸಿದ್ದಾರೆ.

The post ಲಾಕ್‍ಡೌನ್- ತಪಾಸಣೆ ವೇಳೆ ಸಿಕ್ಕಿಬಿದ್ದ ಕಾರು ಕಳ್ಳರು! appeared first on Public TV.

Source: publictv.in

Source link