ವಂಚಕರಿಂದ 5 ಕೋಟಿ ಕಳೆದುಕೊಂಡ ಉದ್ಯಮಿಗೆ ಪೊಲೀಸರಿಂದಲೂ ಸುಲಿಗೆ ಆರೋಪ.. ಏನಿದು ಕಥೆ..?

ಬೆಂಗಳೂರು ಗ್ರಾಮಾಂತರದಲ್ಲಿ ಉದ್ಯಮಿಗೆ 5 ಕೋಟಿ ವಂಚನೆ ನಡೆದಿದ್ದು ಈ ವಂಚಕರಿಗೆ ಪೊಲೀಸರೂ ಸಾಥ್ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಎಸ್​ಪಿ​, ಡಿವೈಎಸ್​ಪಿ, ಇನ್​ಸ್ಪೆಕ್ಟರ್, ಎಎಸ್​ಐ ವಿರುದ್ಧ ಈ ಆರೋಪ ಕೇಳಿಬಂದಿದೆ.
2020ರಲ್ಲಿ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಕೇಸ್ ಒಂದು ದಾಖಲಾಗಿತ್ತು. ಅತ್ತಿಬೆಲೆಯ ಉದ್ಯಮಿ ಮಂಜುನಾಥ್ ಎನ್ನುವವರು ತಮಗೆ ಆದ ಮೋಸದ ಬಗ್ಗೆ ದೂರು ನೀಡಿದ್ದರು. ಕೇಸ್​ಗೆ ಸಂಬಂಧಿಸಿದಂತೆ ಎಫ್​ಐಆರ್ ದಾಖಲಾಗಿ 9 ತಿಂಗಳು ಕಳೆದ್ರೂ ಉದ್ಯಮಿಗೆ ನ್ಯಾಯ ಸಿಕ್ಕಿಲ್ಲ ಎನ್ನಲಾಗಿದೆ. ಪ್ರತಿದಿನ ನ್ಯಾಯಕ್ಕಾಗಿ ಪೊಲೀಸರ ಬಳಿ ಅಲೆಯುತ್ತಿರುವ ಉದ್ಯಮಿ ಪೊಲೀಸರೇ ಸುಲಿಗೆ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಈಗ ನ್ಯಾಯ ಕೊಡಿಸಿ ಅಂತ ಡಿಜಿಐಜಿಪಿ ಬಳಿ ಉದ್ಯಮಿ ಮಂಜುನಾಥ್ ಬಂದಿದ್ದಾರೆ. ನ್ಯೂಸ್ ಫಸ್ಟ್ ಎದುರಲ್ಲೂ ಅಳಲು ತೋಡಿಕೊಂಡಿದ್ದಾರೆ.

ಮಂಜುನಾಥ್. ವಂಚನೆಗೊಳಗಾದವರು

ಏನಿದು ವಂಚನೆ ಕೇಸ್?
ಮಂಜುನಾಥ್ ಎರಡು ಆಟೋಮೊಬೈಲ್ ಕಂಪನಿ ನಡೆಸುತ್ತಿದ್ದರು.. ಬಂದ ಆದಾಯದಲ್ಲಿ ನೆಮ್ಮದಿಯಾಗಿ ಜೀವನ ನಡೆಸ್ತಿದ್ದರು. ಮಂಜುನಾಥ್ ಆದಾಯದ ಮೇಲೆ ಆನೇಕಲ್​ನ ಮಾರನಾಯಕನಹಳ್ಳಿ ನಿವಾಸಿ ಮೀಟರ್ ಅಶೋಕ್ ಕಣ್ಣು ಬಿದ್ದಿತ್ತಂತೆ. ಈತ ಮೀಟರ್ ಅಶೋಕ್ @ ಆನೆಕಲ್ ಅಶೋಕ್ ಅಂತಲೇ ಫೇಮಸ್. ಮೀಟರ್ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಆನೇಕಲ್ ಅಶೋಕ್.. ಈಗಿರುವ ಕಂಪನಿ ಬಿಟ್ಟು ಕ್ರಷರ್ ಓಪನ್ ಮಾಡು ಅಂತ ಹೇಳಿದ್ದನಂತೆ. ತನ್ನ ಜೊತೆ ಕ್ರಷರ್ ಓಪನ್ ಮಾಡಲು ಅಶೋಕ್ ಪುಸಲಾಯಿಸಿದ್ದು ತಿಂಗಳಿಗೆ 30 ಲಕ್ಷ ರೂಪಾಯಿವರೆಗೂ ಲಾಭ ಬರುತ್ತೆ ಅಂದಿದ್ದನಂತೆ. ಇದನ್ನ ನಂಬಿ ತನ್ನ ಕಂಪನಿಯನ್ನ ಮಾರಾಟ ಮಾಡಿದ್ದ ಮಂಜುನಾಥ್ ಕ್ರಷರ್​ನಲ್ಲಿ ಲಾಭ ಬರುತ್ತೆ ಅಂತ ಲೋನ್ ಇದ್ರೂ ಕಂಪನಿ ಮಾರಾಟಮಾಡಿದ್ದರಂತೆ. ಈ ವೇಳೆ ಮಂಜುನಾಥ್ ಅವರ ಕಂಪನಿಯನ್ನು ಮೀಟರ್ ಅಶೋಕ್ ತನ್ನವರಿಗೇ ಮಾರಿಸಿದ್ದನಂತೆ. ಸುಮಾರು 11 ಕೋಟಿ ಬೆಲೆ ಬಾಳುವ ಕಂಪನಿಯನ್ನ 7.10 ಕೋಟಿಗೆ ಮಾರಿಸಿದ್ದ ಎನ್ನಲಾಗಿದೆ.

