95 ಸಾವಿರ ದೇಣಿಗೆ ನೀಡಿ ಟ್ರೋಲ್​ಗೆ ಗುರಿಯಾದ ಚಹಲ್​..!
ಜಾಗತಿಕ ಪಿಡುಗಾಗಿರುವ ಕೋವಿಡ್ 2ನೇ ಅಲೆಗೆ ಭಾರತ, ಅಕ್ಷರಶಃ ನಲುಗಿದೆ. ಸಂಕಷ್ಟದ ಸುಳಿಗೆ ಸಿಲುಕಿರುವ ಭಾರತದ ನೆರವಿಗೆ ಕ್ರಿಕೆಟಿಗರು ಮುಂದೆ ಬರುತ್ತಿದ್ದಾರೆ. ಟೀಮ್​ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ, ಮಾಜಿ ಸಚಿನ್​ ತೆಂಡೂಲ್ಕರ್​, ಶಿಖರ್ ಧವನ್​ ನಂತರ, ಯಜುವೇಂದ್ರ ಚಹಲ್ ಕೂಡ ದೇಣಿಗೆ ನೀಡಿದ್ದಾರೆ. ವಿರಾಟ್​ ಕೊಹ್ಲಿ ದೇಣಿಗೆ ಸಂಗ್ರಹದ ಅಭಿಯಾನಕ್ಕೆ ಚಹಲ್​​, 95 ಸಾವಿರ ಪಾವತಿಸಿ ಟ್ರೋಲ್​ಗೆ ಗುರಿಯಾಗಿದ್ದಾರೆ. ನೀವು ನೀಡಿರುವ ದೇಣಿಗೆ ಮೊತ್ತದ ಹಣದಲ್ಲಿ ಒಂದು ವೆಂಟಿಲೇಟರ್​ ಖರೀದಿಸಲು ಆಗೋದಿಲ್ಲ ಎಂದು ನೆಟ್ಟಿಗರು ಟ್ರೋಲ್​ ಮಾಡ್ತಿದ್ದಾರೆ. ಕೆಲವರು ಕೋಟಿ ಕೋಟಿ ದುಡಿಯುವ ನೀವು ಇಷ್ಟು ಅಲ್ಪ ಮೊತ್ತ ನೀಡಿದರೆ ಹೇಗೆ..? ಎಂದು ಪ್ರಶ್ನಿಸಿದ್ರೆ, ಇನ್ನೂ ಕೆಲವರು ಐಪಿಎಲ್​​ನಲ್ಲಿ ನೀವು ನೀಡಿರುವ ರನ್​ಗಳಿಗಿಂತಲೂ ಕಡಿಮೆ ಮೊತ್ತ ಎಂದು ಛೇಡಿಸಿದ್ದಾರೆ.

ಕೋವಿಡ್​-19 ಲಸಿಕೆ ಪಡೆದ ವಿರಾಟ್​ ಕೊಹ್ಲಿ..!
ದೇಶದಲ್ಲಿ ಕೊರೊನಾ ವೈರಸ್​​​ 2ನೇ ಅಲೆಯ ಅಬ್ಬರ ಹೆಚ್ಚಾಗಿದ್ದು, ಐಪಿಎಲ್​ ಮುಂದೂಡಿದ ಬಳಿಕ ಮನೆಗೆ ಮರಳಿದ ಕ್ರಿಕೆಟಿಗರು, ಕೊರೊನಾ ಲಸಿಕೆ ಪಡೆಯುವತ್ತ ಧಾವಿಸುತ್ತಿದ್ದಾರೆ. ಶಿಖರ್ ಧವನ್​, ಅಜಿಂಕ್ಯಾ ರಹಾನೆ, ಉಮೇಶ್​ ಯಾದವ್​ ಬಳಿಕ ಇದೀಗ ಟೀಮ್​ ಇಂಡಿಯಾ ಕ್ಯಾಪ್ಟನ್​ ವಿರಾಟ್ ಕೊಹ್ಲಿ, ಮೊದಲ ಹಂತದ ಲಸಿಕೆ ಪಡೆದುಕೊಂಡಿದ್ದಾರೆ. ಲಸಿಕೆ ಪಡೆದ ಕುರಿತು ಇನ್​​ಸ್ಟಾಗ್ರಾಮ್​​ ಖಾತೆಯಲ್ಲಿ ಫೋಸ್ಟ್​ ಮಾಡಿರುವ ಕೊಹ್ಲಿ, ದಯವಿಟ್ಟು ನೀವು ಕೂಡ ಬೇಗ ಲಸಿಕೆ ಪಡೆಯಿರಿ. ಹಾಗೆಯೇ ಸುರಕ್ಷತೆ ಒತ್ತು ನೀಡಿ ಎಂದು ದೇಶದ ಜನರಲ್ಲಿ ಮನವಿ ಮಾಡಿದ್ದಾರೆ. ಇದಕ್ಕೂ ಮುನ್ನ ಲಸಿಕೆ ಪಡೆದ ಧವನ್​ ಮತ್ತು ರಹಾನೆ, ವ್ಯಾಕ್ಸಿನ್​ ಪಡೆಯಲು ಆಲಸ್ಯ ಮಾಡಬೇಡಿ ಎಂದು ಕೇಳಿಕೊಂಡಿದ್ದರು. ಭಾರತದಲ್ಲಿ ಮೊದಲ ಹಂತದ ಲಸಿಕೆ ಪಡೆದ ಕ್ರಿಕೆಟಿಗರಿಗೆ, 2ನೇ ಹಂತದ ಲಸಿಕೆಯನ್ನು ಇಂಗ್ಲೆಂಡ್​​ನಲ್ಲಿ ನೀಡಲಾಗುತ್ತದೆ.

