
Image Credit source: Republic World
Pakistan Economic Crisis: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಮಾಡಿರುವ ಟ್ವೀಟ್ನಿಂದಾಗಿ ಪಾಕಿಸ್ತಾನದಲ್ಲಿ ಕೂಡ ಶ್ರೀಲಂಕಾದ ರೀತಿಯದ್ದೇ ಪರಿಸ್ಥಿತಿ ನಿರ್ಮಾಣವಾಗುತ್ತಿದೆಯಾ? ಎಂಬ ಚರ್ಚೆ ಆರಂಭವಾಗಿದೆ.
ನವದೆಹಲಿ: ಶ್ರೀಲಂಕಾದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು (Srilanka Economic Crisis) ಎದುರಾಗಿರುವುದು ಗೊತ್ತೇ ಇದೆ. ಶ್ರೀಲಂಕಾದಲ್ಲಿ ಆರ್ಥಿಕ ಸಂಕಷ್ಟದಿಂದಾಗಿ 1 ಲೀಟರ್ ಪೆಟ್ರೋಲ್ಗೆ 420 ರೂ., ಡೀಸೆಲ್ಗೆ 400 ರೂ. ಆಗಿದೆ! ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಕೂಡ ಗಗನಕ್ಕೇರಿದ್ದು, ಈ ಮೂಲಕ ಶ್ರೀಲಂಕಾದಲ್ಲಿ ಜನರು ಬದುಕುವುದೇ ಕಷ್ಟ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ವಾರಾಂತ್ಯದವರೆಗೂ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಲಾಗಿತ್ತು. ಇದೀಗ ನೆರೆಯ ರಾಷ್ಟ್ರವಾದ ಪಾಕಿಸ್ತಾನದಲ್ಲಿ ಕೂಡ ಶ್ರೀಲಂಕಾ ರೀತಿಯದ್ದೇ ಪರಿಸ್ಥಿತಿ ಎದುರಾಗಿದೆಯಾ? ಎಂಬ ಚರ್ಚೆಗಳು ಶುರುವಾಗಿವೆ. ಈ ಚರ್ಚೆಯನ್ನು ಹುಟ್ಟುಹಾಕಿದ್ದು ಪಾಕಿಸ್ತಾನದ (Pakistan Ecnomic Crisis) ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ (Mohammad Hafeez) ಅವರ ಒಂದು ಟ್ವೀಟ್.
ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಲ್ರೌಂಡರ್ ಮೊಹಮ್ಮದ್ ಹಫೀಜ್ ಪಾಕಿಸ್ತಾನದಲ್ಲಿ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಎತ್ತಿ ತೋರಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ತಮ್ಮ ಟ್ವೀಟ್ನಲ್ಲಿ ಪಾಕಿಸ್ತಾನದ ಪ್ರಮುಖ ರಾಜಕಾರಣಿಗಳನ್ನು ಟ್ಯಾಗ್ ಮಾಡಿದ್ದಾರೆ. ಇದು ಭಾರೀ ಚರ್ಚೆಗೆ ಕಾರಣವಾಗಿದೆ. ಶ್ರೀಲಂಕಾದಂತೆ ಪಾಕಿಸ್ತಾನದಲ್ಲೂ ಆರ್ಥಿಕ ಬಿಕ್ಕಟ್ಟು ಎದುರಾಗಿದೆಯಾ? ಎಂಬ ಅನುಮಾನವನ್ನೂ ಹುಟ್ಟುಹಾಕಿದೆ.
No Petrol available in any petrol station in Lahore??? No cash available in ATM machines?? Why a common man have to suffer from political decisions. @ImranKhanPTI @CMShehbaz @MaryamNSharif @BBhuttoZardari
— Mohammad Hafeez (@MHafeez22) May 24, 2022
‘ಲಾಹೋರ್ನ ನಿಲ್ದಾಣದಲ್ಲಿ ಪೆಟ್ರೋಲ್ ಇಲ್ಲ, ಎಟಿಎಂನಲ್ಲಿ ಹಣವಿಲ್ಲ’ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಇಂದು ಪೋಸ್ಟ್ ಮಾಡಿದ ಟ್ವೀಟ್ ಅಲ್ಲಿನ ಆರ್ಥಿಕತೆಯ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ವರ್ಷ ಮಾರ್ಚ್ 10ರಂದು ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯದ ಮೂಲಕ ಮಾಜಿ ಕ್ರಿಕೆಟಿಗ ಹಾಗೂ ಪಾಕಿಸ್ತಾನದ ಪ್ರಧಾನಿಯಾಗಿದ್ದ ಇಮ್ರಾನ್ ಖಾನ್ ಅವರನ್ನು ಪದಚ್ಯುತಗೊಳಿಸಿದ ಬಳಿಕ ಪಾಕಿಸ್ತಾನದ ಆಡಳಿತದಲ್ಲಿ ಬದಲಾವಣೆಗಳು ಉಂಟಾದವು.