ಮೀಟರ್ ಅಶೋಕ್

ಹಣದ ಮೇಲಿತ್ತು ಅಶೋಕ್ ಕಣ್ಣು!
ಕಂಪನಿ ಮಾರಿದ ಮೇಲೆ ಬಂದ ಹಣದ ಮೇಲೆ ಅಶೋಕ್ ಕಣ್ಣು ಹಾಕಿದ್ದನಂತೆ. ಹಣವನ್ನ ನಿನ್ನ ಅಕೌಂಟ್​ಗೆ ಹಾಕಿಸೋದು ಬೇಡ ಎಂದಿದ್ದ ಅಶೋಕ್ ಮಂಜುನಾಥ್​ಗೆ ಹೊಸ ಖಾತೆಯನ್ನೂ ಓಪನ್ ಮಾಡಿಸಿದ್ದನಂತೆ. ಬಳಿಕ ಪಿನ್ ಕೇರ್ ಬ್ಯಾಂಕ್ ಅಕೌಂಟ್​ಗೆ ಕರೆಕ್ಷನ್ ಮಾಡಿಸಿದ್ದ.. ಇಷ್ಟೆಲ್ಲಾ ಆದ ಮೇಲೆ ಕ್ರಷರ್​ಗೆ ಮೆಷಿನ್ ಖರೀದಿಯ ಡ್ರಾಮಾ ಮಾಡಿದ್ದ. ಈ ನೆಪದಲ್ಲಿ 5 ಕೋಟಿ ಹಣವನ್ನ ತನ್ನ ಕಡೆಯವರಿಗೆ ವರ್ಗಾವಣೆ ಮಾಡಿದ್ದ ಎಂದು ಹೇಳಲಾಗಿದೆ. ಓರ್ವ ಬಾರ್ ಓನರ್, ಓರ್ವ ರೌಡಿ ಶೀಟರ್, ತನ್ನ ಪತ್ನಿ ಸೇರಿ 9 ಜನನ ಖಾತೆಗಳಿಗೆ ಅಶೋಕ್ ಮಂಜುನಾಥ್ ಅವರ ಹಣವನ್ನ ವರ್ಗಾವಣೆ ಮಾಡಿಸಿದ್ದನಂತೆ.

ಸುಬ್ರಮಣಿ ಬಾಬು @ ಮುರಳಿ, ರಾಮಚಂದ್ರ, ರಾಮಚಂದ್ರ ಪತ್ನಿ ಮಂಗಳ, ರೌಡಿಶೀಟರ್ ಶಿವಶಂಕರ್, ಜಯಪ್ರಕಾಶ್, ಅಶೋಕ್​ನ ಪತ್ನಿ ಉಮಾ, ಗೀತಾ, ಶೈಲೇಶ್, ಚೇತನ್ ಹೀಗೆ 9 ಜನರ ಖಾತೆಗಳಿಗೆ ಹಣ ವರ್ಗಾವಣೆಯಾಗಿತ್ತು.. ಬಳಿಕ ಅವರ ಅಕೌಂಟ್​ನಿಂದ ಅಶೋಕ್ ತನ್ನ ಖಾತೆಗೆ ಹಣ ಹಾಕಿಸಿಕೊಂಡಿದ್ದ ಎನ್ನಲಾಗಿದೆ.