ಬಾಕಿ ಉಳಿದ ಐಪಿಎಲ್​​ ನಡೆಯಲ್ಲ ಭಾರತದಲ್ಲಿ..!
ಆಟಗಾರರ ಭದ್ರಕೋಟೆಯಾಗಿದ್ದ ಬಯೋಬಬಲ್​​​ ಒಳಗೆ ನುಸುಳಿದ್ದ ಕೊರೊನಾ ವೈರಸ್​ನಿಂದಾಗಿ, ಇಡೀ ಐಪಿಎಲ್​ಗೇ ರೆಡ್​ ಸಿಗ್ನಲ್​ ಬಿತ್ತು. ಹೀಗಾಗಿ ಉಳಿದ ಐಪಿಎಲ್​ ಪಂದ್ಯಗಳನ್ನ ಎಲ್ಲಿ ನಡೆಸಬೇಕೆಂಬ ಗೊಂದಲ ಶುರುವಾಗಿತ್ತು. ಆದರೆ ಈ ಗೊಂದಲಗಳಿಗೆ ತೆರೆ ಎಳೆದಿರುವ ಬಿಸಿಸಿಐ ಅಧ್ಯಕ್ಷ ಸೌರವ್​​ ಗಂಗೂಲಿ, ಐಪಿಎಲ್​ ಭಾರತದಲ್ಲಿ ಆಡಿಸುವುದಿಲ್ಲ. ಶ್ರೀಮಂತ ಲೀಗ್​ ಆಯೋಜನೆಗೆ ಹಲವು ಕ್ರಿಕೆಟ್​ ಮಂಡಳಿಗಳು ಮುಂದೆ ಬಂದಿವೆ. ಆದರೆ ನಾವಿನ್ನು ಯಾವುದೇ ನಿರ್ಧಾರಕ್ಕೆ ಬಂದಿಲ್ಲ ಎಂದಿದ್ದಾರೆ. ಸದ್ಯದ ಪರಿಸ್ಥಿತಿಲ್ಲಿ ಭಾರತದಲ್ಲಿ ಕೊರೊನಾ ತಾಂಡವವಾಡ್ತಿದ್ದು, ಎಲ್ಲಿ ನಡೆಸಬೇಕೆಂಬ ಗೊಂದಲ ಶುರುವಾಗಿದೆ. ಹಾಗಾಗಿ ಇದಕ್ಕೆ ಸಂಬಂಧಿಸಿದಂತೆ ಜುಲೈ ತಿಂಗಳೊಳಗೆ ಅಂತಿಮ ಮಾಡಲಾಗುವುದು ಎಂದು ಗಂಗೂಲಿ ಸ್ಪಷ್ಟಪಡಿಸಿದ್ದಾರೆ.

