– ನೆರೆಯ ತೆಲಂಗಾಣ, ಆಂಧ್ರಕ್ಕೂ ಹಾಲು ಪೂರೈಕೆ

ಚಾಮರಾಜನಗರ: ಕಳೆದ ಮೂರು ವರ್ಷಗಳ ಹಿಂದಷ್ಟೇ ಪ್ರಾರಂಭವಾದ ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟ ಇದೀಗ ವಿದೇಶಕ್ಕೂ ಹಾಲು ಸರಬರಾಜು ಮಾಡುವ ಮೂಲಕ ಗಣನೀಯ ಸಾಧನೆ ಮಾಡಿದೆ.

ಲಾಕ್‍ಡೌನ್ ನಡುವೆಯೂ ಚಾಮುಲ್ ನಿಂದ ಭೂತಾನ್ ಗೆ ಹಾಲು ರಫ್ತು ಮಾಡಲಾಗುತ್ತಿದ್ದು, ಪ್ರತಿ ತಿಂಗಳು 2 ರಿಂದ 3 ಲಕ್ಷ ಲೀಟರ್ ಗುಡ್ ಲೈಫ್ ಗೋಲ್ಡ್ ಹೆಸರಿನ ಹಾಲನ್ನು ರಫ್ತು ಮಾಡಲಾಗುತ್ತಿದೆ. ವಿದೇಶವಷ್ಟೇ ಅಲ್ಲ, ಭಾರತೀಯ ಸೇನೆಯ ಅಸ್ಸಾಂ ರೈಫಲ್ಸ್, ನೆರೆಯ ಆಂಧ್ರ ಹಾಗೂ ತೆಲಂಗಾಣ ಸರ್ಕಾರಗಳಿಗೂ ನಂದಿನಿ ಹಾಲು ಪೂರೈಕೆ ಮಾಡುತ್ತಿರುವುದು ಚಾಮುಲ್ ನ ಹೆಗ್ಗಳಿಕೆಯಾಗಿದೆ.

ಅಸ್ಸಾಂ ರೈಫಲ್ಸ್ ಗೆ ಪ್ರತಿ ತಿಂಗಳು 4 ಲಕ್ಷ ಲೀಟರ್ ಗುಡ್ ಲೈಫ್ ಗೋಲ್ಡ್ ಹಾಲು ಸರಬರಾಜು ಮಾಡಲಾಗುತ್ತಿದೆ. ವಿಜಯವಜ್ರ ಹೆಸರಿನಲ್ಲಿ ಆಂಧ್ರ ಪ್ರದೇಶ ಸರ್ಕಾರಕ್ಕೆ ಪ್ರತಿ ತಿಂಗಳು 12 ಲಕ್ಷ ಲೀಟರ್ ಯು.ಎಚ್.ಟಿ ನಂದಿನಿ ಹಾಲು ಪೂರೈಸಲಾಗುತ್ತಿದೆ. ಆಂಧ್ರ ಪ್ರದೇಶ ಸರ್ಕಾರ ಅಲ್ಲಿನ ಅಂಗನವಾಡಿ ಮಕ್ಕಳು, ಶಾಲಾ ಮಕ್ಕಳು, ಗರ್ಭಿಣಿಯರಿಗೆ ವಿಜಯವಜ್ರ ಹೆಸರಿನ ಯು.ಎಚ್.ಟಿ ಹಾಲನ್ನು ನೀಡುತ್ತಿದ್ದು, ಚಾಮುಲ್ ನಲ್ಲಿ ವಿಜಯವಜ್ರ ಹಾಲು ತಯಾರಾಗುತ್ತಿದೆ.

ಚಾಮುಲ್ ನಿಂದ ತೆಲಂಗಾಣಗೆ ಪ್ರತಿ ತಿಂಗಳು 4 ಲಕ್ಷ ಲೀಟರ್ ನಂದಿನಿ ಯು.ಎಚ್.ಟಿ ನಂದಿನಿ ಹಾಲನ್ನು ಸರಬರಾಜು ಮಾಡಲಾಗುತ್ತಿದೆ. ತೆಲಂಗಾಣ ಸರ್ಕಾರ ಅಂಗನವಾಡಿ ಮಕ್ಕಳು, ಶಾಲಾ ಮಕ್ಕಳು, ಗರ್ಭಿಣಿಯರಿಗೆ ನಂದಿನಿ ಯು.ಎಚ್.ಟಿ ಹಾಲು ನೀಡುತ್ತಿದೆ. ಚಾಮುಲ್ ನಲ್ಲಿ ನಂದಿನಿ ಗುಡ್ ಲೈಫ್, ನಂದಿನಿ ಗುಡ್ ಲೈಫ್ ಗೋಲ್ಡ್, ನಂದಿನಿ ಸ್ಲಿಮ್, ನಂದಿನಿ ಸ್ಮಾರ್ಟ್, ನಂದಿನಿ ಸುರಕ್ಷಾ, ವಿಜಯವಜ್ರ ಹೆಸರಿನ ಹಾಲು ತಯಾರಿಸಲಾಗುತ್ತಿದೆ.

ಆರು ಲೇಯರ್ ನ ಟೆಟ್ರಾ ಪ್ಯಾಕೆಟ್ ಗಳಲ್ಲಿ ಪ್ಯಾಕ್ ಮಾಡುವುದರಿಂದ ಇದು ಆರು ತಿಂಗಳ ಕಾಲ ಕೆಡುವುದಿಲ್ಲ. ಅಲ್ಲದೆ ಫ್ರಿಡ್ಜ್ ಅವಶ್ಯಕತೆ ಇಲ್ಲ ಎನ್ನುತ್ತಾರೆ ಚಾಮುಲ್ ಅಧಿಕಾರಿಗಳು.

The post ಲಾಕ್‍ಡೌನ್ ನಡುವೆ ವಿದೇಶಕ್ಕೆ ರಫ್ತಾಗ್ತಿದೆ ನಂದಿನಿ ಹಾಲು appeared first on Public TV.

Source: publictv.in

Source link