ಹಣ ಬರುತ್ತಿದ್ದಂತೆ ಅಶೋಕ್ ವರಸೆ ಬದಲು..
ಹಣ ವರ್ಗಾವಣೆ ಆಗುತ್ತಿದ್ದಂತೆ ವರಸೆ ಬದಲಿಸಿದ್ದ ವಂಚಕ ಅಶೋಕ್ ಉದ್ಯಮಿ ಮಂಜುನಾಥ್ ಕೈಗೆ ಸಿಗದೇ ಎಸ್ಕೇಪ್ ಆಗುತ್ತಿದ್ದನಂತೆ. ಕ್ರಷರ್ ಬಗ್ಗೆ ಕೇಳಿದ್ರೆ ಆಗುತ್ತೆ ಬಿಡು ಅಂತ ಆವಾಜ್ ಹಾಕುತ್ತಿದ್ದನಂತೆ. ಪದೇ ಪದೇ ಕೇಳಿದ್ದಕ್ಕೆ ರೌಡಿ ಶಿವಶಂಕರ್​ನಿಂದ ಜೀವ ಬೆದರಿಕೆ ಹಾಕಿಸಿದ್ದನಂತೆ. ಇದೆಲ್ಲ ಆದ ನಂತರ ತಾನು ಮೋಸ ಹೋಗಿದ್ದು ಗೊತ್ತಾಗಿ ಅತ್ತಿಬೆಲೆ ಠಾಣೆಯಲ್ಲಿ ತನಗೆ ಹಣ ವಂಚಿಸಿದವರ ವಿರುದ್ಧ ಮಂಜುನಾಥ್ ದೂರು ದಾಖಲಿಸಿದ್ದರು.

ಪೊಲೀಸರಿಂದಲೂ ಸುಲಿಗೆ?
ಪೊಲೀಸರ ಬಳಿ ನ್ಯಾಯಕ್ಕಾಗಿ ಹೋದ್ರೆ ಅಲ್ಲೂ ಸುಲಿಗೆಯ ಆರೋಪ ಮಾಡಿದ್ದಾರೆ ಮಂಜುನಾಥ್. ಅತ್ತಿಬೆಲೆ ಠಾಣೆಗೆ ದೂರು ನೀಡಲೋದ್ರೆ ಡಿವೈಎಸ್​ಪಿಗೆ ಕೇಳಿ ಅಂದಿದ್ದಾರಂತೆ. ಆನೇಕಲ್ ಡಿವೈಎಸ್​ಪಿ ಮಹದೇವಪ್ಪ ಕೇಸ್ ಮಾಡಲ್ಲ ಅಂತ ಆವಾಜ್ ಹಾಕಿದ್ದಾರಂತೆ. ಅಶೋಕ್ ಮತ್ತು ಟೀಂ ದೊಡ್ಡವರ ಕಡೆಯವರು, ಆಗಲ್ಲ ಅಂದಿದ್ರಂತೆ. ನಂತರ ಆಗಿನ ಬೆಂ.ಗ್ರಾಮಾಂತರ ಎಸ್​ಪಿ ರವಿ ಡಿ. ಚನ್ನಣ್ಣನವರ್ ಭೇಟಿಯಾಗಿ ತಮಗಾದ ಮೋಸದ ಬಗ್ಗೆ ಮಂಜುನಾಥ್ ಹೇಳಿಕೊಂಡಿದ್ದರಂತೆ. ಈ ವೇಳೆ ರವಿ ಡಿ. ಚನ್ನಣ್ಣವರ್ ನ್ಯಾಯ ಕೊಡಿಸುವ ಭರವಸೆ ನೀಡಿ ಫಾರ್ಮಾಲಿಟಿಸ್ ಮುಗಿಸಲು ಸೂಚನೆ ನೀಡಿದ್ದರಂತೆ. ಡಿಸಿಆರ್​ಬಿ ಇನ್​ಸ್ಪೆಕ್ಟರ್ ಶ್ರೀನಿವಾಸ್​ನ ಭೇಟಿ ಮಾಡಲು ಎಸ್​ಪಿ ಸೂಚನೆ ನೀಡಿದ್ದರಂತೆ. ಆದ್ರೆ ಎಸ್​ಪಿ ಹೇಳಿದ್ದಾರೆ, 5 ಲಕ್ಷ ಕೊಟ್ಟರೆ ಎಫ್​ಐಆರ್ ಮಾಡ್ತೀವಿ ಎಂದು ಅಧಿಕಾರಿ ಹೇಳಿದರೆಂದು ಮಂಜುನಾಥ್ ಆರೋಪಿಸಿದ್ದಾರೆ.