ಮತ್ತೊಬ್ಬ ಕ್ರಿಕೆಟಿಗನ ತಂದೆ ಕೋವಿಡ್​​ಗೆ​ ಬಲಿ..!
ರಾಜಸ್ಥಾನ್​ ರಾಯಲ್ಸ್​ ತಂಡದ ಯುವ ವೇಗಿ ಚೇತನ್​ ಸಕಾರಿಯಾ ಅವರ ತಂದೆ ನಿಧನದ ಬೆನ್ನಲ್ಲೆ, ಮತ್ತೊಬ್ಬ ಕ್ರಿಕೆಟಿಗನ ತಂದೆ ಕೋವಿಡ್​ಗೆ ಬಲಿಯಾಗಿದ್ದಾರೆ. ಮುಂಬೈ ಇಂಡಿಯನ್ಸ್​ ತಂಡದ ಪಿಯೂಷ್​ ಚಾವ್ಲಾರ ತಂದೆ ಪ್ರಮೋದ್​ ಕುಮಾರ್​ ಚಾವ್ಲಾ ಅವರನ್ನ, ಮಹಾಮಾರಿ ಆಹುತಿ ಪಡೆದಿದೆ. ಕೊರೊನಾ ಸೋಂಕಿಗೆ ತುತ್ತಾಗಿದ್ದ ಚಾವ್ಲಾರ ತಂದೆ​​, ಕೆಲವು ದಿನಗಳ ಹಿಂದೆಯೇ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಸ್ಪಂದಿಸದೇ ಸೋಮವಾರ ಕೊನೆಯುಸಿರೆಳೆದರು. ಇನ್ನು ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಚಾವ್ಲಾ, ನಮ್ಮ ತಂದೆ ಕೊರೊನಾ ವೈರಸ್​​ನಿಂದ ನಮ್ಮಿಂದ ದೂರವಾಗಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಕೋರುತ್ತೇನೆ ಎಂದು ಭಾವುಕರಾಗಿದ್ದಾರೆ. ಚಾವ್ಲಾರ ನಿಧನಕ್ಕೆ ಇಡೀ ಕ್ರಿಕೆಟ್​ ಲೋಕವೇ ಕಂಬನಿ ಮಿಡಿದಿದೆ. ಇನ್ನು ಭಾನುವಾರ ಯುವ ವೇಗಿ ಚೇತನ್​ ಸಕಾರಿಯಾ ಅವರ ತಂದೆ ಕೊರೊನಾದಿಂದ ಮೃತಪಟ್ಟಿದ್ದರು. ಹಾಗಾಗಿ ಸಕಾರಿಯಾ ಜೊತೆ ನಾವಿದ್ದೇವೆ ಎಂದು ರಾಜಸ್ಥಾನ್​ ರಾಯಲ್ಸ್​ ಹೇಳಿದೆ.

