ಲೆಜೆಂಡರಿ ಬಾಲಿವುಡ್​ ನಟ ದಿಲೀಪ್ ಕುಮಾರ್ ಇನ್ನಿಲ್ಲ

ಲೆಜೆಂಡರಿ ಬಾಲಿವುಡ್​ ನಟ ದಿಲೀಪ್ ಕುಮಾರ್ ಇನ್ನಿಲ್ಲ

ಬಾಲಿವುಡ್​ನ ಲೆಜೆಂಡರಿ ನಟ ದಿಲೀಪ್ ಕುಮಾರ್(98)​ ನಿಧನರಾಗಿದ್ದಾರೆ. ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ನಿನ್ನೆ ಅವರನ್ನ ಮುಂಬೈನ ಹಿಂದುಜಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ವಿಧಿವಶರಾಗಿದ್ದಾರೆ.

ಒಂದೇ ತಿಂಗಲ್ಲಿ ಎರಡನೇ ಬಾರಿಗೆ ದಿಲೀಪ್​ ಕುಮಾರ್​ರನ್ನ ಆಸ್ಪತ್ರೆಗೆ ಸೇರಿಸಲಾಗಿತ್ತು. ಮೊದಲ ಬಾರಿಗೆ ಜೂನ್ 6 ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಿ, ಆಕ್ಸಿಜನ್ ಸಪೋರ್ಟ್​ನಲ್ಲಿ ಇರಿಸಲಾಗಿತ್ತು. ಕಳೆದ ಕೆಲವು ವರ್ಷಗಳಿಂದೀಚೆಗೆ ದಿಲೀಪ್ ಅವರಿಗೆ ಅರೋಗ್ಯ ಸಮಸ್ಯೆ ಹೆಚ್ಚಾಗಿತ್ತು. ಮೂತ್ರಪಿಂಡದ ಸಮಸ್ಯೆ ಹಾಗೂ ನ್ಯುಮೋನಿಯಾದಿಂದ ಬಳಲುತ್ತಿದ್ದ ಅವರು, ಆಗಾಗ ಆಸ್ಪತ್ರೆಗೆ ದಾಖಲಾಗುತ್ತಿದ್ದರು.

ತಮ್ಮ 94ನೇ ಹುಟ್ಟುಹಬ್ಬದಂದು ದಿಲೀಪ್ ಆಸ್ಪತ್ರೆಯಲ್ಲೇ ಕಳೆದಿದ್ದರು. ಇದೇ ಡಿಸೆಂಬರ್‌ನಲ್ಲಿ ಅವರು 99ನೇ ವರ್ಷದ ಜನ್ಮದಿನ ಆಚರಿಸಿಕೊಳ್ಳಬೇಕಿತ್ತು. ಆದ್ರೆ ದಿಲೀಪ್ ಇಂದು ಇಹಲೋಕ ತ್ಯಜಿಸಿದ್ದಾರೆ. 50 ವರ್ಷ ಪತ್ನಿ ಸೈರಾ ಬಾನು ಅವರನ್ನ ಅಗಲಿದ್ದಾರೆ.

1944ರಲ್ಲಿ ಜ್ವರ್​​​ಭಾತ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ದಿಲೀಪ್ ಕುಮಾರ್, 65ಕ್ಕಿಂತ ಹೆಚ್ಚು ಸಿನಿಮಾದಲ್ಲಿ ನಟಿಸಿದ್ದಾರೆ. ಐತಿಹಾಸಿಕ ಮೊಘಲ್​​ ಏ ಆಜಮ್​​ ಚಿತ್ರದಿಂದ ದಿಲೀಪ್ ಪ್ರಖ್ಯಾತಿ ಪಡೆದರು. 1966ರಲ್ಲಿ ನಟಿ ಸಾಯಿರಾಬಾನು ಜೊತೆ ವಿವಾಹವಾದ್ರು.

ಹಿಂದಿ ಸಿನಿಮಾದ ಸುವರ್ಣಯುಗದ ನಟ ದಿಲೀಪ್​ ಕುಮಾರ್​​ ಅತ್ಯಂತ ಹೆಚ್ಚು ಫಿಲಂ ಫೇರ್​​ ಪ್ರಶಸ್ತಿ ಪಡೆದ ನಟ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. 2015ರಲ್ಲಿ ಅವರಿಗೆ ಪದ್ಮವಿಭೂಷಣ, 1994ರಲ್ಲಿ ದಾದಾ ಸಾಹೇಬ್​ ಫಾಲ್ಕೆ, 1991ರಲ್ಲಿ ಪದ್ಮಭೂಷಣ ನೀಡಿ ಗೌರವಿಸಲಾಗಿದೆ.
ಪಾಕ್​​ನ ಅತ್ಯುನ್ನತ ನಾಗರಿಕ ಪ್ರಶಸ್ತಿ ನಿಶಾನ್​ ಏ ಇಮ್ತಿಯಾಜ್ ಗೌರವಕ್ಕೆ ಕೂಡ ಭಾಜನರಾಗಿದ್ದಾರೆ. 2000ದಿಂದ 2006ರವರೆಗೆ ದಿಲೀಪ್ ಕುಮಾರ್ ರಾಜ್ಯಸಭಾ ಸದಸ್ಯರಾಗಿದ್ದರು.

The post ಲೆಜೆಂಡರಿ ಬಾಲಿವುಡ್​ ನಟ ದಿಲೀಪ್ ಕುಮಾರ್ ಇನ್ನಿಲ್ಲ appeared first on News First Kannada.

Source: newsfirstlive.com

Source link