ಶ್ರೀನಿವಾಸ್. ಇನ್ಸ್​ಪೆಕ್ಟರ್

ಸಾಲ ಮಾಡಿ 4 ಲಕ್ಷ ತಂದು ಕೊಟ್ಟಿದ್ದ ಉದ್ಯಮಿ ಮಂಜುನಾಥ್​ಗೆ ಮತ್ತೆ 1 ಲಕ್ಷ ಪೆಂಡಿಂಗ್ ಕ್ಲಿಯರ್ ಆಗುವ ತನಕ ಎಫ್ಐಆರ್ ಆಗಲ್ಲ ಎಂದಿದ್ದರಂತೆ. 5 ಲಕ್ಷವನ್ನು ಐಜಿ ಕಚೇರಿಯ ASI ಶುಭ & ಅನಿತಾ ಕಲೆಕ್ಟ್ ಮಾಡಿದ್ದರು ಎನ್ನಲಾಗಿದೆ.

ಫಾರ್ಮಲಿಟೀಸ್ ಮುಗಿದ ಮೇಲೆ ಎಫ್ಐಆರ್ ಮಾಡಲು ಸೂಚನೆ ನೀಡಿದ್ದ ಎಸ್​​​ಪಿ ರವಿ ಡಿ. ಚನ್ನಣ್ಣವರ್ ಎಫ್​ಐಆರ್ ಆದ ತಕ್ಷಣ ಕರೆ ಮಾಡಿ ಆರೋಪಿಗಳನ್ನು ಅರೆಸ್ಟ್ ಮಾಡದಂತೆ ಸೂಚನೆ ನೀಡಿದ್ದಾರೆಂದು ರವಿ ಡಿ. ಚನ್ನಣ್ಣವರ್ ವಿರುದ್ಧವೂ ಮಂಜುನಾಥ್ ಆರೋಪಿಸಿದ್ದಾರೆ. 5 ಲಕ್ಷ ಕೊಟ್ಟಿದ್ದೇನೆ ಕ್ರಮ ತೆಗೆದುಕೊಳ್ಳಿ ಅಂತಾ ಉದ್ಯಮಿ ಹಿಂದೆ ಬಿದ್ದಿದ್ದರಂತೆ.

ರವಿ ಡಿ. ಚನ್ನಣ್ಣವರ್

ಉದ್ಯಮಿಯ ಒತ್ತಡ ಜಾಸ್ತಿಯಾದಾಗ ಮತ್ತೊಂದು ಡ್ರಾಮಾ ಶುರುಮಾಡಿದ ಪೊಲೀಸರು ಪ್ರಕರಣವನ್ನು ಡಿವೈಎಸ್ಪಿ ಮಹಾದೇವಪ್ಪನಿಗೆ ವರ್ಗಾವಣೆ ಮಾಡಿ ಆದೇಶಿಸಿದ್ದರಂತೆ. ರವಿ ಡಿ ಚೆನ್ನಣ್ಣನವರಿಂದ ಡಿವೈಎಸ್​ಪಿ ಮಹಾದೇವಪ್ಪರಿಗೆ ಕೇಸ್ ವರ್ಗಾವಣೆಯಾದ ನಂತರ ಅಲ್ಲಿಗೆ ಹೋದ ಉದ್ಯಮಿಗೆ ಮತ್ತೆ ಮಹಾದೇವಪ್ಪ ಸುಲಿಗೆ ಮಾಡಿದ್ದಾರಂತೆ. ಹೆಂಡತಿ ತಾಳಿ ಮಾರಿಯಾದ್ರು 3 ಲಕ್ಷ ಕೊಟ್ಟರೆ ತನಿಖೆ ಅಂದಿದ್ದರಂತೆ. ಹೀಗಂತ ನ್ಯೂಸ್ ಫಸ್ಟ್ ಕ್ಯಾಮೆರಾ ಮುಂದೆ ಉದ್ಯಮಿ ಮಂಜುನಾಥ್ ಆರೋಪಿಸಿದ್ದಾರೆ. ಆದರೆ 2 ವರೆ ಲಕ್ಷ ಲಂಚ ಪಡೆದ ಡಿವೈಎಸ್ಪಿಯಿಂದಲೂ ತನಿಖೆ ಆಗಲ್ಲ.. ಪ್ರತಿ ಬಾರಿಯೂ ಇಲ್ಲದ ಕಥೆ ಹೇಳಿಕೊಂಡು ಕಾಲಹರಣ ಮಾಡ್ತಾರೆ ಎಂದು ಎಸ್​ಪಿಯ ಬಳಿ ಬಂದು ಮಂಜುನಾಥ್ ಗೋಳಾಡಿದರಂತೆ.