ಬಾಬರ್​ ಅಜಾಮ್​ಗೆ ಏಪ್ರಿಲ್​​ ತಿಂಗಳ ಐಸಿಸಿ ಪ್ರಶಸ್ತಿ..!
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಏಪ್ರಿಲ್​​ ತಿಂಗಳ ಪ್ಲೇಯರ್ ಆಫ್ ದಿ ಮಂತ್ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಸೋಮವಾರ ಪ್ರಕಟಿಸಿದೆ. ಪುರುಷರ ವಿಭಾಗದಲ್ಲಿ ಪಾಕಿಸ್ತಾನದ ಬಾಬರ್​ ಅಜಾಮ್​, ಮಹಿಳೆಯರ ವಿಭಾಗದಲ್ಲಿ ಆಸ್ಟ್ರೇಲಿಯಾದ ಅಲಿಸಾ ಹೀಲಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪಾಕಿಸ್ತಾನದ ನಾಯಕ ಬಾಬರ್ ಅಜಾಮ್, ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ-ಟಿ20 ಸರಣಿಗಳಲ್ಲಿ ಸ್ಥಿರ ಪ್ರದರ್ಶನ ತೋರಿದ್ದರು. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 76ರ ಸರಾಸರಿಯಲ್ಲಿ 228ರನ್​ ಗಳಿಸಿದ್ದರು. ಹಾಗೆಯೇ 7 ಟಿ20 ಪಂದ್ಯಗಳಲ್ಲಿ 43.57ರಂತೆ ಒಂದು ಶತಕ ಸೇರಿ 305 ರನ್​ ಕಲೆ ಹಾಕಿದ್ದಾರೆ. ಇನ್ನು ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಅದ್ಭುತ ಪರ್ಫಾ​ಮೆನ್ಸ್ ನೀಡಿದ ಅಲಿಸಾ ಹೀಲಿ, ಮೂರು ಏಕದಿನ ಪಂದ್ಯಗಳಲ್ಲಿ 51.66ರ ಸರಾಸರಿಯಲ್ಲಿ 155 ರನ್​​​ ಗಳಿಸಿದ್ದರು. ಇನ್ನು ಇದಕ್ಕೂ ಮೊದಲ ಮೂರು ತಿಂಗಳಲ್ಲಿ ಭಾರತದ ಮೂವರು ಆಟಗಾರರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಈ ಬಾರಿಯ ಟಿ20 ವಿಶ್ವಕಪ್​ ಆಡ್ತಾರಾ ಮಾಲಿಂಗ..?
ವಿಶ್ವಶ್ರೇಷ್ಠ ವೇಗಿಗಳಲ್ಲಿ ಒಬ್ಬರಾದ ಲಸಿತ್ ಮಾಲಿಂಗ, ಮುಂದಿನ ಟಿ20 ವಿಶ್ವಕಪ್​ನಲ್ಲಿ ಪಾಲ್ಗೊಳ್ಳುವ ಕುರಿತು ಶ್ರೀಲಂಕಾ ಕ್ರಿಕೆಟ್​​ ಭರವಸೆ ವ್ಯಕ್ತಪಡಿಸಿದೆ. 37ರ ಹರೆಯದ ಮಾಲಿಂಗ, ಸದ್ಯ ನಿವೃತ್ತಿಯ ಅಂಚಿನಲ್ಲಿದ್ದಾರೆ. ಶ್ರಿಲಂಕಾ ರಾಷ್ಟ್ರೀಯ ಆಯ್ಕೆ ಸಮಿತಿಯ ಮುಖ್ಯಸ್ಥ ಪ್ರಮೋದ್​ ವಿಕ್ರಮ ಸಿಂಘೆ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಚುಟುಕು ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಲಿಂಗ್​ ಜೊತೆ ಚರ್ಚಿಸುವುದಾಗಿ ತಿಳಿಸಿದ್ದಾರೆ. ಲಸಿತ್​​ ನಮ್ಮ ದೇಶ ಕಂಡ ಅತ್ಯಂತ ಶ್ರೇಷ್ಠ ವೇಗಿಗಳಲ್ಲಿ ಒಬ್ಬರು. ಅವರ ದಾಖಲೆಗಳೇ ಅದನ್ನು ನಿರೂಪಿಸುತ್ತವೆ. ಹಾಗಾಗಿ ನಾವು ಲಸಿತ್ ಅವರೊಂದಿಗೆ ಶೀಘ್ರದಲ್ಲಿಯೇ ಮಾತುಕತೆ ನಡೆಸುತ್ತೇವೆ ಎಂದು ಹೇಳಿದ್ದಾರೆ. ಲಸಿತ್ ಮಾಲಿಂಗ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ಮಾದರಿಗೆ, ಈ ಹಿಂದೆಯೇ ನಿವೃತ್ತಿ ಘೋಷಿಸಿದ್ದಾರೆ. 37 ಹರೆಯದ ಮಾಲಿಂಗ ನಾಯಕತ್ವದಡಿ ಲಂಕಾ ಕ್ರಿಕೆಟ್ ತಂಡ, 2014ರಲ್ಲಿ ಐಸಿಸಿ ಟಿ20 ವಿಶ್ವಕಪ್‌ ಗೆದ್ದಿತ್ತು.

The post ಲೆಗ್​ಸ್ಪಿನ್ನರ್​ ಯುಜುವೇಂದ್ರ ಚಹಲ್ ಕಾಲೆಳೆದಿದ್ಯಾಕೆ ಕ್ರಿಕೆಟ್ ಫ್ಯಾನ್ಸ್​​..? appeared first on News First Kannada.

Source: newsfirstlive.com

Source link