ಲೀಸೆಸ್ಟರ್‌ನಲ್ಲಿ ಶಾಂತಿ ಕಾಪಾಡಲು ಕರೆ ನೀಡಿದ ಹಿಂದೂ- ಮುಸ್ಲಿಂ ಸಮುದಾಯದ ನಾಯಕರು | Community leaders from Hindus and Muslims of Leicester in the UK Joint Statement For Peace


ನಮ್ಮ ಎರಡು ಧರ್ಮಗಳು ಈ ಅದ್ಭುತ ನಗರದಲ್ಲಿ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಸಾಮರಸ್ಯದಿಂದ ಬದುಕಿವೆ. ನಾವು ಒಟ್ಟಿಗೆ ಈ ನಗರಕ್ಕೆ ಬಂದಿದ್ದೇವೆ. ನಾವು ಅದೇ ಸವಾಲುಗಳನ್ನು ಒಟ್ಟಿಗೆ ಎದುರಿಸಿದ್ದೇವೆ….

ಲೀಸೆಸ್ಟರ್‌ನಲ್ಲಿ ಶಾಂತಿ ಕಾಪಾಡಲು ಕರೆ ನೀಡಿದ ಹಿಂದೂ- ಮುಸ್ಲಿಂ ಸಮುದಾಯದ ನಾಯಕರು

ಜಂಟಿ ಹೇಳಿಕೆ ನೀಡಿದ ನಾಯಕರು

ಲೀಸೆಸ್ಟರ್: ಕಳೆದ ತಿಂಗಳು ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾಕಪ್ ಕ್ರಿಕೆಟ್ ಪಂದ್ಯದ (Asia Cup cricket match) ನಂತರ ಭುಗಿಲೆದ್ದಿದ್ದ ಸಂಘರ್ಷವನ್ನು ಕೊನೆಗೊಳಿಸುವಂತೆ ಯುಕೆಯಲ್ಲಿರುವ ಲೀಸೆಸ್ಟರ್‌ನ (Leicester) ಹಿಂದೂಗಳು ಮತ್ತು ಮುಸ್ಲಿಮರ ಸಮುದಾಯದ ಮುಖಂಡರು ಇಂದು (ಮಂಗಳವಾರ)  ಜಂಟಿ ಹೇಳಿಕೆ ನೀಡಿದ್ದಾರೆ. ನಾವು, ಲೀಸೆಸ್ಟರ್‌ನ ಕುಟುಂಬ, ಹಿಂದೂಗಳು ಮತ್ತು ಮುಸ್ಲಿಮರಾಗಿ ಮಾತ್ರವಲ್ಲದೆ ಸಹೋದರ ಸಹೋದರಿಯರಂತೆ ನಿಮ್ಮ ಮುಂದೆ ನಿಂತಿದ್ದೇವೆ” ಎಂದು ಮುಖಂಡರೊಬ್ಬರು ಜಂಟಿ ಹೇಳಿಕೆಯನ್ನು ಓದಿದ್ದಾರೆ. ಸಮುದಾಯಗಳ ವಿಭಜನೆಗೆ ಕಾರಣವಾಗುವ ಯಾವುದೇ ವಿದೇಶಿ ಉಗ್ರಗಾಮಿ ಸಿದ್ಧಾಂತಕ್ಕೆ ಲೀಸೆಸ್ಟರ್‌ನಲ್ಲಿ ಸ್ಥಾನವಿಲ್ಲ” ಎಂದು ಅವರು ಒತ್ತಿ ಹೇಳಿದರು. “ನಮ್ಮ ಎರಡು ಧರ್ಮಗಳು ಈ ಅದ್ಭುತ ನಗರದಲ್ಲಿ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಸಾಮರಸ್ಯದಿಂದ ಬದುಕಿವೆ. ನಾವು ಒಟ್ಟಿಗೆ ಈ ನಗರಕ್ಕೆ ಬಂದಿದ್ದೇವೆ. ನಾವು ಅದೇ ಸವಾಲುಗಳನ್ನು ಒಟ್ಟಿಗೆ ಎದುರಿಸಿದ್ದೇವೆ. ನಾವು ಜನಾಂಗೀಯ ದ್ವೇಷಿಗಳ ವಿರುದ್ಧ ಒಟ್ಟಿಗೆ ಹೋರಾಡಿದ್ದೇವೆ. ಒಟ್ಟಾಗಿ ಈ ನಗರವನ್ನು ವೈವಿಧ್ಯತೆ ಮತ್ತು ಸಮುದಾಯದ ಒಗ್ಗಟ್ಟಿನ ದಾರಿದೀಪವನ್ನಾಗಿ ಮಾಡಿದೆವು ಎಂದಿದ್ದಾರೆ. ಸಭ್ಯ ಸಮಾಜದ ಭಾಗವಾಗಿರದ ಉದ್ವೇಗ ಮತ್ತು ಹಿಂಸೆಯ ಬಗ್ಗೆ ಸಮುದಾಯಗಳಿಗೆ ಚಿಂತೆ ಮತ್ತು ಆಘಾತವಾಗಿದೆ ಎಂದಿದ್ದಾರೆ ಅವರು.

