ಹಾವೇರಿ: ಲಾಕ್‍ಡೌನ್ ವಿಸ್ತರಣೆ ಬಗ್ಗೆ ಜೂನ್ 4ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಳಗಾವಿಯಲ್ಲಿ ಸಭೆ ಮಾಡುತ್ತಿದ್ದಾರೆ. ಸಭೆಯ ಪೂರ್ವದಲ್ಲಿ ತಜ್ಞರ ವರದಿಯನ್ನು ಸಂಪೂರ್ಣವಾಗಿ ತಿಳಿದುಕೊಂಡು ಸಿಎಂ ತೀರ್ಮಾನ ಮಾಡುತ್ತಾರೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಜಿಲ್ಲೆಯ ರಟ್ಟಿಹಳ್ಳಿಯ ತಾಲೂಕು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಬಳಿಕ ಮಾತನಾಡಿದ ಅವರು, ಲಾಕ್‍ಡೌನ್ ಯಾವ ರೀತಿ ಇರಬೇಕು, ಏನೇನು ಇರಬೇಕು, ಏನೇನು ಇರಬಾರದು ಎಂಬುದರ ಬಗ್ಗೆ ಜೂನ್ 5ರಂದು ಸಿಎಂ ತೀರ್ಮಾನ ಮಾಡುತ್ತಾರೆ. ಹಲವು ಜಿಲ್ಲೆಗಳಲ್ಲಿ ಕೊರೊನಾ ಕಡಿಮೆ ಆಗಿದೆ. ಇನ್ನೂ ಕೆಲವು ಜಿಲ್ಲೆಗಳಲ್ಲಿ ಕಡಿಮೆ ಆಗಬೇಕಿದೆ. ಎಲ್ಲವನ್ನೂ ಗಮನಿಸುತ್ತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಕೆಲವೊಂದಕ್ಕೆ ವಿನಾಯಿತಿ ನೀಡಿ ಲಾಕ್‍ಡೌನ್ ವಿಸ್ತರಣೆ – ಸಿಎಂ ಬಿಎಸ್‍ವೈ

ಮೂರನೇ ಅಲೆ ಎದುರಿಸಲು ಈಗಾಗಲೇ ಸರ್ಕಾರ ಸಜ್ಜಾಗುತ್ತಿದೆ. ಆಕ್ಸಿಜನ್ ಬೆಡ್‍ಗಳು, ವೆಂಟಿಲೇಟರ್, ಐಸಿಯು ಹೆಚ್ಚು ಮಾಡುತ್ತಿದ್ದೇವೆ. ಪ್ರತಿಯೊಂದು ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಜನರೇಟರ್ ಮಾಡಬೇಕೆಂದು ನಿರ್ಧರಿಸಿ ಅದಕ್ಕೆ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

ಸಿಬಿಎಸ್‍ಇ, ಐಸಿಎಸ್ಸಿ ಪರೀಕ್ಷೆ ರದ್ದಾಗಿವೆ. ರಾಜ್ಯಮಟ್ಟದ ಎಸ್‍ಎಸ್‍ಎಲ್‍ಸಿ, ಪಿಯುಸಿ ಪರೀಕ್ಷೆ ಹಾಗೂ ಮಕ್ಕಳ ಭವಿಷ್ಯದ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ತಜ್ಞರ ಜೊತೆ ಚರ್ಚೆ ಮಾಡುತ್ತಿದ್ದಾರೆ. ನಾಳೆ ಅಥವಾ ನಾಡಿದ್ದು ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.

ಪ್ರತಿಯೊಂದು ತಾಲೂಕು ಅಸ್ಪತ್ರೆ ಮತ್ತು ಜಿಲ್ಲಾ ಕೇಂದ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಆಕ್ಸಿಜನ್ ಜನರೇಟರ್ ಬಂದರೆ ಆಕ್ಸಿಜನ್ ಸಮಸ್ಯೆ ನೀಗುತ್ತದೆ. ಅಗತ್ಯಕ್ಕೆ ತಕ್ಕಂತೆ ರೆಮ್‍ಡಿಸಿವಿರ್ ಇದೆ. ಮೂರನೇ ಅಲೆಯಲ್ಲಿ ಮಕ್ಕಳಿಗೆ ಕಾಡುತ್ತದೆ ಎಂಬ ಮಾಹಿತಿ ಇರುವುದರಿಂದ ಪ್ರತಿಯೊಂದು ತಾಲೂಕು ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ಪ್ರತ್ಯೇಕ ಮಕ್ಕಳ ವಾರ್ಡ್ ಮಾಡುತ್ತಿದ್ದೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

The post ಲಾಕ್‍ಡೌನ್ ಯಾವ ರೀತಿ ಇರಬೇಕು ಎಂಬುದರ ಬಗ್ಗೆ ಜೂನ್ 5ರಂದು ಸಿಎಂ ತೀರ್ಮಾನ ಮಾಡ್ತಾರೆ: ಬೊಮ್ಮಾಯಿ appeared first on Public TV.

Source: publictv.in

Source link