ಮಹಾದೇವಪ್ಪ, ಡಿವೈಎಸ್​​ಪಿ

ಇಷ್ಟಾದ ಮೇಲೂ ಪ್ರಕರಣ ಬಗೆಹರಿದಿಲ್ಲ. ಪ್ರಕರಣವನ್ನ ಡಿವೈಎಸ್ಪಿಯಿಂದ ಮತ್ತೆ ಐಜಿ ಕಚೇರಿ ಸೆನ್​ಗೆ ವರ್ಗಾವಣೆ ಮಾಡಲಾಗಿದೆ. ಸೆನ್ ಠಾಣೆಗೆ ಬಂದ್ರೂ ತನಿಖೆ ಮಾಡಲು ಎಸ್​ಪಿ ಬಿಟ್ಟಿರಲಿಲ್ಲ ಎಂದು ಮಂಜುನಾಥ್ ಗಂಭೀರ ಆರೋಪ ಮಾಡಿದ್ದಾರೆ. ಹೀಗೆ ಹಣ ಕಳೆದುಕೊಂಡು 9 ತಿಂಗಳಿನಿಂದ ಉದ್ಯಮಿ ಪರದಾಡುತ್ತಿದ್ದು ಇತ್ತ ಮನೆಯೂ ಸಹ ಆಕ್ಷನ್​ಗೆ ಬಂದಿದ್ದು ಕುಟುಂಬ ಬೀದಿಗೆ ಬಂದಿದೆ ಎನ್ನಲಾಗಿದೆ.

ಸದ್ಯ ನೊಂದ ಉದ್ಯಮಿ ಮಂಜುನಾಥ್ ಡಿಜಿಐಜಿಪಿ ಪ್ರವೀಣ್ ಸೂದ್​ಗೆ ದೂರು ನೀಡಿದ್ದಾರೆ. ಎಸ್​ಪಿ ರವಿ ಡಿ ಚನ್ನಣ್ಣನವರ್, ಡಿವೈಎಸ್​ಪಿ ಮಹಾದೇವಪ್ಪ, ಇನ್ಸಪೆಕ್ಟರ್ ಶ್ರೀನಿವಾಸ್, ಎಎಸ್ಐ ಶುಭ, ಅನಿತಾ 7 ಇತರರ ವಿರುದ್ದ ದೂರು ನೀಡಿದ್ದಾರಂತೆ. ಸದ್ಯ ಪ್ರಕರಣವನ್ನು ಸೆಂಟ್ರಲ್ ಐಜಿಗೆ ಡಿಜಿಐಜಿಪಿ ವರ್ಗಾವಣೆ ಮಾಡಿದ್ದಿ ಸೆಂಟ್ರಲ್ ಐಜಿ ಚಂದ್ರಶೇಖರ್ ರಿಂದ ಅಧಿಕಾರಿಗಳ ವಿರುದ್ಧ ತನಿಖೆ ನಡೆಯುತ್ತಿದೆ ಎನ್ನಲಾಗಿದೆ. ಎಲ್ಲರ ವಿರುದ್ದ ಐಜಿಪಿ ಚಂದ್ರಶೇಖರ್ ಇಲಾಖಾ ತನಿಖೆ ಆರಂಭಿಸಿದ್ದಾರೆ ಎಂಬ ಮಾಹಿತಿ ಇದೆ. ಇನ್ನಾದ್ರೂ ಉದ್ಯಮಿ ಮಂಜುನಾಥ್​ ಅವರಿಗೆ ನ್ಯಾಯ ಸಿಗುತ್ತಾ ಅಂತ ಕಾದುನೋಡಬೇಕಿದೆ.

News First Live Kannada

Leave a comment

Your email address will not be published. Required fields are marked *