ಲೋಕಸಭೆ ಫಲಿತಾಂಶದ ನಂತರ ನನ್ನ ರಾಜೀನಾಮೆ ನಿರ್ಧಾರ ಬದಲಿಸಿದ್ದು ಪ್ರಧಾನಿ ನರೇಂದ್ರ ಮೋದಿ | JDS Leader HD Devegowda Responds to Allegations of his alliance with PM Narendra Modi


ಲೋಕಸಭೆ ಫಲಿತಾಂಶದ ನಂತರ ನನ್ನ ರಾಜೀನಾಮೆ ನಿರ್ಧಾರ ಬದಲಿಸಿದ್ದು ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ಮೋದಿ ಮತ್ತು ದೇವೇಗೌಡ

ಮಂಡ್ಯ: ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಬಹುಮತ ಬಂದರೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದ ಜೆಡಿಎಸ್ ನಾಯಕ ಎಚ್​.ಡಿ.ದೇವೇಗೌಡ ನಂತರ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು. ದೇವೇಗೌಡರು ಘೋಷಿಸಿದ ಮಾತಿನಂತೆ ನಡೆದುಕೊಳ್ಳಲಿಲ್ಲ ಎಂಬ ಟೀಕೆಗಳೂ ಆ ಸಂದರ್ಭದಲ್ಲಿ ಕೇಳಿಬಂದಿದ್ದವು. ಹಲವು ವರ್ಷಗಳ ಹಿಂದಿನ ಈ ಬೆಳವಣಿಗೆಗೆ ಇದೀಗ ದೇವೇಗೌಡರು ಪ್ರತಿಕ್ರಿಯಿಸಿದ್ದಾರೆ. ತಾವೇಕೆ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯಬೇಕಾಯಿತು ಎಂಬುದನ್ನು ವಿವರಿಸಿದ್ದಾರೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ನಾಶ ಮಾಡುತ್ತೇವೆ ಎನ್ನುವವರ ವಿರುದ್ಧ ಎದ್ದು ನಿಲ್ಲುತ್ತೇವೆ ಎಂದು ಘೋಷಿಸಿದರು. ಬಿಜೆಪಿ ಬಹುಮತ ಗಳಿಸಿದರೆ ರಾಜೀನಾಮೆ ನೀಡುತ್ತೇನೆ ಎಂದು ಕಳೆದ ಲೋಕಸಭೆ ಚುನಾವಣೆಯಲ್ಲಿ ಘೋಷಿಸಿದ್ದೆ. ಫಲಿತಾಂಶ ಪ್ರಕಟವಾದ ನಂತರ ಪ್ರಧಾನಿ ನರೇಂದ್ರ ಮೋದಿ ದೆಹಲಿಗೆ ಬರುವಂತೆ ನನಗೆ ಪತ್ರ ಬರೆದಿದ್ದರು. ದೆಹಲಿಗೆ ಹೋದಾಗ ರಾಜೀನಾಮೆ ತೆಗೆದುಕೊಳ್ಳಿ ಎಂದು ಹೇಳಿದ್ದೆ. ರಾಜಕೀಯದಲ್ಲಿ ಹೀಗೆ ಮಾತನಾಡುವುದು ಮಾಮೂಲಿ. ಇದನ್ನೆಲ್ಲ ಸೀರಿಯಸ್​ ಆಗಿ ತೆಗೆದುಕೊಳ್ಳಬೇಡಿ ಎಂದು ಮೋದಿ ನನ್ನ ಮನವೊಲಿಸಿದ್ದರು ಎಂದು ನೆನಪಿಸಿಕೊಂಡರು.