ನಾವು ಒಂದೇ ಕುಟುಂಬದವರು. ನಾವು ಇಲ್ಲಿ ಈ ನಗರದಲ್ಲಿ ಒಟ್ಟಿಗೆ ನೆಲೆಸಿದ್ದೇವೆ, ನಾವು ಒಟ್ಟಿಗೆ ಜನಾಂಗೀಯ ದ್ವೇಷಿಗಳ ವಿರುದ್ಧ ಹೋರಾಡಿದ್ದೇವೆ, ನಾವು  ಒಟ್ಟಿಗೆ ನಿರ್ಮಿಸಿದ್ದೇವೆ. ಇತ್ತೀಚಿನ ಹಿಂಸಾಚಾರವು ನಮ್ಮ ನಗರಕ್ಕೆ ತಕ್ಕುದಾದದಲ್ಲ. ನಾವು ಏನು ನೋಡಿದ್ದೇವೆಯೋ ಅದು ಆಗಬಾರದಿತ್ತು. “ಧಾರ್ಮಿಕ ಸ್ಥಳಗಳು, ಮಸೀದಿಗಳು ಮತ್ತು ದೇವಾಲಯಗಳ ಪವಿತ್ರತೆಯನ್ನು ಗೌರವಿಸಲು ನಾವು ಎಲ್ಲರಲ್ಲೂ ಮನವಿ ಮಾಡುತ್ತೇವೆ ಎಂದು ಅವರು ಹೇಳಿದರು. ಅದೇ ವೇಳೆ ಜೋರಾಗಿ ಸಂಗೀತ, ಧ್ವಜಾರೋಹಣ, ಅವಹೇಳನಕಾರಿ ಘೋಷಣೆಗಳು ಅಥವಾ ಪೂಜೆಯ ಬಟ್ಟೆಯ ವಿರುದ್ಧ ದೈಹಿಕ ದಾಳಿ ಮೊದಲಾದವುಗಳಿಂದ ಪ್ರಚೋದನೆಗೊಳಗಾಗಬೇಡಿ ಎಂದು ಅವರು ಹೇಳಿದ್ದಾರೆ.

ಆಗಸ್ಟ್ 28 ರ ಕ್ರಿಕೆಟ್ ಪಂದ್ಯದ ಬಳಿಕ ಇಲ್ಲಿ ಘರ್ಷಣೆಯುಂಟಾಗಿತ್ತು. ಧಾರ್ಮಿಕ ಸ್ಥಳಗಳಿಗೆ ಹಾನಿಯಾಗಿದೆ ಎಂಬ ವದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಇದು ಬೇರೆಯೇ ಆಯಾಮವನ್ನು ಪಡೆಯಿತು. ಇದಾದ ನಂತರ ಶನಿವಾರ ಮತ್ತು ಭಾನುವಾರದಂದು ಕಿಡಿಕಾರುವ ಘೋಷಣೆಗಳೊಂದಿಗೆ ಪ್ರತಿಭಟನೆಗಳು ಮತ್ತು ರ್ಯಾಲಿಗಳು ನಡೆದವು. ಹಿಂಸಾಚಾರದಲ್ಲಿ ಭಾಗಿಯಾಗಿದ್ದಕ್ಕಾಗಿ ಇದುವರೆಗೆ ಹದಿನೈದು ಜನರನ್ನು ಬಂಧಿಸಲಾಗಿದೆ ಎಂದು ಲೀಸೆಸ್ಟರ್‌ಶೈರ್ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

TV9 Kannada


Leave a Reply

Your email address will not be published.