ರೈತನ ಮಗನಾದ ಪ್ರಧಾನಿಯಾಗಿ ಮಾಡಿರುವ ಕೆಲಸಗಳ ಬಗ್ಗೆ ಪುಸ್ತಕವೊಂದು ಬಿಡುಗಡೆಗೆ ಸಿದ್ಧವಾಗುತ್ತಿದೆ. ನಾನು ಏನು ಮಾಡಿದೆ ಎಂದು ಪ್ರಶ್ನಿಸುವವರಿಗೆ ಅದರಲ್ಲಿ ಉತ್ತರ ಸಿಗುತ್ತದೆ. ನಾನು ದೆಹಲಿಗೆ ಹೋದಾಗ ಒಂದು ಲೋಟ ಕಾಫಿ ಕೊಡಲಿಲ್ಲ. ನಾನು ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯನಾದಾಗ ರಾಜ್ಯದಲ್ಲಿ ಆಡಳಿತ ನಡೆಸಿದವರಿಂದಾಗಿ ಆಡಳಿತ ನಡೆಸಿದವರಿಂದ ನಮ್ಮ ಪಕ್ಷ 2 ಸ್ಥಾನಕ್ಕೆ ಕುಸಿಯಿತು. ನನ್ನ ರಾಜಕೀಯ ಜೀವನಕ್ಕೆ ಶಕ್ತಿ ತುಂಬಿದ್ದು ಹಾಸನ ಮತ್ತು ಮಂಡ್ಯ ಜಿಲ್ಲೆಗಳು. ನಾನು ಮುಖ್ಯಮಂತ್ರಿ ಆಗಲು ನಾಡಿನ ಸಮಸ್ತ ಜನರ ಕೊಡುಗೆಯಿದೆ. 2023-2024ರ ಚುನಾವಣೆಗಳಲ್ಲೂ ನಾನು ಸುಮ್ಮನೇ ಕೂರುವುದಿಲ್ಲ. ನನ್ನ ಹೋರಾಟದ ಸಂಕಲ್ಪವನ್ನು ಯಾರೂ ಕಿತ್ತುಕೊಳ್ಳಲು ಆಗುವುದಿಲ್ಲ ಎಂದರು.

ಜೆಡಿಎಸ್ ಪಕ್ಷವು ಕೇವಲ ಹಳೇ ಮೈಸೂರು ಭಾಗಕ್ಕೆ ಸೀಮಿತ ಎಂದುಕೊಂಡಿರುವವರ ಬಗ್ಗೆ ನಾನು ಏನೂ ಹೇಳುವುದಿಲ್ಲ. ಮುಂದಿನ ದಿನಗಳಲ್ಲಿ ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಕ್ಷೇತ್ರಗಳಲ್ಲಿಯೂ ಪ್ರವಾಸ ಮಾಡಿ ಪಕ್ಷವನ್ನು ಸಂಘಟಿಸುತ್ತೇನೆ. ನಾನು ಮುಖ್ಯಮಂತ್ರಿ ಆಗಲು ಹೈದ್ರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ ಭಾಗದ ಜನರ ಕೊಡುಗೆಯೂ ಸಾಕಷ್ಟಿದೆ. 2023, 2024ರಲ್ಲಿಯೂ ನಾನು ಸುಮ್ಮನೆ ಕೂರುವುದಿಲ್ಲ. ನನ್ನ ಹೊರಾಟದ ಸಂಕಲ್ಪವನ್ನು ಯಾರೂ ಕಿತ್ತುಕೊಳ್ಳಲು ಆಗುವುದಿಲ್ಲ. ನಮ್ಮ ಪಕ್ಷವನ್ನು ನಾಶ ಮಾಡುತ್ತೇವೆ ಎನ್ನುವವರ ವಿರುದ್ಧ 2023ಕ್ಕೆ ಎದ್ದು ನಿಲ್ಲುತ್ತೇವೆ ಎಂದರು.

ಇಂದು ದೇಶದ ಪ್ರಧಾನಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಹೇಗಿದ್ದರು ಎಂಬುದು ನನಗೆ ಗೊತ್ತಿದೆ. ಎರಡೂ ಹುದ್ದೆಗಳನ್ನು ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅವರಲ್ಲಿ ಆಗಿರುವ ವ್ಯತ್ಯಾಸಗಳನ್ನು ಗಮನಿಸಿದ್ದೇನೆ. ಪ್ರಧಾನಿ ಮೋದಿ ಅವರ ವಿಚಾರದಲ್ಲಿ ನಾನು ಈಗ ನಡೆದುಕೊಳ್ಳುತ್ತಿರುವ ರೀತಿಯ ಬಗ್ಗೆ ಮಾತನಾಡುವವರು, ಗೋದ್ರಾ ಹತ್ಯಾಕಾಂಡದ ಬಗ್ಗೆ ನಾನು ಸಂಸತ್ತಿನಲ್ಲಿ ಏನೆಲ್ಲಾ ಮಾತನಾಡಿದ್ದೇನೆ ಎಂಬ ದಾಖಲೆಗಳನ್ನು ನೋಡಲಿ ಎಂದರು.

TV9 Kannada


Leave a Reply

Your email address will not be published. Required fields are marked *